ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಸ್‌ಕೆ ಶಿಬಿರಕ್ಕೆ ಮರಳುವೆ: ಸುರೇಶ್ ರೈನಾ ವಿಶ್ವಾಸ

Last Updated 2 ಸೆಪ್ಟೆಂಬರ್ 2020, 12:38 IST
ಅಕ್ಷರ ಗಾತ್ರ

ನವದೆಹಲಿ: ಐಪಿಎಲ್ ಟೂರ್ನಿಯ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದಿಂದ ಅನಿರೀಕ್ಷಿತವಾಗಿ ಹೊರಬಂದ ಕುರಿತು ಕ್ರಿಕೆಟಿಗ ಸುರೇಶ್‌ ರೈನಾ ಕೊನೆಗೂ ಮೌನ ಮುರಿದಿದ್ದಾರೆ. ತಾನು ಕೌಟುಂಬಿಕ ಕಾರಣಕ್ಕಾಗಿ ಭಾರತಕ್ಕೆ ಮರಳಿದ್ದು, ತಂಡವನ್ನು ಸೇರಿಕೊಳ್ಳಲು ಮತ್ತೆ ದುಬೈಗೆ ತೆರಳಬಹುದು ಎಂದಿದ್ದಾರೆ.

ಸಿಎಸ್‌ಕೆ ಫ್ರ್ಯಾಂಚೈಸ್‌ ಹಾಗೂ ತನ್ನ ನಡುವೆ ಬಿರುಕು ಮೂಡಿದೆ ಎಂಬ ವರದಿಗಳನ್ನು ರೈನಾ ಇದೇ ವೇಳೆ ಅಲ್ಲಗಳೆದರು. ಸಿಎಸ್‌ಕೆ ತಂಡದ ಇಬ್ಬರು ಆಟಗಾರರು ಹಾಗೂ ಸಿಬ್ಬಂದಿ ಸೇರಿ 13 ಸದಸ್ಯರಲ್ಲಿ ಕೋವಿಡ್‌ ಸೋಂಕು ಪತ್ತೆಯಾಗಿತ್ತು. ಈ ಕಾರಣದಿಂದ ರೈನಾ ತಂಡ ತೊರೆದು ಭಾರತಕ್ಕೆ ಮರಳಿದ್ದಾರೆ ಎನ್ನಲಾಗಿತ್ತು.

‘ಇದು ನನ್ನ ವೈಯಕ್ತಿಕ ನಿರ್ಧಾರವಾಗಿತ್ತು. ನನ್ನ ಕುಟುಂಬದ ಸಲುವಾಗಿ ಭಾರತಕ್ಕೆ ಮರಳಿದ್ದೇನೆ. ಅದು ಅವಶ್ಯವಿತ್ತು ಕೂಡ. ಸಿಎಸ್‌ಕೆ ಕೂಡ ನನ್ನ ಒಂದು ಕುಟುಂಬ. ಮಹಿ ಭಾಯ್‌ (ಮಹೇಂದ್ರ ಸಿಂಗ್‌ ಧೋನಿ)ನನಗೆ ಅತ್ಯಂತ ಬೇಕಾದ ವ್ಯಕ್ತಿ. ಅದೊಂದು ಕಠಿಣ ನಿರ್ಧಾರವಾಗಿತ್ತು‘ ಎಂದು ಕ್ರಿಕ್‌ಬಜ್‌ಗೆ ರೈನಾ ತಿಳಿಸಿದ್ದಾರೆ.

‘ಸಿಎಸ್‌ಕೆ ಹಾಗೂ ನನ್ನ ನಡುವೆ ಯಾವುದೇ ಸಮಸ್ಯೆಗಳಿಲ್ಲ. ಸೂಕ್ತ ಕಾರಣವಿಲ್ಲದೆ ₹ 12.5 ಕೋಟಿಯನ್ನು ಕಳೆದುಕೊಳ್ಳಲು ಯಾರೂ ಬಯಸುವುದಿಲ್ಲ. ನಾನು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿರಬಹುದು. ಆದರೆ ನನಗಿನ್ನೂ ವಯಸ್ಸಿದೆ. ಇನ್ನೂ ನಾಲ್ಕೈದು ವರ್ಷ ಐಪಿಎಲ್‌ನಲ್ಲಿ ಆಡಲು ಯೋಚಿಸುತ್ತಿದ್ದೇನೆ‘ ಎಂದು ರೈನಾ ಹೇಳಿದ್ದಾರೆ.

ದುಬೈಗೆ ತೆರಳಿ ಸಿಎಸ್‌ಕೆ ತಂಡವನ್ನು ಸೇರಿಕೊಳ್ಳುವ ಸುಳಿವನ್ನು ಇದೆ ವೇಳೆ ಅವರು ಬಿಟ್ಟುಕೊಟ್ಟರು.

‘ಕ್ವಾರಂಟೈನ್‌ನಲ್ಲಿದ್ದರೂ ಇಲ್ಲಿ ನಾನು ಅಭ್ಯಾಸ ನಡೆಸುತ್ತಿದ್ದೇನೆ. ನೀವು ನನ್ನನ್ನು ಮತ್ತೆ ಸಿಎಸ್‌ಕೆ ಶಿಬಿರದಲ್ಲಿ ನೋಡಬಹುದು‘ ಎಂದು ರೈನಾ ನುಡಿದರು.

ರೈನಾ ಭಾರತಕ್ಕೆ ಮರಳಿದ್ದರ ಬಗ್ಗೆಸಿಎಸ್‌ಕೆ ತಂಡದ ಮಾಲೀಕ ಎನ್.ಶ್ರೀನಿವಾಸನ್‌ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದರು.

ಈ ಕುರಿತು ಮಾತನಾಡಿದ ರೈನಾ ಅವರು ‘ಶ್ರೀನಿವಾಸನ್‌ ಅವರು ನನಗೆ ತಂದೆ ಸಮಾನ. ಬುದ್ಧಿವಾದ ಹೇಳಲು ಅವರಿಗೆ ಹಕ್ಕು ಇದೆ. ತಂಡ ತೊರೆದು ಬಂದಿದ್ದರ ಹಿಂದಿನ ನಿಜವಾದ ಕಾರಣ ಅವರಿಗೆ ಗೊತ್ತಿರಲಿಲ್ಲ. ಈಗ ಅವರಿಗೆ ಮಾಹಿತಿ ಸಿಕ್ಕಿದೆ. ಈ ಕುರಿತು ನಾವು ಚರ್ಚಿಸಿದ್ದೇವೆ. ಈ ವಿಷಯವನ್ನು ಇಲ್ಲಿಗೇ ಮುಗಿಸಲು ಬಯಸಿದ್ದೇವೆ‘ ಎಂದರು.

ಪಂಜಾಬ್‌ನ ಪಠಾಣ್‌ಕೋಟ್‌ನಲ್ಲಿ ರೈನಾ ಅವರ ಸಂಬಂಧಿಕರ ಕುಟುಂಬದ ಮೇಲೆ ಬರ್ಬರ ದಾಳಿ ನಡೆದಿತ್ತು. ಘಟನೆಯಲ್ಲಿ ರೈನಾ ಅವರ ಮಾವ ಹಾಗೂ ಸಹೋದರ ಸಂಬಂಧಿಯೊಬ್ಬರು ಮೃತಪಟ್ಟಿದ್ದರು. ಯುಎಇಯಲ್ಲಿದ್ದ ರೈನಾ ಸುದ್ದಿ ತಿಳಿದು ತವರಿಗೆ ಮರಳಿದ್ದರು. ವೈಯಕ್ತಿಕ ಕಾರಣಗಳಿಗಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಹೊರಹೋಗುತ್ತಿರುವುದಾಗಿ ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT