ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಆಫ್ರಿಕಾಕ್ಕೆ ಗೆಲುವಿನ ಅನಿವಾರ್ಯತೆ

ಉತ್ಸಾಹಿ ವೆಸ್ಟ್‌ ಇಂಡೀಸ್‌ ತಂಡದ ವಿರುದ್ಧ ಪಂದ್ಯ ಇಂದು
Last Updated 9 ಜೂನ್ 2019, 20:08 IST
ಅಕ್ಷರ ಗಾತ್ರ

ಸೌತಾಂಪ್ಟನ್‌: ವಿಶ್ವಕಪ್‌ನಲ್ಲಿ ನಿರಾಶಾದಾಯಕ ಆರಂಭ ಮಾಡಿರುವ ದಕ್ಷಿಣ ಆಫ್ರಿಕಾ ತೀವ್ರ ಒತ್ತಡಕ್ಕೆ ಸಿಲುಕಿದೆ. ಸೆಮಿಫೈನಲ್‌ ಆಸೆ ಜೀವಂತವಾಗಿರಿಸಿಕೊಳ್ಳಬೇಕಾದರೆ ಉಳಿದ ಆರು ರೌಂಡ್‌ ರಾಬಿನ್‌ ಲೀಗ್‌ ಪಂದ್ಯಗಳನ್ನು ಗೆಲ್ಲಲೇಬೇಕಾಗಿದೆ. ಫಾಫ್‌ ಡುಪ್ಲೆಸಿ ಬಳಗ ಸೋಮವಾರ ಹ್ಯಾಂಪ್‌ಶೈರ್ ಬೌಲ್‌ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಪ್ರಬಲ ವೆಸ್ಟ್‌ ಇಂಡೀಸ್‌ ತಂಡವನ್ನು ಎದುರಿಸಲಿದೆ.

ಮೊದಲ ಮೂರು ಪಂದ್ಯಗಳನ್ನು ಸೋತ ದಕ್ಷಿಣ ಆಫ್ರಿಕಾಕ್ಕೆ ಪ್ರಮುಖ ವೇಗದ ಬೌಲರ್‌ಗಳಾದ ಡೇಲ್‌ ಸ್ಟೇನ್‌ ಮತ್ತು ಲುಂಗಿ ಗಿಡಿ ಸೇವೆ ಅಲಭ್ಯವಾಗಿದೆ. ವೆಸ್ಟ್‌ ಇಂಡೀಸ್‌ ಮೊದಲ ಎರಡು ಪಂದ್ಯಗಳನ್ನು ಆಡಿರುವ ರೀತಿ ನೋಡಿದರೆ ದಕ್ಷಿಣ ಆಫ್ರಿಕಕ್ಕೆ ಈ ಪಂದ್ಯದಲ್ಲಿ ಪ್ರಬಲ ಸವಾಲು ಎದುರಾಗುವ ನಿರೀಕ್ಷೆಯಿದೆ. ಸ್ಟೇನ್‌ ವಿಶ್ವಕಪ್‌ನಿಂದಲೇ ಹೊರಬಿದ್ದರೆ, ಗಿಡಿ ಸಂಪೂರ್ಣ ಚೇತರಿಸಿಕೊಂಡಿಲ್ಲ.

ಬ್ಯಾಟಿಂಗ್‌ನಲ್ಲಿ ಸ್ಥಿರ ಪ್ರದರ್ಶನದ ಸಮಸ್ಯೆ ದಕ್ಷಿಣ ಆಫ್ರಿಕವನ್ನು ಕಾಡುತ್ತಿದೆ. ತಂಡದಿಂದ ಆಕ್ರಮಣಕಾರಿ ಮನೋಭಾವ ಕೂಡ ಕಂಡುಬರುತ್ತಿಲ್ಲ. ತಂಡ ಸವಾಲಿನ ಮೊತ್ತ ಗಳಿಸಬೇಕಾದರೆ ಮೊದಲು ಕ್ವಿಂಟನ್‌ ಡಿಕಾಕ್‌ ಮತ್ತು ಹಾಶೀಂ ಆಮ್ಲಾ ಅವರಿಂದ ಉತ್ತಮ ಆರಂಭ ಬರಬೇಕಾಗಿದೆ. ಮಧ್ಯಮ ಕ್ರಮಾಂಕ ಉಪಯುಕ್ತ ಕಾಣಿಕೆ ನೀಡಿದೆ.

ಆಸ್ಟ್ರೇಲಿಯಾ ವಿರುದ್ಧ ಈ ಹಿಂದಿನ ಪಂದ್ಯದಲ್ಲಿ ಸೋತರೂ ವೆಸ್ಟ್ ಇಂಡೀಸ್‌ ತಂಡವೇ ಬಹುತೇಕ ಅವಧಿಯಲ್ಲಿ ಹಿಡಿತ ಸಾಧಿಸಿತ್ತು. ಕೊನೆಗಳಿಗೆಯಲ್ಲಿ ತಪ್ಪುಹೊಡೆತಗಳ ಆಯ್ಕೆ ದುಬಾರಿಯಾಯಿತು. ಈಗ ಆ ಹಿನ್ನಡೆಯಿಂದ ಹೊರಬರಲು ಜೇಸನ್‌ ಹೋಲ್ಡರ್‌ ತಂಡ ತವಕಿಸುತ್ತಿದೆ.

ವೆಸ್ಟ್‌ ಇಂಡೀಸ್‌ ವೇಗಿಗಳು ಮೊದಲ ಎರಡು ಪಂದ್ಯಗಳಲ್ಲಿ ಬೌಲಿಂಗ್‌ ಮಾಡಿದ ರೀತಿ ನೋಡಿದರೆ, ಪರದಾಡುತ್ತಿರುವ ದಕ್ಷಿಣ ಆಫ್ರಿಕ ಆರಂಭ ಆಟಗಾರರಿಗೆ ಇದು ಆತಂಕದ ವಿಷಯವೇ ಸರಿ. ಮೊದಲ ಪಂದ್ಯ ಗೆದ್ದು, ಎರಡನೆಯದರಲ್ಲಿ ಹೋರಾಟ ತೋರಿದ ರೀತಿ ನೋಡಿದರೆ, ವೆಸ್ಟ್‌ ಇಂಡೀಸ್‌ ಸೋಮವಾರದ ಪಂದ್ಯದಲ್ಲಿ ಉತ್ತಮ ಮನೋಬಲ ಹೊಂದಿದಂತೆ ಕಾಣುತ್ತಿದೆ.

ಆದರೆ ಈ ಹಿಂದೆ ವಿಶ್ವಕಪ್‌ ಪಂದ್ಯಗಳಲ್ಲಿ ಕೆರೀಬಿಯನ್‌ ಪಡೆಯ ವಿರುದ್ಧ ದಕ್ಷಿಣ ಆಫ್ರಿಕ ತಂಡ ಉತ್ತಮ ಗೆಲುವಿನ ದಾಖಲೆ ಹೊಂದಿದೆ. ಆಡಿರುವ ಆರು ಪಂದ್ಯಗಳಲ್ಲಿ ನಾಲ್ಕರಲ್ಲಿ ಹರಿಣಗಳ ತಂಡ ವಿಜಯಿಯಾಗಿದೆ.

ತಂಡಗಳು: ದಕ್ಷಿಣ ಆಫ್ರಿಕಾ: ಫಾಫ್‌ ಡುಪ್ಲೆಸಿ (ನಾಯಕ), ಏಡೆನ್‌ ಮರ್ಕರಮ್‌, ಕ್ವಿಂಟನ್‌ ಡಿಕಾಕ್‌ (ವಿಕೆಟ್‌ ಕೀಪರ್), ಹಾಶೀಂ ಆಮ್ಲಾ, ರಸ್ಸಿ ವಾನ್‌ ಡರ್‌ ಡಸೇನ್‌, ಡೇವಿಡ್‌ ಮಿಲ್ಲರ್‌, ಕ್ರಿಸ್‌ ಮಾರಿಸ್‌, ಆಂಡಿಲೆ ಪಿಶುವಾಯೊ, ಜೆ.ಪಿ.ಡುಮಿನಿ, ಡ್ವೇನ್‌ ಪ್ರಿಟೋರಿಯಸ್‌, ಬ್ಯುರನ್‌ ಹೆಂಡ್ರಿಕ್ಸ್‌, ಕಗಿಸೊ ರಬಾಡ, ಇಮ್ರಾನ್‌ ತಾಹಿರ್‌, ತಬ್ರೇಜ್‌ ಶಂಸಿ

ವೆಸ್ಟ್‌ ಇಂಡೀಸ್‌: ಜೇಸನ್‌ ಹೋಲ್ಡರ್‌ (ನಾಯಕ), ಫ್ಯಾಬಿಯನ್‌ ಅಲೆನ್‌, ಡರೆನ್‌ ಬ್ರಾವೊ, ಶಾನನ್‌ ಗೇಬ್ರಿಯಲ್‌, ಶಿಮ್ರಾನ್‌ ಹೆಟ್ಮೆಯರ್‌, ಎವಿನ್‌ ಲೂಯಿಸ್‌, ನಿಕೋಲಸ್‌ ಪೂರನ್‌, ಆ್ಯಂಡ್ರೆ ರಸೆಲ್‌, ಕಾರ್ಲೋಸ್‌ ಬ್ರಾತ್‌ವೇಟ್, ಶೆಲ್ಡನ್‌ ಕಾಟ್ರೆಲ್‌, ಕ್ರಿಸ್‌ ಗೇಲ್‌, ಶಾಯ್ ಹೋಪ್‌ (ವಿಕೆಟ್‌ ಕೀಪರ್‌), ಆ್ಯಶ್ಲೆ ನರ್ಸ್‌, ಕೆಮಾರ್‌ ರೋಚ್‌, ಒಷೇನ್ ಥಾಮಸ್‌.

***
ಎಬಿಡಿ ವಿಷಯ ಪ್ರಸ್ತಾಪ
ದಕ್ಷಿಣ ಆಫ್ರಿಕದ ಸ್ಟಾರ್‌ ಆಟಗಾರರಾಗಿದ್ದ ಎ.ಬಿ ಡಿ’ವಿಲಿಯರ್ಸ್‌ ತಂಡಕ್ಕೆ ಮರಳಲು ಕಾತರರಾಗಿದ್ದ ವಿಷಯ ದಕ್ಷಿಣ ಆಫ್ರಿಕಾ ಕೋಚ್‌ ಒಟಿಸ್‌ ಗಿಬ್ಸನ್‌ ಅವರನ್ನು ಕಾಡುತ್ತಿದೆ. ಶನಿವಾರ ಪಂದ್ಯಪೂರ್ವದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ಪ್ರಸ್ತಾಪಿಸಿದಾಗ ‘ನಾನು ಡಿ’ವಿಲಿಯರ್ಸ್‌ ಜೊತೆ ಮಾತನಾಡಿದ್ದು ನಿಜ. ತಂಡದ ಆಯ್ಕೆಗೆ ಲಭ್ಯವಿರುವ ವಿಷಯವನ್ನು ವರ್ಷದ ಆರಂಭದಲ್ಲೇ ತಿಳಿಸಬೇಕಿತ್ತು ಎಂದು ಅವರಿಗೆ ಹೇಳಿದ್ದೆ’ ಎಂದು ಒಟಿಸ್‌ ಪ್ರತಿಕ್ರಿಯಿಸಿದರು.

‘ಎ ಬಿ ಡಿ’ವಿಲಿಯರ್ಸ್ ನನಗೆ ಕರೆ ಮಾಡಿದ್ದರು. ತಂಡವನ್ನು ಪ್ರಕಟಿಸುವ ದಿನ ಬೆಳಿಗ್ಗೆ ಎಂದು ಕಾಣುತ್ತದೆ. ಆದರೆ ಅದಕ್ಕಿಂತ ಮೊದಲು ಈ ವಿಷಯದಲ್ಲಿ ಬೆಳವಣಿಗೆಗಳು ನಡೆದುಹೋಗಿರಬಹುದು’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT