ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಳ್ಳು ಬಿಜೆಪಿಗೆ ಸಿದ್ಧಿಸಿದ ಕಲೆ

ಹಲಗೇರಿಯಲ್ಲಿ ನಡೆದ ಪಕ್ಷದ ಪ್ರಚಾರ ಸಭೆಯಲ್ಲಿ ಆರ್‌.ವಿ.ದೇಶಪಾಂಡೆ ಟೀಕೆ
Last Updated 28 ಏಪ್ರಿಲ್ 2018, 11:22 IST
ಅಕ್ಷರ ಗಾತ್ರ

ಸಿದ್ದಾಪುರ : ‘ಬಿಜೆಪಿ ರೈತರ, ಬಡವರ, ಕೂಲಿಕಾರರ ಪರವಾಗಿರುವ ಪಕ್ಷ ಅಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಟೀಕಿಸಿದರು.

ತಾಲ್ಲೂಕಿನ ಹಲಗೇರಿಯಲ್ಲಿ ಶುಕ್ರವಾರ ನಡೆದ ಪಕ್ಷದ ಪ್ರಚಾರ ಸಭೆಯಲ್ಲಿ ಮಾತನಾಡಿದರು.‘ಬಿಜೆಪಿ ಮುಖಂಡರು ಉತ್ತಮವಾಗಿ ಮಾತನಾಡುತ್ತಾರೆ. ಅವರಿಗೆ ಆ ಬಗ್ಗೆ ತರಬೇತಿ ನೀಡುತ್ತಾರೆ. ಆದರೆ ಅವರು ಹೇಳುವ ಹತ್ತು ಮಾತಿನಲ್ಲಿ ಒಂಬತ್ತು ಸುಳ್ಳಾಗಿರುತ್ತವೆ. ರಸ್ತೆ, ಸೇತುವೆ, ಶಾಲೆ ಎಲ್ಲವನ್ನು ತಾವೇ ಮಾಡಿದ್ದು ಎಂದು ಬಿಜೆಪಿ ನಾಯಕರು ಹೇಳುತ್ತಾರೆ. ಹತ್ತು ಬಾರಿ ಸುಳ್ಳು ಹೇಳಿದರೆ ಅದನ್ನು ಸತ್ಯ ಮಾಡಬಹುದು ಎಂಬುದು ಬಿಜೆಪಿಯವರ ಕಲ್ಪನೆ’ ಎಂದು ಹೇಳಿದರು.

‘ದೇಶದಲ್ಲಿ ಪ್ರಗತಿ ಶಾಂತಿ, ಪ್ರೀತಿ, ವಿಶ್ವಾಸದಿಂದ ಅಭಿವೃದ್ಧಿ ಆಗುತ್ತದೆ. ಚಾಕು, ಚೂರಿ, ಕಲ್ಲು ತೂರಾಟದಿಂದ ಅಲ್ಲ. ಶಿರಸಿ ಶಾಂತಿ ಸೌಹಾರ್ದದಿಂದ ಇದ್ದ ಸ್ಥಳ. ಕೆಲವು ತಿಂಗಳುಗಳ ಹಿಂದೆ ಕುಮಟಾ, ಶಿರಸಿ, ಹೊನ್ನಾವರದಲ್ಲಿ ಗಲಾಟೆ ಆಯಿತು. ಇವರಿಗೆ ಬೆಂಬಲ ನೀಡಿ, ಕಲ್ಲು ತೂರಾಟ ಮಾಡಿ, ಸೆರೆಮನೆಗೆ ಹೋದವರಿಗೆ ಜಾಮೀನು ಕೊಡಿಸಲು ಇವರು ಹೋಗಲಿಲ್ಲ’ ಎಂದರು.

‘ಬಿಜೆಪಿಯವರು ಜಿಲ್ಲೆಯ 6 ಕ್ಷೇತ್ರಗಳಲ್ಲಿ 4 ಕ್ಷೇತ್ರಗಳ ಅಭ್ಯರ್ಥಿಗಳನ್ನು ಬೇರೆ ಪಕ್ಷದಿಂದ ಆಮದು ಮಾಡಿಕೊಂಡಿದ್ದಾರೆ. ಅಂದರೆ ಬಿಜೆಪಿಯಲ್ಲಿ ನಾಯಕರಿಲ್ಲವೇ ? ಮುಖಂಡರಿಲ್ಲವೇ ? ವಾಸ್ತವವಾಗಿ ಇದನ್ನು ನಾವು ಕೇಳಬಾರದು. ಆದರೆ ನಮ್ಮದು ಹಿಂದುತ್ವ, ನಮ್ಮ ಪಕ್ಷದಲ್ಲಿ ನಾಯಕತ್ವದ ಕೊರತೆ ಇಲ್ಲ ಎನ್ನುವ ಬಿಜೆಪಿಯವರು ಈ ರೀತಿ ಬೇರೆ ಪಕ್ಷದವರನ್ನು ಯಾಕೆ ಕರೆ ತಂದರು’ ಎಂದು ಪ್ರಶ್ನೆ ಮಾಡಿದರು.

‘ಡಾ.ಅಂಬೇಡ್ಕರ್ ನಾಯಕತ್ವದಲ್ಲಿ ರೂಪಿಸಿದ ರಾಷ್ಟ್ರವೇ ಹೆಮ್ಮೆ ಪಡುವ ಸಂವಿಧಾನ ನಮ್ಮದು. ನಮಗೆ ಪವಿತ್ರವಾದ ಸಂವಿಧಾನ ಅದು. ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಸಚಿವರಾದ ಹೊಸ ಹುರುಪಿನಲ್ಲಿ ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಬಿಟ್ಟರು. ಅದು ದೇಶದಲ್ಲಿಯೇ ಚರ್ಚೆ ಆಯಿತು. ನಂತರ ಅವರು ಸಂಸತ್ತಿನಲ್ಲಿ ಕ್ಷಮೆ ಕೋರುವ ಸಂದರ್ಭ ಬಂತು’ ಎಂದರು.

‘ಕಳೆದ 5 ವರ್ಷಗಳಲ್ಲಿ ಹಿಂದೆಂದೂ ಆಗದಂತಹ ಅಭಿವೃದ್ಧಿ ರಾಜ್ಯದಲ್ಲಿ ಆಗಿದೆ. ಇಂದಿನ ಬಿಜೆಪಿ ಅಭ್ಯರ್ಥಿ ಹಿಂದೆ ಶಿಕ್ಷಣ ಸಚಿವರಾಗಿದ್ದರು. ಆಗ ಜಿಲ್ಲೆಯಲ್ಲಿ 180 ಶಿಕ್ಷಕರ ಕೊರತೆ ಇತ್ತು. ಅದನ್ನು ತುಂಬಲು ಅವರಿಗೆ ಏಕೆ ಆಗಲಿಲ್ಲ ? ಈಗ ನಾವು ಶಿಕ್ಷಕರ ಹುದ್ದೆ ತುಂಬಿದ್ದೇವೆ. ಅತಿಥಿ ಶಿಕ್ಷಕರನ್ನು ನೀಡಿದ್ದೇವೆ’ ಎಂದರು.

ಸೇರ್ಪಡೆ : ಕೆಲವು ವರ್ಷಗಳ ಹಿಂದೆ ಬಿಜೆಪಿ ಸೇರಿದ್ದ ಡಿಸಿಸಿ ಮಾಜಿ ಅಧ್ಯಕ್ಷ ಕೆ.ಜಿ.ನಾಯ್ಕ ಹಸ್ವಂತೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಪ್ರಮುಖರಾದ ಗೋಪಾಲ ನಾಯ್ಕ, ಗಣೇಶ ನಾಯ್ಕ, ವಿ.ಎಸ್.ಆರಾಧ್ಯ, ಎಸ್.ಬಿ.ಗೌಡ, ಆರ್.ಎಂ.ಹೆಗಡೆ, ಸುಬ್ರಾಯ ಭಟ್ಟ, ವಿ.ಎನ್‌.ನಾಯ್ಕ, ವಸಂತ ನಾಯ್ಕ, ಸುಮಂಗಲಾ ನಾಯ್ಕ, ಎನ್‌.ಡಿ.ನಾಯ್ಕ, ಜಟ್ಟಪ್ಪ ಮೊಗೇರ ಇದ್ದರು. ಕೆ.ಜಿ.ನಾಗರಾಜ ಸ್ವಾಗತಿಸಿದರು.

ಮತದಾನ ಜಾಗೃತಿ ರ್‍ಯಾಲಿ ಇಂದು

ಶಿರಸಿ: ಮತದಾನದ ಮಹತ್ವ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಏ.28ರ ಬೆಳಿಗ್ಗೆ 8 ಗಂಟೆಯಿಂದ ಸಾಮ್ರಾಟ್ ಹೋಟೆಲ್‌ ಎದುರಿನಿಂದ ಆವೆಮರಿಯಾ ಶಾಲೆಯ ತನಕ ಸ್ಕೇಟಿಂಗ್ ರ್‍ಯಾಲಿ ನಡೆಯಲಿದೆ. ಪಯಣ ಸಂಸ್ಥೆಯು ಅದ್ವೈತ ಸ್ಕೇಟಿಂಗ್ ಜೊತೆಗೂಡಿ ಆಯೋಜಿಸಿರುವ ಬೇಸಿಗೆ ಶಿಬಿರದಲ್ಲಿ ತರಬೇತಿ ಪಡೆದಿರುವ ರ್‍ಯಾಲಿಯಲ್ಲಿ ಭಾಗವಹಿಸುವರು. ಆವೆಮರಿಯಾ ಶಾಲೆಯ ಆವರಣದಲ್ಲಿ ವಿಶೇಷ ಸ್ಕೇಟಿಂಗ್ ನೃತ್ಯ, ನಂತರ ಸಮಾರೋಪ ಕಾರ್ಯಕ್ರಮ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT