ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲರ ಚಿತ್ತ ಮೆಸ್ಸಿಯತ್ತ: ಅರ್ಜೆಂಟೀನಾ– ಸೌದಿ ಅರೇಬಿಯಾ ಪೈಪೋಟಿ ಇಂದು

ಅರ್ಜೆಂಟೀನಾ– ಸೌದಿ ಅರೇಬಿಯಾ ಪೈಪೋಟಿ ಇಂದು
Last Updated 21 ನವೆಂಬರ್ 2022, 17:32 IST
ಅಕ್ಷರ ಗಾತ್ರ

ದೋಹಾ (ರಾಯಿಟರ್ಸ್‌): ಲಯೊನೆಲ್ ಮೆಸ್ಸಿ ಒಳಗೊಂಡಂತೆ ಹಲವು ಪ್ರಮುಖ ಆಟಗಾರರನ್ನು ಒಳಗೊಂಡಿರುವ ಅರ್ಜೆಂಟೀನಾ ತಂಡ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಗೆಲುವಿನ ಆರಂಭದ ನಿರೀಕ್ಷೆಯಲ್ಲಿದೆ.

ಲುಸೈಲ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆಯಲಿರುವ ಪಂದ್ಯದಲ್ಲಿ ಅರ್ಜೆಂಟೀನಾ, ಸೌದಿ ಅರೇಬಿಯಾವನ್ನು ಎದುರಿಸಲಿದೆ. ಉಭಯ ತಂಡಗಳ ಸಾಧನೆ, ಆಟಗಾರರ ಸಾಮರ್ಥ್ಯವನ್ನು ನೋಡುವಾಗ ಮೆಸ್ಸಿ ಬಳಗ ಗೆಲ್ಲುವ ‘ಫೇವರಿಟ್‌’ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಪಂದ್ಯ ಡ್ರಾದಲ್ಲಿ ಕೊನೆಗೊಂಡರೂ ಅದು ದೊಡ್ಡ ಅಚ್ಚರಿ ಎನಿಸಲಿದೆ.ಮೆಸ್ಸಿ ಅವರಿಗೆ ಇದು ಐದನೇ ವಿಶ್ವಕಪ್‌ ಆಗಿದ್ದು, ಬಹುತೇಕ ಕೊನೆಯ ಟೂರ್ನಿಯೂ ಹೌದು. ಅರ್ಜೆಂಟೀನಾ ತಂಡ ಕಳೆದ 36 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಸೋಲು ಅನುಭವಿಸಿಲ್ಲ.

ಫಿಫಾ ರ‍್ಯಾಂಕಿಂಗ್‌ನಲ್ಲಿ ಅರ್ಜೆಂಟೀನಾ ತಂಡಕ್ಕಿಂತ 48 ಸ್ಥಾನಗಳಷ್ಟು ಕೆಳಗೆ ಇರುವ ಸೌದಿಗೆ ಇದು ಆರನೇ ವಿಶ್ವಕಪ್‌ ಟೂರ್ನಿ. ಈ ತಂಡ ಇತ್ತೀಚೆಗೆ ನಡೆದ ಸ್ನೇಹಪರ ಪಂದ್ಯಗಳಲ್ಲಿ ವೆನಿಜುವೆಲಾ, ಕೊಲಂಬಿಯಾ ಮತ್ತು ಕ್ರೊವೇಷ್ಯಾ ಎದುರು ಸೋತಿದೆ.

ವಿಶ್ವಕಪ್‌ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಸೌದಿ ಅರೇಬಿಯಾದ ಸಾಧನೆ ಉತ್ತಮವಾಗಿಲ್ಲ. 2018ರ ಟೂರ್ನಿಯ ಮೊದಲ ಪಂದ್ಯದಲ್ಲಿ ರಷ್ಯಾ ಕೈಯಲ್ಲಿ 0–5 ರಲ್ಲಿ ಹಾಗೂ 2002ರ ಟೂರ್ನಿಯಲ್ಲಿ ಜರ್ಮನಿ ಎದುರು 0–8 ರಲ್ಲಿ ಪರಾಭವಗೊಂಡಿತ್ತು. ಈ ಸಲ ಹೀನಾಯ ಸೋಲಿನಿಂದ ಪಾರಾಗುವ ಸವಾಲು ತಂಡದ ಮುಂದಿದೆ.

1994ರ ಟೂರ್ನಿಯಲ್ಲಿ ಅರೇಬಿಯಾದ ತಂಡ 16ರ ಘಟ್ಟ ಪ್ರವೇಶಿಸಿತ್ತು. ಮಾತ್ರವಲ್ಲ, ಈ ಬಾರಿಯ ಅರ್ಹತಾ ಹಂತದಲ್ಲಿ ತಮ್ಮ ಗುಂಪಿನಲ್ಲಿ ಪ್ರಬಲ ಜಪಾನ್ ತಂಡವನ್ನು ಹಿಂದಿಕ್ಕಿ ವಿಶ್ವಕಪ್‌ನಲ್ಲಿ ಆಡುವ ಅವಕಾಶ ಗಿಟ್ಟಿಸಿಕೊಂಡಿದೆ.

‘ನಮ್ಮ ತಂಡ ಪ್ರತಿಭಾನ್ವಿತ ಆಟಗಾ ರರನ್ನು ಒಳಗೊಂಡಿದ್ದು, ಉತ್ತಮ ಪ್ರದರ್ಶನ ನೀಡಲಿದೆ’ ಎಂದು ಕೋಚ್‌ ಹೆರ್ವ್‌ ರೆನಾರ್ಡ್‌ ಹೇಳಿದ್ದಾರೆ. ಅನುಭವಿ ಮಿಡ್‌ಫೀಲ್ಡರ್‌ ಸಲ್ಮಾನ್‌ ಅಲ್‌ ಫರಾಜ್‌ ಅವರು ಸೌದಿ ತಂಡದ ಬಲ ಎನಿಸಿಕೊಂಡಿದ್ದಾರೆ.

ಬಲಾಬಲ: ಅರ್ಜೆಂಟೀನಾ ಮತ್ತು ಸೌದಿ ಅರೇಬಿಯಾ ತಂಡಗಳು ಇದುವರೆಗೆ ಒಟ್ಟು ನಾಲ್ಕು ಸಲ ಪರಸ್ಪರ ಪೈಪೋಟಿ ನಡೆಸಿವೆ. 1992 ರ ಕಾನ್ಫೆಡರೇಷನ್‌ ಕಪ್‌ ಟೂರ್ನಿಯಲ್ಲಿ ಪೈಪೋಟಿ ನಡೆಸಿದ್ದಾಗ ಅರ್ಜೆಂಟೀನಾ ಗೆದ್ದಿತ್ತು. 2012 ರಲ್ಲಿ ಉಭಯ ತಂಡಗಳು ಕೊನೆಯದಾಗಿ ಆಡಿದ್ದಾಗ ಪಂದ್ಯ 0–0 ರಲ್ಲಿ ಡ್ರಾದಲ್ಲಿ ಕೊನೆಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT