ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs NZ WTC Final: ಮಳೆಯ ಆಟ; ಒಂದೂ ಎಸೆತ ಕಾಣದೆ 4ನೇ ದಿನದಾಟ ರದ್ದು

ನೀರಸ ಅಂತ್ಯದತ್ತ ‘ಐತಿಹಾಸಿಕ’ ಪಂದ್ಯ
ಅಕ್ಷರ ಗಾತ್ರ

ಸೌತಾಂಪ್ಟನ್: ಐತಿಹಾಸಿಕ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ನೀರಸ ಅಂತ್ಯದತ್ತ ಸಾಗಿದೆ. ಮಳೆಯಿಂದಾಗಿ ಫೈನಲ್ ಪಂದ್ಯದ ನಾಲ್ಕನೇ ದಿನವಾದ ಸೋಮವಾರ ಆಟ ನಡೆಯಲೇ ಇಲ್ಲ. ಹೀಗಾಗಿ ಪಂದ್ಯ ಡ್ರಾ ಆಗುವುದು ಬಹುತೇಕ ಖಚಿತವಾಗಿದೆ.

ಹ್ಯಾಂಪ್‌ಶೈರ್ ಬೌಲ್‌ನಲ್ಲಿ ನಡೆಯುತ್ತಿರುವ ಪಂದ್ಯದ ಮೊದಲ ದಿನವಿಡೀ ಮಳೆಯಿಂದಾಗಿ ರದ್ದಾಗಿತ್ತು. ನಂತರದ ಎರಡು ದಿನಗಳಲ್ಲಿ ಪದೇ ಪದೇ ಮಳೆ ಕಾಡಿತ್ತು. ಎರಡನೇ ದಿನ 64.4 ಓವರ್‌ಗಳ ಆಟ ನಡೆದಿದ್ದರೆ ಮೂರನೇ ದಿನ 76.3 ಓವರ್‌ಗಳನ್ನಷ್ಟೇ ಹಾಕಲು ಸಾಧ್ಯವಾಗಿತ್ತು. ಸೋಮವಾರ ಬೆಳಿಗ್ಗೆಯಿಂದಲೇ ಮಳೆ ಕಾಡಿತ್ತು. ನಾಲ್ಕೂವರೆ ತಾಸು ಕಾದು ಕುಳಿತ ನಂತರ ಸ್ಥಳೀಯ ಕಾಲ ಮೂರು ಗಂಟೆಗೆ ದಿನದಾಟವನ್ನು ಅಂಪೈರ್‌ಗಳು ರದ್ದುಗೊಳಿಸಿದರು.

‘ಗುಡುಗು ಸಹಿತ ಮಳೆಯಿಂದಾಗಿ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ನ ನಾಲ್ಕನೇ ದಿನದಾಟವನ್ನು ರದ್ದುಗೊಳಿಸಲಾಗಿದೆ. ಇಷ್ಟು ಹೊತ್ತು ಕಾದಿದ್ದ ಪ್ರೇಕ್ಷಕರಿಗೆ ಸಹಜವಾಗಿ ನಿರಾಸೆಯಾಗಿದೆ. ತಾಳ್ಮೆ ಕಳೆದುಕೊಳ್ಳದೆ ಇದ್ದ ಅವರಿಗೆ ಕೃತಜ್ಞತೆಗಳು‘ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಟ್ವೀಟ್ ಮಾಡಿದೆ.

ಭಾರತ ಮೊದಲ ಇನಿಂಗ್ಸ್‌ನಲ್ಲಿ 217 ರನ್‌ ಗಳಿಸಿದ್ದು ನ್ಯೂಜಿಲೆಂಡ್ 49 ಓವರ್‌ಗಳಲ್ಲಿ ಎರಡು ವಿಕೆಟ್‌ಗಳಿಗೆ 101 ರನ್‌ ಗಳಿಸಿದೆ.

ಆರನೇ ದಿನದ ಟಿಕೆಟ್ ದರ ಕಡಿತ
ಪಂದ್ಯಕ್ಕೆ ಕಾಯ್ದಿರಿಸಿದ ಆರನೇ ದಿನದ ಟಿಕೆಟ್ ದರವನ್ನು ಐಸಿಸಿ ಕಡಿತಗೊಳಿಸಿದೆ. ನಾಲ್ಕೂ ದಿನಗಳ ಆಟದಲ್ಲಿ 141.1 ಓವರ್‌ಗಳ ಆಟವಷ್ಟೇ ನಡೆದಿತ್ತು. ಹೀಗಾಗಿ ಕಾಯ್ದಿರಿಸಿದ ದಿನವನ್ನು ಬಳಸಿಕೊಳ್ಳುವುದು ಖಚಿತ. ಆದ್ದರಿಂದ ಆ ದಿನದ ಟಿಕೆಟ್‌ಗಳನ್ನು ಮಾರಾಟ ಮಾಡಲು ನಿರ್ಧರಿಸಲಾಗಿದೆ. ಫೈನಲ್ ಪಂದ್ಯದ ಟಿಕೆಟ್ ದರವನ್ನು ₹ 15,444, ₹ 10,296 ಮತ್ತು ₹ 7,722 ಎಂದು ನಿಗದಿ ಮಾಡಲಾಗಿತ್ತು. ಕೊನೆಯ ದಿನ ಇದನ್ನು ಕ್ರಮವಾಗಿ ₹ 10,296, ₹7,722 ಹಾಗೂ ₹5,148ಕ್ಕೆ ಇಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT