ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಸೆಮಿಫೈನಲ್ ಹಣಾಹಣಿ ಇಂದು: ಕೊಹ್ಲಿ ಪಡೆಗೆ ‘ಕೂಲ್’ ಕೇನ್ ಸವಾಲು

ಭಾರತ–ಕಿವೀಸ್‌ ಮುಖಾಮುಖಿ: ರೋಹಿತ್‌–ರಾಹುಲ್‌ ಆಕರ್ಷಣೆ: ಬೂಮ್ರಾ ಭಯದಲ್ಲಿ ನ್ಯೂಜಿಲೆಂಡ್‌
Last Updated 8 ಜುಲೈ 2019, 19:31 IST
ಅಕ್ಷರ ಗಾತ್ರ

ಮ್ಯಾಂಚೆಸ್ಟರ್: ಓಲ್ಡ್‌ ಟ್ರಾಫರ್ಡ್‌ ಕ್ರೀಡಾಂಗಣವೆಂದರೆ ಭಾರತದ ಪಾಲಿಗೆ ಚಿನ್ನದಂತಹ ನೆನಪುಗಳ ಕಣಜ. ಅವಿಸ್ಮರಣೀಯ ವಿಜಯಗಳನ್ನು ದಾಖಲಿಸಿದ ತಾಣ ಇದು.

ಇದೀಗ ಮತ್ತೊಂದು ಇತಿಹಾಸ ಬರೆಯಲು ಇಲ್ಲಿಗೆ ಬಂದಿಳಿದಿದೆ. ಮಂಗಳವಾರ ಈ ಅಂಗಳದಲ್ಲಿ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಲಿವೆ. ‘ಅಕ್ರಮಣಶೀಲ’ ನಾಯಕ ವಿರಾಟ್ ಕೊಹ್ಲಿ ಮತ್ತು ‘ಶಾಂತಸ್ವಭಾವಿ’ ಕೇನ್ ವಿಲಿಯಮ್ಸನ್ ನಡುವಣ ಹಣಾಹಣಿಯೆಂದೇ ಈ ಪಂದ್ಯವನ್ನು ಬಿಂಬಿಸಲಾಗುತ್ತಿದೆ.

2008ರಲ್ಲಿ ಕ್ವಾಲಾಲಂಪುರದಲ್ಲಿ ನಡೆದಿದ್ದ 19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್‌ ನಲ್ಲಿ ಕೊಹ್ಲಿ ಮತ್ತು ಕೇನ್ ನಾಯಕತ್ವದ ಭಾರತ ಹಾಗೂ ಕಿವೀಸ್ ತಂಡಗಳು ಸೆಣಸಿದ್ದವು. ಅದರಲ್ಲಿ ಭಾರತ ಗೆದ್ದಿತ್ತು. ಕಳೆದ 11 ವರ್ಷಗಳಲ್ಲಿ ಇಬ್ಬರ ವೃತ್ತಿಜೀವನದಲ್ಲಿ ಹಲವಾರು ಬದಲಾವಣೆಗಳು ಆಗಿವೆ. ವಿಶ್ವಕಪ್ ಟೂರ್ನಿಯಲ್ಲಿ ಇಬ್ಬರೂ ಮೊದಲ ಬಾರಿಗೆ ತಮ್ಮ ದೇಶಗಳ ತಂಡಗಳ ನಾಯಕತ್ವ ವಹಿಸಿರುವುದು ವಿಶೇಷ.

2015ರಲ್ಲಿ ಮಹೇಂದ್ರಸಿಂಗ್ ಧೋನಿ ನಾಯಕತ್ವದ ಭಾರತವು ನಾಲ್ಕರ ಘಟ್ಟದಲ್ಲಿ ಆಸ್ಟ್ರೇಲಿಯಾ ಎದುರು ಸೋತಿತ್ತು. ಅದೇ ಬ್ರೆಂಡನ್ ಮೆಕ್ಲಮ್ ನಾಯಕರಾಗಿದ್ದ ಕಿವೀಸ್ ತಂಡವು ದಕ್ಷಿಣ ಆಫ್ರಿಕಾ ಎದುರು ಗೆದ್ದು ಫೈನಲ್ ತಲುಪಿತ್ತು.

ಫೀಲ್ಡಿಂಗ್ ಮಾಡುವಾಗ ನೃತ್ಯದ ಹೆಜ್ಜೆಗಳನ್ನು ಹಾಕುತ್ತ ತಮ್ಮನ್ನು ತಾವೇ ಹುರಿದುಂಬಿಸಿಕೊಂಡು ಆಡುವ ಗುಣ ವಿರಾಟ್ ಅವರದ್ದು. ಅನುಭವಿ ಧೋನಿಯ ಬೆಂಬಲ ಮತ್ತು ಸಲಹೆಗಳು ವಿರಾಟ್‌ಗೆ ವರದಾನವಾಗಿವೆ. ಲೀಗ್ ಹಂತದಲ್ಲಿ ಅಗ್ರಸ್ಥಾನ ಪಡೆದು ಫೈನಲ್ ಪ್ರವೇಶಿಸುವಲ್ಲಿ ವಿರಾಟ್–ಧೋನಿ ‘ಜೊತೆಯಾಟ’ ಪ್ರಮುಖವಾಗಿದ್ದು ಸುಳ್ಳಲ್ಲ. ಜೊತೆಗೆ ಹೋದ ಎರಡೂ ಪಂದ್ಯಗಳಲ್ಲಿ ಆರಂಭಿಕ ಜೋಡಿ ರೋಹಿತ್ ಶರ್ಮಾ ಮತ್ತು ಕೆ.ಎಲ್. ರಾಹುಲ್ ಅವರ ಶತಕದ ಜೊತೆಯಾಟಗಳು ಎದುರಾಳಿಗಳ ಪಾಲಿಗೆ ಕಂಟಕವಾಗಿದ್ದವು. ಇದೊಂದೇ ಟೂರ್ನಿಯಲ್ಲಿ ಐದು ಶತಕ ಬಾರಿಸಿರುವ ರೋಹಿತ್ ಆತ್ಮವಿಶ್ವಾಸದ ತುತ್ತತುದಿಯಲ್ಲಿದ್ದಾರೆ. ಐದು ಅರ್ಧಶತಕಗಳನ್ನು ಹೊಡೆದಿರುವ ನಾಯಕ ವಿರಾಟ್ ಕೂಡ ಬೌಲರ್‌ಗಳಿಗೆ ಕಠಿಣ ಸವಾಲೊಡ್ಡಬಲ್ಲರು.

ರಿಷಭ್ ಪಂತ್ ಆಗಮನದಿಂದ ನಾಲ್ಕನೇ ಕ್ರಮಾಂಕದ ಸಮಸ್ಯೆ ಬಹುತೇಕ ಬಗೆಹರಿದಿದೆ. ನಂತರದ ಕ್ರಮಾಂಕಗಳಲ್ಲಿ ಧೋನಿ ಮತ್ತು ಹಾರ್ದಿಕ್ ಪಾಂಡ್ಯ ಅಚ್ಚುಕಟ್ಟಾದ ಆಟವಾಡುತ್ತಿದ್ದಾರೆ. ಶ್ರೀಲಂಕಾ ಎದುರಿನ ಪಂದ್ಯದಲ್ಲಿ ಅವಕಾಶ ಪಡೆದಿದ್ದ ಆಲ್‌ರೌಂಡರ್ ರವೀಂದ್ರ ಜಡೇಜ ಇಲ್ಲಿ ಕಣಕ್ಕಿಳಿಯುವುದು ಖಚಿತವಿಲ್ಲ. ಮೊಹಮ್ಮದ್ ಶಮಿ ತಂಡಕ್ಕೆ ಮರಳುವುದು ಮಾತ್ರ ಬಹುತೇಕ ಖಚಿತ. ಜಸ್‌ಪ್ರೀತ್ ಬೂಮ್ರಾ ಅವರಿಗೆ ಶಮಿ ಜೊತೆ ನೀಡಿದರೆ, ಭುವನೇಶ್ವರ್ ಕುಮಾರ್, ಕುಲದೀಪ್ ಯಾದವ್ ಅಥವಾ ಯಜುವೇಂದ್ರ ಚಾಹಲ್ ಅವರಲ್ಲಿ ಒಬ್ಬರು ಸ್ಥಾನ ತೆರವು ಮಾಡಬೇಕಾಗಬಹುದು. ಕನ್ನಡಿಗ ಮಯಂಕ್ ಅಗರವಾಲ್ ಅವರಿಗೆ ಕಣಕ್ಕಿಳಿಯುವ ಅವಕಾಶ ಸಿಗುವುದು ಅನುಮಾನ.

ಎಂತಹ ಒತ್ತಡದಲ್ಲಿಯೂ ತಣ್ಣಗಿದ್ದು ಯೋಜನೆ ಹೆಣೆಯುತ್ತ ಸಹ ಆಟಗಾರರಿಗೆ ಕಿವಿಮಾತು ಹೇಳುವ ಕೇನ್ ಪಂದ್ಯದ ಕೊನೆಯ ಎಸೆತದವರೆಗೂ ಸೋಲೊಪ್ಪಿಕೊಳ್ಳುವ ಜಾಯಮಾನದವರಲ್ಲ. ಆದರೆ ತಂಡದ ಆರಂಭಿಕ ಜೋಡಿ ಮಾರ್ಟಿನ್ ಗಪ್ಟಿಲ್ ಮತ್ತು ಕಾಲಿನ್ ಮನ್ರೊ ಅವರು ಫಾರ್ಮ್‌ನಲ್ಲಿ ಇಲ್ಲದಿರುವುದು ಚಿಂತೆಗೆ ಕಾರಣವಾಗಿದೆ.

ಕೇನ್, ರಾಸ್ ಟೇಲರ್ ಮತ್ತು ಜಿಮ್ಮಿ ನಿಶಾಮ್ ಅವರ ಮೇಲೆಯೇ ತಂಡದ ಬ್ಯಾಟಿಂಗ್ ಅವಲಂಬಿತವಾಗಿದೆ. ಆದ್ದರಿಂದ ತಂಡಕ್ಕೆ ಬೌಲರ್‌ಗಳ ಆಟವೇ ಪ್ರಮುಖವಾಗಲಿದೆ. ಟ್ರೆಂಟ್ ಬೌಲ್ಟ್‌, ಟಿಮ್ ಸೌಥಿ, ಲಾಕಿ ಫರ್ಗ್ಯುಸನ್ ಮತ್ತು ಸ್ಪಿನ್ನರ್ ಮಿಷೆಲ್ ಸ್ಯಾಂಟನರ್‌ ಅವರು ಭಾರತದ ಬಲಿಷ್ಠ ಬ್ಯಾಟಿಂಗ್‌ ಪಡೆಯನ್ನು ಕಟ್ಟಿಹಾಕಿದರೆ ಕಿವೀಸ್‌ಗೆ ಗೆಲುವಿನ ದಾರಿ ಲಭಿಸಬಹುದು.

ಮೇಲ್ನೋಟಕ್ಕೆ ಎರಡೂ ತಂಡಗಳು ಸಮಬಲ ಹೊಂದಿದಂತೆಯೇ ಕಾಣುತ್ತಿವೆ. ಆದರೆ ಲೀಗ್ ಹಂತದಲ್ಲಿ ಭಾರತದ ಅಮೋಘ ಆಟದಿಂದಾಗಿ ಕೇನ್ ಬಳಗದ ಮೇಲೆ ಒತ್ತಡ ಇರುವುದಂತೂ ನಿಜ. ಆದ್ದರಿಂದ ವಿರಾಟ್ ಬಳಗವೇ ಜಯದ ಮೆಚ್ಚಿನ ತಂಡವಾಗಿ ಕಣಕ್ಕಿಳಿಯಲಿದೆ.

‘ಮಂಗಳ’ತಾಣ ಮ್ಯಾಂಚೆಸ್ಟರ್‌
ಭಾರತ ತಂಡಕ್ಕೆ ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ ಕ್ರೀಡಾಂಗಣವು ಅದೃಷ್ಟದ ತಾಣ. 1983ರ ವಿಶ್ವಕಪ್ ಟೂರ್ನಿಯ ಲೀಗ್‌ನ ಮೊದಲ ಪಂದ್ಯದಲ್ಲಿ ಆಗಿನ ದೈತ್ಯ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡವನ್ನು ಕಪಿಪ್ ಬಳಗವು ಸೋಲಿಸಿದ್ದು ಇಲ್ಲಿಯೇ.

ಆ ಜಯದಿಂದ ತಂಡದ ಆತ್ಮವಿಶ್ವಾಸ ಮುಗಿಲುಮುಟ್ಟಿತ್ತು. ಆಮೇಲೆ ನಡೆದಿದ್ದು ಇತಿಹಾಸ. ಈ ವರ್ಷದ ಟೂರ್ನಿಯಲ್ಲಿಯೂ ಭಾರತ ಇಲ್ಲಿ ಆಡಿರುವ ಎರಡೂ ಪಂದ್ಯಗಳನ್ನು ಗೆದ್ದಿದೆ. ಮೊದಲನೆಯದ್ದರಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ಎದುರು 89 ರನ್‌ಗಳಿಂದ ಜಯಿಸಿತ್ತು. ಇನ್ನೊಂದರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 125 ರನ್‌ಗಳಿಂದ ಗೆದ್ದಿತ್ತು.

ಕಿವೀಸ್ ತಂಡವೂ ಇಲ್ಲಿ ಜೂನ್ 22ರಂದು ನಡೆದಿದ್ದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ರೋಚಕ ಜಯ ಸಾಧಿಸಿತ್ತು.

ಇಲ್ಲಿಯ ಪಿಚ್‌ ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚು ನೆರವು ನೀಡಿದ ಇತಿಹಾಸವಿದೆ. ಆದ್ದರಿಂದ ಟಾಸ್ ಗೆದ್ದ ತಂಡವು ಮೊದಲು ಬ್ಯಾಟಿಂಗ್ ಮಾಡುವ ಸಾಧ್ಯತೆಯೇ ಹೆಚ್ಚು.

ಬೆಟ್ಟಿಂಗ್ ಬಜಾರ್‌ನಲ್ಲಿ ಭಾರತವೇ ಫೆವರಿಟ್!
ಲಂಡನ್ (ಪಿಟಿಐ): ಮಂಗಳವಾರದ ಸೆಮಿಫೈನಲ್‌ನಲ್ಲಿ ಜಯಿಸುವ ನೆಚ್ಚಿನ ತಂಡವೆಂದು ಬೆಟ್ಟಿಂಗ್‌ ಬಜಾರ್‌ನಲ್ಲಿ ನಿರೀಕ್ಷೆ ಮೂಡಿದೆ.

ಲೀಗ್ ಹಂತದಲ್ಲಿ ಒಂಬತ್ತು ಪಂದ್ಯಗಳಲ್ಲಿ ಏಳರಲ್ಲಿ ಗೆದ್ದಿರುವುದರಿಂದ ಭಾರತದ ಮೇಲೆ ಹೆಚ್ಚು ಜನ ಬಾಜಿ ಕಟ್ಟುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಹಿಂದೆ ಭಾರತವು ಎರಡು ಬಾರಿ ವಿಶ್ವಕಪ್ ಗೆದ್ದಿದೆ. ಆದರೆ ಕಿವೀಸ್ ಇದುವರೆಗೆ ಒಮ್ಮೆಯೂ ಗೆದ್ದಿಲ್ಲ. ಇದು ಕೂಡ ವಿರಾಟ್ ಬಳಗವನ್ನು ಫೆವರಿಟ್ ಮಾಡಿದೆ ಎಂದು ಇಲ್ಲಿಯ ಆನ್‌ಲೈನ್ ಬೆಟ್ಟಿಂಗ್ ವೆಬ್‌ಸೈಟ್‌ಗಳು ಪ್ರಕಟಿಸಿವೆ.

ಮತ್ತೊಮ್ಮೆ ಕೇನ್ ವಿಕೆಟ್ ಪಡೆಯುವರೇ ಕೊಹ್ಲಿ?
ಮ್ಯಾಂಚೆಸ್ಟರ್:
‘ಕೇನ್ ವಿಲಿಯಮ್ಸನ್ ವಿಕೆಟ್ ಆಗ ಪಡೆದಿದ್ದೆ. ಆದರೆ ಈಗ ಮತ್ತೊಮ್ಮೆ ಅದು ಮರುಕಳಿಸಲು ಸಾಧ್ಯವಿಲ್ಲ’–

ಭಾರತ ತಂಡದ ವಿರಾಟ್ ಕೊಹ್ಲಿ ದೇಶಕದ ಹಿಂದಿನ ನೆನಪಿಗೆ ಜಾರಿದ್ದರು. 2008ರಲ್ಲಿ ನಡೆದಿದ್ದ 19 ವರ್ಷದೊಳಗಿನವರ ವಿಶ್ವಕಪ್ ಟೂರ್ನಿಯ ಸೆಮಿಫೈನಲ್‌ನಲ್ಲಿ ವಿರಾಟ್ ಬೌಲಿಂಗ್ ಮಾಡಿದ್ದರು. ಅವರು ಆಗ ಕಿವೀಸ್ ತಂಡದ ನಾಯಕರಾಗಿದ್ದ ಕೇನ್ ವಿಕೆಟ್ ಗಳಿಸಿದ್ದರು. ಈ ವಿಷಯವನ್ನು ಸೋಮವಾರ ಸುದ್ದಿಗಾರರು ನೆನಪಿಸಿದಾಗ ವಿರಾಟ್ ಹಾಸ್ಯಭರಿತ ಉತ್ತರ ನೀಡಿದರು.

‘ನಾನು ನಿಜಕ್ಕೂ ಪರಿಣಾಮಕಾರಿ ಬೌಲರ್‌. ಆದರೆ, ಬೌಲಿಂಗ್ ಮಾಡುವಾಗ ಪಿಚ್‌ನಲ್ಲಿ ಜಾರಿಬೀಳಬಾರದಷ್ಟೇ. ನಮ್ಮ ತಂಡದಲ್ಲಿ ಐವರು ಬೌಲರ್‌ಗಳಿದ್ದಾರೆ. ಇದರಿಂದಾಗಿ ಬ್ಯಾಟಿಂಗ್ ಬಲ ಹೆಚ್ಚುತ್ತದೆ. ನಾನು ಯಾವುದೇ ಹಂತದಲ್ಲಿ ಬೌಲಿಂಗ್ ಮಾಡಬಹುದು. ಆದರೆ ಪಿಚ್‌ನಲ್ಲಿ ಕಾಲು ಜಾರಬಾರದಷ್ಟೇ’ ಎಂದು ಚಟಾಕಿ ಹಾರಿಸಿದರು.

‘ಲೀಗ್‌ ಹಂತದಲ್ಲಿ ಆಡುವುದಕ್ಕೂ ಮತ್ತು ನಾಕ್‌ಔಟ್ ಪಂದ್ಯ ಆಡುವುದಕ್ಕೂ ವ್ಯತ್ಯಾಸವಿದೆ. ಮನೋಬಲವು ತುಂಬಾ ದೃಢವಾಗಿರಬೇಕು. ಲೀಗ್‌ನಲ್ಲಿ ಪ್ರಯೋಗಗಳಿಗೆ ಅವಕಾಶ ಇರುತ್ತದೆ. ತಪ್ಪುಗಳನ್ನು ಸುಧಾರಿಸಿಕೊಳ್ಳುವ ಅವಕಾಶವೂ ಇರುತ್ತದೆ. ಆದರೆ, ಇಲ್ಲಿ ಇರುವುದಿಲ್ಲ. ನಮ್ಮ ತಂಡದಲ್ಲಿ ಈಗ ಉತ್ಸಾಹ ಮತ್ತುಆತ್ಮವಿಶ್ವಾಸದ ವಾತಾವರಣ ಇದೆ’ ಎಂದರು.

ತಂಡಗಳು: ಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಕೆ.ಎಲ್. ರಾಹುಲ್, ರಿಷಭ್ ಪಂತ್, ಮಹೇಂದ್ರಸಿಂಗ್ ಧೋನಿ (ವಿಕೆಟ್‌ ಕೀಪರ್ ), ಕೇದಾರ್ ಜಾಧವ್, ದಿನೇಶ್ ಕಾರ್ತಿಕ್, ರವೀಂದ್ರ ಜಡೇಜ, ಭುವನೇಶ್ವರ್ ಕುಮಾರ್, ಹಾರ್ದಿಕ್ ಪಾಂಡ್ಯ, ಮೊಹಮ್ಮದ್ ಶಮಿ, ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್. ಜಸ್‌ಪ್ರೀತ್ ಬೂಮ್ರಾ.

ನ್ಯೂಜಿಲೆಂಡ್: ಕೆನ್ ವಿಲಿಯಮ್ಸನ್ (ನಾಯಕ), ಮಾರ್ಟಿನ್ ಗಪ್ಟಿಲ್, ರಾಸ್ ಟೇಲರ್, ಕಾಲಿನ್ ಮನ್ರೊ, ಲಾಕಿ ಫರ್ಗ್ಯುಸನ್, ಟ್ರೆಂಟ್ ಬೌಲ್ಟ್‌, ಮ್ಯಾಟ್‌ ಹೆನ್ರಿ, ಟಾಮ್ ಲಥಾಮ್ (ವಿಕೆಟ್‌ಕೀಪರ್ ), ಜಿಮ್ಮಿ ನಿಶಾಮ್, ಹೆನ್ರಿ ನಿಕೊಲ್ಸ್‌, ಮಿಷೆಲ್ ಸ್ಯಾಂಟನರ್, ಈಶ್ ಸೋಧಿ, ಟಿಮ್ ಸೌಥಿ.


ವಿಶ್ವಕಪ್‌ನಲ್ಲಿ ಉಭಯ ತಂಡಗಳ ಮುಖಾಮುಖಿ
* 1975: ನ್ಯೂಜಿಲೆಂಡ್‌ಗೆ 4 ವಿಕೆಟ್‌ಗಳ ಜಯ
* 1979: ನ್ಯೂಜಿಲೆಂಡ್‌ಗೆ 8 ವಿಕೆಟ್ ಜಯ
* 1987; ಭಾರತಕ್ಕೆ 16 ರನ್ ಜಯ
* 1987; ಭಾರತಕ್ಕೆ 9 ರನ್ ಜಯ
* 1992; ನ್ಯೂಜಿಲೆಂಡ್‌ಗೆ 4 ವಿಕೆಟ್ ಜಯ
* 1999; ನ್ಯೂಜಿಲೆಂಡ್‌ಗೆ 5 ವಿಕೆಟ್ ಜಯ
* 2003; ಭಾರತಕ್ಕೆ 7 ವಿಕೆಟ್ ಜಯ
* 2019: ಮಳೆಯಿಂದಾಗಿ ಲೀಗ್‌ ಪಂದ್ಯ ರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT