ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾರದರ್ಶಕ, ನಿಷ್ಪಕ್ಷಪಾತ ಚುನಾವಣೆಗೆ ಸಜ್ಜು

ಮೊದಲ ಬಾರಿಗೆ ವಿವಿಪ್ಯಾಟ್‌ ಯಂತ್ರ ಬಳಕೆ; ಗದಗ ಜಿಲ್ಲಾಧಿಕಾರಿ ಮನೋಜ್‌ ಜೈನ್‌
Last Updated 2 ಏಪ್ರಿಲ್ 2018, 10:18 IST
ಅಕ್ಷರ ಗಾತ್ರ

ಗದಗ: ‘ಕೇಂದ್ರ ಚುನಾವಣಾ ಆಯೋಗವು ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ ಘೋಷಿಸಿದ 48 ಗಂಟೆಗಳಲ್ಲಿ ಮಾದರಿ ನೀತಿ ಸಹಿಂತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ. ಜಿಲ್ಲೆಯಲ್ಲಿ ಪಾರದರ್ಶಕ, ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸಲು ಜಿಲ್ಲಾಡಳಿತ ಸಜ್ಜುಗೊಂಡಿದೆ’ ಎಂದು ಜಿಲ್ಲಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿ ಮನೋಜ್ ಜೈನ್ ಹೇಳಿದರು.ನಗರದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಬಾರಿ ಚುನಾವಣೆಯಲ್ಲಿ ಮತದಾನ ಖಾತರಿಪಡಿಸಲು ವಿವಿಪ್ಯಾಟ್ ಯಂತ್ರವನ್ನು ಮೊದಲ ಬಾರಿಗೆ ಬಳಸಲಾಗುತ್ತಿದೆ. ವಿವಿಪ್ಯಾಟ್‌ ಬಳಕೆ ಹಾಗೂ ಮತದಾರರ ಜಾಗೃತಿ ಕುರಿತು ಮತಗಟ್ಟೆಗಳಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮತಖಾತರಿ ಯಂತ್ರದ ಕುರಿತು ತರಬೇತಿ ಪಡೆದ 87 ಸೆಕ್ಟರ್ ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ. ಗ್ರಾಮೀಣ ಭಾಗದಲ್ಲಿ 30, ನಗರ ಪ್ರದೇಶಗಳಲ್ಲಿ 20 ತಂಡಗಳು ಮಾ.2ರಿಂದ 12 ದಿನಗಳ ಕಾಲ ಜಿಲ್ಲೆಯ ಎಲ್ಲ ಮತಗಟ್ಟೆಗಳಲ್ಲಿ ಜಾಗೃತಿ ಮೂಡಿಸಲಿವೆ’ ಎಂದರು.

‘ಈಗಾಗಲೇ ಜಿಲ್ಲೆಯಲ್ಲಿ ಶೇ 100ರಷ್ಟು ಮತದಾನದ ಗರುತಿನ ಚೀಟಿಯನ್ನು ವಿತರಿಸಲಾಗಿದೆ. ಯಾರೂ ಮತದಾನದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಮತದಾನ ಆರಂಭವಾಗುವುದಕ್ಕಿಂತ 48 ಗಂಟೆಗೂ ಮುಂಚೆ ಮತದಾರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಅವಕಾಶ ನೀಡಲಾಗಿದೆ. ಅರ್ಹರು ಆಯಾ ತಹಶೀಲ್ದಾರರಲ್ಲಿ ಅಗತ್ಯದ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಬೇಕು. ಜಿಲ್ಲೆಯಲ್ಲಿ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಭವನದ ಕೊಠಡಿ ಸಂಖ್ಯೆ 8ರಲ್ಲಿ ಜಿಲ್ಲಾ ಮಟ್ಟದ ದೂರು ಸ್ವೀಕೃತಿ ಕೇಂದ್ರ ಆರಂಭಿಸಲಾಗಿದೆ. ದೂ.08372 –239177, ಇ–ಮೇಲ್‌, ವಾಟ್ಸ್‌ ಆ್ಯಪ್ (9481548329), ಫೇಸ್‌ಬುಕ್, ಟ್ವಿಟ್ವರ್ ಹಾಗೂ ಲಿಖಿತವಾಗಿ ದೂರು ಸಲ್ಲಿಸಬಹುದು. ಮತದಾರರು ಮೊ.97319 79899 KAEPIC<space> ಗುರುತಿನ ಚೀಟಿ ಸಂಖ್ಯೆಯನ್ನು ಎಸ್.ಎಂ.ಎಸ್. ಮೂಲಕ ಕಳಿಸಿ ತಮ್ಮ ವಿಧಾನಸಭಾ ಮತಗಟ್ಟೆಯ ಮಾಹಿತಿ ಪಡೆಯಬಹುದು’ ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಹಾಗೂ ಇತರ ಗಣ್ಯರು ಗದಗ ಜಿಲ್ಲಾ ಮಾಹಿತಿ ಕರಪತ್ರ, ರಾಜ್ಯ ಸ್ವೀಪ್ ಮತದಾರ ಜಾಗೃತಿಯ ಭಿತ್ತಿಪತ್ರಗಳನ್ನು ಬಿಡುಗಡೆ ಮಾಡಿದರು.

ಜಿಲ್ಲಾ ಪಂಚಾಯ್ತಿ ಸಿಇಒ, ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಮಾದರಿ ನೀತಿ ಸಂಹಿತೆ ಅನುಷ್ಠಾನ ಜಿಲ್ಲಾ ಸಮಿತಿಯ ನೋಡಲ್ ಅಧಿಕಾರಿ ಮಂಜುನಾಥ ಚವ್ಹಾಣ, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕ ಹಾಗೂ ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಟಿ.ದಿನೇಶ ಇದ್ದರು.

ನೀತಿ ಸಂಹಿತೆ: ಕಟ್ಟುನಿಟ್ಟಿನ ಕ್ರಮ

ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ 1,364 ಹಾಗೂ ನಗರ ಪ್ರದೇಶದಲ್ಲಿ 1,080 ಬ್ಯಾನರ್ಸ್‌, ಗ್ರಾಮೀಣ ಭಾಗದಲ್ಲಿ 865, ನಗರ ಪ್ರದೇಶದಲ್ಲಿ 886 ಗೋಡೆ ಬರಹಗಳನ್ನು ತೆರವುಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮನೋಜ್ ಜೈನ್ ತಿಳಿಸಿದರು.‘ಈವರೆಗೆ 31 ಲೀಟರ್‌ ಅಕ್ರಮ ಮದ್ಯ ವಶಪಡಿಸಿಕೊಳ್ಳಲಾಗಿದೆ. ಅಕ್ರಮ ಮದ್ಯ ಮಾರಾಟ, ಹಣ ವಿತರಣೆ ಸೇರಿದಂತೆ ವಿವಿಧ ಅಕ್ರಮ ತಡೆಯಲು ಅಬಕಾರಿ, ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ.ದೊಡ್ಡ ಪ್ರಮಾಣದ ಹಣ ಹರಿಯುವಿಕೆ, ಚಲಾವಣೆ ಕುರಿತು ನಿಗಾ ವಹಿಸಲು ಬ್ಯಾಂಕ್ ಅಧಿಕಾರಿಗಳಿಗೆ, ಸಹಕಾರಿ ಸಂಸ್ಥೆ, ಪೆಟ್ರೋಲ್ ಬಂಕ್‌ಗಳ ಮಾಲೀಕರಿಗೆ ಸೂಚನೆ ನೀಡಲಾಗಿದೆ. ಈ ಕುರಿತು ನೋಡಲ್ ಅಧಿಕಾರಿಗಳ ವಿಶೇಷ ತಂಡ ನಿಗಾ ವಹಿಸಲಿದೆ. ಜಿಲ್ಲೆಯಲ್ಲಿ ಶಾಂತಿಯತ, ನ್ಯಾಯಸಮ್ಮತ ಚುನಾವಣೆಗೆ ಎಲ್ಲ ರಾಜಕೀಯ ಪಕ್ಷಗಳು, ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.

‘ಕೆಲವರು ಮಾಡಿರುವ ಆರೋಪ ಸುಳ್ಳು’

ಗದಗ: ಜಿಲ್ಲೆಯಲ್ಲಿ ನಿಷ್ಪಕ್ಷಪಾತ ಹಾಗೂ ಭಯಮುಕ್ತವಾಗಿ ಚುನಾವಣೆ ನಡೆಸಲು ಎಲ್ಲ ಅಧಿಕಾರಿಗಳು, ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಕೆಲವರು ಅಧಿಕಾರಿ ವರ್ಗದಲ್ಲಿ ನೈತಿಕತೆಯನ್ನು ಕುಸಿಯುವಂತೆ ಮಾಡಲು ಆಧಾರ ರಹಿತವಾದ ಆರೋಪಗಳನ್ನು ಮಾಡುತ್ತಿದ್ದಾರೆ. ಈ ಮೂಲಕ ಅವರು ಸಾರ್ವಜನಿಕರಲ್ಲಿ ತಪ್ಪು ಭಾವನೆ ಮೂಡಿಸಲು ಮುಂದಾಗಿರುವುದು ಖಂಡನೀಯ’ ಎಂದು ಜಿಲ್ಲಾಧಿಕಾರಿ ಮನೋಜ್ ಜೈನ್ ಹೇಳಿದರು.
‘ಡಿ.ಸಿ, ಎಸಿ, ಡಿವೈಎಸ್‌ಪಿ ಕಾಂಗ್ರೆಸ್‌ನ ಏಜೆಂಟರು’ ಎಂದು ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ ಮಾಡಿದ ಆರೋಪಕ್ಕೆ ಜಿಲ್ಲಾಧಿಕಾರಿಗಳು ಪ್ರತಿಕ್ರಿಯೆ ನೀಡಿದರು.
‘ಚುನಾವಣಾ ನೀತಿ ಸಂಹಿತೆ ಜಾರಿಗೊಂಡ ಬಳಿಕ ಅಧಿಕಾರಿಗಳು ಯಾವುದೇ ಜನಪ್ರತಿನಿಧಿಗಳನ್ನು ಭೇಟಿ ಮಾಡಿಲ್ಲ. ನೀತಿ ಸಂಹಿತೆ ಜಾರಿಯಾದ ನಂತರ ಸಚಿವ ಎಚ್.ಕೆ.ಪಾಟೀಲರು ಜಿಲ್ಲೆಗೆ ಬಂದಿಲ್ಲ’ ಎಂದು ಜಿಲ್ಲಾಧಿಕಾರಿ ಮನೋಜ್ ಜೈನ್ ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT