ಬಾಂಗ್ಲಾ ಹುಲಿಗಳ ಬೆದರಿಸಿದ ಕೆರೀಬಿಯನ್ನರು; 322 ರನ್‌ ಸವಾಲು

ಭಾನುವಾರ, ಜೂಲೈ 21, 2019
22 °C
ವಿಶ್ವಕಪ್‌ ಕ್ರಿಕೆಟ್‌

ಬಾಂಗ್ಲಾ ಹುಲಿಗಳ ಬೆದರಿಸಿದ ಕೆರೀಬಿಯನ್ನರು; 322 ರನ್‌ ಸವಾಲು

Published:
Updated:

ಟಾಂಟನ್‌: ಸೋಮವಾರ ಇಲ್ಲಿನ ಕೌಂಟಿ ಮೈದಾನದಲ್ಲಿ ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡ ಬಾಂಗ್ಲಾದೇಶ, ಆರಂಭದಲ್ಲಿಯೇ ಕ್ರಿಸ್‌ ಗೇಲ್‌ ವಿಕೆಟ್‌ ಉರುಳಿಸುವ ಮೂಲಕ ವೆಸ್ಟ್ ಇಂಡೀಸ್‌ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕುವ ಒತ್ತಡ ಹೇರಿತು. ಆದರೆ, ಹೆಟ್ಮೆಯರ್‌ ಮತ್ತು ಹೋಲ್ಡರ್‌ ಬಿರುಸಿನ ಹೊಡೆತಗಳು ಪಂದ್ಯದ ದಿಕ್ಕನ್ನೇ ಬದಲಿಸಿತು. ಕೆರೀಬಿಯನ್ನರು ಸವಾಲಿನ ಮೊತ್ತ ದಾಖಲಿಸಿದರು.

ವೆಸ್ಟ್ ಇಂಡೀಸ್‌ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 321 ರನ್‌ ಗಳಿಸಿತು. 

ಕ್ಷಣಕ್ಷಣದ ಸ್ಕೋರ್‌: https://bit.ly/2XkCQtU

ಕೆರೀಬಿಯನ್‌ ಪಡೆಯ ನಾಲ್ವರು ಬ್ಯಾಟ್ಸ್‌ಮನ್‌ಗಳು ಬಾಂಗ್ಲಾ ಎದುರಿನ ಪಂದ್ಯದಲ್ಲಿ ಮಿಂಚಿದರು. ಮೂರನೇ ಕ್ರಮಾಂಕದಲ್ಲಿ ಶಾಯ್‌ ಹೋಪ್‌ ಕೊನೆಯ ವರೆಗೂ ತಾಳ್ಮೆಯುತ ಆಟದ ಮೂಲಕ ತಂಡದ ರನ್‌ ಗಳಿಕೆಗೆ ಆಸರೆಯಾದರು. 121 ಎಸೆತಗಳನ್ನು ಎದುರಿಸಿದ ಅವರು ಶತಕದ ಹೊಸ್ತಿಲಲ್ಲಿ ಎಡವಿದರು. ಒಂದು ಸಿಕ್ಸರ್‌ ಮತ್ತು 4 ಬೌಂಡರಿ ಒಳಗೊಂಡ 96 ರನ್‌ ದಾಖಲಿಸಿದರು. 

ಏಳನೇ ಕ್ರಮಾಂಕದಲ್ಲಿ ಕಣಕ್ಕಿಳಿದ ತಂಡದ ನಾಯಕ ಜೇಸನ್‌ ಹೋಲ್ಡರ್‌ ಕೇವಲ 15 ಎಸೆತಗಳಲ್ಲಿ 2 ಸಿಕ್ಸರ್‌ ಮತ್ತು 4 ಬೌಂಡರಿಗಳನ್ನು ಸಿಡಿಸುವ ಮೂಲಕ 33 ರನ್‌ ಗಳಿಸಿ ವಿಂಡೀಸ್‌ ಅಭಿಮಾನಿಗಳ ಮನಗೆದ್ದರು. ಹೋಲ್ಡರ್‌ ಮಿಂಚುವ ಮುನ್ನ ಮಧ್ಯ ಕ್ರಮಾಂಕಿತ ಶಿಮ್ರಾನ್‌ ಹೆಟ್ಮೆಯರ್‌ ಬಿರುಸಿನ ಆಟದವಾಡಿ 26 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದರು. 

ಆರಂಭಿಕ ಬ್ಯಾಟ್ಸ್‌ಮನ್‌ ಕ್ರಿಸ್‌ ಗೇಲ್‌ 13 ಎಸೆತಗಳನ್ನು ಎದುರಿಸಿ ಯಾವುದೇ ರನ್‌ ಗಳಿಸದೆಯೇ ಮೊಹಮ್ಮದ್‌ ಸೈಫುದ್ದೀನ್‌ ಓವರ್‌ನಲ್ಲಿ ವಿಕೆಟ್‌ ಒಪ್ಪಿಸಿದರು. ಎವಿನ್‌ ಲೂಯಿಸ್‌ ಮತ್ತು ಶಾಯ್‌ ಹೋಪ್‌ ಜೋಡಿ ತಾಳ್ಮೆಯುತ ಆಟದ ಮೂಲಕ ತಂಡದ ರನ್‌ ಗಳಿಕೆಗೆ ಆಸರೆಯಾಗಿದರು. 67 ಎಸೆತಗಳಿಗೆ 70 ರನ್‌ ಗಳಿಸಿದ್ದ ಲೂಯಿಸ್‌, ಶಕೀಬ್‌ ಅಲ್‌ ಹಸನ್‌ ಬೌಲಿಂಗ್‌ನಲ್ಲಿ ಕ್ಯಾಚ್‌ ನೀಡಿದರು.

ನಂತರದಲ್ಲಿ ಶಾಯ್‌ ಹೋಪ್‌ ಮತ್ತು ನಿಕೊಲಸ್‌ ಪೂರನ್‌(25) ಜತೆಯಾಟಕ್ಕೆ ಮತ್ತೆ ಶಕೀಬ್‌ ಅಲ್‌ ಹಸನ್‌ ತಡೆಯಾದರು. ಉತ್ತಮ ಫಾರ್ಮ್‌ನಲ್ಲಿರುವ ಪೂರನ್‌ ವಿಕೆಟ್‌ ಕಬಳಿಸಿದರು. ಐಪಿಎಲ್‌ ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಆ್ಯಂಡ್ರೆ ರಸೆಲ್‌ ಇಂದಿನ ಪಂದ್ಯದಲ್ಲಿಯೂ ನಿರಾಸೆ ಮೂಡಿಸಿದರು. ಮುಸ್ತಫಿಜುರ್‌ ರಹಮಾನ್‌ ಎಸೆತದಲ್ಲಿ ರಸೆಲ್‌(0) ಕ್ಯಾಚ್‌ ನೀಡಿ ಹೊರ ನಡೆದರು. ಕೊನೆಯ ಎಸೆತದಲ್ಲಿ ಡರೆನ್‌ ಬ್ರಾವೋ(19) ವಿಕೆಟ್‌ ಕಳೆದು ಕೊಂಡರು.

ಮುಸ್ತಫಿಜುರ್‌ ರಹಮಾನ್‌ 3 ವಿಕೆಟ್, ಶಕೀಬ್‌ ಅಲ್‌ ಹಸನ್‌ ಮತ್ತು ಮೊಹಮ್ಮದ್‌ ಸೈಫುದ್ದೀನ್‌ ತಲಾ 2 ವಿಕೆಟ್‌ ಕಬಳಿಸಿದರು.

ಈ ಟೂರ್ನಿಯಲ್ಲಿ ಉಭಯ ತಂಡಗಳೂ ತಲಾ ನಾಲ್ಕು ಪಂದ್ಯಗಳನ್ನು ಆಡಿವೆ. ಒಂದೊಂದರಲ್ಲಿ ಗೆದ್ದು, ಎರಡರಲ್ಲಿ ಸೋತಿವೆ. ಇನ್ನೊಂದು ಪಂದ್ಯ ಮಳೆಯಿಂದಾಗಿ ರದ್ದಾಗಿದ್ದವು.

ಸ್ಫೋಟಕ ಬ್ಯಾಟ್ಸ್‌ಮನ್‌ಗಳ ದಂಡೇ ಇರುವ ವೆಸ್ಟ್ ಇಂಡೀಸ್ ತಂಡವು ಇನ್ನೂ ಟ್ವೆಂಟಿ–20 ಮನೋಭಾವದಿಂದ ಹೊರಬಂದಂತೆ ಕಾಣುತ್ತಿಲ್ಲ. ನಿಕೊಲಸ್ ಪೂರನ್ ಒಬ್ಬರೇ ನಿರಂತರವಾಗಿ ಉತ್ತಮ ಆಟವಾಡುತ್ತಿದ್ದಾರೆ. ಐಪಿಎಲ್‌ನಲ್ಲಿ ಮಿಂಚಿದ್ದ ರಸೆಲ್ ಇಲ್ಲಿ ದೊಡ್ಡ ಆಟ ಆಡುವಲ್ಲಿ ವಿಫಲರಾಗಿದ್ದಾರೆ. 

ಬಾಂಗ್ಲಾ ತಂಡವು ಇದುವರೆಗೆ ಆಡಿದ ಎಲ್ಲ ಪಂದ್ಯಗಳಲ್ಲಿಯೂ ಉತ್ತಮವಾಗಿಯೇ ಆಡಿದೆ. ಸೋಲಿನಲ್ಲಿಯೂ ಹೋರಾಟ ಗಮನ ಸೆಳೆದಿತ್ತು. ಮೂರನೇ ಕ್ರಮಾಂಕದಲ್ಲಿ ಆಡಿರುವ ಆಲ್‌ರೌಂಡರ್‌ ಶಕೀಬ್ ಅಲ್ ಹಸನ್ ಈಗಾಗಲೇ ಒಂದು ಶತಕ ಹೊಡೆದು ತಮ್ಮ ಹೆಜ್ಜೆಗುರುತು ಮೂಡಿಸಿದ್ದಾರೆ. ಸೌಮ್ಯ ಸರ್ಕಾರ್ ಕೂಡ ಭರವಸೆ ಮೂಡಿಸಿದ್ದಾರೆ.

ಬೌಲಿಂಗ್‌ನಲ್ಲಿ ಮಷ್ರಫೆ, ಮುಸ್ತಫಿಜುರ್ ರೆಹಮಾನ್ ಮತ್ತು ಶಕೀಬ್ ಅವರು ಪ್ರಮುಖರಾಗಿದ್ದಾರೆ. ಎದುರಾಳಿ ಬ್ಯಾಟ್ಸ್‌ಮನ್‌ಗಳಿಗೆ ಕಡಿವಾಣ ಹಾಕುವ ಸಾಮರ್ಥ್ಯ ಅವರಿಗೆ ಇದೆ. ‌ಈ ಹಿಂದೆಯೂ ವಿಂಡೀಸ್ ತಂಡವನ್ನು ಸೋಲಿಸಿರುವ ದಾಖಲೆಯನ್ನು ಬಾಂಗ್ಲಾ ಹೊಂದಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !