ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡ್ಯಾನಿಯಲ್ ಫಾಕ್ಸ್ ಅಮಾನತು ವಾಪಸ್

Last Updated 9 ಜನವರಿ 2021, 10:04 IST
ಅಕ್ಷರ ಗಾತ್ರ

ನವದೆಹಲಿ: ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಎಫ್‌ಸಿ ಗೋವಾ ಎದುರಿನ ಪಂದ್ಯದಲ್ಲಿ ರೆಡ್ ಕಾರ್ಡ್ ಪಡೆದು ಅಮಾನತುಗೊಂಡಿದ್ದ ಎಸ್‌ಸಿ ಈಸ್ಟ್ ಬೆಂಗಾಲ್ ತಂಡದ ಡಿಫೆಂಡರ್ ಡ್ಯಾನಿಯಲ್ ಫಾಕ್ಸ್ ಅವರ ಶಿಕ್ಷೆಯನ್ನು ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ (ಎಐಎಫ್‌ಎಫ್‌) ವಾಪಸ್ ಪಡೆದುಕೊಂಡಿದೆ.

ಜನವರಿ ಆರರಂದು ವಾಸ್ಕೊದ ತಿಲಕ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಉಭಯ ತಂಡಗಳು 1–1 ಗೋಲುಗಳ ಡ್ರಾ ಸಾಧಿಸಿದ್ದವು. ಈಸ್ಟ್ ಬೆಂಗಾಲ್ ತಂಡದ ನಾಯಕನೂ ಆಗಿರುವ ಫಾಕ್ಸ್ 56ನೇ ನಿಮಿಷದಲ್ಲಿ ಚೆಂಡನ್ನು ಡ್ರಿಬಲ್ ಮಾಡುತ್ತ ಬಂದು ಗುರಿಯತ್ತ ಒದ್ದಿದ್ದರು. ಆದರೆ ಯಶಸ್ಸು ಕಂಡಿರಲಿಲ್ಲ. ಎದುರಾಳಿ ತಂಡದ ಅಲೆಕ್ಸಾಂಡರ್ ಜೇಸುರಾಜ್ ಅತ್ಯುತ್ತಮವಾಗಿ ಟ್ಯಾಕಲ್ ಮಾಡಿದ್ದರು. ಅವರ ಮೇಲೆ ಫಾಕ್ಸ್‌ ಅಪಾಯಕಾರಿಯಾಗಿ ಎರಗಿದ್ದರು. ಹೀಗಾಗಿ ಅವರಿಗೆ ರೆಡ್ ಕಾರ್ಡ್ ತೋರಿಸಲಾಗಿತ್ತು.

ಆದರೆ ತಂಡದ ದೂರಿನ ಮೇರೆಗೆ ವಿಡಿಯೊ ತುಣುಕುಗಳನ್ನು ಪರಿಶೀಲಿಸಿದ ಎಐಎಫ್‌ಎಫ್‌ ಶಿಸ್ತು ಸಮಿತಿ ಫಾಕ್ಸ್‌ ಅವರು ಶಿಕ್ಷೆಗೆ ಗುರಿಯಾಗುವಂಥ ತಪ್ಪು ತಪ್ಪೆಸಗಲಿಲ್ಲ ಎಂದು ಅಭಿಪ್ರಾಯಪಟ್ಟಿದೆ.

ಸೂಕ್ತ ಕಾರಣವಿಲ್ಲದೇ ಇದ್ದರೆ ಐಎಸ್‌ಎಲ್‌ ಫುಟ್‌ಬಾಲ್‌ನಲ್ಲಿ ಸಾಮಾನ್ಯವಾಗಿ ರೆಫರಿಗಳ ತೀರ್ಪನ್ನು ಮರುಪರಿಶೀಲಿಸುವುದಿಲ್ಲ. ಆದರೆ ಫಾಕ್ಸ್ ಪ್ರಕರಣದಲ್ಲಿ ರೆಫರಿ ಕಡೆಯಿಂದ ಲೋಪವಾಗಿದೆ ಎಂದು ಮನವರಿಕೆಯಾದ ಕಾರಣ ವಿಡಿಯೊ ತುಣುಕುಗಳನ್ನು ಪರಿಶೀಲಿಸಲು ಮುಂದಾಗಿತ್ತು. ಅಮಾನತಿನಿಂದ ಮುಕ್ತವಾದ ಕಾರಣ ಫಾಕ್ಸ್ ಶನಿವಾರ ಬೆಂಗಳೂರು ಫುಟ್‌ಬಾಲ್ ಕ್ಲಬ್‌ ವಿರುದ್ಧ ನಡೆಯಲಿರುವ ಎಸ್‌ಸಿ ಇಸ್ಟ್ ಬೆಂಗಾಲ್ ತಂಡದ ಪಂದ್ಯಕ್ಕೆ ಲಭ್ಯ ಇರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT