ಅಫ್ಗಾನ್‌ ವಿರುದ್ಧ ಇಂಗ್ಲೆಂಡ್‌ ಫೆವರೀಟ್‌

ಭಾನುವಾರ, ಜೂಲೈ 21, 2019
22 °C

ಅಫ್ಗಾನ್‌ ವಿರುದ್ಧ ಇಂಗ್ಲೆಂಡ್‌ ಫೆವರೀಟ್‌

Published:
Updated:
Prajavani

ಮ್ಯಾಂಚೆಸ್ಟರ್‌: ಸೆಮಿಫೈನಲ್‌ನತ್ತ ದಿಟ್ಟ ಹೆಜ್ಜೆಯಿಟ್ಟಿರುವ ಇಂಗ್ಲೆಂಡ್‌ ತಂಡ, ಕೊನೆಯ ಸ್ಥಾನದಲ್ಲಿರುವ ಆದರೆ ಉತ್ಸಾಹಿ ಅಫ್ಗಾನಿಸ್ತಾನ ತಂಡವನ್ನು ಮಂಗಳವಾರ ಎದುರಿಸಲಿದೆ. ಆತಿಥೇಯರಿಗೆ ಇರುವ ಒಂದೇ ಸಮಸ್ಯೆ ಎಂದರೆ ಕೆಲವು ಆಟಗಾರರು ಗಾಯಾಳಾಗಿರುವುದು.

ತಂಡದ ಸಾರಥ್ಯ ವಹಿಸಿರುವ ಇಯಾನ್‌ ಮಾರ್ಗನ್‌, ವೆಸ್ಟ್‌ ಇಂಡೀಸ್‌ ಎದುರಿನ ಪಂದ್ಯದ ವೇಳೆ ಬೆನ್ನು ನೋವಿನಿಂದ ಅರ್ಧದಲ್ಲೇ ಕ್ರೀಡಾಂಗಣ ತೊರೆಯಬೇಕಾಯಿತು. ಅದೇ ಪಂದ್ಯದಲ್ಲಿ ಆರಂಭ ಆಟಗಾರ ಜೇಸನ್‌ ರಾಯ್‌ ಕೂಡ ಮೊಣಕಾಲಿನ ಸ್ನಾಯುರಜ್ಜು ನೋವಿನಿಂದ ಬಳಲಿ ಪೂರ್ಣ ಪಂದ್ಯ ಆಡಲಾಗಲಿಲ್ಲ.

ಮಂಗಳವಾರ ಆಡುವ ಬಗ್ಗೆ ಮಾರ್ಗನ್‌ಗೇ ಸಂದೇಹವಿದೆ. ಆದರೆ ದಿಗಿಲುಗೊಳ್ಳುವ ಅಗತ್ಯವೇನೂ ಇಲ್ಲ ಎಂದು ಅವರು ಧೈರ್ಯ ತುಂಬಿದ್ದಾರೆ. ‘ಬೆನ್ನು ನೋವಿದೆ. ಈ ಹಿಂದೆಯೂ ನೋವು ಕಾಡಿತ್ತು. ಸರಿಯಾಗಲು ಕೆಲವು ದಿನ ಹಿಡಿಯುತ್ತದೆ. ಆಡುವ ಬಗ್ಗೆ ಖಚಿತವಿಲ್ಲ. ನಾಳೆ ಬೆಳಿಗ್ಗೆ ಗೊತ್ತಾಗುತ್ತದೆ’ ಎಂದು ಮಾರ್ಗನ್‌ ವಿಂಡೀಸ್‌ ವಿರುದ್ಧ ಪಂದ್ಯದ ನಂತರ ಹೇಳಿದ್ದರು.

‘ಜೇಸನ್‌ಗೆ ಮೊಣಕಾಲಿನ ಸ್ನಾಯುನೋವಿದೆ. ಸ್ಕ್ಯಾನ್‌ ಅಗತ್ಯವಿದೆ. ಇಬ್ಬರು ಆಟಗಾರರಿಗೆ ಸಮಸ್ಯೆಯಾದರೆ ಅದರಿಂದ ಚಿಂತೆಯಾಗುತದೆ ನಿಜ. ಆದರೆ ಗಾಬರಿಯಾಗುವ ಪ್ರಸಂಗವಿಲ್ಲ’ ಎಂದಿದ್ದಾರೆ.

ಮಾರ್ಗನ್‌ ಆಡದಿದ್ದಲ್ಲಿ ಉಪನಾಯಕ ಜೋಸ್‌ ಬಟ್ಲರ್ ತಂಡವನ್ನು ಮುನ್ನಡೆಸುವ ಸಾಧ್ಯತೆಯಿದೆ. ಆದರೆ ತಂಡ ಪರ್ಯಾಯ ಆಟಗಾರರಿಂದ ಸಮರ್ಥವಾಗಿದೆ. 

ಪಾಕ್‌ ವಿರುದ್ಧ ಅನಿರೀಕ್ಷಿತ ಸೋಲನುಭವಿಸಿದ ನಂತರ ಇಂಗ್ಲೆಂಡ್‌ ಸಂಘಟಿತ ಸಾಮರ್ಥ್ಯ ತೋರಿ ಗೆಲುವಿನ ಹಾದಿಗೆ ಮರಳಿದೆ. ಅದೇ ಯಶಸ್ಸನ್ನು ಮುಂದುವರಿಸುವ ಉತ್ಸಾಹದಲ್ಲಿದೆ.

ಇನ್ನೊಂದೆಡೆ, ಎರಡನೇ ಬಾರಿ ವಿಶ್ವಕಪ್‌ನಲ್ಲಿ ಆಡುತ್ತಿರುವ ಅಫ್ಗಾನಿಸ್ತಾನ ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ. ಮೊದಲ ನಾಲ್ಕು ಪಂದ್ಯಗಳಲ್ಲಿ ಈ ತಂಡ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಶ್ರೀಲಂಕಾ, ನ್ಯೂಜಿಲೆಂಡ್‌ ಎದುರು ಮಣಿದಿದೆ. ಆದರೆ ಶ್ರೀಲಂಕಾ ಎದುರು ತೋರಿದ ಹೋರಾಟ ಗಮನಸೆಳೆದಿತ್ತು. ಬ್ಯಾಟಿಂಗ್‌ ವಿಭಾಗ ಈ ತಂಡದ ಸಮಸ್ಯೆ. ಆಡಿರುವ  ನಾಲ್ಕು ಪಂದ್ಯಗಳಲ್ಲಿ ಒಮ್ಮೆಯೂ ಈ ತಂಡ 40 ಓವರ್‌ಗಳಿಗಿಂತ ಹೆಚ್ಚು ಬ್ಯಾಟ್‌ ಮಾಡಲು ಶಕ್ತವಾಗಿಲ್ಲ.

ದಕ್ಷಿಣ ಆಫ್ರಿಕ ವಿರುದ್ಧ ಹಝ್ರತ್‌ಉಲ್ಲಾ ಝಝೈ ಮತ್ತು ನೂರ್‌ ಅಲಿ ಜರ್ದಾನ್‌ ಮೊದಲ ಕೆಲವು ಓವರುಗಳನ್ನು ಎಚ್ಚರಿಕೆಯಿಂದ ನಿಭಾಯಿಸಿದರೂ ನಂತರ ಲಾಭ ಪಡೆಯಲಾಗದೇ ಕುಸಿದಿತ್ತು. ರಶೀದ್‌ ಖಾನ್‌ ಮಾತ್ರ ಉತ್ತಮ ಆಲ್‌ರೌಂಡರ್ ಎಂಬುದರ ಪರಿಚಯ ನೀಡಿದ್ದಾರೆ. ಸ್ಪಿನ್‌ ದಾಳಿ ತಂಡದ ಬಲವಾಗಿದ್ದು, ಪಿಚ್‌ ನೆರವಾದರೆ ಪ್ರಬಲ ಆತಿಥೇಯರ ವಿರುದ್ಧ ಸ್ವಲ್ಪ ಹೋರಾಟ ನಿರೀಕ್ಷಿಸಬಹುದು.

ಜೇಸನ್‌ ರಾಯ್ ಅಲಭ್ಯ
ಮ್ಯಾಂಚೆಸ್ಟರ್‌ (ಎಎಫ್‌ಪಿ):
ಇಂಗ್ಲೆಂಡ್‌ ತಂಡದ ಆರಂಭ ಆಟಗಾರ ಜೇಸನ್‌ ರಾಯ್‌ ಮೊಣಕಾಲಿನ ಸ್ನಾಯು ಸೆಳೆತದ ಕಾರಣ ಮುಂದಿನ ಎರಡು ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಸೋಮವಾರ ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿ ಈ ವಿಷಯ ತಿಳಿಸಿದೆ.

ವೆಸ್ಟ್‌ ಇಂಡೀಸ್‌ ತಂಡದ ವಿರುದ್ಧ ನಡೆದ ಪಂದದಲ್ಲಿ ಫೀಲ್ಡಿಂಗ್‌ ವೇಳೆ ರಾಯ್‌ ಗಾಯಗೊಂಡಿದ್ದರು. ಮಂಗಳವಾರ ಅಫ್ಗಾನಿಸ್ತಾನ ಹಾಗೂ ಶುಕ್ರವಾರ ಶ್ರೀಲಂಕಾ ವಿರುದ್ಧ ನಡೆಯುವ ಎರಡು ಪಂದ್ಯಗಳಲ್ಲಿ ಅವರು ಆಡುವುದಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !