ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ನ್ಯೂಜಿಲೆಂಡ್ vs ವೆಸ್ಟ್‌ಇಂಡೀಸ್: ಕೆರಿಬಿಯನ್ನರಿಗೆ ಜಯ ಅನಿವಾರ್ಯ

ಬೌಲರ್‌ಗಳ ಬಗ್ಗೆ ಚಿಂತೆ
Last Updated 22 ಜೂನ್ 2019, 2:25 IST
ಅಕ್ಷರ ಗಾತ್ರ

ಮ್ಯಾಂಚೆಸ್ಟರ್: ಸೋಲರಿಯದ ನ್ಯೂಜಿಲೆಂಡ್ ಮತ್ತು ಗೆಲ್ಲಲೇಬೇಕಾದ ಅನಿವಾರ್ಯ ಸ್ಥಿತಿಯಲ್ಲಿರುವ ವೆಸ್ಟ್ ಇಂಡೀಸ್ ತಂಡಗಳು ಶನಿವಾರ ಇಲ್ಲಿನ ಓಲ್ಡ್ ಟ್ರಾಫರ್ಡ್‌ನಲ್ಲಿ ಸೆಣಸಲಿವೆ. ಐದು ಪಂದ್ಯಗಳಲ್ಲಿ ನಾಲ್ಕನ್ನು ಗೆದ್ದಿರುವ ನ್ಯೂಜಿಲೆಂಡ್ ಒಂಬತ್ತು ಪಾಯಿಂಟ್ ಗಳಿಸಿದೆ. ಒಂದು ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಹೀಗಾಗಿ ತಂಡ ಈ ವರೆಗೆ ಸೋಲು ಕಂಡಿಲ್ಲ.

ಪಾಕಿಸ್ತಾನವನ್ನು ಏಳು ವಿಕೆಟ್‌ಗಳಿಂದ ಮಣಿಸಿ ವಿಶ್ವಕಪ್ ಅಭಿಯಾನ ಆರಂಭಿಸಿದ್ದ ವೆಸ್ಟ್ ಇಂಡೀಸ್ ನಂತರ ನಿರಾಸೆ ಕಂಡಿದೆ. ಮೂರು ಪಂದ್ಯಗಳಲ್ಲಿ ಸೋತಿರುವ ತಂಡದ ಒಂದು ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಐದು ಪಂದ್ಯಗಳಲ್ಲಿ ಕೇವಲ ಮೂರು ಪಾಯಿಂಟ್ ಕಲೆ ಹಾಕಿರುವ ತಂಡ ಪಾಯಿಂಟ್ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. ಹೀಗಾಗಿ ಸೆಮಿಫೈನಲ್ ಪ್ರವೇಶಿಸುವ ಕನಸು ಕಾಣಬೇಕಾದರೆ ಉಳಿದ ಎಲ್ಲ ಪಂದ್ಯಗಳನ್ನು ಗೆಲ್ಲಬೇಕು. ಅದಕ್ಕೆ ನ್ಯೂಜಿಲೆಂಡ್ ಎದುರಿನ ಪಂದ್ಯದಲ್ಲಿ ನಾಂದಿ ಹಾಡಬೇಕು.

ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧ ಸೋತು ನಿರಾಸೆಗೆ ಒಳಗಾಗಿದ್ದ ವೆಸ್ಟ್ ಇಂಡೀಸ್ ಕಳೆದ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಭಾರಿ ಪೆಟ್ಟು ತಿಂದಿತ್ತು. 321 ರನ್‌ ಕಲೆ ಹಾಕಿದರೂ ಬಾಂಗ್ಲಾ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕಲು ಬೌಲರ್‌ಗಳು ವಿಫಲರಾಗಿದ್ದರು. ಕೇವಲ ಮೂರು ವಿಕೆಟ್ ಕಳೆದುಕೊಂಡು 42ನೇ ಓವರ್‌ನಲ್ಲೇ ಬಾಂಗ್ಲಾದೇಶ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿತ್ತು.

ಈ ಆಘಾತದಿಂದ ಮೇಲೇಳಲು ಪ್ರಯತ್ನಿಸುತ್ತಿರುವ ಜೇಸನ್ ಹೋಲ್ಡರ್ ಬಳಗದ ಮುಂದೆ ಸ್ಫೋಟಕ ಬ್ಯಾಟ್ಸ್‌ಮನ್‌ಗಳ ಪಡೆ ಇದೆ. ಯಾವುದೇ ಪರಿಸ್ಥಿತಿಯಲ್ಲಿ ತಂಡವನ್ನು ಸೋಲಿನಿಂದ ಪಾರು ಮಾಡಬಲ್ಲ ಕೇನ್ ವಿಲಿಯಮ್ಸನ್, ಎಂಥ ಬೌಲರ್‌ಗಳನ್ನೂ ದಂಡಿಸಬಲ್ಲ ಮಾರ್ಟಿನ್ ಗಪ್ಟಿಲ್,ಮ್ಯಾಟ್ ಹೆನ್ರಿ, ಟಾಮ್ ಲಥಾಮ್ ಮುಂತಾದವರನ್ನು ನಿಯಂತ್ರಿಸಲು ವಿಂಡೀಸ್ ಬೌಲರ್‌ಗಳು ಭಾರಿ ಬೆವರು ಹರಿಸಬೇಕಾದೀತು.


ಹೋಪ್, ಹೆಟ್ಮೆಯರ್ ಮೇಲೆ ಭರವಸೆ: ವೆಸ್ಟ್ ಇಂಡೀಸ್‌ನ ಭರವಸೆಯ ಬ್ಯಾಟ್ಸ್‌ಮನ್‌ಗಳಾದ ಕ್ರಿಸ್ ಗೇಲ್‌ ಮತ್ತು ಆ್ಯಂಡ್ರೆ ರಸೆಲ್ ಸತತ ವೈಫಲ್ಯ ಕಂಡಿದ್ದಾರೆ. ವಿಕೆಟ್ ಕೀಪರ್‌ ಶಾಯ್ ಹೋಪ್, ಎವಿನ್ ಲೆವಿಸ್, ಶಿಮ್ರಾನ್ ಹೆಟ್ಮೆಯರ್ ಮತ್ತು ಹೋಲ್ಡರ್ ಬ್ಯಾಟಿಂಗ್‌ನಲ್ಲಿ ನಿರೀಕ್ಷೆ ಮೂಡಿಸಿದ್ದಾರೆ. ಆದರೆ ಬೌಲಿಂಗ್ ವಿಭಾಗ ಪರಿಣಾಮ ಬೀರುವಲ್ಲಿ ವಿಫಲವಾಗಿದೆ.

ಕಳೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನ್ಯೂಜಿಲೆಂಡ್ ಸೋಲಿನ ಸುಳಿಯಲ್ಲಿ ಸಿಲುಕಿದ್ದಾಗ ತಾಳ್ಮೆಯಿಂದ ಆಡಿದ ಕೇನ್ ವಿಲಿಯಮ್ಸನ್ ಅಜೇಯ 106 ರನ್ ಗಳಿಸಿ ತಂಡವನ್ನು ದಡ ಸೇರಿಸಿದ್ದರು. ಕಾಲಿನ್ ಗ್ರ್ಯಾಂಡ್‌ಹೋಮ್ 47 ಎಸೆತಗಳಲ್ಲಿ 60 ರನ್‌ ಗಳಿಸಿದ್ದು ಮಾತ್ರವಲ್ಲ, ಬೌಲಿಂಗ್‌ನಲ್ಲೂ ಮಿಂಚಿದ್ದರು. ನಿರೀಕ್ಷೆಗೆ ತಕ್ಕಂತೆ ಆಡಲು ವಿಫಲರಾಗಿರುವ ಮಾರ್ಟಿನ್ ಗಪ್ಟಿಲ್‌, ಕಾಲಿನ್ ಮನ್ರೊ ಮತ್ತು ರಾಸ್ ಟೇಲರ್ ಅವರಿಂದ ನಾಯಕ ಕೇನ್‌ ಉತ್ತಮ ಕೊಡುಗೆಯನ್ನು ನಿರೀಕ್ಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT