ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2014ರಲ್ಲಿ ಇಶಾಂತ್ ಪೋಸ್ಟ್‌ನಲ್ಲಿ ಡರೆನ್ ಸಾಮಿ ಹೇಳಿಕೆಗೆ ಸಾಕ್ಷಿ

ಸನ್‌ರೈಸರ್ಸ್‌ ಹೈದರಾಬಾದ್ ತಂಡದಲ್ಲಿ ಜನಾಂಗೀಯ ನಿಂದನೆ ಆರೋಪ ಮಾಡಿದ್ದ ವಿಂಡೀಸ್ ಆಟಗಾರ
Last Updated 9 ಜೂನ್ 2020, 15:37 IST
ಅಕ್ಷರ ಗಾತ್ರ

ನವದೆಹಲಿ: ಇಂಡಿಯನ್‌ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಸನ್‌ರೈಸರ್ಸ್‌ ಹೈದರಾಬಾದ್ ತಂಡದಲ್ಲಿ ತಮ್ಮನ್ನು ವರ್ಣಬೇಧ ಅರ್ಥವಿರುದ ‘ಅಡ್ಡನಾಮ’ದಿಂದ ಕರೆಯಲಾಗುತ್ತಿತ್ತು ಎಂದು ವೆಸ್ಟ್ ಇಂಡೀಸ್ ಆಟಗಾರ ಡರೆನ್ ಸಾಮಿ ಮಾಡಿದ್ದ ಆರೋಪಕ್ಕೆ ಪುಷ್ಟಿ ದೊರೆತಿದೆ.

2014ರಲ್ಲಿ ತಂಡದ ಬೌಲರ್ ಇಶಾಂತ್ ಶರ್ಮಾ ಅವರು ಇನ್ಸ್ಟಾಗ್ರಾಮ್‌ನಲ್ಲಿ ಹಾಕಿದ್ದ ಚಿತ್ರ ಮತ್ತುಶೀರ್ಷಿಕೆಯಲ್ಲಿ ಸಾಮಿ ಅವರನ್ನು ‘ಕಾಲೂ’ ಎಂದು ಬರೆದಿದ್ದಾರೆ. ಮಂಗಳವಾರ ಸಾಮಿ ಅವರು ಇನ್ಸ್ಟಾಗ್ರಾಮ್‌ನಲ್ಲಿ ಹಾಕಿದ್ದ ವಿಡಿಯೊದಲ್ಲಿ, ಸನ್‌ರೈಸರ್ಸ್‌ನಲ್ಲಿ ತಮಗೆ ಆಗಿದ್ದ ಅನುಭವವನ್ನು ಹಂಚಿಕೊಂಡಿದ್ದರು. ಅಲ್ಲದೇ ಆ ರೀತಿ ತಮ್ಮನ್ನು ಕರೆದವರು ತಾವಾಗಿಯೇ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ತಾವೇ ಅವರ ಹೆಸರು ಹೇಳುವುದಾಗಿ ಎಚ್ಚರಿಕೆ ನೀಡಿದ್ದರು.

ಇದು ಸಾಮಾಜಿಕ ಜಾಲತಾಣಗಳಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಗಿತ್ತು. ಇದರ ನಡುವೆ 2014ರ ಇಶಾಂತ್ ಶರ್ಮಾ ಪೋಸ್ಟ್ ಕೂಡ ಮುನ್ನೆಲೆಗೆ ಬಂದಿದೆ. ಅದರಲ್ಲಿ ಇಶಾಂತ್, ಸಾಮಿ, ಭುವನೇಶ್ವರ್ ಕುಮಾರ್ ಮತ್ತು ಡೆಲ್ ಸ್ಟೇಯ್ನ್‌ ಇದ್ದಾರೆ. ‘ನಾನು, ಭುವಿ, ಕಾಲೂ ಮತ್ತು ಗನ್‌ ಸನ್‌ರೈಸರ್ಸ್‌’ ಎಂಬ ಒಕ್ಕಣೆಯೂ ಇದೆ.

‘2014ರಲ್ಲಿ ನಾನು ಸನ್‌ರೈಸರ್ಸ್‌ನಲ್ಲಿ ಆಡುವಾಗ ನನ್ನನ್ನು ಕಾಲೂ (ಕಪ್ಪು ಬಣ್ಣದ ಮನುಷ್ಯ) ಎಂದು ಕರೆಯುತ್ತಿದ್ದರು. ಎಲ್ಲರೂ ನಗುತ್ತಿದ್ದರು. ನಾನೂ ಅದು ತಮಾಷೆಯಾಗಿರಬಹುದು. ಇದೆಲ್ಲ ಗೆಳೆಯರಲ್ಲಿ ಸಹಜ ಎಂದುಕೊಂಡಿದ್ದೆ. ಈಚೆಗೆ ಅಮೆರಿಕದಲ್ಲಿ ಜಾರ್ಜ್‌ ಫ್ಲಾಯ್ಡ್‌ ಸಾವಿನ ವಿಷಯದಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ ವೆಬ್‌ ಸಿರೀಸ್ ನಟ ಮತ್ತು ನಿರೂಪಕ ಹಸನ್ ಮಿನಾಜ್‌ ಕಾರ್ಯಕ್ರಮವನ್ನು ನೋಡಿದ್ದೆ. ಅದರಲ್ಲಿ ಹಸನ್ ಮಾಡನಾಡುವಾಗ ಈ ಪದದ ಅರ್ಥ ಗೊತ್ತಾಯ್ತು. ಸಿಟ್ಟು, ಬೇಸರ ಮೂಡಿದೆ’ ಎಂದು ಸಾಮಿ ಹೇಳಿದ್ದಾರೆ.

ಆ ಸಂದರ್ಭದಲ್ಲಿ ತಂಡದ ಮಾರ್ಗದರ್ಶಕ ವಿವಿಎಸ್‌ ಲಕ್ಷ್ಮಣ್ ಅವರ ಜನ್ಮದಿನಕ್ಕೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ಕೋರಿದ್ದ ಸಾಮಿ ಸ್ವತಃ ತಮ್ಮನ್ನು ‘ಕಾಲೂ’ ಎಂದು ಕರೆದುಕೊಂಡಿದ್ದರು.

ಈ ಕುರಿತು ಪ್ರತಿಕ್ರಿಯಿಸಿರುವ, ಆಗ ತಂಡದಲ್ಲಿದ್ದ ಆಲ್‌ರೌಂಡರ್ ಇರ್ಫಾನ್ ಪಠಾಣ್, ‘ ನಮ್ಮ ತಂಡದ ಸಭೆಗಳಲ್ಲಿ ಅಂತಹ ಯಾವುದೇ ಪದಪ್ರಯೋಗವಾಗಿದ್ದಿಲ್ಲ. ಆದರೆ, ಕ್ರಿಕೆಟ್‌ನಲ್ಲಿ ಸಾಮಾನ್ಯವಾಗಿ ದಕ್ಷಿಣ ಭಾರತದ ಕ್ರಿಕೆಟಿಗರು ಉತ್ತರ ಭಾರತದಲ್ಲಿ ಆಡುವಾಗ ಜನಾಂಗೀಯ ನಿಂದನೆಗೆ ಗುರಿಯಾಗಿರುವುದು ಗೊತ್ತಿದೆ’ ಎಂದಿದ್ದಾರೆ.

‘ಹಿಂದೊಮ್ಮೆ ಬರೋಡಾದಲ್ಲಿಯೂ ಇಂತಹ ಘಟನೆಗಳು ನಡೆದಿದ್ದವು. ನಮ್ಮ ಆಟಗಾರರ ವಿರುದ್ಧವೇ ಅಂತಹ ನಿಂದನೆಗಳು ಕೇಳಿಬಂದಿದ್ದವು. ಸ್ಥಳೀಯ ಆಟಗಾರನಾಗಿ ನಾನೇ ಮಧ್ಯಸ್ಥಿಕೆ ವಹಿಸಿ ಅಂತಹ ಘಟನೆಗಳು ಮುಂದುವರಿಯದಂತೆ ತಡೆಯೊಡ್ಡಿದ್ದೆ’ ಎಂದು ಇರ್ಫಾನ್ ನೆನಪಿಸಿಕೊಂಡಿದ್ದಾರೆ.

ಈ ಕುರಿತು ಪ್ರತಿಕ್ರಿಯೆಗಾಗಿ ಇಶಾಂತ್ ಶರ್ಮಾ ಅವರನ್ನು ಸಂಪರ್ಕಿಸಲಾಯಿತು. ಅವರು ಲಭ್ಯರಾಗಿಲ್ಲ. ಈಗ ಅವರ ಹಳೆಯ ಪೋಸ್ಟ್‌ಗೆ ಪ್ರತಿಕ್ರಿಯಿಸುತ್ತಿರುವ ಕೆಲವು ಅಭಿಮಾನಿಗಳು, ‘ಇಶಾಂತ್, ಒಕ್ಕಣೆಯನ್ನು ತಿದ್ದಿಕೊಳ್ಳಿ ಮತ್ತು ಕ್ಷಮೆ ಕೋರಿಬಿಡಿ’ ಎಂದು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT