ಕಲ್ಪತರು ನಾಡಲ್ಲಿ ಜಿಮ್‌ ಮಂತ್ರ

ಮಂಗಳವಾರ, ಏಪ್ರಿಲ್ 23, 2019
31 °C

ಕಲ್ಪತರು ನಾಡಲ್ಲಿ ಜಿಮ್‌ ಮಂತ್ರ

Published:
Updated:
Prajavani

ಶಕಗಳ ಹಿಂದೆ ಹಳ್ಳಿಗಳಲ್ಲಿ ಜಿಮ್ನಾಷಿಯಂ ಬಗ್ಗೆ ಅಷ್ಟಾಗಿ ಗೊತ್ತಿರಲಿಲ್ಲ. ಅಲ್ಲಿಯ ಗರಡಿಮನೆಗಳು, ಮೈದಾನಗಳು, ಕೆರೆ ಕುಂಟೆಗಳೇ ವ್ಯಾಯಾಮದ ತಾಣಗಳಾಗಿದ್ದವು. ಅದರಲ್ಲೂ ಕೃಷಿಕಾಯಕವೇ ದೇಹವನ್ನು ಹುರಿಗೊಳಿಸುವ ಕೆಲಸ ಮಾಡುತ್ತಿತ್ತು.

ಆದರೆ, ಆಧುನಿಕ ಪ್ರಪಂಚದ ವಿಸ್ತಾರ ಹೆಚ್ಚಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಗರಡಿಮನೆಗಳು ಮುಚ್ಚತೊಡಗಿವೆ. ಯಾಂತ್ರೀಕರಣದಿಂದ ಶ್ರಮದಾಯಕ ಕೆಲಸಗಳೂ ಕಡಿಮೆಯಾಗುತ್ತಿದೆ. ಅದರಿಂದಾಗಿ ಈಗ ಗ್ರಾಮೀಣ ಪ್ರದೇಶಗಳ ಯುವಸಮೂಹವು ಜಿಮ್ನಾಷಿಯಂಗಳತ್ತ ಮುಖ ಮಾಡುತ್ತಿದೆ. ಇದರಿಂದಾಗಿ ನಗರದ ಜಿಮ್‌ಗಳಿಗೆ ಗ್ರಾಮೀಣ ಕ್ರೀಡೆಗಳ ಸ್ಪರ್ಷ ಸಿಗುತ್ತಿದೆ. ಹಾಗೆಯೇ ಹಳ್ಳಿಮಕ್ಕಳಿಗೆ ಜಿಮ್‌ ಮಹತ್ವದ ಅರಿವಾಗುತ್ತಿದೆ.

ತುಮಕೂರಿಗೆ ಹೊಂದಿಕೊಂಡಂತಿರುವ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಯಲ್ಲಾಪುರ, ಹಿರೇಹಳ್ಳಿ, ಬೆಳಗುಂಬದಿಂದ ಮುಂಜಾನೆಯೇ ಎದ್ದು ಮೈಯನ್ನು ಹುರಿಗಟ್ಟಿಸಲು ಫಿಟ್‌ನೆಸ್‌ ಕೇಂದ್ರಗಳಿಗೆ ಎಡತಾಕುತ್ತಾರೆ ಕೆಲ ಯುವಕರು. ನಗರದಿಂದ ಏಳೆಂಟು ಕಿ.ಮೀ ದೂರದಿಂದ ಬೈಕ್‌ ಏರಿ ಬರುವ ಅವರು ದಿನದ ಎರಡು ಗಂಟೆ ದೇಹ ದಂಡಿಸಲಿಕ್ಕಾಗೆ ಮೀಸಲಿಟ್ಟಿದ್ದಾರೆ. ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಫಿಟ್‌ನೆಸ್‌ ಗಾಳಿ ಈಗ ಗ್ರಾಮೀಣ ಭಾಗಕ್ಕೂ ಬೀಸುತ್ತಿದೆ.

ರಾಜಧಾನಿಯ ಮಗ್ಗುಲಲ್ಲೇ ಇರುವ ಕಲ್ಪತರು ನಾಡು ಅದರ ಪ್ರಭಾವಕ್ಕೆ ಬಹುಬೇಗ ಒಳಗೊಳ್ಳುತ್ತದೆ. ಹೊಸದೇನೆ ಬಂದರೂ ಅಪ್ಪಿಕೊಳ್ಳುವ ತಹತಹಿಕೆ ಅದರದ್ದು. ಅಂತೆಯೇ ದೇಹವನ್ನು ಫಿಟ್‌ ಆಗಿಡಲು ತುಮಕೂರಿಗರೂ ಹಿಂದೆ ಬಿದ್ದಿಲ್ಲ.

ಬೆಂಗಳೂರಿನಲ್ಲಿರುವ ಜಿಮ್‌ಗಳಿಗೆ ಸರಿಗಟ್ಟುವಂತೆ ಇಲ್ಲಿಯೂ ಫಿಟ್‌ನೆಸ್‌ ಸೆಂಟರ್‌ಗಳು ಆರಂಭವಾಗಿವೆ. ಅಲ್ಲೆಲ್ಲ ಜನ ತುಂಬಿ ತುಳುಕುತ್ತಾರೆ.

ಮೂರ್ನಾಲ್ಕು ವರ್ಷಗಳ ಹಿಂದೆ ಹಾಕಿದ ಬಂಡವಾಳ ವಾಪಸ್‌ ಪಡೆಯಲೂ ಹೆಣಗಾಡಬೇಕಿದ್ದ ಜಿಮ್‌ಗಳು ಈಗ ಒಮ್ಮೆಲೆ ಅಣಬೆಗಳಂತೆ ಮೈಕೊಡವಿ ಎದ್ದಿವೆ. ಒಂದೊಂದು ಕೇಂದ್ರಗಳಲ್ಲೂ 300ರಿಂದ 700 ಸದಸ್ಯರಿದ್ದಾರೆ.

ನಗರದ ಹೃದಯ ಭಾಗದಲ್ಲಿರುವ ಫಿಟ್ನೊಹಾಲಿಕ್‌ ಸೆಂಟರ್‌ ಈಚೆಗಷ್ಟೇ ಮೊದಲನೇ ವಾರ್ಷಿಕೋತ್ಸವ ಆಚರಿಸಿಕೊಂಡಿತು. ಈ ಕೇಂದ್ರದಲ್ಲಿ ಈಗ 500ರಿಂದ 600 ಸದಸ್ಯರಿದ್ದಾರೆ. ಕೇಂದ್ರ ಆರಂಭವಾದ ಮೊದಲ ತಿಂಗಳಲ್ಲೇ 200 ಜನ ಸೇರಿದ್ದರು. ಸದ್ಯಕ್ಕೆ ಒಂಬತ್ತು ತರಬೇತುದಾರರು ಈ ಕೇಂದ್ರದಲ್ಲಿದ್ದು ಫಿಟ್‌ನೆಸ್‌ ಪ್ರಿಯರ ದೇಹ ಕರಗಿಸಲು ನೆರವಾಗಿದ್ದಾರೆ.

‘ಆಧುನಿಕ ತಂತ್ರಜ್ಞಾನದ ಸಲಕರಣೆಗಳು ನಮ್ಮಲ್ಲಿವೆ. ಹಾಗಾಗಿ ಬಹುಬೇಗ ಜನರು ಆಕರ್ಷಿತರಾದರು. ವರ್ಕ್‌ಔಟ್‌ ಮಾಡಲು ಪುರುಷರು, ಮಹಿಳೆಯರಿಗೆ ಪ್ರತ್ಯೇಕವಾಗಿ ಅವಕಾಶ ಕಲ್ಪಿಸಿರುವುದರಿಂದ ಯಾವುದೇ ಮುಜುಗರವಿಲ್ಲದೆ ನಮ್ಮ ಕೇಂದ್ರಕ್ಕೆ ಬರುತ್ತಾರೆ. ಕುಟುಂಬ ಸಮೇತ ಫಿಟ್‌ನೆಸ್‌ಗಾಗಿ ಬರುವವರೂ ಇದ್ದಾರೆ. ಫಿಟ್‌ನೆಸ್‌ ಭಾಗವಾದ ಯೋಗ, ಧ್ಯಾನ, ಏರೋಬಿಕ್‌, ನೃತ್ಯ ತರಬೇತಿಯನ್ನೂ ನೀಡುತ್ತೇವೆ. ಇದಕ್ಕೆಂದು ಹೆಚ್ಚುವರಿ ಶುಲ್ಕ ವಸೂಲಿ ಮಾಡುವುದಿಲ್ಲ’ ಎನ್ನುವ ಒಕ್ಕಣೆ ಫಿಟ್ನೊಹೊಲಿಕ್‌ ಕೇಂದ್ರದ ಒಡತಿ ಶರ್ಮಿಳಾ ಅಮರ್‌ ಚೌಹಾಣ್‌ ಅವರದ್ದು.

ಇನ್ನು ದೇಶದ ವಿವಿಧೆಡೆ ಶಾಖೆಗಳನ್ನು ಹೊಂದಿರುವ ಗೋಲ್ಡ್ಸ್‌ ಜಿಮ್‌ ಸಹ ತುಮಕೂರಿನಲ್ಲಿ ಖಾತೆ ತೆರೆದಿದೆ. ಜನವರಿ ತಿಂಗಳಲ್ಲಿ ಆರಂಭಗೊಂಡಿರುವ ಇದು ಈಗಾಗಲೇ 200ಕ್ಕೂ ಹೆಚ್ಚು ಜನರನ್ನು ತನ್ನತ್ತ ಸೆಳೆದಿದೆ.

‘ಫಿಟ್‌ ಆಗಿರಬೇಕೆಂಬುದು ಈಗ ಎಲ್ಲರ ಮಂತ್ರ. ತುಮಕೂರಿನಲ್ಲೂ ಈ ಟ್ರೆಂಡ್‌ ಹೆಚ್ಚುತ್ತಿದೆ. ನಗರದ ಜನರಲ್ಲದೇ ಹೊರಭಾಗಳಿಂದಲೂ ಇಲ್ಲಿಗೆ ದೇಹದ ಬೆವರಿಳಿಸಲು ಬರುತ್ತಾರೆ. ದೇಹದ ಒಂದೊಂದು ಭಾಗದ ಕೊಬ್ಬು ಇಳಿಸಲು ಒಂದೊಂದು ಬಗೆಯ ಸಲಕರಣೆಗಳಿವೆ. ಅವುಗಳ ಸದ್ಬಳಕೆ ಆಗಬೇಕಷ್ಟೆ’ ಎನ್ನುತ್ತಾರೆ ಗೋಲ್ಡ್ಸ್‌ ಜಿಮ್‌ ಮಾಲೀಕ ಚಂದ್ರಶೇಖರ್‌.

‘ಮನಸು ಉಲ್ಲಾಸಗೊಂಡರೆ ಮತ್ತೆ ಅದೇ ಚಟುವಟಿಕೆ ಕೈಗೊಳ್ಳಲು ಮುಂದಾಗುತ್ತೇವೆ. ಹಾಗಾಗಿ ಸದಸ್ಯರನ್ನು ಉಲ್ಲಾಸಗೊಳಿಸಲು ಹೊರಾಂಗಣದಲ್ಲೂ ಚಟುವಟಿಕೆಗಳನ್ನು ನಡೆಸುತ್ತೇವೆ. ಸಮಯ ಸಿಕ್ಕಾಗ ಕ್ರೀಡಾಂಗಣಕ್ಕೆ ಸದಸ್ಯರನ್ನು ಕರೆದುಕೊಂಡು ಹೋಗುತ್ತೇವೆ. ಅಲ್ಲಿ ಹಗ್ಗ ಜಗ್ಗಾಟ, ಕೊಕ್ಕೊ ಇತ್ಯಾದಿ ಗ್ರಾಮೀಣ ಕ್ರೀಡೆಗಳನ್ನು ಆಡಿಸುತ್ತೇವೆ. ಜತೆಗೆ ಚಾರಣವನ್ನೂ ಕೈಗೊಂಡಿದ್ದೇವೆ. ಸದಸ್ಯರೆಲ್ಲರೂ ಖುಷಿಯಿಂದ ಪಾಲ್ಗೊಳ್ಳುತ್ತಾರೆ. ಮ್ಯಾರಥಾನ್ ಸಹ ಆಯೋಜಿಸಿದ್ದೇವೆ’ ಎನ್ನುತ್ತಾರೆ ಶರ್ಮಿಳಾ.

ಬೆಳಗಿನ ವಾಯುವಿಹಾರ ಮನಸಿನ ಉಲ್ಲಾಸಕ್ಕೆ ಸಹಕಾರಿ. ದೇಹವನ್ನು ಫಿಟ್‌ ಆಗಿ ಇಡಲು ಈಗೇನಿದ್ದರೂ ಜಿಮ್‌ಗಳೇ ಆಗಬೇಕು ಎನ್ನುತ್ತಾರೆ ಯುವಕರು. ನಗರದಿಂದ 12 ಕಿ.ಮೀ ದೂರದಲ್ಲಿರುವ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ದೇಹದ ಬೆವರಿಳಿಸಲು ಜಿಮ್‌ಗಳ ಎಡತಾಕುತ್ತಾರೆ. ಫಿಟ್ನೊಹೊಲಿಕ್‌ ಕೇಂದ್ರವೊಂದರಲ್ಲೇ ಈ ಕೇಲೇಜಿನ 35ರಿಂದ 40 ವಿದ್ಯಾರ್ಥಿಗಳು ಸದಸ್ಯರಾಗಿದ್ದಾರೆ. ವಿದ್ಯಾರ್ಥಿಗಳು ಓದಿನ ಜತೆಗೆ ದೇಹ ದಂಡನೆಗೂ ಅಷ್ಟೇ ಪ್ರಾಶಸ್ತ್ಯ ನೀಡುತ್ತಿರುವುದಂತೂ ಸುಳ್ಳಲ್ಲ. 

***

ಈತ್ತೀಚೆಗೆ ಬಹುತೇಕರು ಮಧ್ಯ ವಯಸ್ಸಿನಲ್ಲೇ ಮಾರಣಾಂತಿಕ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಆದ್ದರಿಂದ ಆರೋಗ್ಯದ ಅರಿವು ನಿಧಾನಕ್ಕೆ ಬೆಳೆಯುತ್ತಿದೆ. ದೇಹ ಸದೃಢವಾಗಿದ್ದರೆ ಏನು ಬೇಕಾದರೂ ಮಾಡಬಹುದು ಎಂಬ ನಿಲುವನ್ನು ಯುವಕರು ತಳೆಯುತ್ತಿದ್ದಾರೆ. ಸಿಕ್ಕಿದ್ದನ್ನು ತಿಂದು ಮೈ ಬೆಳೆಸಿಕೊಳ್ಳುವ ಬದಲು ಈಗಿನಿಂದಲೇ ಡಯಟ್‌ ಮಾಡಿ ಭವಿಷ್ಯದ ಆರೋಗ್ಯವನ್ನು ಕಾಪಾಡಿಕೊಳ್ಳುವ ಹಾದಿಯಲ್ಲಿ ಯುವಜನತೆ ಇದೆ. ಇದಕ್ಕೆ ಫಿಟ್‌ನೆಸ್‌ ಕೇಂದ್ರಗಳು ನೀರೆರೆಯುತ್ತಿವೆ.

– ಶರ್ಮಿಳಾ ಅಮರ್‌ ಚೌಹಾಣ್‌, ಫಿಟ್ನೊಹಾಲಿಕ್‌ ಸೆಂಟರ್‌ನ ಒಡತಿ

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !