ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದ್ದುಗೆ ಉಳಿಸಿಕೊಂಡ ಎಚ್‌.ಕೆ ಪಾಟೀಲ

ನೀರಿಳಿಸಿದ ಮೆಣಸಿನಕಾಯಿ; ಕೈ ಹಿಡಿದ ಹಳ್ಳಿ ಮತಗಳು
Last Updated 16 ಮೇ 2018, 11:39 IST
ಅಕ್ಷರ ಗಾತ್ರ

ಗದಗ: ಪಕ್ಷದ ಮತ್ತು ಕ್ಷೇತ್ರದ ಅಭಿವೃದ್ಧಿ ಕಾರ್ಯಕ್ರಮಗಳನ್ನೇ ಜನರ ಮುಂದಿಟ್ಟು ಮತಯಾಚನೆ ಮಾಡಿದ್ದ ಗದಗ ಮತ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ, ಹಿರಿಯ ಮುಖಂಡ ಎಚ್‌.ಕೆ ಪಾಟೀಲ ಅವರು 1868 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ವಿರುದ್ಧ ಪ್ರಯಾಸಕರ ಗೆಲುವು ಗಳಿಸಿದ್ದಾರೆ. ಎಚ್‌.ಕೆ ಪಾಟೀಲ ಅವರ ಗೆಲುವಿನ ಅಂತರವು ಗದಗ ಕ್ಷೇತ್ರದಲ್ಲಿ ದಾಖಲಾದ ‘ನೋಟಾ’ ಸಂಖ್ಯೆಗಿಂತಲೂ ಕಡಿಮೆ.

ಈ ಬಾರಿ ಕ್ಷೇತ್ರದಲ್ಲಿ 10 ಅಭ್ಯರ್ಥಿಗಳು ಕಣದಲ್ಲಿದ್ದರೂ ಎಚ್‌.ಕೆ ಪಾಟೀಲ ಮತ್ತು ಬಿಜೆಪಿಯ ಅನಿಲ್‌ ಮೆಣಸಿನಕಾಯಿ ನಡುವಿನ ಸ್ಪರ್ಧೆಯಿಂದ ಈ ಕ್ಷೇತ್ರ ರಾಜ್ಯದಲ್ಲಿ ಗಮನ ಸೆಳೆದಿತ್ತು. ಪ್ರಧಾನಿ ನರೇಂದ್ರ ಮೋದಿ ಅವರೇ ಗದುಗಿಗೆ ಬಂದು ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡಿ ಹೋಗಿದ್ದರು. ಹೀಗಾಗಿ ಗೆಲುವು ಎರಡೂ ಪಕ್ಷಗಳಿಗೆ ಪ್ರತಿಷ್ಠೆಯ ವಿಷಯವಾಗಿತ್ತು. ಪ್ರಧಾನಿ ಪ್ರಚಾರ ಮಾಡಿದ ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ ಸೋಲಾಗಿದೆ.

ಎಚ್‌.ಕೆ ಪಾಟೀಲ ಅವರ ಗೆಲುವಿನ ಅಂತರ ಗಮನಿಸಿದರೆ, ಇದು ಅವರ ಗೆಲುವೇ ಅಲ್ಲ ಎನ್ನುವ ವಿಶ್ಲೇಷಣೆಗಳು ಈಗ ಕ್ಷೇತ್ರದಲ್ಲಿ ಕೇಳಿಬರುತ್ತಿದೆ. ಕನಿಷ್ಠ 30 ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸುವ ಲೆಕ್ಕಾಚಾರವನ್ನು ಕಾಂಗ್ರೆಸ್‌ ಇಟ್ಟುಕೊಂಡಿತ್ತು. ಆದರೆ, ಮೋದಿ ಅಲೆ, ಶ್ರೀರಾಮುಲು ಅವರ ಪ್ರಭಾವದ ಹಿನ್ನೆಲೆಯಲ್ಲಿ ಅನಿಲ್‌ ಮೆಣಸಿನಕಾಯಿ ನಿರೀಕ್ಷೆ ಮೀರಿ ಅವರಿಗೆ ಪೈಪೋಟಿ ನೀಡಿದರು. ಮತ ಎಣಿಕೆಯ ಮೊದಲ ಸುತ್ತಿನಿಂದ 13ನೇ ಸುತ್ತಿನವರೆಗೆ ಅನಿಲ್ ಮುನ್ನಡೆ ಕಾಯ್ದುಕೊಂಡಿದ್ದರು. ಕೊನೆಯ ಎರಡು ಸುತ್ತಿನಲ್ಲಿ ಸೊರಟೂರು, ಮಾಲಿಂಗಪುರ ತಾಂಡಾ ಸೇರಿದಂತೆ ಕೆಲವು ಹಳ್ಳಿಗಳ ಮತಗಳನ್ನು ಎಣಿಸಿದಾಗ ಎಚ್‌.ಕೆ ಪಾಟೀಲ ಮುನ್ನಡೆ ಕಂಡುಕೊಂಡರು.

‘ಹಳ್ಳಿಗಳ ಮತಗಳೇ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿವೆ’ ಎಂದು ಎಚ್‌.ಕೆ ಪಾಟೀಲ ನಂತರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು. ಕಾಂಗ್ರೆಸ್‌ ಭದ್ರಕೋಟೆ ಎನಿಸಿದ್ದ ಗದಗ ಕ್ಷೇತ್ರದಲ್ಲಿ 2008ರಲ್ಲಿ ಮೊದಲ ಬಾರಿಗೆ ಕಮಲ ಅರಳಿತ್ತು.

ಮುಖ್ಯಮಂತ್ರಿ ಅಭ್ಯರ್ಥಿ ಎಂದು ಗುರುತಿಸಿಕೊಂಡು ಅದೇ ಮೊದಲ ಬಾರಿಗೆ ವಿಧಾನಸಭೆಗೆ ಸ್ಪರ್ಧಿಸಿದ್ದ ಎಚ್‌.ಕೆ ಪಾಟೀಲ ಅವರು ಬಿಜೆಪಿಯ ಶ್ರೀಶೈಲಪ್ಪ ಬಿದರೂರ ವಿರುದ್ಧ ಸೋಲು ಕಂಡಿದ್ದರು.

2013ರಲ್ಲಿ ಕ್ಷೇತ್ರದಲ್ಲಿ ಚತುಷ್ಕೋನ ಸ್ಪರ್ಧೆ ನಡೆದು, ಮತ ವಿಭಜನೆಗೊಂಡು, ಎಚ್ಕೆ ಗೆಲುವು ಗಳಿಸಿದ್ದರು. ಈ ಬಾರಿ ಗದಗ ಸೇರಿ ನಾಲ್ಕೂ ಕ್ಷೇತ್ರ ತೆಕ್ಕೆಗೆ ಪಡೆಯಲು ಬಿಜೆಪಿ ಶತಾಯಗತಾಯ ಪ್ರಯತ್ನ ನಡೆಸಿತ್ತು.

ಕಾಂಗ್ರೆಸ್‌ ಬೇರುಗಳು ಗ್ರಾಮೀಣ ಪ್ರದೇಶದಲ್ಲಿ ಬಲಿಷ್ಠವಾಗಿದೆ.ಇದರ ಜತೆಗೆ ಕುಟುಂಬ ರಾಜಕಾರಣದ ಹಿನ್ನೆಲೆ ಎಚ್‌.ಕೆ ಪಾಟೀಲ ಅವರಿಗೆ ನೆರವಾಗಿದೆ. ಅವರ ಪರವಾಗಿ, ಸಹೋದರ, ನಾಲ್ಕು ಬಾರಿ ಶಾಸಕರಾಗಿರುವ ಡಿ.ಆರ್.ಪಾಟೀಲ ಅವರೇ ಕ್ಷೇತ್ರದಾದ್ಯಂತ ಪ್ರಚಾರ ನಡೆಸಿದ್ದು, ಕೊನೆಯ ಕ್ಷಣದಲ್ಲಿ ಹಳ್ಳಿಗಳ ಸಾಂಪ್ರದಾಯಿಕ ಮತಗಳ ವಿಭಜನೆ ತಡೆಯುವಲ್ಲಿ ಅವರು ಯಶಸ್ವಿಯಾದರು. ಅಭಿವೃದ್ಧಿ ಆಧಾರಿತ ಪ್ರಚಾರಕ್ಕೆ ಕ್ಷೇತ್ರದ ಮತದಾರರು ಮನ್ನಣೆ ನೀಡಿಲ್ಲ ಎನ್ನುವುದು ಫಲಿತಾಂಶದಲ್ಲಿ ಸ್ಪಷ್ಟವಾಗಿದೆ.

ಗೆಲುವಿನ ಅಂತರಕ್ಕಿಂತ ನೋಟಾ ಜಾಸ್ತಿ

ಗದಗ: ಗದಗ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಎಚ್‌.ಕೆ.ಪಾಟೀಲ ಅವರು ಬಿಜೆಪಿ ಅಭ್ಯರ್ಥಿ ಅನಿಲ್‌ ಮೆಣಸಿನಕಾಯಿ ವಿರುದ್ಧ 1,868 ಮತಗಳ ಅಂತರದಿಂದ ಪ್ರಯಾಸಕರ ಗೆಲುವು ಗಳಿಸಿದ್ದಾರೆ. ಎಚ್‌.ಕೆ ಪಾಟೀಲ ಅವರ ಗೆಲುವಿನ ಅಂತರವು, ಗದಗ ಕ್ಷೇತ್ರದಲ್ಲಿ ದಾಖಲಾದ ನೋಟಾ ಮತಗಳಿಗಿಂತಲೂ ಕಡಿಮೆ. ಜಿಲ್ಲೆಯ ನಾಲ್ಕು ಕ್ಷೇತ್ರಗಳು ಸೇರಿ ಒಟ್ಟು 7,060 ನೋಟಾ ದಾಖಲಾಗಿದ್ದು, ಅದರಲ್ಲಿ ಗದಗ ಕ್ಷೇತ್ರದಲ್ಲೇ 2,007 ಚಲಾವಣೆ ಆಗಿವೆ. ಎಚ್ಕೆ ಅವರ ಗೆಲುವಿನ ಅಂತರಕ್ಕಿಂತಲೂ ನೋಟಾ ಸಂಖ್ಯೆ 139 ಹೆಚ್ಚಿಗೆ ಇದೆ.

**
ಹಳ್ಳಿಯ ಮತದಾರರು ನನ್ನ ಕೈ ಹಿಡಿದಿದ್ದಾರೆ. ಅವರಿಗೆ ಕೃತಜ್ಞತೆ ಸಲ್ಲಿಸುವೆ. ಗೆಲುವಿನ ಅಂತರ ಕಡಿಮೆಯಾಗಿದೆ. ಈ ಕುರಿತು ಗಂಭೀರ ಚಿಂತನೆ ನಡೆಸುವೆ
– ಎಚ್‌.ಕೆ. ಪಾಟೀಲ, ಕಾಂಗ್ರೆಸ್ ಅಭ್ಯರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT