ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಂಗ್ಲಾ vs ಆಸ್ಟ್ರೇಲಿಯಾ | ಆಸ್ಟ್ಟೇಲಿಯಾದ ವಾರ್ನರ್ ಶತಕಕ್ಕೆ ಒಲಿದ ಜಯ

ಬಾಂಗ್ಲಾಗೆ ವೀರೋಚಿತ ಸೋಲು; ಮುಷ್ಫೀಕ್‌ ಉರ್ ರಹೀಮ್ ದಿಟ್ಟ ಶತಕ
Last Updated 21 ಜೂನ್ 2019, 3:54 IST
ಅಕ್ಷರ ಗಾತ್ರ

ನಾಟಿಂಗಂ: ಟ್ರೆಂಟ್‌ ಬ್ರಿಜ್ ಕ್ರೀಡಾಂಗಣದಲ್ಲಿ ಗುರುವಾರ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡವು ಪಂದ್ಯವನ್ನು ಗೆದ್ದಿತು. ಆದರೆ, 48 ರನ್‌ಗಳ ಅಂತರದಿಂದ ಸೋತ ಬಾಂಗ್ಲಾದೇಶ ಕ್ರಿಕೆಟ್‌ ಅಭಿಮಾನಿಗಳ ಮನಗೆದ್ದಿತು.

ಡೇವಿಡ್ ವಾರ್ನರ್ ಹೊಡೆದ ದಾಖಲೆ ಶತಕದ ಬಲದಿಂದ ಆಸ್ಟ್ರೇಲಿಯಾ ತಂಡವು 50 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 381 ರನ್‌ ಗಳಿಸಿತ್ತು. ಈ ಬೃಹತ್ ಮೊತ್ತವನ್ನು ಬೆನ್ನತ್ತಿದ್ದ ಬಾಂಗ್ಲಾ ತಂಡವು ಹುಲಿಯಂತೆ ಹೋರಾಡಿತು. ಮುಷ್ಫೀಕ್‌ ಉರ್ ರಹೀಮ್ (ಔಟಾಗದೆ 102; 97 ಎಸೆತ, 9 ಬೌಂಡರಿ, 1 ಸಿಕ್ಸರ್) ಅವರ ಶತಕ ನೆನಪಿನಲ್ಲಿ ಉಳಿಯಿತು. ತಂಡವು 50 ಓವರ್‌ಗಳಲ್ಲಿ ಎಂಟು ವಿಕೆಟ್‌ಗಳಿಗೆ 333 ರನ್‌ ಗಳಿಸಿತು.

ಬೃಹತ್ ಗುರಿಯನ್ನು ಬೆನ್ನತ್ತಿದ ಬಾಂಗ್ಲಾದ ಆರಂಭಿಕ ಬ್ಯಾಟ್ಸ್‌ಮನ್ ಸೌಮ್ಯಾ ಸರ್ಕಾರ್ ನಾಲ್ಕನೇ ಓವರ್‌ನಲ್ಲಿ ರನ್‌ಔಟ್ ಆದರು. ಇನ್ನೊಂದು ಬದಿಯಲ್ಲಿದ್ದ ತಮೀಮ್ ಇಕ್ಬಾಲ್ (62; 74ಎಸೆತ, 6 ಬೌಂಡರಿ) ಅವರೊಂದಿಗೆ ಸೇರಿದ ಶಕೀಬ್ ಅಲ್ ಹಸನ್ ಮತ್ತೊಮ್ಮೆ ತಮ್ಮ ಬ್ಯಾಟಿಂಗ್ ಪರಾಕ್ರಮ ಮೆರೆಯುವ ಲಕ್ಷಣ ತೋರಿದ್ದರು. ಎರಡನೇ ವಿಕೆಟ್ ಜೊತೆಯಾಟದಲ್ಲಿ 79 ರನ್‌ಗಳನ್ನು ಸೇರಿಸಿದರು. ಟೂರ್ನಿಯಲ್ಲಿ ಈಗಾಗಲೇ ಎರಡು ಶತಕಗಳನ್ನು ಗಳಿಸಿರುವ ಶಕೀಬ್ (41 ರನ್)ಇಲ್ಲಿ ಅರ್ಧಶತಕದ ಸನಿಹ ಎಡವಿದರು. ಅವರ ನಂತರ ತಮೀಮ್ ಮತ್ತು ಲಿಟನ್ ದಾಸ್ ಕೂಡ ಬೇಗನೆ ಔಟಾದರು.

ಆದರೆ ರಹೀಮ್ ಮತ್ತು ಮಹ ಮುದುಲ್ಲಾ (69 ರನ್) ದಿಟ್ಟವಾಗಿ ಆಡಿದರು. ಆಸ್ಟ್ರೇಲಿಯಾದ ಮಧ್ಯಮ ವೇಗಿಗಳಾದ ಕಾಲ್ಟರ್‌ನೈಲ್, ಮಿಷೆಲ್ ಸ್ಟಾರ್ಕ್ ಮತ್ತು ಮಾರ್ಕಸ್ ಸ್ಟೊಯಿನಿಸ್ ಅವರ ದಾಳಿಯನ್ನು ದಿಟ್ಟವಾಗಿ ಎದುರಿಸಿದರು. ಆದರೆ ವಿಕೆಟ್ ಉಳಿಸಿಕೊಳ್ಳುವ ಯತ್ನದಲ್ಲಿ ರನ್‌ ಗಳಿಕೆಯ ವೇಗ ಕುಂಠಿತವಾಯಿತು. ಐದನೇ ವಿಕೆಟ್ ಜೊತೆಯಾಟದಲ್ಲಿ 127 ರನ್‌ಗಳನ್ನು ಸೇರಿಸಿದರು. 46ನೇ ಓವರ್‌ನಲ್ಲಿ ಕಾಲ್ಟರ್‌ನೈಲ್ ಅವರ ಎಸೆತದಲ್ಲಿ ಮಹಮುದುಲ್ಲಾ ಔಟಾದರು. ಜೊತೆಯಾಟ ಮುರಿದುಬಿದ್ದಿತು. ಜೊತೆಗೆ ಗೆಲುವಿನ ಆಸೆಯೂ ಕಮರಿತು.

ಹೋದ ಪಂದ್ಯದಲ್ಲಿ 322 ರನ್‌ಗಳ ಗುರಿ ಬೆನ್ನತ್ತಿದ್ದ ಬಾಂಗ್ಲಾದೇಶ ವೆಸ್ಟ್ ಇಂಡೀಸ್ ವಿರುದ್ಧ ಗೆದ್ದಿತ್ತು.

ವಾರ್ನರ್ ದಾಖಲೆಯ ಆಟ: ಬಾಂಗ್ಲಾ ತಂಡದವರು ನೀಡಿದ ಜೀವದಾನವನ್ನು ಸಮರ್ಥವಾಗಿ ಬಳಸಿಕೊಂಡ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಶತಕ ಸಿಡಿಸಿದರು. ದಾಖಲೆಯನ್ನೂ ಬರೆದರು. ಬಾಂಗ್ಲಾದ ಮಷ್ರಫೆ ಮೊರ್ತಜಾ ಹಾಕಿದ ಐದನೇ ಓವರ್‌ನಲ್ಲಿ ವಾರ್ನರ್ ನೀಡಿದ್ದ ಕ್ಯಾಚ್ ಅನ್ನು ಬ್ಯಾಕ್‌ವರ್ಡ್ ಪಾಯಿಂಟ್‌ನಲ್ಲಿದ್ದ ಶಬ್ಬೀರ್ ಅಹಮ್ಮದ್ ನೆಲಕ್ಕೆ ಚೆಲ್ಲಿದ್ದರು. ಆಗ ವಾರ್ನರ್ ಹತ್ತು ರನ್ ಗಳಿಸಿದ್ದರು. ಅಮೇಲೆ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು.

147 ಎಸೆತಗಳಲ್ಲಿ ಐದು ಸಿಕ್ಸರ್ ಮತ್ತು 14 ಬೌಂಡರಿ ಒಳಗೊಂಡ 166 ರನ್ ಗಳಿಸಿದ ವಾರ್ನರ್ ವಿಶ್ವಕಪ್‌ ಟೂರ್ನಿಯಲ್ಲಿ ಎರಡು ಬಾರಿ 150ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ಆಟಗಾರ ಎಂಬ ಶ್ರೇಯ ತಮ್ಮದಾಗಿಸಿಕೊಂಡರು. ಇದು, ವಿಶ್ವಕಪ್‌ ನಲ್ಲಿ 11ನೇ ಗರಿಷ್ಠ ವೈಯಕ್ತಿಕ ಮೊತ್ತವಾಗಿದೆ. ಆಸ್ಟ್ರೇಲಿಯಾ ಪರ ವಿಶ್ವಕಪ್‌ನಲ್ಲಿ ಇದು ಎರಡನೇ ಗರಿಷ್ಠ ವೈಯಕ್ತಿಕ ಮೊತ್ತವಾಗಿದೆ. ವಿಶೇಷವೆಂದರೆ, ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವವರೂ ವಾರ್ನರ್! 2015ರ ವಿಶ್ವಕಪ್‌ನಲ್ಲಿ ಅಫ್ಗಾನಿಸ್ತಾನ ಎದುರು ಅವರು 178 ರನ್‌ ಸಿಡಿಸಿದ್ದರು. ಈ ಬಾರಿಯ ಟೂರ್ನಿಯಲ್ಲಿ ಇದು ಅವರ ಎರಡನೇ ಶತಕವಾಗಿದೆ. ಪಾಕಿಸ್ತಾನ ಎದುರಿನ ಪಂದ್ಯದಲ್ಲಿ ವಾರ್ನರ್ 107 ರನ್ ಗಳಿಸಿದ್ದರು. ವಾರ್ನರ್ ಅವರು ಆ್ಯರನ್ ಫಿಂಚ್ (53; 51 ಎಸೆತ, 2 ಸಿಕ್ಸರ್‌, 5 ಬೌಂಡರಿ) ಅವರೊಂದಿಗೆ ಮೊದಲ ವಿಕೆಟ್ ಜೊತೆಯಾಟದಲ್ಲಿ 20.5 ಓವರ್‌ಗಳಲ್ಲಿ 121 ರನ್‌ ಸೇರಿಸಿದರು. ಫಿಂಚ್ ಔಟಾದ ನಂತರ ಉಸ್ಮಾನ್ ಖ್ವಾಜಾ (89; 72 ಎಸೆತ, 10 ಬೌಂ) ಮತ್ತು ವಾರ್ನರ್ ಬ್ಯಾಟಿಂಗ್ ರಂಗೇರಿತು.

*
ತಂಡದ ಇನಿಂಗ್ಸ್‌ಗೆ ಉತ್ತಮ ತಳಪಾಯ ಹಾಕಿಕೊಡಲು ಸಾಧ್ಯವಾದದ್ದು ಖುಷಿ ತಂದಿದೆ. ಆರಂಭದಲ್ಲಿ ರೂ ನಂತರ ಬೌಲರ್‌ಗಳನ್ನು ದಂಡಿಸಲು ಸಾಧ್ಯವಾಯಿತು.
-ಡೇವಿಡ್‌ ವಾರ್ನರ್, ಆಸ್ಟ್ರೇಲಿಯಾ ಆಟಗಾರ

ಶತಕ ಗಳಿಸಿದ ಬಾಂಗ್ಲಾದೇಶದ ಮುಷ್ಫಿಕುರ್ ರಹೀಂ ಅವರ ಬ್ಯಾಟಿಂಗ್ ವೈಖರಿ –ರಾಯಿಟರ್ಸ್‌ ಚಿತ್ರ
ಶತಕ ಗಳಿಸಿದ ಬಾಂಗ್ಲಾದೇಶದ ಮುಷ್ಫಿಕುರ್ ರಹೀಂ ಅವರ ಬ್ಯಾಟಿಂಗ್ ವೈಖರಿ –ರಾಯಿಟರ್ಸ್‌ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT