ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಹಿತ್‌ ನಾಲ್ಕನೇ ಶತಕ: ಸೆಮಿಗೆ ಭಾರತ

ಬೂಮ್ರಾ ಯಾರ್ಕರ್‌ ಜಾದೂ; ಮಿಂಚಿದ ರಿಷಭ್ ಪಂತ್; ಭುವಿ, ದಿನೇಶ್‌ಗೆ ಸ್ಥಾನ; ಕುಲದೀಪ್‌, ಕೇದಾರ್‌ಗೆ ವಿಶ್ರಾಂತಿ
Last Updated 2 ಜುಲೈ 2019, 20:11 IST
ಅಕ್ಷರ ಗಾತ್ರ

ಬರ್ಮಿಂಗ್‌ಹ್ಯಾಂ: ಮುಂಬೈಕರ್ ರೋಹಿತ್ ಶರ್ಮಾ ಶತಕ ಮತ್ತು ಜಸ್‌ಪ್ರೀತ್‌ ಬೂಮ್ರಾ ಅವರ ಅಮೋಘ ಬೌಲಿಂಗ್‌ನಿಂದ ಮಂಗಳವಾರ ಭಾರತ ತಂಡವು ಬಾಂಗ್ಲಾ ವಿರುದ್ಧ ಗೆದ್ದಿತು. ಇದರೊಂದಿಗೆ ಸೆಮಿಫೈನಲ್‌ ಪ್ರವೇಶಿಸಿತು.

ವಿಶ್ವಕಪ್ ಟೂರ್ನಿಯಲ್ಲಿನಾಲ್ಲು ಶತಕ ಬಾರಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ರೋಹಿತ್ (104; 92ಎಸೆತ, 7ಬೌಂಡರಿ 5ಸಿಕ್ಸರ್) ಬರೆದರು. ಶ್ರೀಲಂಕಾದ ಕುಮಾರ ಸಂಗಕ್ಕಾರ ದಾಖಲೆಯನ್ನೂ ಸರಿಗಟ್ಟಿದರು. 2015ರಲ್ಲಿ ಸಂಗಕ್ಕಾರ ಅವರು ಸತತ ನಾಲ್ಕು ಶತಕ ಹೊಡೆದಿದ್ದರು.

ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಭಾರತ ತಂಡವು 50 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 314 ರನ್‌ಗಳ ಮೊತ್ತ ಗಳಿಸಲೂ ಅವರು ಕಾರಣರಾದರು. ಬಾಂಗ್ಲಾ 48 ಓವರ್‌ಗಳಲ್ಲಿ 286 ರನ್‌ ಗಳಿಸಿ ಆಲೌಟ್‌ ಆಯಿತು.

ಪಂದ್ಯದ ಐದನೇ ಓವರ್‌ನಲ್ಲಿ ಮುಸ್ತಫಿಜುರ್‌ ರೆಹಮಾನ್ ಅವರು ತಮ್ಮದೇ ಬೌಲಿಂಗ್‌ನಲ್ಲಿ ರೋಹಿತ್ ಕೊಟ್ಟ ಕ್ಯಾಚ್ ಬಿಟ್ಟರು. ಇದರಿಂದಾಗಿ ರೋಹಿತ್ ಮತ್ತು ಕೆ.ಎಲ್. ರಾಹುಲ್ ಮೊದಲ ವಿಕೆಟ್ ಜೊತೆಯಾಟದಲ್ಲಿ 180 ರನ್ ಗಳಿಸಿದರು.

ಆದರೆ, ಅದಕ್ಕೂ ಮುನ್ನ ಬೌಲರ್‌ಗಳನ್ನು ಸಖತ್ ಕಾಡಿದರು. ಇಂಗ್ಲೆಂಡ್ ಎದುರಿನ ಪಂದ್ಯದಲ್ಲಿ ಸೊನ್ನೆ ಸುತ್ತಿದ್ದ ರಾಹುಲ್ ಇಲ್ಲಿ ತಾಳ್ಮೆಯಿಂದ ಆಡಿದರು. ರೋಹಿತ್ ತಮ್ಮ ಸ್ಟ್ರೈಕ್ ರೇಟ್‌ ಕಡಿಮೆ ಮಾಡಿಕೊಳ್ಳದೇ ರನ್‌ ಗಳಿಸಿದರು. ಇದರಿಂದಾಗಿ ವಿಕೆಟ್ ಪತನವಾಗಲಿಲ್ಲ. ಬೌಲರ್‌ಗಳ ಮೇಲಿನ ಒತ್ತಡವೂ ಹೆಚ್ಚಿತು. ಆದರೆ, ರಾಹುಲ್ ಬ್ಯಾಟಿಂಗ್‌ನಲ್ಲಿ ಆತ್ಮವಿಶ್ವಾಸದ ಕೊರತೆಯೂ ಇಣುಕುತ್ತಿತ್ತು.

ಕ್ಷಣಕ್ಷಣದ ಸ್ಕೋರ್‌:https://bit.ly/2JjpaXa

ರೋಹಿತ್ ಬೀಡುಬೀಸಾಗಿ ಸಿಕ್ಸರ್‌ಗೆ ಚೆಂಡನ್ನು ಎತ್ತಿದರು. ಆದರೆ ರಾಹುಲ್ ರಕ್ಷಣಾತ್ಮಕ ಆಟಕ್ಕೇ ಹೆಚ್ಚು ಒತ್ತು ನೀಡಿದರು. ರೋಹಿತ್ ಮೂವತ್ತನೇ ಓವರ್‌ನಲ್ಲಿ ಸೌಮ್ಯ ಸರ್ಕಾರ್ ಎಸೆತವನ್ನು ಸಿಕ್ಸರ್‌ಗೆ ಎತ್ತುವ ಭರದಲ್ಲಿ ಲಿಟನ್ ದಾಸ್‌ಗೆ ಕ್ಯಾಚಿತ್ತರು. ಅಲ್ಲಿಗೆ ಜೊತೆಯಾಟಕ್ಕೆ ತೆರೆಬಿತ್ತು.

ಈ ಟೂರ್ನಿಯಲ್ಲಿ ಸತತ ಐದು ಅರ್ಧಶತಕಗಳ ದಾಖಲೆ ಮಾಡಿರುವ ನಾಯಕ ವಿರಾಟ್ ಕೊಹ್ಲಿ ಕ್ರೀಸ್‌ಗೆ ಬಂದರು. ಮೆಲ್ಲಗೆ ಆಟಕ್ಕೆ ಕುದುರಲು ಪ್ರಯತ್ನಿಸಿದರು. 33ನೇ ಓವರ್‌ನಲ್ಲಿ ರಾಹುಲ್ (77; 92ಎಸೆತ, 6ಬೌಂಡರಿ, 1ಸಿಕ್ಸರ್) ರುಬೆಲ್ ಹೊಸೆನ್‌ಗೆ ವಿಕೆಟ್ ಒಪ್ಪಿಸಿದರು. ವಿರಾಟ್ ಜೊತೆಗೂಡಿದ ರಿಷಭ್ ಪಂತ್ ‘ದೆಹಲಿ ದರಬಾರ್’ ಆರಂಭಿಸಿದರು. ಇದರಿಂದಾಗಿ ಸ್ಕೋರ್‌ಬೋರ್ಡ್‌ನಲ್ಲಿ ರನ್‌ಗತಿ ನಿರಂತರವಾಗಿತ್ತು. ಇಬ್ಬರ ಜೊತೆಯಾಟದಲ್ಲಿ 42 ರನ್‌ಗಳು ಸೇರಿದ್ದಾಗ ಎಡಗೈ ಮಧ್ಯಮವೇಗಿ ತಮ್ಮ ಮೊದಲ ಬೇಟೆಯಾಡಿದರು. ವಿರಾಟ್ ಕೊಹ್ಲಿಯ ವಿಕೆಟ್ ಪಡೆದ ಅವರು ಕುಣಿದು ಕುಪ್ಪಳಿಸಿದರು. ಇದು ಅವರ ಆತ್ಮವಿಶ್ವಾಸವನ್ನು ಇಮ್ಮಡಿಸಿತು.

ಆದೇ ಓವರ್‌ನಲ್ಲಿ ‘ಹಾರ್ಡ್‌ ಹಿಟ್ಟರ್’ ಹಾರ್ದಿಕ್ ಪಾಂಡ್ಯ ವಿಕೆಟ್ ಕೂಡ ಕಬಳಿಸಿದರು. ಆದರೆ ಇನ್ನೊಂದು ಕಡೆ ರಿಷಭ್ ಆತ್ಮವಿಶ್ವಾಸದಿಂದ ಬ್ಯಾಟ್ ಬೀಸಿದರು. ಅರ್ಧಶತಕದತ್ತ ದಾಪುಗಾಲಿಟ್ಟರು. ಇನ್ನೊಂದು ಕಡೆ ಅನುಭವಿ ಮಹೇಂದ್ರಸಿಂಗ್ ಧೋನಿ (35; 33ಎಸೆತ, 4ಬೌಂಡರಿ) ಎಸೆತಗಳನ್ನು ವೃರ್ಥಗೊಳಿಸಲಿಲ್ಲ.

ಅಂತಿಮ ಹಂತದ ಓವರ್‌ಗಳಲ್ಲಿ ತಮ್ಮ ಆಟಕ್ಕೆ ವೇಗ ನೀಡಿದ ರಿಷಭ್ (48; 41ಎಸೆತ, 6ಬೌಂಡರಿ, 1ಸಿಕ್ಸರ್) ಅವರಿಗೆ ಶಕೀಬ್ ಅಡ್ಡಿಯಾದರು. ದೊಡ್ಡ ಹೊಡೆತಕ್ಕೆ ಯತ್ನಿಸಿದ ಅವರು ಮೊಸಾದಿಕ್ ಹೊಸೇನ್‌ಗೆ ಕ್ಯಾಚಿತ್ತರು. ಎರಡು ರನ್‌ಗಳಿಂದ ಅರ್ಧಶತಕ ತಪ್ಪಿಸಿಕೊಂಡರು.

ಧೋನಿ ತಾವು ಔಟಾಗುವ ಮುನ್ನ ತಂಡವು 300ರ ಗಡಿ ದಾಟುವಂತೆ ನೋಡಿಕೊಂಡರು. ದಿನೇಶ್ ಕಾರ್ತಿಕ್, ಧೋನಿ ಮತ್ತು ಮೊಹಮ್ಮದ್ ಶಮಿ ಅವರ ವಿಕೆಟ್‌ಗಳನ್ನೂ ಮುಸ್ತಫಿಜುರ್ ಗಳಿಸಿದರು.

ರೋಹಿತ್ –ರಾಹುಲ್ ದಾಖಲೆ
ಮಂಗಳವಾರದ ಪಂದ್ಯದಲ್ಲಿ ಮೊದಲ ವಿಕೆಟ್ ಜೊತೆಯಾಟದಲ್ಲಿ 180 ರನ್‌ ಗಳಿಸಿದ ಭಾರತದ ರೋಹಿತ್ ಶರ್ಮಾ ಮತ್ತು ಕೆ.ಎಲ್.ರಾಹುಲ್ ಹೊಸ ದಾಖಲೆ ಬರೆದರು.

2015ರ ವಿಶ್ವಕಪ್ ಟೂರ್ನಿಯಲ್ಲಿ ಐರ್ಲೆಂಡ್ ಎದುರು ರೋಹಿತ್ ಮತ್ತು ಶಿಖದ್‌ ಧವನ್ ಅವರು 174 ರನ್‌ ಗಳನ್ನು ಗಳಿಸಿದ್ದರು. ಈ ಟೂರ್ನಿಯಲ್ಲಿ ಇದುವರೆಗೆ ಇಂಗ್ಲೆಂಡ್‌ನ ಜೇಸನ್ ರಾಯ್ ಮತ್ತು ಜಾನಿ ಬೆಸ್ಟೊ ಅವರು ಗಳಿಸಿದ್ದ 160 ರನ್‌ಗಳ ದಾಖಲೆ ಇತ್ತು. ರೋಹಿತ್ ಶರ್ಮಾ ಟೂರ್ನಿಯಲ್ಲಿ ಒಟ್ಟು 544 ರನ್‌ಗಳನ್ನು ಗಳಿಸಿದ್ದಾರೆ.

ಶಕೀಬ್‌ ದಾಖಲೆ
ಬಾಂಗ್ಲಾ ತಂಡದ ಆಲ್‌ರೌಂಡರ್ ಶಕೀಬ್ ಅಲ್ ಹಸನ್ ಅವರು ವಿಶ್ವಕಪ್ ಟೂರ್ನಿಯೊಂದರಲ್ಲಿ 500ಕ್ಕಿಂತ ಹೆಚ್ಚು ರನ್ ಮತ್ತು ಹತ್ತಕ್ಕಿಂತ ಹೆಚ್ಚು ವಿಕೆಟ್‌ಗಳನ್ನು ಗಳಿಸಿದ ಸಾಧನೆ ಮಾಡಿದರು.

ಮಂಗಳವಾರ ನಡೆದ ಭಾರತದ ಎದುರಿನ ಪಂದ್ಯದಲ್ಲಿ ಹಸನ್ ಅವರು 66 ರನ್ ಹೊಡೆದರು ಮತ್ತು ಒಂದು ವಿಕೆಟ್ ಗಳಿಸಿದರು. ಇದರೊಂದಿಗೆ ಟೂರ್ನಿಯಲ್ಲಿ ಒಟ್ಟು 542 ರನ್‌ಗಳನ್ನು ಅವರು ಪೇರಿಸಿದ್ದಾರೆ. ಈ ಹಿಂದೆ ನ್ಯೂಜಿಲೆಂಡ್ ಸ್ಕಾಟ್‌ ಸ್ಟೈರಿಸ್ 499 ರನ್‌ಗಳನ್ನು ಗಳಿಸಿ ಒಂಬತ್ತು ವಿಕೆಟ್‌ಗಳನ್ನು ಪಡೆದಿದ್ದು ಇದುವರೆಗಿನ ದಾಖಲೆಯಾಗಿತ್ತು.

ಮುಸ್ತಫಿಜುರ್‌ ರೆಹಮಾನ್‌
ಮುಸ್ತಫಿಜುರ್‌ ರೆಹಮಾನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT