ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಗೆಲುವಿನ ಓಟಕ್ಕೆ ಇಂಗ್ಲೆಂಡ್ ತಡೆ!

ಜಾನಿ ಬೆಸ್ಟೊ ಶತಕದ ರಂಗು; ಶಮಿಗೆ ಐದು ವಿಕೆಟ್; ರೋಹಿತ್ ಶತಕ ವ್ಯರ್ಥ; ಪಾಕ್, ಬಾಂಗ್ಲಾಗೆ ಚಿಂತೆ
Last Updated 30 ಜೂನ್ 2019, 19:52 IST
ಅಕ್ಷರ ಗಾತ್ರ

ಬರ್ಮಿಂಗಂ: ಭಾನುವಾರ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಕ್ರಿಕೆಟ್ ಅಭಿಮಾನಿಗಳ ಆಶಯ ಈಡೇರಲಿಲ್ಲ. ಇಂಗ್ಲೆಂಡ್ ಗೆದ್ದಿತು. ಭಾರತ ಸೋತಿತು!

ಹೌದು; ವಿಶ್ವಕಪ್‌ ಟೂರ್ನಿಯ ಈ ಪಂದ್ಯದಲ್ಲಿ ಒಂದೊಮ್ಮೆ ಇಂಗ್ಲೆಂಡ್ ಸೋತರೆ ಸೆಮಿಫೈನಲ್‌ ಪ್ರವೇಶಿಸುವ ಕನಸು ಕಾಣುತ್ತಿದ್ದ ಪಾಕ್ ಮತ್ತು ಬಾಂಗ್ಲಾ ತಂಡಗಳ ಅಭಿಮಾನಿಗಳು ಮತ್ತು ದಿಗ್ಗಜರು ’ಭಾರತ ಗೆಲ್ಲಲಿ’ ಎಂದು ಹಾರೈಸಿದ್ದರು. ಸಾಂಪ್ರದಾಯಿಕ ಎದುರಾಳಿಗಳು ಈ ರೀತಿ ಶುಭ ಹಾರೈಸಿದ್ದು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಸುದ್ದಿ ಮಾಡಿತ್ತು. ಆದರೆ ಇದೀಗ ಲೆಕ್ಕಾಚಾರ ಉಲ್ಟಾಪಲ್ಟಾ ಆಗಿದೆ.

ಆದರೆ, ಆತಿಥೇಯ ತಂಡವು 31 ರನ್‌ಗಳಿಂದ ಜಯಿಸಿತು. ವಿರಾಟ್ ಕೊಹ್ಲಿ ಬಳಗದ ‘ಅಜೇಯ ಓಟ’ಕ್ಕೆ ತಡೆಯೊಡ್ಡಿತು. ‌ಇದರಿಂದಾಗಿ ಪಾಕ್ ಮತ್ತು ಬಾಂಗ್ಲಾ ತಂಡಗಳ ಹಾದಿ ಮತ್ತಷ್ಟು ಜಟಿಲವಾಗಿದೆ. ಇಯಾನ್ ಮಾರ್ಗನ್ ಬಳಗವು ಎಂಟು ಪಂದ್ಯಗಳಿಂದ 10 ಪಾಯಿಂಟ್ಸ್‌ ಕಲೆಹಾಕಿದೆ. ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಮರಳಿದೆ. ಒಂಬತ್ತು ಪಾಯಿಂಟ್ಸ್ ಪಡೆದಿರುವ ಪಾಕಿಸ್ತಾನ ಐದನೇ ಸ್ಥಾನಕ್ಕಿಳಿಯಿತು.

ಇಂಗ್ಲೆಂಡ್ ತಂಡವು ಜುಲೈ ಮೂರರಂದು ನ್ಯೂಜಿಲೆಂಡ್ ವಿರುದ್ಧ ಸೋತು, ಐದರಂದು ಬಾಂಗ್ಲಾದೇಶದ ವಿರುದ್ಧ ಪಾಕ್ ತಂಡವು ಗೆದ್ದರೆ ನಾಲ್ಕರ ಘಟ್ಟಕ್ಕೆ ತಲುಪಬಹುದು. ಅದಕ್ಕೂ ಮುನ್ನ ಬಾಂಗ್ಲಾ ತಂಡವು (ಜುಲೈ 2) ಭಾರತವನ್ನು ಎದುರಿಸಲಿದೆ. ಎರಡನೇ ಸ್ಥಾನದಲ್ಲಿರುವ ಕೊಹ್ಲಿ ಬಳಗವು ಇನ್ನೂ ಎರಡು ಪಂದ್ಯಗಳಲ್ಲಿ ಆಡಬೇಕಿದ್ದು, ಒಂದರಲ್ಲಿ ಗೆದ್ದರೂ ಸೆಮಿಫೈನಲ್‌ ಹಂತದಲ್ಲಿ ಸ್ಥಾನ ಗಟ್ಟಿಯಾಗಲಿದೆ. ರನ್‌ರೇಟ್ ಕೂಡ ಚೆನ್ನಾಗಿರುವುದರಿಂದ ಹೆಚ್ಚು ಆತಂಕವೇನಿಲ್ಲ.

ಬೆಸ್ಟೊ ಶತಕ; ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡಕ್ಕೆಜಾನಿ ಬೆಸ್ಟೊ (111;109ಎಸೆತ, 10ಬೌಂಡರಿ, 6ಸಿಕ್ಸರ್) ಮತ್ತು ಜೇಸನ್ ರಾಯ್ (66; 57ಎಸೆತ, 7ಬೌಂಡರಿ, 2ಸಿಕ್ಸರ್) ಅವರು ಮೊದಲ ವಿಕೆಟ್ ಜೊತೆಯಾಟದಲ್ಲಿ 160 ರನ್‌ಗಳ ಭದ್ರ ಅಡಿಪಾಯ ಹಾಕಿದರು. ಅದರ ಮೇಲೆ ತಂಡವು 50 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 337 ರನ್‌ ಗಳಿಸಿತು. ಮೊದಲ ವಿಕೆಟ್ ಜೊತೆಯಾಟವನ್ನು ನೋಡಿದವರಿಗೆ ಇಂಗ್ಲೆಂಡ್ ನಾಲ್ಕನೂರು ರನ್‌ಗಳಿಗೂ ಹೆಚ್ಚು ಮೊತ್ತ ಗಳಿಸುವ ನಿರೀಕ್ಷೆ ಮೂಡಿತ್ತು. ಆದರೆ, ಮೊಹಮ್ಮದ್ ಶಮಿ (69ಕ್ಕೆ5) ರನ್‌ ಗಳಿಕೆಗೆ ಕಡಿವಾಣ ಹಾಕಿದರು.

ಜಾನಿ ಬೆಸ್ಟೊ
ಜಾನಿ ಬೆಸ್ಟೊ

ಭಾರತದ ಸ್ಪಿನ್ ದಾಳಿಯನ್ನು ಜಾನಿ ಮತ್ತು ಜೇಸನ್ ಜೋಡಿಯು ಮಟ್ಟಹಾಕುವಲ್ಲಿ ಯಶಸ್ವಿಯಾಯಿತು. ಸ್ಪಿನ್ನರ್ ಕುಲದೀಪ್ ಯಾದವ್ ಮತ್ತು ಯಜುವೇಂದ್ರ ಚಾಹಲ್ ಅವರು ಕಣಕ್ಕಿಳಿದ ನಂತರ ಇಬ್ಬರೂ ಆಟಗಾರರು ತಮ್ಮ ಆಕ್ರಮಣಕಾರಿ ಶೈಲಿಯ ಆಟ ಆರಂಭಿಸಿದರು. ಫ್ರಂಟ್‌ಫುಟ್ ಪಂಚ್, ಲಾಫ್ಟ್‌ಗಳು ರಂಗೇರಿದವು. ಸಿಕ್ಸರ್‌ಗಳು ಸಾಲುಗಟ್ಟಿದವು.

ಈ ಹಿಂದಿನ ಪಂದ್ಯಗಳಲ್ಲಿ ತಮ್ಮ ಫಾರ್ಮ್‌ನಲ್ಲಿ ಏರಿಳಿತಗಳನ್ನು ಕಂಡಿದ್ದ ಜಾನಿ ಭಾರತದ ಎದುರು ಮಾತ್ರ ದಿಟ್ಟತನದಿಂದ ಬ್ಯಾಟ್ ಬೀಸಿದರು. ಟೂರ್ನಿಯಲ್ಲಿ ಮೊದಲ ಸಲ ಶತಕ ಬಾರಿಸಿದರು. ಗಾಯದಿಂದಾಗಿ ಜೂನ್ 14ರಿಂದ ಇಲ್ಲಿಯವರೆಗೆ ವಿಶ್ರಾಂತಿ ಪಡೆದಿದ್ದ ಜೇಸನ್ ರಾಯ್ ತಮ್ಮ ಮರಳುವಿಕೆಯನ್ನು ಜಗಜ್ಜಾಹೀರುಗೊಳಿಸಿದರು.

ಬೌಂಡರಿಲೈನ್‌ನಲ್ಲಿ ಕ್ಯಾಚ್ ಮಾಡಲು ಯತ್ನಿಸಿದ ಫೀಲ್ಡರ್ ಕೆ.ಎಲ್. ರಾಹುಲ್ ಅವರಿಗೆ ಗಾಯವಾಯಿತು. ಆದ್ದರಿಂದ ಅವರು ಪೆವಿಲಿಯನ್‌ಗೆ ಮರಳಿದರು. ಅವರ ಬದಲಿಗೆ ರವೀಂದ್ರ ಜಡೇಜ ಫೀಲ್ಡಿಂಗ್ ನಿಭಾಯಿಸಿದರು. 23ನೇ ಓವರ್‌ನಲ್ಲಿ ಯಾದವ್ ಎಸೆತವನ್ನು ಸಿಕ್ಸರ್‌ಗೆ ಎತ್ತಲು ಜೇಸನ್ ರಾಯ್ ಪ್ರಯತ್ನಿಸಿದರು. ಲಾಂಗ್‌ ಆನ್‌ನಲ್ಲಿದ್ದ ಜಡೇಜ ಓಡಿ ಬಂದು ಡೈವ್ ಮಾಡಿ ಪಡೆದ ಕ್ಯಾಚ್ ಚಿತ್ತಾಪಹಾರಿಯಾಗಿತ್ತು. ದೊಡ್ಡ ಜೊತೆಯಾಟಕ್ಕೆ ತೆರೆಬಿತ್ತು. ವಿರಾಟ್ ಹರ್ಷದಿಂದ ಕುಣಿದಾಡಿದರು.

32ನೇ ಓವರ್‌ನಲ್ಲಿ ಜಾನಿ ವಿಕೆಟ್ ಪಡೆದ ಮೊಹಮ್ಮದ್ ಶಮಿ ತಮ್ಮ ಬೇಟೆ ಆರಂಭಿಸಿದರು. ತಮ್ಮ ನಂತರದ ಓವರ್‌ನಲ್ಲಿ ಇಯಾನ್ ಮಾರ್ಗನ್‌ (1 ರನ್) ಅವರಿಗೂ ಪೆವಿಲಿಯನ್ ದಾರಿ ತೋರಿಸಿದರು. ಆದರೆ, ರೂಟ್ ಜೊತೆಗೂಡಿದ ಬೆನ್ ಸ್ಟೋಕ್ಸ್‌ (79; 54ಎಸೆತ, 6ಬೌಂಡರಿ, 3ಸಿಕ್ಸರ್) ಅಬ್ಬರಿಸಿದರು ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 70 ರನ್‌ ಸೇರಿಸಿದರು. ರೂಟ್, ಜೋಸ್ ಬಟ್ಲರ್ (20 ರನ್) ಮತ್ತು ಕ್ರಿಸ್ ವೋಕ್ಸ್‌ (7 ರನ್) ಅವರನ್ನೂ ಶಮಿ ಔಟ್ ಮಾಡಿದರು.

ರೋಹಿತ್ ಮೂರನೇ ಶತಕ: ಭಾರತದ ಆರಂಭಿಕ ಆಟಗಾರ ರೋಹಿತ್ ಶರ್ಮಾ (102; 109ಎ, 15ಬೌಂಡರಿ) ಈ ವಿಶ್ವಕಪ್ ಟೂರ್ನಿಯಲ್ಲಿ ಮೂರನೇ ಶತಕ ದಾಖಲಿಸಿದರು. ಏಕದಿನ ಕ್ರಿಕೆಟ್‌ನಲ್ಲಿ ಇದು ಅವರ 25ನೇ ಶತಕ.

ಕೆ.ಎಲ್. ರಾಹುಲ್ ಸೊನ್ನೆ ಸುತ್ತಿ ಔಟಾದ ನಂತರ ರೋಹಿತ್ ಮತ್ತು ನಾಯಕ ವಿರಾಟ್ ಕೊಹ್ಲಿ ಎರಡನೇ ವಿಕೆಟ್ ಜೊತೆಯಾಟದಲ್ಲಿ 138 ರನ್‌ ಸೇರಿಸಿದರು.

ಟೂರ್ನಿಯಲ್ಲಿ ಸತತ ಐದನೇ ಅರ್ಧಶತಕ ಗಳಿಸಿದ ವಿರಾಟ್ (66; 76ಎಸೆತ, 7ಬೌಂಡರಿ) ಈ ಸಾಧನೆ ಮಾಡಿದ ಮೊದಲ ನಾಯಕನೆಂಬ ಹೆಗ್ಗಳಿಕೆಗೆ ಪಾತ್ರರಾದರು.

ಯಜುವೇಂದ್ರ ಚಾಹಲ್ ‘ದಾಖಲೆ’
ಈ ಪಂದ್ಯದಲ್ಲಿ ದುಬಾರಿ ಬೌಲರ್ ಎನಿಸಿದ ಯಜುವೇಂದ್ರ ಚಾಹಲ್ ಅವರು ಒಂದು ‘ದಾಖಲೆ’ ಮಾಡಿದರು. ಹತ್ತು ಓವರ್‌ಗಳಲ್ಲಿ 88 ರನ್‌ ನೀಡಿದ ಅವರು, ವಿಶ್ವಕಪ್ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ನೀಡಿದ ಭಾರತದ ಬೌಲರ್ ಎನಿಸಿದರು. ಅವರು ಒಂದೂ ವಿಕೆಟ್‌ ಗಳಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT