ಶನಿವಾರ, ಸೆಪ್ಟೆಂಬರ್ 25, 2021
22 °C
ಹಿರಿಯ ಕ್ರಿಕೆಟಿಗ ಮೊಹಮ್ಮದ್‌ ಅಜರುದ್ದೀನ್‌ ಅನಿಸಿಕೆ

ಭಾರತ ವಿಶ್ವಕಪ್‌ ಗೆಲ್ಲುವ ನೆಚ್ಚಿನ ತಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೈದರಾಬಾದ್‌ (ಪಿಟಿಐ): ‘ವಿರಾಟ್‌ ಕೊಹ್ಲಿ ಮುಂದಾಳತ್ವದ ಭಾರತವು ಈ ಸಲದ ಏಕದಿನ ವಿಶ್ವಕಪ್‌ನಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದೆ’ ಎಂದು ಹಿರಿಯ ಕ್ರಿಕೆಟಿಗ ಮೊಹಮ್ಮದ್‌ ಅಜರುದ್ದೀನ್‌ ತಿಳಿಸಿದ್ದಾರೆ.

‘ಇಂಗ್ಲೆಂಡ್‌ನ ಪಿಚ್‌ಗಳು ಬೌಲರ್‌ಗಳಿಗೆ ಹೆಚ್ಚು ನೆರವು ನೀಡಿದರೆ ಭಾರತದ ಪ್ರಶಸ್ತಿಯ ಹಾದಿಯು ಕಠಿಣವಾಗಲಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ನಮ್ಮಲ್ಲೂ ವಿಶ್ವಶ್ರೇಷ್ಠ ಬೌಲರ್‌ಗಳಿದ್ದಾರೆ ಎಂಬುದನ್ನು ಯಾರೂ ಮರೆಯಬಾರದು. ನಮ್ಮ ತಂಡವು ಸಮತೋಲನದಿಂದ ಕೂಡಿದೆ. ಪ್ರಶಸ್ತಿ ಜಯಿಸಲು ಇದಕ್ಕಿಂತ ಒಳ್ಳೆಯ ಅವಕಾಶ ಕೊಹ್ಲಿ ಪಡೆಗೆ ಮತ್ತೆಂದೂ ಸಿಗುವುದಿಲ್ಲ. ಒಂದು ವೇಳೆ ತಂಡ ಪ್ರಶಸ್ತಿಯ ರೇಸ್‌ನಿಂದ ಹೊರಬಿದ್ದರೆ ವೈಯಕ್ತಿಕವಾಗಿ ನನಗೆ ತುಂಬಾ ನೋವಾಗುತ್ತದೆ’ ಎಂದಿದ್ದಾರೆ.

‘ಕ್ರಿಕೆಟ್‌ನಲ್ಲಿ ಏನಾದರೂ ಆಗಬಹುದು. ಯಾರು ಯಾರ ಮೇಲಾದರೂ ಗೆಲ್ಲಬಹುದು ಅಥವಾ ಸೋಲಬಹುದು. ಪಂದ್ಯದ ದಿನ ಉತ್ತಮವಾಗಿ ಆಡುವ ತಂಡ ಖಂಡಿತವಾಗಿ ಗೆಲ್ಲುತ್ತದೆ. ಇಂಗ್ಲೆಂಡ್‌ ಮತ್ತು ಆಸ್ಟ್ರೇಲಿಯಾ ತಂಡಗಳೂ ಬಲಿಷ್ಠವಾಗಿವೆ. ಆ ತಂಡಗಳ ಮೇಲೂ ನಿರೀಕ್ಷೆ ಇಡಬಹುದು’ ಎಂದು ಅಜರ್‌ ಹೇಳಿದ್ದಾರೆ.

ಭಾರತ ತಂಡವು ಜೂನ್‌ 5ರಂದು ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಪಂದ್ಯ ಆಡಲಿದೆ. ಈ ಹೋರಾಟ ಸೌಥಾಂಪ್ಟನ್‌ನಲ್ಲಿ ನಿಗದಿಯಾಗಿದೆ.

ಸ್ಮಿತ್‌, ವಾರ್ನರ್‌ ಮಿಂಚಲಿದ್ದಾರೆ: ಡೇವಿಡ್‌ ವಾರ್ನರ್‌ ಮತ್ತು ಸ್ಟೀವನ್‌ ಸ್ಮಿತ್‌ ಅವರು ವಿಶ್ವಕಪ್‌ನಲ್ಲಿ ಮಿಂಚಲಿದ್ದಾರೆ. ತಂಡವು ಪ್ರಶಸ್ತಿ ಉಳಿಸಿಕೊಳ್ಳುವಲ್ಲಿ ಇವರು ನಿರ್ಣಾಯಕ ಪಾತ್ರ ನಿಭಾಯಿಸಲಿದ್ದಾರೆ’ ಎಂದು ಆಸ್ಟ್ರೇಲಿಯಾ ತಂಡದ ಮುಖ್ಯ ಕೋಚ್‌ ಡರೆನ್‌ ಲೆಹ್ಮನ್‌ ತಿಳಿಸಿದ್ದಾರೆ.

‘ಚೆಂಡು ವಿರೂಪ ಪ್ರಕರಣದಲ್ಲಿ ನಿಷೇಧ ಶಿಕ್ಷೆಗೆ ಗುರಿಯಾಗಿದ್ದ ಸ್ಮಿತ್‌ ಮತ್ತು ವಾರ್ನರ್‌ ಒಂದು ವರ್ಷ ಕ್ರಿಕೆಟ್‌ನಿಂದ ದೂರ ಉಳಿದಿದ್ದರು. ಹೀಗಾಗಿ ರಾಷ್ಟ್ರೀಯ ತಂಡಕ್ಕೆ ಮರಳಿದ ಬಳಿಕ ಹಿಂದಿನ ಲಯದಲ್ಲಿ ಆಡುತ್ತಾರೊ ಇಲ್ಲವೊ ಎಂಬ ಅನುಮಾನ ಅಭಿಮಾನಿಗಳಲ್ಲಿತ್ತು. ಸ್ಫೋಟಕ ಆಟ ಆಡುವ ಸಾಮರ್ಥ್ಯ ತಮ್ಮಲ್ಲಿ ಇನ್ನೂ ಇದೆ ಎಂಬುದನ್ನು ಇಬ್ಬರೈ ಐಪಿಎಲ್‌ನಲ್ಲಿ ನಿರೂಪಿಸಿದ್ದಾರೆ’ ಎಂದಿದ್ದಾರೆ.

‘ವಾರ್ನರ್‌ ಮತ್ತು ಸ್ಮಿತ್‌ ಅವರು ಕ್ರಮವಾಗಿ ಆರಂಭಿಕ ಮತ್ತು ಮಧ್ಯಮ ಕ್ರಮಾಂಕಗಳಿಗೆ ಬಲ ತುಂಬಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಹಿಂದಿನ ವಿಶ್ವಕಪ್‌ನಲ್ಲಿ ವಾರ್ನರ್‌, ಅಬ್ಬರದ ಆಟದ ಮೂಲಕ ಹಲವು ಪಂದ್ಯಗಳಲ್ಲಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು. ಈ ಬಾರಿಯೂ ಅವರು ಉತ್ತಮ ಲಯದಲ್ಲಿದ್ದಾರೆ. ಆ್ಯರನ್ ಫಿಂಚ್‌ ಜೊತೆಗೂಡಿ ತಂಡಕ್ಕೆ ಉತ್ತಮ ಆರಂಭ ನೀಡಿದ್ದೇ ಆದಲ್ಲಿ ನಮ್ಮ ಪ್ರಶಸ್ತಿಯ ಹಾದಿಯು ಸುಗಮವಾಗಲಿದೆ’ ಎಂದು ನುಡಿದಿದ್ದಾರೆ.

ನಮ್ಮದು ಸುಸಜ್ಜಿತ ಸೈನ್ಯ

ನವದೆಹಲಿ (ಪಿಟಿಐ): ‘ನಮ್ಮದು ಸುಸಜ್ಜಿತ ಸೈನ್ಯ. ಯುದ್ಧ ಗೆಲ್ಲಲು ಅಗತ್ಯವಿರುವ ಎಲ್ಲಾ ಅಸ್ತ್ರಗಳು ನಮ್ಮ ಬತ್ತಳಿಕೆಯಲ್ಲಿವೆ’ ಎಂದು ಭಾರತ ತಂಡದ ಮುಖ್ಯ ಕೋಚ್‌ ರವಿಶಾಸ್ತ್ರಿ ಮಾರ್ಮಿಕವಾಗಿ ನುಡಿದಿದ್ದಾರೆ.

‘ನಮ್ಮದು ಸಮತೋಲಿತ ತಂಡ. ಸಕಲ ಸಿದ್ಧತೆಯೊಂದಿಗೆ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುತ್ತೇವೆ. ನಾಲ್ಕನೇ ಕ್ರಮಾಂಕದಲ್ಲಿ ಆಡುವ ಸಮರ್ಥರು ಸಾಕಷ್ಟು ಮಂದಿ ತಂಡದಲ್ಲಿದ್ದಾರೆ. ಹೀಗಾಗಿ ಈ ಬಗ್ಗೆ ಹೆಚ್ಚು ಯೋಚಿಸುವ ಗೋಜಿಗೆ ಹೋಗುವುದಿಲ್ಲ’ ಎಂದು ಹೇಳಿದ್ದಾರೆ.

‘ಮೇ 22ಕ್ಕೆ ಇಂಗ್ಲೆಂಡ್‌ಗೆ ಹೊರಡುತ್ತೇವೆ. ಅಲ್ಲಿಯವರೆಗೂ ಯಾವ ವಿಚಾರದ ಬಗ್ಗೆಯೂ ತಲೆ ಕೆಡಿಸಿಕೊಳ್ಳುವುದಿಲ್ಲ. ಕೇದಾರ್‌ ಜಾಧವ್‌ ಮತ್ತು ಕುಲದೀಪ್‌ ಯಾದವ್‌ ಅವರು ಐಪಿಎಲ್‌ ವೇಳೆ ಗಾಯಗೊಂಡಿದ್ದಾರೆ ನಿಜ. ಅವರಿಗಾಗಿರುವ ಗಾಯವು ಗಂಭೀರ ಸ್ವರೂಪದ್ದಲ್ಲ. ವಿಶ್ವಕಪ್‌ ಆರಂಭಕ್ಕೆ ಇನ್ನೂ ಸಾಕಷ್ಟು ಸಮಯ ಇದೆ. ಅಷ್ಟರೊಳಗೆ ಇಬ್ಬರೂ ಪೂರ್ಣವಾಗಿ ಗುಣಮುಖರಾಗಬಹುದು. ಕಾದು ನೋಡೋಣ’ ಎಂದರು.

‘ವಿಶ್ವಕಪ್‌ನಂತಹ ಮಹತ್ವದ ಟೂರ್ನಿಗೆ ಒಂದೆರಡು ತಿಂಗಳು ಮುಂಚೆ ಸಿದ್ಧತೆ ಮಾಡಿದರೆ ಸಾಲದು. 2015ರ ವಿಶ್ವಕಪ್‌ ಮುಗಿದ ದಿನದಿಂದಲೇ ನಾವು ಸಿದ್ಧತೆ ಆರಂಭಿಸಿದ್ದೆವು. ಟೂರ್ನಿಯಲ್ಲಿ ಬಲಿಷ್ಠ ತಂಡಗಳು ಭಾಗವಹಿಸುತ್ತವೆ. ಹೀಗಾಗಿ ಯಾರನ್ನೂ ಹಗುರವಾಗಿ ಪರಿಗಣಿಸಬಾರದು’ ಎಂದು ಹೇಳಿದ್ದಾರೆ.

‘ಆಸ್ಟ್ರೇಲಿಯಾ ಮತ್ತು ವೆಸ್ಟ್‌ ಇಂಡೀಸ್‌ ತಂಡಗಳ ಮೇಲೆ ಈಗ ಎಲ್ಲರ ಗಮನ ಇದೆ. ಆಸ್ಟ್ರೇಲಿಯಾವು ಹಿಂದಿನ 25 ವರ್ಷಗಳಲ್ಲಿ ಅತಿ ಹೆಚ್ಚು ವಿಶ್ವಕಪ್‌ ಗೆದ್ದ ಹೆಗ್ಗಳಿಕೆ ಹೊಂದಿದೆ. ಆ ತಂಡದಲ್ಲಿ ಸ್ಥಾನ ಗಳಿಸಿರುವ ಎಲ್ಲರೂ ಉತ್ತಮ ಲಯದಲ್ಲಿದ್ದಾರೆ’ ಎಂದು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು