ಶುಕ್ರವಾರ, ಡಿಸೆಂಬರ್ 4, 2020
22 °C

ಚೇತರಿಕೆಯಲ್ಲಿ ‘ವೃದ್ಧಿ‘ ಕಂಡ ಬಂಗಾಳ ಬ್ಯಾಟ್ಸ್‌ಮನ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಸಿಡ್ನಿ: ಅನುಭವಿ ಆಟಗಾರ, ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ವೃದ್ಧಿಮಾನ್ ಸಹಾ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದು ಬುಧವಾರ ಭಾರತ ತಂಡದ ನೆಟ್ಸ್‌ನಲ್ಲಿ ಕಾಣಿಸಿಕೊಂಡು ಭರವಸೆ ಮೂಡಿಸಿದ್ದಾರೆ. ಭಾರತದ ಪ್ರಮುಖ ವಿಕೆಟ್‌ಕೀಪರ್‌ಗಳಲ್ಲಿ ಒಬ್ಬರಾಗಿರುವ ಬಂಗಾಳದ ವೃದ್ಧಿಮಾನ್ ಸಹಾ ಅವರ ಪಕ್ಕೆಲುಬಿಗೆ ಈಚೆಗೆ ಮುಕ್ತಾಯಗೊಂಡ ಇಂಡಿಯನ್‌ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ ಸಂದರ್ಭದಲ್ಲಿ ಗಾಯವಾಗಿತ್ತು.

ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿದ್ದ ಅವರು ಕೊನೆಯ ಕೆಲವು ಪಂದ್ಯಗಳಲ್ಲಿ ಕಣಕ್ಕೆ ಇಳಿದಿದ್ದರು. ಎರಡು ಪಂದ್ಯಗಳಲ್ಲಿ ಅರ್ಧಶತಕಗಳನ್ನು ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು. 36 ವರ್ಷದ ಈ ಆಟಗಾರ ಗಾಯಗೊಂಡ ಕಾರಣ ಎಲಿಮಿನೇಟರ್ ಮತ್ತು ಕ್ವಾಲಿಫೈಯರ್ ಪಂದ್ಯಗಳಲ್ಲಿ ಆಡಿರಲಿಲ್ಲ. ಈಗ ಚೇತರಿಕೆ ಕಂಡಿರುವ ಕಾರಣ ಆಸ್ಟ್ರೇಲಿಯಾ ಎದುರಿನ ಟೆಸ್ಟ್ ಸರಣಿಯಲ್ಲಿ ಕಣಕ್ಕೆ ಇಳಿಯುವ ಸಾಧ್ಯತೆ ಇದೆ. ಸರಣಿ ಡಿಸೆಂಬರ್ 17ರಂದು ಅಡಿಲೇಡ್‌ನಲ್ಲಿ ಆರಂಭವಾಗಲಿದೆ.       

ಬಿಸಿಸಿಐ ಬಿಡುಗಡೆ ಮಾಡಿರುವ ವಿಡಿಯೊದಲ್ಲಿ, ಕೆಲಕಾಲ ನೆಟ್ಸ್‌ನಲ್ಲಿ ಕಳೆದ ವೃದ್ಧಿಮಾನ್ ಎಡಗೈ ಬಲಗೈ ವೇಗದ ಬೌಲರ್‌ಗಳ ಎಸೆತಗಳನ್ನು ಎದುರಿಸಿದ್ದು ಕಾಣುತ್ತಿದೆ. ವಿಕೆಟ್‌ ಕೀಪಿಂಗ್ ಮಾಡಲು ಅವರು ಮುಂದಾಗಲಿಲ್ಲ. ಹಾಫ್ ವೋಲಿ ಎಸೆತಗಳನ್ನು ಎದುರಿಸುವಾಗ ಮುಂದಕ್ಕೆ ಬಗ್ಗಿ ಡ್ರೈವ್ ಮಾಡಲು ಅವರು ಪ್ರಯತ್ನಿಸಲಿಲ್ಲ. ಆದ್ದರಿಂದ ನೋವು ಎಷ್ಟರ ಮಟ್ಟಿಗೆ ಶಮನ ಆಗಿದೆ ಎಂಬುದರ ಬಗ್ಗೆ ಸಂದೇಹ ಎದ್ದಿದೆ. ಆದರೆ ನೆಟ್ಸ್‌ನಲ್ಲಿ ಇರುವಷ್ಟು ಕಾಲ ಅವರಲ್ಲಿ ಬಳಲಿಕೆ ಕಂಡುಬರಲಿಲ್ಲ. 

ವೃದ್ಧಿಮಾನ್ ಸಹಾ ಆಸ್ಟ್ರೇಲಿಯಾ ಎದುರಿನ ಮೊದಲ ಟೆಸ್ಟ್ ಪಂದ್ಯಕ್ಕೂ ಮೊದಲು ಗುಣಮುಖರಾಗಲಿದ್ದಾರೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಇತ್ತೀಚೆಗೆ ಹೇಳಿದ್ದರು. ನಿತಿನ್ ಪಟೇಲ್ ಮತ್ತು ನಿಕ್ ವೆಬ್ ಅವರು ವೃದ್ಧಿಮಾನ್ ಆರೋಗ್ಯದ ಮೇಲೆ ಸತತ ನಿಗಾ ಇರಿಸುತ್ತಿದ್ದಾರೆ ಎಂದೂ ಅವರು ಹೇಳಿದ್ದರು. ಭಾರತದ ಪರ 37 ಟೆಸ್ಟ್ ಪಂದ್ಯಗಳನ್ನು ಆಡಿರುವ ವೃದ್ಧಿಮಾನ್ 1238 ರನ್‌ ಕಲೆ ಹಾಕಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು