ಶನಿವಾರ, ಏಪ್ರಿಲ್ 17, 2021
31 °C
ವಿಶ್ವಕಪ್‌ ಕ್ರಿಕೆಟ್‌

ಫೈನಲ್‌: ಕಿವೀಸ್‌ ಪಡೆಗೆ ವೋಕ್ಸ್‌, ಪ್ಲಂಕೆಟ್‌ ಕಾಟ; ಇಂಗ್ಲೆಂಡ್‌ಗೆ ಗುರಿ @ 242

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್‌: ‘ಕ್ರಿಕೆಟ್ ಕಾಶಿ’ ಲಾರ್ಡ್ಸ್‌ ಕ್ರಿಕೆಟ್‌ ಅಂಗಳದಲ್ಲಿ ನಡೆಯುತ್ತಿರುವ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ಅಂತಿಮ ಹಣಾಹಣಿಯತ್ತ ಕ್ರಿಕೆಟ್‌ ಪ್ರಿಯರ ಗಮನ ನೆಟ್ಟಿದೆ. ಮಹತ್ತರ ಪಂದ್ಯದಲ್ಲಿ ಟಾಸ್‌ ಗೆದ್ದ ನ್ಯೂಜಿಲೆಂಡ್‌ ಬ್ಯಾಟಿಂಗ್‌ ನಡೆಸುತ್ತಿದೆ. ಬಹುಬೇಗ ವಿಕೆಟ್‌ ಉರುಳಿಸಿ ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಲು ಅತಿಥೇಯ ಇಂಗ್ಲೆಂಡ್‌ ತಂಡ ಪ್ರಯತ್ನ ನಡೆಸಿತು. ಸಂಕಷ್ಟದ ಸಮಯದಲ್ಲಿ ಹೋರಾಡಿದ ಹೆನ್ರಿ ನಿಕೋಲ್ಸ್‌ ಮತ್ತು ಟಾಮ್‌ ಲಥಾಮ್‌ ಆಟ ತಂಡಕ್ಕೆ ಅತ್ಯಮೂಲ್ಯವಾಯಿತು. ಅಂತಿಮವಾಗಿ ಕಿವೀಸ್‌ ಪಡೆ 241 ರನ್‌ ಕಲೆ ಹಾಕಿತು. 

ನ್ಯೂಜಿಲೆಂಡ್‌  ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 241 ರನ್‌ ಗಳಿಸಿತು. 

ಕ್ಷಣಕ್ಷಣದ ಸ್ಕೋರ್‌: https://bit.ly/2JJUFtu

ಬಹುಬೇಗ ಗುಪ್ಟಿಲ್‌ ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ನಾಯಕ ಕೇನ್‌ ವಿಲಿಯಮ್ಸನ್‌(30) ಮತ್ತು ಹೆನ್ರಿ ನಿಕೋಲ್ಸ್‌(55) ಜತೆಯಾಟ ಆಸರೆಯಾಯಿತು. ತಾಳ್ಮೆಯ ಆಟದಿಂದಾಗಿ ತಂಡ 100 ರನ್‌ ಗಡಿ ದಾಟಿತು. ಲಿಯಾಮ್‌ ಪ್ಲಂಕೆಟ್‌ 22ನೇ ಓವರ್‌ನಲ್ಲಿ ಜತೆಯಾಟ ಮುರಿಯಲು ಯಶಸ್ವಿಯಾದರು. ತಂಡದ ಬೆನ್ನೆಲುಬು ವಿಲಿಯಮ್ಸನ್‌ ಕ್ಯಾಚ್‌ ನೀಡಿ ಹೊರನಡೆದರು. ಕೆಲ ಸಮಯದಲ್ಲೇ ನಿಕೋಲ್ಸ್‌ ಸಹ ಪ್ಲಂಕೆಟ್‌ಗೆ ವಿಕೆಟ್‌ ಒಪ್ಪಿಸಿದರು. ಅನುಭವಿ ಆಟಗಾರ ರಾಸ್‌ ಟೇಲರ್‌(15) ಆಟಕ್ಕೆ ಮಾರ್ಕ್‌ ವುಡ್‌ ಕಡಿವಾಣ ಹಾಕಿದರು. 

ಇದನ್ನೂ ಓದಿ: ಕಿವೀಸ್ ಪಡೆಯ ಬೆನ್ನೆಲುಬು ಕೇನ್‌ ವಿಲಿಯಮ್ಸನ್‌

ಜಿಮ್ಮಿ ನೀಶಮ್‌(19) ವಿಕೆಟ್‌ ಕಬಳಿಸುವ ಮೂಲಕ ನ್ಯೂಜಿಲೆಂಡ್‌ನ ಮಧ್ಯ ಕ್ರಮಾಂಕಕ್ಕೂ ಪ್ಲಂಕೆಟ್‌ ತಡೆಯಾದರು. ಲಥಾಮ್‌ಗೆ ಜತೆಯಾಗಿದ್ದ ಗ್ರಾಂಡ್‌ಹೋಮ್‌(16) ಕ್ರಿಸ್‌ ವೋಕ್ಸ್‌ ಎಸೆತದಲ್ಲಿ ವಿಕೆಟ್‌ ಒಪ್ಪಿಸಿದರು. 47 ರನ್‌ ಗಳಿಸಿದ್ದ ಟಾಮ್‌ ಲಥಾಮ್‌(56 ಎಸೆತ, 2 ಬೌಂಡರಿ, 1 ಸಿಕ್ಸರ್‌)  ಸಹ ವೋಕ್ಸ್‌ ಎಸೆತದಲ್ಲಿಯೇ ಆಟ ಮುಗಿಸಿದರು. 

ಪ್ಲಂಕೆಟ್‌ 10 ಓವರ್‌ಗಳಲ್ಲಿ 42 ರನ್‌ ನೀಡಿ 3 ವಿಕೆಟ್‌ ಪಡೆದರು. ಕ್ರಿಸ್‌ ವೋಕ್ಸ್‌ 9 ಓವರ್‌ಗಳಲ್ಲಿ 37 ರನ್‌ ನೀಡಿ 3 ವಿಕೆಟ್‌ ಕಬಳಿಸಿದರೆ, ಮಾರ್ಕ್‌ ವುಡ್‌ ಮತ್ತು ಜೋಫ್ರಾ ಆರ್ಚರ್‌ ತಲಾ 1 ವಿಕೆಟ್‌ ಗಳಿಸಿದರು. 

ಮಾರ್ಟಿನ್‌ ಗುಪ್ಟಿಲ್‌ ಮತ್ತು ಹೆನ್ರಿ ನಿಕೋಲ್ಸ್‌ ಆರಂಭಿರಾಗಿ ಕಣಕ್ಕಿಳಿದು ಜೋಫ್ರಾ ಆರ್ಚರ್‌ ಮತ್ತು ಕ್ರಿಸ್‌ ವೋಕ್ಸ್‌ ಎಸೆತಗಳನ್ನು ಸಮರ್ಥವಾಗಿ ಎದುರಿಸಿದರು. ಆದರೆ, ಬಿರುಸಿನ ಆಟವಾಡುತ್ತಿದ್ದ ಗುಪ್ಟಿಲ್‌(19 ರನ್‌, 1 ಸಿಕ್ಸರ್‌, 2 ಬೌಂಡರಿ), ವೋಕ್ಸ್‌ ಎಸೆತದಲ್ಲಿ ಎಲ್‌ಬಿಡಬ್ಯು ಆಗಿ ಹೊರನಡೆದರು. 

ಅರ್ಧ ಗಂಟೆ ತಡವಾಗಿ ಟಾಸ್‌ ನಡೆಸಿದ ಕಾರಣ ಪಂದ್ಯದ ಆರಂಭ ಕೂಡ ತಡವಾಯಿತು. ಕಿವೀಸ್‌ ಮತ್ತು ಇಂಗ್ಲೆಂಡ್‌ ಪಡೆಯಲ್ಲಿ ಫೈನಲ್‌ ಹಣಾಹಣಿಗೆ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಸೆಮಿಫೈನಲ್‌ನಲ್ಲಿ ಆಡಿದ್ದ ಆಟಗಾರರೇ ಇಲ್ಲೂ ಮುಂದುವರಿದಿದ್ದಾರೆ. 
ರೌಂಡ್‌ ರಾಬಿನ್ ಲೀಗ್‌ ಪಂದ್ಯದಲ್ಲಿ ಇಂಗ್ಲೆಂಡ್ ಎದುರು ನ್ಯೂಜಿಲೆಂಡ್ ತಂಡವು ಹೀನಾಯ ಸೋಲನುಭವಿಸಿತ್ತು. 

ಇವನ್ನೂ ಓದಿ

ಈ ಬಾರಿಯ ಫೈನಲ್‌ ‘ಎಕ್ಸ್‌ಟ್ರಾ ಸ್ಪೆಷಲ್‌’: ಡೇನಿಯಲ್‌ ವೆಟೋರಿ

ವಿಶ್ವಕಪ್‌ | ‘ಪ್ರಥಮ’ ಕಿರೀಟಧಾರಣೆಗಾಗಿ ಇಂದು ಇಂಗ್ಲೆಂಡ್–ನ್ಯೂಜಿಲೆಂಡ್ ಹಣಾಹಣಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು