ಮಂಗಳವಾರ, ಆಗಸ್ಟ್ 3, 2021
26 °C

IND vs NZ WTC Final: ಶಮಿ ದಾಳಿಗೆ ತತ್ತರಿಸಿದ ಕಿವೀಸ್‌ 249ಕ್ಕೆ ಆಲೌಟ್‌

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Twitter/BCCI

ಸೌತಂಪ್ಟನ್‌: ಐತಿಹಾಸಿಕ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌‌ ಪಂದ್ಯದಲ್ಲಿ ಭಾರತದ ವಿರುದ್ಧ ನ್ಯೂಜಿಲೆಂಡ್‌ ಮೊದಲ ಇನ್ನಿಂಗ್ಸ್‌ನಲ್ಲಿ 249 ರನ್‌ಗಳನ್ನು ಕಲೆಹಾಕಿದ್ದು, ಅಲ್ಪ ಮುನ್ನಡೆ ಸಾಧಿಸಿದೆ. 5ನೇ ದಿನದಾಟದಂದು ಬ್ಯಾಟಿಂಗ್‌ ಮುಂದುವರಿಸಿದ ಕಿವೀಸ್‌ ಎಲ್ಲ ವಿಕೆಟ್‌ಗಳನ್ನು ಕಳೆದುಕೊಂಡು ಕೇವಲ 32 ರನ್‌ಗಳ ಮುನ್ನಡೆ ಸಾಧಿಸಲಷ್ಟೇ ಶಕ್ತವಾಯಿತು.

ಭಾರತದ ಪರ ಮೊಹಮ್ಮದ್‌ ಶಮಿ ಅದ್ಭುತ ಪ್ರದರ್ಶನ ತೋರುವ ಮೂಲಕ ಕಿವೀಸ್‌ ಬ್ಯಾಟಿಂಗ್‌ ಪಕ್ಕೆಲುಬನ್ನು ಮುರಿದರು. 8 ಮೇಡನ್‍‌ ಒಳಗೊಂಡು 76 ರನ್‌ ಗಳನ್ನು ನೀಡಿ 4 ವಿಕೆಟ್‌ ಕಬಳಿಸಿದರು. 

ನ್ಯೂಜಿಲೆಂಡ್‌ನ ತಡೆಗೋಡೆಯಂತೆ ಕ್ರೀಸ್‌ನಲ್ಲಿ ನಿಂತಿದ್ದ ನಾಯಕ ಕೇನ್‌ ವಿಲಿಯಮ್ಸನ್‌ 177 ಎಸೆತಗಳನ್ನು ಎದುರಿಸಿ 49 ರನ್‌ಗಳನ್ನು ಗಳಿಸಿದರು. 6 ಆಕರ್ಷಕ ಬೌಂಡರಿ ಬಾರಿಸಿದ್ದ ವಿಲಿಯಮ್ಸನ್‌, ಇಶಾಂತ್‌ ಶರ್ಮಾ ಬೌಲಿಂಗ್‌ನಲ್ಲಿ ನಾಯಕ ವಿರಾಟ್‌ ಕೊಹ್ಲಿಗೆ ಕ್ಯಾಚ್‌ ನೀಡಿ ಅರ್ಧ ಶತಕದಿಂದ ವಂಚಿತರಾದರು.

ಟಿಮ್‌ ಸೌಥಿ ಹೊರತು ಪಡಿಸಿ ಕಿವೀಸ್‌ ಬೇರೆ ಆಟಗಾರರು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ. ಎರಡು ಭರ್ಜರಿ ಸಿಕ್ಸರ್‌ ಒಳಗೊಂಡ 30 ರನ್‌ಗಳ ನೀಡಿದ್ದ ಸೌಥಿ, ರವೀಂದ್ರ ಜಡೇಜಾರ ಸ್ಪಿನ್‌ ಮೋಡಿ ಕ್ಲೀನ್‌ ಬೌಲ್ಡ್‌ ಆದರು. ಒಂದು ಸಿಕ್ಸರ್‌ ಸಿಡಿಸಿದ ಕೈಲ್‌ ಜೆಮಿಸನ್‌, 16 ಎಸೆತಗಳಲ್ಲಿ 21 ರನ್‌ ಸಿಡಿಸಿ ಜಸ್‌ಪ್ರಿತ್‌ ಬೂಮ್ರಾಗೆ ಕ್ಯಾಚ್‌ ನೀಡಿ ವಾಪಸ್‌ ಆದರು.

ಕೊನೆಗೆ ಬಂದ ಟ್ರೆಂಟ್‌ ಬೋಲ್ಟ್‌ ನ್ಯೂಜಿಲೆಂಡ್‌ ಮುನ್ನಡೆಯನ್ನು ಹೆಚ್ಚಿಸಲು ಪ್ರಯತ್ನಿಸಿದರಾದರೂ ನೈಲ್‌ ವ್ಯಾಗ್ನರ್‌ ಡಕ್‌ ಔಟ್‌ ಆಗುವ ಮೂಲಕ ಬೇಸರ ಮೂಡಿಸಿದರು. ಭಾರತದ ಪರ ಇಶಾಂತ್‌ ಶರ್ಮಾ 3, ಆರ್‌ ಅಶ್ವಿನ್‌ 2 ಹಾಗೂ ರವೀಂದ್ರ ಜಡೇಜಾ 1 ವಿಕೆಟ್‌ ಪಡೆದರು. ಜಸ್‌ಪ್ರಿತ್‌ ಬೂಮ್ರಾ ಉತ್ತಮ ಬೌಲಿಂಗ್‌ ನಿರ್ವಹಣೆ ಮಾಡಿದರಾದರೂ ವಿಕೆಟ್‌ ಪಡೆಯಲು ಸಾಧ್ಯವಾಗಲಿಲ್ಲ.

ಸಂಕ್ಷಿಪ್ತ ಸ್ಕೋರ್‌
ಭಾರತ ಮೊದಲ ಇನ್ನಿಂಗ್ಸ್‌: 217
ನ್ಯೂಜಿಲೆಂಡ್‌ ಮೊದಲ ಇನ್ನಿಂಗ್ಸ್‌: 249
ನ್ಯೂಜಿಲೆಂಡ್‌ಗೆ 32 ರನ್‌ಗಳ ಮುನ್ನಡೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು