ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕು ಕಟ್ಟಿಕೊಟ್ಟ ಯೋಗ

Last Updated 31 ಮಾರ್ಚ್ 2019, 19:31 IST
ಅಕ್ಷರ ಗಾತ್ರ

‘ಅದು ಜೂನ್ 23 2017 ರ ರಾತ್ರಿ. ಹಿಂಬದಿಯಿಂದ ವೇಗವಾಗಿ ಬಂದ ಲಾರಿಯೊಂದು ಗುದ್ದಿ ಹೋಗಿತ್ತು. ಬೆಂಗಳೂರಿನ ಮಲ್ಲೆಶ್ವರಂನಲ್ಲಿ ಅನಾಥವಾಗಿ ಪ್ರಜ್ಞೆ ತಪ್ಪಿ ಬಿದ್ದಿದ್ದೆ. ಸುಮಾರು 45 ನಿಮಿಷಗಳ ನಂತರ ನನ್ನನ್ನು ಆಸ್ಪತ್ರೆಗೆ ಸೇರಿಸಿದರು. ತೀವ್ರ ರಕ್ತಸ್ರಾವವಾದರೂ; ಜೋರಾಗಿ ಹೊಡೆತ ಬಿದ್ದರೂ ಮೂಳೆಗಳು ಹೆಚ್ಚು ಮುರಿದಿರಲಿಲ್ಲ. ಭೀಕರ ಅಪಘಾತಕ್ಕೆ ತುತ್ತಾಗಿಯೂ ಇಂದು ನಾನು ಮೊದಲಿನಂತೆಯೇ ಇದ್ದೇನೆ ಎಂದರೆ ಅದಕ್ಕೆ ಕಾರಣ ಯೋಗ.’ ಇದು ಯೋಗಗುರು ಸವಿತಾ ಕುಶಲ್ ಅವರ ನುಡಿ.

ಸವಿತಾ ಅವರದ್ದು ಬಹುಮುಖ ಪ್ರತಿಭೆ. ಅವರು ಮಾಜಿ ರಾಜ್ಯಪಾಲರುಗಳಾದ ರಾಮೇಶ್ವರ್ ಠಾಕೂರ್ ಹಾಗೂ ಹಂಸರಾಜ್ ಭಾರದ್ವಾಜ್ ಅವರಿಗೆ ಪರ್ಸನಲ್ ಯೋಗ ಟ್ರೇನರ್ ಆಗಿದ್ದವರು. ರಾಜ್ಯಪಾಲ ವಾಜುಭಾಯಿ ವಾಲಾ ಅವರಿಗೂ ಆಗಾಗ್ಗೆ ಯೋಗ ತರಬೇತಿ ನೀಡುವುದುಂಟು. ಪ್ರಮುಖ ಉದ್ಯಮಿಗಳಿಗೆ ಹಾಗೂ ಕಾರ್ಪೋರೆಟ್ ಕಂಪನಿಗಳಲ್ಲಿ ಉನ್ನತ ಸ್ಠಾನದಲ್ಲಿರುವವರಿಗೆ ಯೋಗ ಗುರುವಾಗಿದ್ದಾರೆ.

ಸವಿತಾ ಶಿಕ್ಷಕಿಯಾಗಿ, ಗಾಯಕಿಯಾಗಿ ನಟಿಯಾಗಿ ಹಾಗೂ ಆರೋಗ್ಯ ಸ್ವಯಂ ಸೇವಕಿಯಾಗಿ ಬೆಳಕಿಗೆ ಬಂದವರು. ಕೌಶಲವನ್ನು ವೃದ್ದಿಸಿಕೊಂಡು ಯುವಶಕ್ತಿ ಮನಸ್ಸು ಮಾಡಿದರೇ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಬಲು ಸಲೀಸು ಎಂಬುದನ್ನು ನಿರೂಪಿಸಿದ್ದಾರೆ.

ಅವರ ಮೂಲ ಹಿರಿಯೂರು. ಪ್ರಾಥಮಿಕ, ಮಾದ್ಯಮಿಕ, ಪದವಿ ಪೂರ್ವ ಶಿಕ್ಷಣ ಹಿರಿಯೂರು, ಚಿತ್ರದುರ್ಗ ಹಾಗೂ ತುಮಕೂರಿನಲ್ಲಿ. ಪದವಿ ಬೆಂಗಳೂರಿನ ಮಹಾರಾಣಿ ಕಾಲೇಜಿನಲ್ಲಿ. ಬಿಎಡ್ ಮುಗಿಸಿದ್ದೂ ಬೆಂಗಳೂರಿನಲ್ಲಿ.

ಸವಿತಾ ಅವರದ್ದು ವೈದ್ಯರ ಕುಟುಂಬ. ತಂದೆ ಕೆ ತೊಳಚ ನಾಯ್ಕ್ ಹಾಗೂ ಮಾವ ಶೇಷಗಿರಿ ನಾಯ್ಕ್ ವೈದ್ಯರು. ಮಗಳು ದಂತ ವೈದ್ಯಕೀಯ ವಿದ್ಯಾರ್ಥಿ. ಪತಿ ಕುಶಲ್ ವೈದ್ಯಕೀಯ ಕ್ಷೇತ್ರದ ಸೇವೆಯೊಂದರಲ್ಲಿ ನಿರತ. ಯೋಗದ ಸೆಳೆತದ ಬಗ್ಗೆ ಅವರು ಹೀಗೆ ಹೇಳುತ್ತಾರೆ:"ಚಿಕ್ಕಂದಿನಿಂದಲೂ ತೀವ್ರವಾದ ತಲೆನೋವು ಹಾಗೂ ಬೆನ್ನು ನೋವು. ಎಲ್ಲಾ ವೈದ್ಯೋಪಚಾರ ವಿಫಲವಾದ ನಂತರ ನೋವು ನಿವಾರಣೆಗಾಗಿ ಯೋಗದ ಮೊರೆಹೋದೆ. ಕೆಲವೇ ತಿಂಗಳುಗಳಲ್ಲಿ ಆರೋಗ್ಯದಲ್ಲಿ ಗಣನೀಯ ಸುಧಾರಣೆ ಕಂಡಿತು. ಆಗ ಯೋಗ ಗುರುವಾಗುವ ನಿರ್ಧಾರ ಮಾಡಿದೆ."

ಖ್ಯಾತ ಯೋಗ ಮಹರ್ಷಿ ಬಿಕೆಎಸ್ ಐಯ್ಯಂಗಾರ ಪುಣೆಯಲ್ಲಿ ಹುಟ್ಟು ಹಾಕಿದ ಕೇಂದ್ರದಲ್ಲಿ ಯೋಗದಲ್ಲಿ ತರಬೇತಿ ಪಡೆದರು. ಬೆಂಗಳೂರಿನ ವ್ಯಾಸ ಸಂಸ್ಥೆಯಲ್ಲಿ ಯೋಗ ಇನ್ಸ್‍ಟ್ರಕ್ಟರ್ ಕೋರ್ಸ್ ಮುಗಿಸಿದರು. ಅವರು ಹದಿಮೂರು ವರ್ಷಗಳ ಕಾಲ ಭಾರತೀಯ ವಿದ್ಯಾಭವನದಲ್ಲಿ ಯೋಗ ತರಗತಿಗಳನ್ನು ನೆಡೆಸಿದರು. ಇದೀಗ ದಿನಕ್ಕೆ ಐದು ಬ್ಯಾಚ್‍ಗಳಲ್ಲಿ ತರಬೇತಿ ಹಾಗೂ ಗಣ್ಯರಿಗೆ ವೈಯಕ್ತಿಕ ಟ್ರೇನರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಎರಡು ದಶಕಗಳಲ್ಲಿ ವಿವಿಧ ವಯೋಮಾನದವರು ಸೇರಿದಂತೆ ಸಾವಿರಾರು ಪುರುಷ ಹಾಗೂ ಮಹಿಳೆಯರಿಗೆ ಯೋಗ, ಧ್ಯಾನ, ಪ್ರಾಣಾಯಾಮ ತರಬೇತಿ ನೀಡಿದ್ದಾರೆ. ಅನೇಕ ತಾರೆಯರು ಸವಿತಾ ಅವರ ಮಾರ್ಗದರ್ಶನದಲ್ಲಿ ಯೋಗ ಕಲಿತಿದ್ದಾರೆ. ನೂರಾರು ಅಂಧ ಮಕ್ಕಳಿಗೆ ಉಚಿತವಾಗಿ ಯೋಗ ಹೇಳಿ ಕೊಟ್ಟಿದ್ದಾರೆ.

ವಿವಿಧ ವಯೋಮಾನದವರಿಗಾಗಿ ಬೆಂಗಳೂರು, ಹೈದರಾಬಾದ್, ಚನೈ, ಕೋಲ್ಕತ್ತಾ, ಮುಂಬೈ ಹಾಗೂ ದೆಹಲಿಯಲ್ಲಿ ನಡೆದ ರಾಷ್ಟೀಯ ಹಾಗೂ ಅಂತರಾಷ್ಟೀಯ ಯೋಗ ಸ್ಪರ್ಧೆಗಳಲ್ಲಿ ಬಂಗಾರದ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಯೋಗ ಪ್ರವೀಣೆ, ಯೋಗ ಪತಂಜಲಿ, ಯೋಗ ಕುಸುಮ, ಯೋಗಶ್ರೀ ಹಾಗೂ ಯೋಗ ರತ್ನ ಪ್ರಶಸ್ತಿ ಇವರಿಗೆ ಸಂದಿವೆ.

ಕಿರುತೆರೆ– ಬೆಳ್ಳಿತೆರೆಯಲ್ಲೂ...
ಈ ಸ್ನಿಗ್ದ ಚಲುವೆ ಅಚಾನಕ್ ಆಗಿ ಬಣ್ಣದ ಜಗತ್ತಿನ ಕಣ್ಣಿಗೆ ಬಿದ್ದರು. 1998ರಲ್ಲಿ ಉದಯ ವಾಹಿನಿಯಲ್ಲಿ ಜನಪ್ರಿಯವಾಗಿದ್ದ ಅಕ್ಷರ ಮಾಲೆ ಸಂಗೀತ ಸ್ಪರ್ಧೆಯಲ್ಲಿ ಪ್ರಥಮ ಪ್ರಶಸ್ತಿ ಪಡೆದ ನಂತರ ಬದುಕು ಕೊಂಚ ಬದಲಾಯಿತು. ಅವಕಾಶಗಳು ಹುಡುಕಿಕೊಂಡು ಬಂದವು.

‘ಚಲನಚಿತ್ರಗಳಲ್ಲಿ ಪೋಷಕ ಪಾತ್ರಗಳನ್ನು ಮಾಡಿದೆ. ಹಿರಿಯ ನಟರಾದ ರಮೇಶ್ ಅರವಿಂದ್ ಹಾಗೂ ದೇವರಾಜ್ ಅವರ ಜೊತೆ ನಟಿಸಿದ್ದು ವಿಶಿಷ್ಟ ಅನುಭವ’ ಸವಿತಾ ನೆನಪಿಸಿಕೊಳ್ಳುತ್ತಾರೆ.

ತೊಂಬತ್ತರ ದಶಕದ ಕೊನೆಯ ವರ್ಷಗಳಲ್ಲಿ ಅವಳೇ ನನ್ನ ಹುಡುಗಿ, ತರಿಕೆರೆ ಏರಿ ಮೇಲೆ, ಶ್ರೀರಸ್ತು ಶುಭಮಸ್ತು ಹಾಗೂ ದಂಡನಾಯಕ ಚಲನಚಿತ್ರಗಳು; ಇತಿಹಾಸ, ಸಂತಪ್ತ ಹಾಗೂ ಖೆಡ್ಡಾ ಸೇರಿದಂತೆ ಅನೇಕ ದಾರಾವಾಹಿಗಳಲ್ಲಿ ಸವಿತಾ ನಟಿಸಿದ್ದಾರೆ.

ಯೋಗಕ್ಕಾಗಿ ಬಣ್ಣದ ಬದುಕಿಗೆ ವಿದಾಯ ಹೇಳಿದರು. ದಶಕದ ವಿರಾಮದ ನಂತರ ಸವಿತಾ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ಭಾರತ ರತ್ನ ಚಲನಚಿತ್ರದಲ್ಲಿ ಯೋಗಗುರು ಪಾತ್ರದಲ್ಲಿ ನಟಿಸುತ್ತಿದ್ದಾರೆ. ಶೀಘ್ರದಲ್ಲಿ ಚಿತ್ರ ತೆರೆ ಕಾಣಲಿದೆ.

ಇರುವುದು ಒಂದೇ ಯೋಗ...!
’ಯೋಗ, ಧ್ಯಾನ, ಪ್ರಾಣಾಯಾಮಗಳು ಕಮರ್ಷಿಯಲ್ ಆಗಿಹೋಗಿಬಿಟ್ಟಿವೆ. ಅನೇಕರಿಗೆ ಅವು ಸರಳವಾಗಿ ಹಣ ಸಂಪಾದಿಸುವ ಮಾರ್ಗಗಳು,’ ಎಂದು ಬೇಸರ ವ್ಯಕ್ತ ಪಡಿಸುತ್ತಾರೆ.

’ಆಸನಗಳ ಮುಖ್ಯ ಅಂಶಗಳೆಂದರೇ ಸ್ಥಿರಂ, ಸುಖಂ ಹಾಗೂ ಆಸನಂ. ಆದರೇ ಪವರ್ ಯೋಗ, ಕ್ಯಾಂಡಲ್ ಯೋಗ ಹಾಗೂ ಟೆಂಪಲ್ ಯೋಗ ಮಾದರಿಗಳಲ್ಲಿ ಯೋಗದ ಮೂಲ ನಿಯಮಗಳನ್ನು ಉಲ್ಲಂಘಿಸಿ; ಸ್ವಲ್ಪವೂ ವಿರಾಮವಿಲ್ಲದಂತೆ, ಕಿವಿಗಳಿಗೆ ಇಯರ್‍ಫೋನ್ ಹಾಕಿಸಿ, ಕಿವಿಗಡಚಿಕ್ಕುವ ಮ್ಯೂಸಿಕ್ ನಡುವೆ ಯೋಗ ಕಲಿಸಲಾಗುತ್ತದೆ. ಈ ರೀತಿಯಲ್ಲಿ ಯೋಗ ಮಾಡುವುದರಿಂತ ಒಂದಿನಿತು ಲಾಭವಿಲ್ಲ. ಅನೇಕರ ಯೋಗ ಶಿಕ್ಷಣ ತರಬೇತಿ ಕೇಂದ್ರದಲ್ಲಿ ಪ್ರಮಾಣ ಪತ್ರ ಪಡೆದಿರುತ್ತಾರೆ. ಆದರೇ, ಅವರಿಗೆ ವಿವಿಧ ಆಸನಗಳನ್ನು ಸರಿಯಾಗಿ ಹೇಳಿಕೊಡಲು ಬರುವುದೇ ಇಲ್ಲ,’ ಎಂಬುದು ಅವರ ಅಂಬೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT