ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್‌ನಲ್ಲಿ ಐಪಿಎಲ್ ಪ್ರಸಾರಕ್ಕೆ ನಿಷೇಧ

Last Updated 21 ಮಾರ್ಚ್ 2019, 20:26 IST
ಅಕ್ಷರ ಗಾತ್ರ

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ ಪಂದ್ಯಗಳ ಪ್ರಸಾರವನ್ನು ಪಾಕಿಸ್ತಾನದಲ್ಲಿ ನಿರ್ಬಂಧಿಸಲಾಗುವುದು ಎಂದು ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಫವಾದ್ ಅಹಮದ್ ಚೌಧರಿ ತಿಳಿಸಿದ್ದಾರೆ.

‘ನಾವು ಕ್ರೀಡೆ ಮತ್ತು ರಾಜಕೀಯವನ್ನು ಬೆರೆಸುವುದಿಲ್ಲ. ಆದರೆ ಭಾರತ ತಂಡವು ಕ್ರಿಕೆಟ್‌ ಪಂದ್ಯದಲ್ಲಿ ತಮ್ಮ ಸೇನಾಪಡೆಯ ಕ್ಯಾಪ್ ಧರಿಸಿ ಆಡಿತ್ತು. ಅದನ್ನು ನಾವು ಖಂಡಿಸುತ್ತೇವೆ. ಆದ್ದರಿಂದ ನಮ್ಮ ದೇಶದಲ್ಲಿ ಐಪಿಎಲ್ ಪಂದ್ಯಗಳ ಟಿವಿ ಪ್ರಸಾರದ ಮೇಲೆ ನಿರ್ಬಂಧ ಹೇರಲಾಗಿದೆ. ನಮ್ಮ ಈ ಕ್ರಮದಿಂದ ಬಿಸಿಸಿಐಗೆ ಅಪಾರ ನಷ್ಟವಾಗಲಿದೆ’ ಎಂದು ಚೌಧರಿ ಹೇಳಿದ್ದಾರೆ.

ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್‌ಪಿಎಫ್‌ ಯೋಧರ ಮೇಲೆ ಭಯೋತ್ಪಾದನಾ ದಾಳಿ ನಡೆದಿತ್ತು. ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಲು ರಾಂಚಿಯಲ್ಲಿ ಆಸ್ಟ್ರೇಲಿಯಾ ಎದುರು ನಡೆದಿದ್ದ ಏಕದಿನ ಪಂದ್ಯದಲ್ಲಿ ಭಾರತದ ಆಟಗಾರರು ಸೇನಾ ಕ್ಯಾಪ್ ಧರಿಸಿ ಆಡಿದ್ದರು. ಅದನ್ನು ಆಕ್ಷೇಪಿಸಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಐಸಿಸಿಗೆ ದೂರು ನೀಡಿತ್ತು. ಆದರೆ, ಈ ಕಾರ್ಯಕ್ಕೆ ಬಿಸಿಸಿಐ ಅನುಮತಿ ಪಡೆದಿತ್ತು ಎಂದು ಐಸಿಸಿ ಪ್ರತಿಕ್ರಿಯಿಸಿತ್ತು. ಅದರಿಂದಾಗಿ ಪಾಕಿಸ್ತಾನಕ್ಕೆ ಮುಖಭಂಗವಾಗಿತ್ತು.

ಅಲ್ಲದೇ ಪಾಕ್‌ನಲ್ಲಿ ನಡೆದಿದ್ದ ಪಾಕಿಸ್ತಾನ ಸೂಪರ್ ಲೀಗ್ ಕ್ರಿಕೆಟ್ ಟೂರ್ನಿಯ ಟಿವಿ ಪ್ರಸಾರವನ್ನು ಭಾರತದಲ್ಲಿ ನಿರ್ಬಂಧಿಸಲಾಗಿತ್ತು.

ಬೆಂಗಳೂರಿಗೆ ಟ್ರೋಫಿ ಇಂದು

ಈ ವರ್ಷದ ಐಪಿಎಲ್‌ ಟೂರ್ನಿಯ ಟ್ರೋಫಿ ಯಾತ್ರೆಯು ಶುಕ್ರವಾರ ಬೆಂಗಳೂರಿಗೆ ಬರಲಿದೆ. ಸ್ಟಾರ್‌ ಸ್ಪೋರ್ಟ್ಸ್ ಸಹ ಭಾಗಿತ್ವದಲ್ಲಿ ಐಪಿಎಲ್‌-2019ರ ಟ್ರೋಫಿಯ ಯಾತ್ರೆಯು ಮಾರ್ಚ್ 17ರಿಂದ ದೆಹಲಿಯಲ್ಲಿ ಆರಂಭವಾಯಿತು.

ಐಪಿಎಲ್‌ ಫ್ರ್ಯಾಂಚೈಸ್‌ಗಳು ಇರುವ ನಗರಗಳಲ್ಲಿ ಈ ಟ್ರೋಫಿಯನ್ನು ಪ್ರದರ್ಶನಕ್ಕೆ ಇಡಲಾಗುತ್ತಿದೆ. ಶುಕ್ರವಾರ ಬೆಂಗಳೂರಿನಲ್ಲಿ ಪ್ರದರ್ಶನಗೊಳ್ಳಲಿದೆ. 25ರಂದು ಚೆನ್ನೈ, 26ರಂದು ಮುಂಬೈ, 30ರಂದು ಕೋಲ್ಕೊತಾ, 31ರಂದು ಹೈದರಾಬಾದ್‌, ಏಪ್ರಿಲ್ 6ರಂದು ಜೈಪುರ ಮತ್ತು 7ರಂದು ಚಂಡೀಗಡದಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.

ಮೊದಲ ಪಂದ್ಯದ ಆದಾಯ ಹುತಾತ್ಮರ ಕುಟುಂಬಳಿಗೆ

ಸಿಎಸ್‌ಕೆ ತಂಡವು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ಆಡಲಿರುವ ತನ್ನ ಮೊದಲ ಪಂದ್ಯದ ಆದಾಯವನ್ನು ಪುಲ್ವಾಮಾ ಹುತಾತ್ಮ ಯೋಧರ ಕುಟುಂಬಗಳಿಗೆ ದೇಣಿಗೆ ನೀಡಲಿದೆ.

ಇದೇ 23ರಂದು ಚೆನ್ನೈನ ಚೆಪಾಕ್‌ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ ಚೆನ್ನೈ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕಣಕ್ಕಿಳಿಯಲಿದೆ. ಈ ಪಂದ್ಯದ ಟಿಕೆಟ್ ಮಾರಾಟದಿಂದ ಬರುವ ಆದಾಯವನ್ನು ಹುತಾತ್ಮ ಯೋಧರ ಕುಟುಂಬಗಳಿಗೆ ನೀಡಲಾಗುವುದು ಎಂದು ಸಿಎಸ್‌ಕೆ ತಂಡದ ನಿರ್ದೇಶಕ ರಾಕೇಶ್ ಸಿಂಗ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT