ಭಾನುವಾರ, ಸೆಪ್ಟೆಂಬರ್ 27, 2020
21 °C
ಟೆಸ್ಟ್‌ ಕ್ರಿಕೆಟ್‌

ಪಾಕಿಸ್ತಾನಕ್ಕೆ ಲಂಕಾ ಭದ್ರತಾ ನಿಯೋಗ ಭೇಟಿ

ಪಿಟಿಐ Updated:

ಅಕ್ಷರ ಗಾತ್ರ : | |

ಕರಾಚಿ: ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಟೂರ್ನಿಯ ಅಂಗವಾಗಿ ಅಕ್ಟೋಬರ್‌ನಲ್ಲಿ ಶ್ರೀಲಂಕಾ ತಂಡವು ಪಾಕಿಸ್ತಾನದಲ್ಲಿ ಸರಣಿ ಆಡಲಿದೆ. ಅದಕ್ಕಾಗಿ ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಲು ಲಂಕಾದ ಭದ್ರತಾ ನಿಯೋಗವು ಪಾಕ್‌ಗೆ ಭೇಟಿ ನೀಡಲಿದೆ. 

ಈ ವಿಷಯ ತಿಳಿಸಿದ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ)ಯ ಮುಖ್ಯಸ್ಥ ಎಹಸಾನ್ ಮಣಿ, ‘ಇಬ್ಬರು ಸದಸ್ಯರು ಇರುವ ಶ್ರೀಲಂಕಾ ನಿಯೋಗವು ಇದೇ 6ರಂದು ಇಲ್ಲಿಗೆ ಭೇಟಿ ನೀಡಲಿದೆ. ಪಂದ್ಯಗಳು ನಡೆಯಲಿರುವ ಕರಾಚಿ, ಲಾಹೋರ್ ಮತ್ತು ಇಸ್ಲಾಮಾಬಾದ್  ಮೈದಾನಗಳು, ತಂಡಗಳು ಉಳಿದುಕೊಳ್ಳುವ ಹೋಟೆಲ್‌ಗಳನ್ನು ನಿಯೋಗ ಪರಿಶೀಲಿಸಲಿದೆ. ಪಿಸಿಬಿ ಅಧಿಕಾರಿಗಳು ಮತ್ತು ಸ್ಥಳೀಯ ಪೊಲೀಸ್  ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದೆ’ ಎಂದರು.

ನಿಯೋಗವು ಭೇಟಿ ನೀಡಿ ವರದಿ ಕೊಟ್ಟ ಮೇಲೆ ಲಂಕಾ ತಂಡವನ್ನು ಪಾಕ್‌ಗೆ ಸರಣಿ ಆಡಲು ಕಳಿಸುವ ಕುರಿತು ಶ್ರೀಲಂಕಾ ಕ್ರಿಕೆಟ್ ಸಂಸ್ಥೆಯು ನಿರ್ಧಾರ ಕೈಗೊಳ್ಳಲಿದೆ. 

2009ರಲ್ಲಿ ಲಾಹೋರ್‌ ನಲ್ಲಿ ಪಾಕ್ ಮತ್ತು ಲಂಕಾ ನಡುವಣ ಟೆಸ್ಟ್‌ ಪಂದ್ಯ ಆಯೋಜನೆಯಾಗಿತ್ತು. ಆಗ ಹೋಟೆಲ್‌ನಿಂದ ಕ್ರೀಡಾಂಗಣದತ್ತ ತೆರಳುತ್ತಿದ್ದ ಲಂಕಾ ತಂಡವಿದ್ದ ಬಸ್‌ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದರು. ಆಗಿನಿಂದ ಇಲ್ಲಿಯವರೆಗೆ ಪಾಕಿಸ್ತಾನದಲ್ಲಿ ಯಾವುದೇ ದ್ವಿಪಕ್ಷೀಯ ಟೆಸ್ಟ್ ಸರಣಿಗಳನ್ನು ಆಯೋಜಿಸಲಾಗಿಲ್ಲ. ಜಿಂಬಾಬ್ವೆ, ಕಿನ್ಯಾ, ಐಸಿಸಿ ವಿಶ್ವ ಇಲೆವನ್, ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸ್ ತಂಡಗಳು ಇಲ್ಲಿ ನಡೆದ ನಿಗದಿಯ ಓವರ್‌ಗಳ ಸರಣಿಗಳಲ್ಲಿ ಆಡಿದ್ದವು. 

‘ಪ್ರವಾಸಿ ತಂಡಗಳಿಗೆ ಇಲ್ಲಿ ಸಂಪೂರ್ಣ ಭದ್ರತೆ ಒದಗಿಸುವ ಭರವಸೆಯನ್ನು ಬೇರೆ ದೇಶಗಳ ಕ್ರಿಕೆಟ್ ಮಂಡಳಿಗಳಿಗೆ ಮನದಟ್ಟು ಮಾಡಿಕೊಡಬೇಕಿದೆ. ಕ್ರಿಕೆಟ್ ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ವೇಲ್ಸ್‌ ಕ್ರಿಕೆಟ್ ಮಂಡಳಿಗಳ ನಿಯೋಗಗಳೂ ಇಲ್ಲಿಗೆ ಭೇಟಿ ನೀಡಲಿವೆ’ ಎಂದು ಮಣಿ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು