ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯಾಗೆ ಮಣಿದ ಇಂಗ್ಲೆಂಡ್‌: ನಾಲ್ಕರ ಘಟ್ಟಕ್ಕೆ ಲಗ್ಗೆಯಿಟ್ಟ ಫಿಂಚ್‌ ಬಳಗ

ವಿಶ್ವಕಪ್‌ ಕ್ರಿಕೆಟ್‌
Last Updated 25 ಜೂನ್ 2019, 19:19 IST
ಅಕ್ಷರ ಗಾತ್ರ

ಲಾರ್ಡ್ಸ್, ಲಂಡನ್: ‘ಕ್ರಿಕೆಟ್ ಕಾಶಿ’ ಲಾರ್ಡ್ಸ್‌ ಅಂಗಳದಲ್ಲಿ ಮಂಗಳವಾರ ಆಸ್ಟ್ರೇಲಿಯಾದ ವೇಗದ ಜೋಡಿ ಜೇಸನ್ ಬೆಹ್ರನ್‌ಡಾರ್ಫ್‌ ಮತ್ತು ಮಿಷೆಲ್ ಸ್ಟಾರ್ಕ್ ಅವರ ಬಿರುಗಾಳಿ ಬೌಲಿಂಗ್‌ ಮುಂದೆ ಇಂಗ್ಲೆಂಡ್ ದೂಳೀಪಟವಾಯಿತು.

ಬಲಾಢ್ಯ ಬ್ಯಾಟಿಂಗ್ ಪಡೆಯನ್ನೇ ಹೊಂದಿರುವ ಆತಿಥೇಯ ಇಂಗ್ಲೆಂಡ್ ತಂಡವು 64 ರನ್‌ಗಳಿಂದ ಮುಖಭಂಗ ಅನುಭವಿಸಿತು. ಏಳನೇ ಪಂದ್ಯವಾಡಿದ ಇಂಗ್ಲೆಂಡ್‌ಗೆ ಇದು ಮೂರನೇ ಸೋಲು. ಇದರಿಂದಾಗಿ ತಂಡದ ಸೆಮಿಫೈನಲ್ ಹಾದಿ ಸ್ವಲ್ಪ ಜಟಿಲವಾದಂತಾಗಿದೆ. ‘ಹಾಲಿ ಚಾಂಪಿಯನ್‌’ ಆಸ್ಟ್ರೇಲಿಯಾ ಸೆಮಿಫೈನಲ್‌ ಪ್ರವೇಶಿಸಿತು.

ಟಾಸ್ ಗೆದ್ದ ಇಂಗ್ಲೆಂಡ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಆಸ್ಟ್ರೇಲಿಯಾ ತಂಡದ ನಾಯಕ ಆ್ಯರನ್ ಫಿಂಚ್ (100;116 ಎಸೆತ, 11ಬೌಂಡರಿ, 2ಸಿಕ್ಸರ್) ತಮಗೆ ಲಭಿಸಿದ ಒಂದು ‘ಜೀವದಾನ’ವನ್ನು ಶತಕವನ್ನಾಗಿ ಪರಿವರ್ತಿಸಿದರು. ಇದರಿಂದಾಗಿ ಆಸ್ಟ್ರೇಲಿಯಾ 50 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 285 ರನ್‌ ಗಳಿಸಿತು. ಅದಕ್ಕುತ್ತರವಾಗಿ ಇಂಗ್ಲೆಂಡ್ 44.4 ಓವರ್‌ಗಳಲ್ಲಿ 221 ರನ್‌ ಗಳಿಸಿತು. ಬೆಹ್ರನ್‌ಡಾರ್ಫ್ (44ಕ್ಕೆ5) ಮತ್ತು ಸ್ಟಾರ್ಕ್ (43ಕ್ಕೆ4) ಅವರ ಅಮೋಘ ಬೌಲಿಂಗ್‌ ಮಾಡಿದರು. ಬೆನ್ ಸ್ಟೋಕ್ಸ್‌ (89; 115ಎಸೆತ, 8ಬೌಂಡರಿ, 2ಸಿಕ್ಸರ್) ಹೋರಾಟ ವ್ಯರ್ಥವಾಯಿತು.

ತಿರುವು ನೀಡಿದ ಸ್ಟಾರ್ಕ್: ತಮ್ಮ ಮೊದಲ ಸ್ಪೆಲ್‌ನಲ್ಲಿ ಎರಡು ವಿಕೆಟ್ ಗಳಿಸಿದ್ದ ಸ್ಟಾರ್ಕ್ ಎರಡನೇ ಸ್ಪೆಲ್ ಮಾಡಲು 37ನೇ ಓವರ್‌ನಲ್ಲಿ ಚೆಂಡು ಕೈಗೆ ತೆಗೆದುಕೊಂಡರು. ಆಗ ಬೆನ್ ಸ್ಟೋಕ್ಸ್‌ ಶತಕದತ್ತ ಹೆಜ್ಜೆಯಿಟ್ಟಿದ್ದರು. ಅವರನ್ನು ಸ್ಟಾರ್ಕ್ ಕ್ಲೀನ್ ಬೌಲ್ಡ್ ಮಾಡಿದರು. ಹತಾಶೆಯಿಂದ ಬ್ಯಾಟ್‌ ಅನ್ನು ನೆಲಕ್ಕೆ ಹಾಕಿ ಒದ್ದ ಬೆನ್ ಪೆವಿಲಿಯನ್‌ಗೆ ಮರಳಿದರು. ಇಂಗ್ಲೆಂಡ್ ತಂಡದ ಹೋರಾಟವು ಪತನದ ಹಾದಿ ಹಿಡಿಯಿತು.‌

ಸ್ಟಾರ್ಕ್‌ ಮೊದಲ ಸ್ಪೆಲ್‌ನಲ್ಲಿ ಜೋ ರೂಟ್ (8 ರನ್) ಮತ್ತು ಇಯಾನ್ ಮಾರ್ಗನ್ (4 ರನ್) ಅವರ ವಿಕೆಟ್ ಗಳಿಸಿದ್ದರು. ಇದರಿಂದಾಗಿ ತಂಡದ ಮಧ್ಯಮ ಕ್ರಮಾಂಕ ಕುಸಿದಿತ್ತು. ಚೇತರಿಕೆ ನೀಡುವ ಸ್ಟೋಕ್ಸ್‌ ಪ್ರಯತ್ನಕ್ಕೂ ಸ್ಟಾರ್ಕ್ ಅಡ್ಡಗಾಲು ಹಾಕಿದರು.

ಬೆಹ್ರನ್‌ಡಾರ್ಫ್‌ ಆರಂಭಿಕ ಪೆಟ್ಟು: ಇಂಗ್ಲೆಂಡ್ ತಂಡಕ್ಕೆ ಬೆಹ್ರನ್‌ಡಾರ್ಫ್‌ ಆರಂಭಿಕ ಪೆಟ್ಟು ಕೊಟ್ಟರು. ಅವರು ಮೊದಲ ಓವರ್‌ನ ಎರಡನೇ ಎಸೆತದಲ್ಲಿಯೇ ಜೇಮ್ಸ್‌ ವಿನ್ಸಿಯ ವಿಕೆಟ್ ಕಬಳಿಸಿದರು. ಲಯ ಕಂಡುಕೊಳ್ಳಲು ಯತ್ನಿಸಿದ ಜಾನಿ ಬೆಸ್ಟೊ ಅವರನ್ನೂ 14ನೇ ಓವರ್‌ನಲ್ಲಿ ಪೆವಿಲಿಯನ್‌ಗೆ ಕಳಿಸಿದರು. ನಂತರ ಕ್ರಿಸ್ ವೋಕ್ಸ್‌, ಮೊಯಿನ್ ಅಲಿ ಮತ್ತು ಜೋಫ್ರಾ ಆರ್ಚರ್ ಅವರ ವಿಕೆಟ್
ಕಬಳಿಸಿದರು.

ಫಿಂಚ್ ಶತಕ ವೈಭವ: ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾದ ನಾಯಕ ಫಿಂಚ್‌ಗೆ ಅದೃಷ್ಟ ಜೊತೆಗಿತ್ತು. ಆರನೇ ಓವರ್‌ನಲ್ಲಿ ಜೋಫ್ರಾ ಆರ್ಚರ್‌ ಬೌಲಿಂಗ್‌ನಲ್ಲಿ ಬ್ಯಾಕ್‌ವರ್ಡ್‌ ಪಾಯಿಂಟ್ ಫೀಲ್ಡರ್ ಜೇಮ್ಸ್‌ ವಿನ್ಸಿ ಅವರು ಆ್ಯರನ್ ಫಿಂಚ್ ಕ್ಯಾಚ್ ಕೈಚೆಲ್ಲಿದರು. ಆಗ ಎರಡು ರನ್ ಗಳಿಸಿದ್ದ ಅವರು, ನಂತರ ಎಚ್ಚರಿಕೆಯ ಆಟವಾಡಿದರು.

ಕ್ಷಣಕ್ಷಣದಸ್ಕೋರ್‌ಗಾಗಿ:https://bit.ly/2ILnE13

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT