ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಬೇಟೆಯಾಡಿದ್ದ ಬಾಂಗ್ಲಾ ಹುಲಿಗಳು

ವಿಶ್ವಕಪ್‌ ಹೆಜ್ಜೆಗುರುತು–39
Last Updated 18 ಮೇ 2019, 20:22 IST
ಅಕ್ಷರ ಗಾತ್ರ

ಕನ್ನಡಿಗ ರಾಹುಲ್‌ ದ್ರಾವಿಡ್‌ ಅವರ ಮುಂದಾಳತ್ವದಲ್ಲಿ 2007ರ ವಿಶ್ವಕಪ್‌ ಅಭಿಯಾನ ಆರಂಭಿಸಿದ್ದ ಭಾರತ, ಮೊದಲ ಪಂದ್ಯದಲ್ಲೇ ಮುಖಭಂಗ ಅನುಭವಿಸಿತ್ತು. ಪೋರ್ಟ್‌ ಆಫ್‌ ಸ್ಪೇನ್‌ನಲ್ಲಿ ಮಾರ್ಚ್‌ 17ರಂದು ನಡೆದಿದ್ದ ‘ಬಿ’ ಗುಂಪಿನ ಹಣಾಹಣಿಯಲ್ಲಿ ಬಾಂಗ್ಲಾದೇಶವು ಭಾರತಕ್ಕೆ ಆಘಾತ ನೀಡಿ ಕ್ರಿಕೆಟ್‌ ಲೋಕದ ಗಮನ ಸೆಳೆದಿತ್ತು.

*ಭಾರತ ಮತ್ತು ಬಾಂಗ್ಲಾ, ವಿಶ್ವಕಪ್‌ನಲ್ಲಿ ಮೊದಲ ಸಲ ಮುಖಾಮುಖಿಯಾಗಿದ್ದವು.

*ಮಹೇಂದ್ರ ಸಿಂಗ್‌ ಧೋನಿ, ರಾಬಿನ್‌ ಉತ್ತಪ್ಪ ಮತ್ತು ಮುನಾಫ್ ‍ಪಟೇಲ್‌ ಈ ಪಂದ್ಯದ ಮೂಲಕ ವಿಶ್ವಕಪ್‌ಗೆ ಪದಾರ್ಪಣೆ ಮಾಡಿದ್ದರು.

*ಮೊದಲ ಓವರ್‌ ಹಾಕಿದ ಮಷ್ರಫೆ ಮೊರ್ತಜಾ ಮೂರು ಇತರೆ ರನ್‌ ನೀಡಿದರು. ಅವರ ಮೊದಲ ಎಸೆತವೇ ವೈಡ್‌ ಆಗಿತ್ತು.

*ಮೂರನೇ ಓವರ್‌ನಲ್ಲಿ ವೀರೇಂದ್ರ ಸೆಹ್ವಾಗ್‌ ಔಟ್‌. ಮೊರ್ತಜಾ ಹಾಕಿದ ಪ್ರಥಮ ಎಸೆತದಲ್ಲಿ ‘ವೀರೂ’ ಬೌಲ್ಡ್‌ ಆದರು.

*ಉತ್ತಪ್ಪ (9), ಸಚಿನ್‌ (7) ಮತ್ತು ದ್ರಾವಿಡ್‌ (14) ಆಟವೂ ನಡೆಯಲಿಲ್ಲ. ಆಗ ತಂಡಕ್ಕೆ ನೆರವಾಗಿದ್ದು ಚಿಗುರು ಮೀಸೆಯ ಹುಡುಗ ಯುವರಾಜ್‌ ಸಿಂಗ್‌ (47; 58ಎ, 3ಬೌಂ, 1ಸಿ) ಮತ್ತು ಸೌರವ್‌ ಗಂಗೂಲಿ (66; 129ಎ, 4ಬೌಂ).

*ಬಾಂಗ್ಲಾದ ಸ್ಪಿನ್‌ ದಾಳಿಯ ಎದುರು ಗಂಗೂಲಿ ಸಂಯಮದಿಂದ ಇನಿಂಗ್ಸ್‌ ಕಟ್ಟಿದರು. ಯುವಿ, ಪಟಪಟನೆ ರನ್‌ ಪೇರಿಸಿದರು. ಈ ಜೋಡಿ ಐದನೇ ವಿಕೆಟ್‌ಗೆ 85ರನ್‌ ಗಳಿಸಿದ್ದರಿಂದ ತಂಡದ ಮೊತ್ತ 150ರ ಗಡಿ ದಾಟಿತು. ಇವರು ಔಟಾದ ನಂತರ ದ್ರಾವಿಡ್‌ ಪಡೆ ಮತ್ತೆ ಪತನದತ್ತ ಸಾಗಿತು.

*ಧೋನಿ, ಹರಭಜನ್‌ ಸಿಂಗ್‌ ಮತ್ತು ಅಜಿತ್‌ ಅಗರ್‌ಕರ್‌ ಶೂನ್ಯಕ್ಕೆ ಔಟಾದರು. ‘ಬಾಲಂಗೋಚಿ’ಗಳಾದ ಜಹೀರ್‌ ಖಾನ್‌ (ಔಟಾಗದೆ 15) ಮತ್ತು ಮುನಾಫ್‌ (15) ಹತ್ತನೇ ವಿಕೆಟ್‌ಗೆ ಸೇರಿಸಿದ 32ರನ್‌ಗಳಿಂದಾಗಿ ತಂಡವು 49.3 ಓವರ್‌ಗಳಲ್ಲಿ 191ರನ್‌ ದಾಖಲಿಸಲು ಶಕ್ತವಾಯಿತು.

*ಬಾಂಗ್ಲಾದ ಯುವ ಪಡೆ ಈ ಗುರಿಯನ್ನು 48.3 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು ಮುಟ್ಟಿತು. ತಮಿಮ್‌ ಇಕ್ಬಾಲ್‌ (51), ಮುಷ್ಫಿಕುರ್‌ ರಹೀಮ್‌ (ಔಟಾಗದೆ 56) ಮತ್ತು ಶಕೀಬ್‌ ಅಲ್‌ ಹಸನ್‌ (53) ಪದಾರ್ಪಣೆ ಪಂದ್ಯದಲ್ಲೇ ಅರ್ಧಶತಕ ಬಾರಿಸಿ ತಂಡಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟಿದ್ದರು.

*ಕಿಂಗ್ಸ್‌ಟನ್‌ನಲ್ಲಿ ಮಾರ್ಚ್‌ 15ರಂದು ನಡೆದಿದ್ದ ಐರ್ಲೆಂಡ್‌ ಮತ್ತು ಜಿಂಬಾಬ್ವೆ ನಡುವಣ ‘ಡಿ’ ಗುಂಪಿನ ಪಂದ್ಯ ರೋಚಕ ‘ಟೈ’ ಆಗಿತ್ತು.

*ಮೊದಲು ಬ್ಯಾಟ್‌ ಮಾಡಿದ್ದ ಐರ್ಲೆಂಡ್‌, ಜೆರೆಮಿ ಬ್ರಾಯ್‌ (ಔಟಾಗದೆ 115) ಶತಕದ ನೆರವಿನಿಂದ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 221ರನ್‌ ಗಳಿಸಿತ್ತು.

*ಜಿಂಬಾಬ್ವೆ ಕೂಡಾ ಇಷ್ಟೇ ರನ್‌ ಗಳಿಸಿ ಆಲೌಟ್‌ ಆಗಿತ್ತು. ಅಂತಿಮ ಓವರ್‌ನಲ್ಲಿ ತಂಡದ ಗೆಲುವಿಗೆ 9ರನ್‌ಗಳು ಬೇಕಿದ್ದವು. ಆ್ಯಂಡ್ರ್ಯೂ ವೈಟ್‌ ಹಾಕಿದ ಓವರ್‌ನ ಮೊದಲ ಮೂರು ಎಸೆತಗಳಲ್ಲಿ ಸ್ಟುವರ್ಟ್‌ ಮತ್ಸಿಕೆನ್ಯೆರಿ ಐದು ರನ್‌ ಗಳಿಸಿದರು. ನಂತರದ ಎರಡು ಎಸೆತಗಳಲ್ಲಿ ಮೂರು ರನ್‌ಗಳು ಬಂದವು. ಅಂತಿಮ ಎಸೆತದಲ್ಲಿ ಒಂದು ರನ್‌ ಬೇಕಿದ್ದಾಗ ಎಡ್‌ ರೇನ್ಸ್‌ಫೋರ್ಡ್‌ ರನ್‌ಔಟ್‌ ಆಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT