ತಂತ್ರ, ‘ಯಂತ್ರ’ ಮತ್ತು ಗೆಲುವಿನ ಮಂತ್ರ

7

ತಂತ್ರ, ‘ಯಂತ್ರ’ ಮತ್ತು ಗೆಲುವಿನ ಮಂತ್ರ

Published:
Updated:

ಈ ಬಾರಿ ವಿಶ್ವಕಪ್‌ ಫುಟ್‌ಬಾಲ್ ಟೂರ್ನಿಯ ಗುಂಪು ಹಂತದ ಎರಡು ಸುತ್ತುಗಳು ಪೂರ್ಣಗೊಂಡಾಗ ಅರ್ಜೆಂಟೀನಾ ಮತ್ತು ಆ ತಂಡದ ನಾಯಕ ಲಯೊನೆಲ್ ಮೆಸ್ಸಿ ಅಭಿಮಾನಿಗಳು ತೀರಾ ನಿರಾಸೆಗೆ ಒಳಗಾಗಿದ್ದರು. ತಂಡ ಪ್ರೀ ಕ್ವಾರ್ಟರ್ ಫೈನಲ್‌ಗೆ ಹೋಗುವುದರ ಬ‌ಗ್ಗೆ ಅನುಮಾನ ಎದ್ದದ್ದು ಮತ್ತು ಎರಡು ಪಂದ್ಯಗಳಲ್ಲಿ ಮೆಸ್ಸಿಗೆ ಗೋಲು ಗಳಿಸಲು ಸಾಧ್ಯವಾಗದೇ ಇದ್ದದ್ದು ಈ ಬೇಸರಕ್ಕೆ ಮುಖ್ಯ ಕಾರಣ. ಆದರೆ, ಅಂತಿಮ ಸುತ್ತಿನ ಪಂದ್ಯದಲ್ಲಿ ಚಿತ್ರಣ ಬದಲಾಯಿತು. ಮೆಸ್ಸಿ ಕಾಳ್ಚಳಕ ತೋರಿಸಿದರು; ಅರ್ಜೆಂಟೀನಾ 16ರ ಘಟ್ಟಕ್ಕೇ ಏರಿತು.

ಮೊದಲ ಪಂದ್ಯದಲ್ಲಿ ಪೆನಾಲ್ಟಿ ಅವಕಾಶ ವನ್ನು ಕೂಡ ಕೈಚೆಲ್ಲಿದ ವಿಶ್ವಮಾನ್ಯ ಆಟಗಾರ ಮೆಸ್ಸಿ ಅವರು ನೈಜೀರಿಯಾ ಎದುರಿನ ಕೊನೆಯ ಪಂದ್ಯದ 14ನೇ ನಿಮಿಷದಲ್ಲಿ ಅದ್ಭುತ ‘ಲೆಕ್ಕಾಚಾರ’ದೊಂದಿಗೆ ಗೋಲು ಗಳಿಸಿದ್ದಾದರೂ ಹೇಗೆ ಎಂಬ ಸಂದೇಹ ಅನೇಕರನ್ನು ಕಾಡಿತ್ತು. ಪಂದ್ಯದ ನಂತರ ಪತ್ರಕರ್ತರಿಂದಲೂ ಈ ಪ್ರಶ್ನೆ ಬಂತು. ಈ ಸಂದರ್ಭದಲ್ಲಿ ಒಬ್ಬ ಪತ್ರಕರ್ತ ‘ತಾಯಿತ’ದ ಮಾತೆತ್ತಿದ. ಮೆಸ್ಸಿ, ಶೂ ಒಳಗೆ ಸಿಕ್ಕಿಸಿದ್ದ ತಾಯಿತವನ್ನು ತೋರಿಸಿದರು.

ನಿರ್ಣಾಯಕ ಪಂದ್ಯದಲ್ಲಿ ಗೋಲು ಗಳಿಸಲು ಮೆಸ್ಸಿಗೆ ಆ ತಾಯಿತ ಬಲ ತುಂಬಿತೇ...? ಈ ಪ್ರಶ್ನೆಗೆ ಉತ್ತರ, ಅವರವರ ಭಾವಕ್ಕೆ ಬಿಟ್ಟದ್ದು. ಆದರೆ ಆಟದ ಅಂಗಣದಲ್ಲಿ ಕೂಡ ನಂಬಿಕೆಗೆ ಮೊರೆ ಹೋಗುವವರು ಇದ್ದಾರೆ ಎಂಬುದನ್ನು ಇದು ಸಾಬೀತು ಮಾಡುತ್ತದೆ. ಕುಸ್ತಿ, ಕಬಡ್ಡಿ ಮುಂತಾದ ಮಣ್ಣಿನ ಮಕ್ಕಳ ಆಟದಿಂದ ಹಿಡಿದು ಕ್ರಿಕೆಟ್‌ ಎಂಬ ಶ್ರೀಮಂತ ಆಟದ ವರೆಗೂ ನಂಬಿಕೆಯ ಬೆನ್ನು ಬೀಳುವ ಆಟಗಾರರನ್ನು ಕಾಣಬಹುದಾಗಿದೆ. ಕ್ರಿಕೆಟಿಗರು ಅಂಗಣಕ್ಕೆ ಇಳಿಯುವಾಗ ಆಕಾಶದತ್ತ ದಿಟ್ಟಿಸುವುದು, ವಿಕೆಟ್ ಗಳಿಸಿದಾಗ ಅಥವಾ ಶತಕ ಸಿಡಿಸಿದಾಗ ದೇವರಿಗೆ ಕೈ ಮುಗಿಯುವುದು, ಪಿಚ್‌ಗೆ ನಮಸ್ಕರಿಸುವುದು, ಎದೆ ಮೇಲೆ ‘ಕ್ರಾಸ್‌’ ಎಳೆಯುವುದು ಇತ್ಯಾದಿ ಹಾವ–ಭಾವ ಕ್ರಿಕೆಟ್ ವೀಕ್ಷಿಸುವವರಿಗೆ ಅಪರೂಪವೇನಲ್ಲ. ಫುಟ್‌ಬಾಲ್ ಅಂಗಣದಲ್ಲಿಯೂ ಇಂಥ ಬಾಹ್ಯ ಚರ್ಯೆಗಳ ಜೊತೆಗೆ ಸಾಧನೆಗೆ ವಿಶ್ವಾಸದ ಬಲ ಪಡೆಯಲು ಶ್ರಮಿಸುವವರು ಅನೇಕರಿದ್ದಾರೆ. ತೊಟ್ಟುಕೊಳ್ಳುವ ಬಟ್ಟೆಯಿಂದ ಹಿಡಿದು ಮೂತ್ರ ವಿಸ ರ್ಜನೆಗೆ ಬಳಸುವ ‘ಯೂರಿನಲ್‌’ಗಳು, ಉಪಯೋಗಿಸುವ ಸುಗಂಧ ದ್ರವ್ಯಗಳು... ನಂಬಿಕೆಯ ಪಟ್ಟಿ ಬೆಳೆಯುತ್ತಲೇ ಸಾಗುತ್ತದೆ.

ಯಾರಿಗೆ ಯಾವುದರ ಮೇಲೆ ನಂಬಿಕೆ?
12 ವರ್ಷಗಳಲ್ಲಿ 68 ಅಂತರರಾಷ್ಟ್ರೀಯ ಪಂದ್ಯಗಳು ಸೇರಿದಂತೆ ಒಟ್ಟು 380 ಪಂದ್ಯಗಳಲ್ಲಿ ಕಣಕ್ಕೆ ಇಳಿದಿದ್ದ ಕೊಲಂಬಿಯಾದ ಹಿರಿಯ ಗೋಲ್‌ಕೀಪರ್‌ ರೇನೆ ಹ್ಯೂಗಿಟಾ ಅವರು ಪಂದ್ಯದ ಸಂದರ್ಭದಲ್ಲಿ ನೀಲಿ ಬಣ್ಣದ ಒಳ ಉಡುಪು ಮಾತ್ರ ಧರಿಸುತ್ತಿದ್ದರು.

ಒಂದು ದಶಕದಿಂದ ಜರ್ಮನಿ ತಂಡದ ಆಕ್ರಮಣದ ಚುಕ್ಕಾಣಿ ಹಿಡಿದಿರುವ, 78 ಪಂದ್ಯಗಳಲ್ಲಿ 31 ಗೋಲುಗಳನ್ನು ದಾಖಲಿಸಿರುವ ಮಾರಿಯೊ ಗೋಮೆಜ್‌ ಮಹತ್ವದ ಪಂದ್ಯಗಳನ್ನು ಆಡಲು ಇಳಿಯುವುದಕ್ಕೂ ಮುನ್ನ ಎಡಬದಿಯ ಯೂರಿನಲ್‌ ಮಾತ್ರ ಮೂತ್ರ ವಿಸರ್ಜನೆಗೆ ಬಳಸುತ್ತಾರಂತೆ.

ಗೋಮೆಜ್ ಅವರ ಗೆಳೆಯ, 2012ರಿಂದ ಜರ್ಮನಿ ತಂಡದ ಮಿಡ್‌ಫೀಲ್ಡ್ ವಿಭಾಗದ ಶಕ್ತಿ ಎನಿಸಿರುವ ಜೂಲಿಯನ್ ಡ್ರಾಕ್ಸಲರ್‌, ಪಂದ್ಯಗಳಲ್ಲಿ ಕಣಕ್ಕೆ ಇಳಿಯುವ ಮೊದಲು ಒಂದು ಬಗೆಯ ಸುಗಂಧ ದ್ರವ್ಯವನ್ನು ಜೆರ್ಸಿ ಮೇಲೆ ಸಿಂಪಡಿಸುವ ‘ಹವ್ಯಾಸ’ ಬೆಳೆಸಿಕೊಂಡಿದ್ದಾರೆ. ಅವರ ಬ್ಯಾಗ್‌ನಲ್ಲಿ ಸುಗಂಧ ದ್ರವ್ಯಗಳ ಎರಡು ಅಥವಾ ಮೂರು ಬಾಟಲ್ ಸದಾ ಇದ್ದೇ ಇರುತ್ತದೆಯಂತೆ.

‘ನಿನಗೇನು ತಲೆ ಕೆಟ್ಟಿದೆಯಾ ಎಂದು ಸಹ ಆಟಗಾರರು ಕೇಳಿದ್ದಿದೆ. ಆದರೆ ನನಗ್ಯಾಗೋ ಈ ಸುಗಂಧ ದ್ರವ್ಯ ಹಾಕದೇ ಇದ್ದರೆ ಅಂಗಣದಲ್ಲಿ ನೆಮ್ಮದಿಯೇ ಇರುವುದಿಲ್ಲ’ ಎನ್ನುತ್ತಾರೆ ಡ್ರಾಕ್ಸಲರ್‌.

ಬಾಲ್ಯದ ಬಳುವಳಿ
ಇಂಗ್ಲೆಂಡ್ ತಂಡದ ಮಿಡ್‌ಫೀಲ್ಡರ್‌ ಡೆಲೆ ಅಲಿ ಅವರಿಗೆ 22 ವರ್ಷ. ಮೂರು ವರ್ಷಗಳಿಂದ ರಾಷ್ಟ್ರೀಯ ತಂಡದಲ್ಲಿ ಆಡುತ್ತಿರುವ ಅವರು ಈ ವರೆಗೆ 26 ಪಂದ್ಯಗಳಲ್ಲಿ ದೇಶವನ್ನು ಪ್ರತಿನಿಧಿಸಿದ್ದಾರೆ. ಆದರೆ 11ರ ಹರೆಯದಲ್ಲಿ ಬಳಸಿದ ಶಿನ್ ಗಾರ್ಡ್‌ (ಮುಂಗಾಲಿಗೆ ಗಾಯ ಆಗದಿರಲು ಬಳಸುವ ಸಾಧನ)ಗಳನ್ನೇ ಉಪಯೋಗಿಸುತ್ತಿದ್ದಾರೆ.

‘ಹಿಂದೆ ಬಳಸುತ್ತಿದ್ದ ಶಿನ್‌ಗಾರ್ಡ್‌ಗಳನ್ನೇ ಈಗಲೂ ಇಟ್ಟು ಕೊಂಡಿದ್ದೇನೆ. ಅವು ಸ್ವಲ್ಪ ಹಳತಾಗಿವೆ. ಆದರೆ ಬದಲಿಸಲು ನನ್ನ ಮನಸ್ಸು ಒಪ್ಪುತ್ತಿಲ್ಲ’ ಎನ್ನುತ್ತಾರೆ ಅವರು.

ಇಂಗ್ಲೆಂಡ್‌ನ ಫಿಲ್‌ ಜಾನ್ಸ್‌ ಅಂಗಣಕ್ಕೆ ಇಳಿಯುವಾಗ ಬಿಳಿ ಬಣ್ಣದ ಗೆರೆಯನ್ನು ತುಳಿಯಲು ಇಷ್ಟಪಡುವುದಿಲ್ಲ. ತುಳಿದರೆ, ಅಂದು ಅದೃಷ್ಟ ಕೆಟ್ಟಂತೆ ಎಂಬುದು ಅವರ ಅಂಬೋಣ. ಬ್ರೆಜಿಲ್‌ನ ಡಿಫೆಂಡರ್ ಮಾರ್ಸೆಲೊ ಅಂಗಣಕ್ಕೆ ಕಾಲಿಡುವಾಗ ಮೊದಲು ಬಲಗಾಲನ್ನೇ ಊರುತ್ತಾರೆ.

ಈ ಬಾರಿಯ ವಿಶ್ವಕಪ್‌ನಲ್ಲಿ ಸ್ವಿಟ್ಜರ್ಲೆಂಡ್ ಎದುರಿನ ಪಂದ್ಯಕ್ಕಾಗಿ ಅಂಗಣಕ್ಕೆ ಪ್ರವೇಶಿಸುವಾಗ ಅವರು ನೆನಪಿಲ್ಲದೇ ಎಡಗಾಲನ್ನು ಊರಿದ್ದರು. ಹೀಗಾಗಿ ವಾಪಸ್ ಹೋಗಿ ಬಲಗಾಲು ಊರಿ ಬಂದಿದ್ದರು.

‘ಪ್ರತಿಯೊಬ್ಬರೂ ಬಲಗಾಲು ಇರಿಸಿ ಪ್ರವೇಶಿಸುವುದಕ್ಕೇ ಆದ್ಯತೆ ನೀಡುತ್ತಾರೆ. ನಾನು ಕೂಡ ಅವರಲ್ಲಿ ಒಬ್ಬ. ಅದರಲ್ಲಿ ವಿಶೇಷವೇನಿದೆ’ ಎಂದು ಅವರು ಪತ್ರಕರ್ತರನ್ನೇ ಪ್ರಶ್ನಿಸಿದ್ದರು ಎಂದು ಎಎಫ್‌ಪಿ ಸುದ್ದಿಜಾಲ ವರದಿ ಮಾಡಿತ್ತು.

ನಾವೇನೂ ಕಮ್ಮಿ ಇಲ್ಲ
ನಂಬಿಕೆ, ಅದೃಷ್ಟ ಪರೀಕ್ಷೆಯಲ್ಲಿ ನಾವೇನೂ ಕಮ್ಮಿ ಇಲ್ಲ ಎನ್ನುವಂತಿದೆ ಫುಟ್‌ಬಾಲ್‌ ಕೋಚ್‌ಗಳ ನಡವಳಿಕೆ. ಮೊರೊಕ್ಕೊ ತಂಡದ ಕೋಚ್‌ ಹರ್ವ್‌ ರೆನಾಲ್ಡ್‌ ‘ಸೈಡ್‌ಲೈನ್‌’ನಲ್ಲಿ ನಿಂತಿರುವಾಗ ಬಿಳಿ ಬಟ್ಟೆ ಮಾತ್ರ ತೊಡುವುದಕ್ಕೆ ಇಷ್ಟಪಡುತ್ತಾರೆ. 2012ರ ಆಫ್ರಿಕಾ ಕಪ್‌ ಟೂರ್ನಿಯಲ್ಲಿ ಈ ‘ಪ್ರಯೋಗ’ ಅವರ ಕೈ ಹಿಡಿದಿತ್ತು. ಆದರೆ ಈ ಬಾರಿ ವಿಶ್ವಕಪ್‌ನಲ್ಲಿ ಇದು ಫಲಿಸಲಿಲ್ಲ. ಅವರು ಬಿಳಿ ಬಟ್ಟೆ ತೊಟ್ಟಿದ್ದರೂ ತಂಡ ಮೂರು ಪಂದ್ಯಗಳಲ್ಲಿ ಒಂದು ಪಾಯಿಂಟ್‌ ಮಾತ್ರ ಗಳಿಸಿ ಸಪ್ಪೆ ಮೋರೆ ಹಾಕಿ ಗುಂಪು ಹಂತದಲ್ಲೇ ವಾಪಸಾಗಿತ್ತು.

ಗೋಲ್‌ಕೀಪರ್‌ ಬೋಳು ತಲೆ ಮತ್ತು ಅದೃಷ್ಟ
1998ರಲ್ಲಿ ವಿಶ್ವಕಪ್ ಗೆದ್ದ ಫ್ರಾನ್ಸ್ ತಂಡ, ಗೋಲ್‌ಕೀಪರ್‌ ಫ್ಯಾಬಿಯೆನ್ ಬಾರ್ಥೆಸ್‌ ಅವರ ಬೋಳು ತಲೆಯೇ ಯಶಸ್ಸಿಗೆ ಕಾರಣ ಎಂದು ನಂಬಿತ್ತು. ಫೈನಲ್‌ನಲ್ಲಿ ಗೆದ್ದ ನಂತರ ತಂಡದ ಆಟಗಾರರೆಲ್ಲರೂ ಕೀಪರ್‌ನ ತಲೆಯನ್ನು ಸವರಿ ಸಂಭ್ರಮಿಸಿದ್ದರು. ಪ್ರತಿ ಪಂದ್ಯ ಮುಗಿದಾಗಲೂ ಲಾರೆಂಟ್ ಬ್ಲಾಂಕ್‌, ಗೋಲ್‌ಕೀಪರ್‌ನ ತಲೆಗೆ ಮುತ್ತು ನೀಡುತ್ತಿದ್ದರು.

ಪ್ರಾಣಿಗಳೂ ಭವಿಷ್ಯ ನುಡಿಯುತ್ತವೆ
ವಿಶ್ವಕಪ್ ಫುಟ್‌ಬಾಲ್‌ನಲ್ಲಿ ಪ್ರಾಣಿಗಳು ಭವಿಷ್ಯ ನುಡಿಯುತ್ತವೆ ಎಂದೂ ನಂಬಲಾಗುತ್ತಿದೆ. ಕಳೆದ ಬಾರಿಯ ವಿಶ್ವಕಪ್‌ನಲ್ಲಿ ಅಕ್ಟೋಪಸ್‌ ಭವಿಷ್ಯ ನುಡಿಯತ್ತದೆ ಎಂಬುದು ದೊಡ್ಡ ಸುದ್ದಿಯಾಗಿತ್ತು. ಈ ಬಾರಿ ಗೆಲ್ಲುವ ತಂಡ ಯಾವುದು ಎಂಬುದರ ಭವಿಷ್ಯವನ್ನು ಅಚಿಲ್ಸ್‌ ಎಂಬ ಹೆಸರಿನ ಬೆಕ್ಕು ಹೇಳುತ್ತಿದೆ ಎನ್ನಲಾಗುತ್ತಿದೆ.

*
ಎಷ್ಟೋ ವೇಳೆ ಪರಿಸ್ಥಿತಿ ಕೈಮೀರಿ ಹೋಗುವ ಸಾಧ್ಯತೆ ಇರುತ್ತದೆ. ಇಂಥ ಸಂದರ್ಭದಲ್ಲಿ ನಂಬಿಕೆ ಕೈ ಹಿಡಿಯುತ್ತದೆ ಎಂಬುದು ಅನೇಕರ ಅನಿಸಿಕೆ. ನಂಬಿಕೆಗಳು ಆಟಗಾರನ ಸಾಮರ್ಥ್ಯದ ಮೇಲೆ ಪರಿಣಾಮ ಬೀರುವುದಿಲ್ಲ ಎಂಬುದು ವಾಸ್ತವ. ನಂಬಿಕೆಯ ಬಲದಲ್ಲಿ ಆಡಿಯೂ ಅಸಾಮಾನ್ಯವಾದದ್ದನ್ನು ಮಾಡಿ ತೋರಿಸಲು ಆಗದೇ ಇದ್ದುದೇ ಇದಕ್ಕೆ ಸಾಕ್ಷಿ.
-ಡ್ಯಾನ್ ಅಬ್ರಹಾಂ, ಮನೋವಿಜ್ಞಾನಿ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !