ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ…ಅಮೆರಿಕ ಏನಿದು ಕಾಲ್ಚಳಕ!

Last Updated 21 ಜುಲೈ 2019, 19:30 IST
ಅಕ್ಷರ ಗಾತ್ರ

ಸತತ ಎರಡನೇ ಬಾರಿ ವಿಶ್ವಕಪ್‌ ಫುಟ್‌ಬಾಲ್ ಟೂರ್ನಿಯ ಪ್ರಶಸ್ತಿ ಗೆದ್ದು ಬಂದ ಮಹಿಳಾ ತಂಡಕ್ಕೆ ಅಮೆರಿಕದಲ್ಲಿ ಸಂಭ್ರಮದ ಸ್ವಾಗತ ಕೋರಲಾಯಿತು. ತಂಡದ ಮೆರವಣಿಗೆ ನಡೆದಾಗ ಬೀದಿ ಬೀದಿಗಳ ಇಕ್ಕೆಲಗಳಲ್ಲಿ ಕಿಕ್ಕಿರಿದು ತುಂಬಿದ್ದ ಜನರ ಸಂತಸ, ಸಂಭ್ರಮ ಮುಗಿಲು ಮುಟ್ಟಿತ್ತು.

ಎಂಟು ವಿಶ್ವಕಪ್ ಟೂರ್ನಿಗಳಲ್ಲಿ ಅಮೆರಿಕಕ್ಕೆ ಇದು ನಾಲ್ಕನೇ ಪ್ರಶಸ್ತಿಯಾಗಿತ್ತು. ಒಂದು ಬಾರಿ ರನ್ನರ್ ಅಪ್ ಕೂಡ ಆಗಿರುವ ಅಮೆರಿಕ ಮಹಿಳಾ ಫುಟ್‌ಬಾಲ್‌ನಲ್ಲಿ ನಿರಂತರವಾಗಿ ಆಧಿಪತ್ಯ ಸ್ಥಾಪಿಸುತ್ತ ಬಂದಿದೆ. ಪುರುಷರ ತಂಡಕ್ಕೆ ಹೋಲಿಸಿದರೆ ಮಹಿಳಾ ತಂಡದವರು ಅತಿ ಎತ್ತರಕ್ಕೇರಿದ್ದಾರೆ, ಬಹಳ ದೂರ ಸಾಗಿದ್ದಾರೆ. ರ್‍ಯಾಂಕಿಂಗ್‌ನಲ್ಲೂ ವಿಶ್ವಕಪ್ ಸೇರಿದಂತೆ ಮಹತ್ವದ ಟೂರ್ನಿಗಳಲ್ಲಿ ಗೆದ್ದ ಪ್ರಶಸ್ತಿಗಳ ಸಂಖ್ಯೆಯಲ್ಲೂ ಮಹಿಳೆಯರ ಸಾಧನೆ ಗಮನಾರ್ಹ. ಫಿಫಾ ರ‍್ಯಾಂಕಿಂಗ್‌ನಲ್ಲಿ ಪುರುಷರ ತಂಡಕ್ಕೆ ಈಗ 30ನೇ ಸ್ಥಾನ. ಗರಿಷ್ಠ ಸಾಧನೆ ನಾಲ್ಕನೇ ಸ್ಥಾನ. ಆದರೆ ಮಹಿಳೆಯರು ಈಗ ಒಂದನೇ ಸ್ಥಾನದಲ್ಲಿದ್ದಾರೆ. ಒಮ್ಮೆಯೂ ಎರಡನೇ ಸ್ಥಾನಕ್ಕಿಂತ ಕೆಳಗೆ ಇಳಿಯಲಿಲ್ಲ. ವಿಶ್ವಕಪ್‌ನಲ್ಲಿ ಪುರುಷರು 10 ಬಾರಿ ಸ್ಪರ್ಧಿಸಿದ್ದಾರೆ. 1930ರಲ್ಲಿ ಮೂರನೇ ಸ್ಥಾನ ಗಳಿಸಿದ್ದು ಬಿಟ್ಟರೆ ನಂತರ ಹೆಚ್ಚಿನ ಸಾಧನೆ ಆಗಲಿಲ್ಲ. ಕೊಪಾ ಅಮೆರಿಕ ಮತ್ತು ಕಾನ್ಫೆಡರೇಷನ್ ಕಪ್ ಟೂರ್ನಿಗಳಲ್ಲೂ ಗರಿಷ್ಠ ಸಾಧನೆ ನಾಲ್ಕನೇ ಸ್ಥಾನ. ಪುರುಷರು ಈವರೆಗೆ ಚಾಂಪಿಯನ್ ಷಿಪ್ ಮುಡಿಗೇರಿಸಿಕೊಂಡಿರುವುದು ಕಾನ್ ಕಾಫ್ ಮತ್ತು ಗೋಲ್ಡ್ ಕಪ್ ಟೂರ್ನಿಗಳಲ್ಲಿ ಮಾತ್ರ.

ಆದರೆ ಮಹಿಳಾ ತಂಡ ಹಾಗಲ್ಲ. ವಿಶ್ವಕಪ್ ಮತ್ತು ಒಲಿಂಪಿಕ್ಸ್ ನಲ್ಲಿ ತಲಾ ನಾಲ್ಕು ಬಾರಿ, ಕಾನ್ ಕಾಫ್ ಗೋಲ್ಡ್ ಕಪ್ ನಲ್ಲಿ ಎಂಟು ಬಾರಿ ಅದು ‘ಚಿನ್ನದ’ ಛಾಪು ಒತ್ತಿದೆ. ಜರ್ಮನಿ, ಬ್ರೆಜಿಲ್, ನಾರ್ವೆ, ಚೀನಾ, ಜಪಾನ್, ನೆದರ್ಲೆಂಡ್ಸ್ ಮುಂತಾದ ರಾಷ್ಟ್ರಗಳಿಗೆ ಪ್ರಬಲ ಎದುರಾಳಿಯಾಗಿ ಬೆಳೆದು ನಿಂತಿದೆ.

ಸೋಲಿನೊಂದಿಗೆ ಶುರು; ಗೆಲುವಿನ ಓಟ ಜೋರು
ಅಮೆರಿಕದಲ್ಲಿ ಮೊದಮೊದಲು ಮಹಿಳಾ ಫುಟ್‌ಬಾಲ್‌ಗೆ ಅಂಥ ದೊಡ್ಡ ಹೆಸರು ಇರಲಿಲ್ಲ. ತಂಡ ಮೊದಲ ಅಂತರರಾಷ್ಟ್ರೀಯ ಪಂದ್ಯ ಆಡಿದ್ದು 1985ರಲ್ಲಿ. ಇಟಲಿ ಎದುರಿನ ಪಂದ್ಯದಲ್ಲಿ ತಂಡ 0-1 ಗೋಲುಳಿಂದ ಸೋತಿತ್ತು. ನಂತರ ತಂಡ ನಿಧಾನವಾಗಿ ಗೆಲುವಿನ ಹಾದಿಯತ್ತ ಹೆಜ್ಜೆ ಹಾಕಿತು. 1991ರ ಕಾನ್ ಕಾಫ್ ಟೂರ್ನಿಯಲ್ಲಿ ಇದು ಪ್ರತಿಫಲಿಸಿತು. ಟೂರ್ನಿಯ ಫೈನಲ್ ನಲ್ಲಿ ತಂಡ ಏಕಪಕ್ಷೀಯವಾದ 49 ಗೋಲುಗಳಿಂದ ಎದುರಾಳಿಯನ್ನು ಸದೆ ಬಡಿಯಿತು. ಆ ವರ್ಷ ವಿಶ್ವ ವಿಜೇತ ತಂಡವೆನಿಸಿಕೊಂಡು ಜಗತ್ತಿನ ಗಮನ ಸೆಳೆಯಿತು. ನಂತರ ಮುಟ್ಟಿದ್ದೆಲ್ಲವೂ ಚಿನ್ನವಾಯಿತು; ಪ್ರಶಸ್ತಿಗಳು ಮುಡಿಗೇರಿದವು. ಬಂಗಾರದ ಪದಕಗಳು ಆಟಗಾರ್ತಿಯರ ಕೊರಳಲನ್ನು ಅಲಂಕರಿಸಿದವು.

ಬದಲಾದ ನೀತಿ; ಬದಲಾದ ಛಾತಿ
ಪ್ರತಿ ಬಾರಿಯೂ ಅಮೆರಿಕ ಪ್ರಶಸ್ತಿ ಗೆದ್ದಾಗ ರಾಷ್ಟ್ರದಾದ್ಯಂತ ಸಂಭ್ರಮದ ಮೆಕ್ಸಿಕನ್ ಅಲೆಗಳು ಏಳುತ್ತವೆ. ರಾಜಕೀಯ, ಆಡಳಿತ ವಲಯದವರೂ ಅಭಿನಂದನೆಯ ಮಳೆ ಸುರಿಸುತ್ತಾರೆ. ಇದಕ್ಕೆ ಪ್ರಮುಖ ಕಾರಣ, ಅಲ್ಲಿ ಅಳವಡಿಸಿಕೊಂಡಿರುವ ಶಿಕ್ಷಣ-ಮತ್ತು ಕ್ರೀಡಾ ನೀತಿ. ಅಮೆರಿಕದಲ್ಲಿ ಫುಟ್ ಬಾಲ್ ಸೇರಿದಂತೆ ಮಹಿಳೆಯರು ಕ್ರೀಡೆಯಲ್ಲಿ ಇಷ್ಟೊಂದು ಮುಂದುವರಿಯಲು ಕಾರಣ, 1972ರಲ್ಲಿ ಜಾರಿಗೆ ಬಂದ ಕ್ರೀಡೆ ಮತ್ತು ಶಿಕ್ಷಣ ನೀತಿ. ಕ್ರೀಡೆಯಲ್ಲಿ ಸಾಧನೆ ಮಾಡಿದಾಗಲೆಲ್ಲ ಅಲ್ಲಿನವರು ಈ ನೀತಿಯನ್ನು ಸ್ಮರಿಸುತ್ತಾರೆ. ರಾಷ್ಟ್ರದ ಮಹಿಳಾ ಕ್ರೀಡೆಯಲ್ಲಿ ಮಹತ್ವದ ಬದಲಾವಣೆಗೆ ಕಾರಣವಾದ ಈ ನೀತಿಗೆ ಅನೇಕ ಬಾರಿ ತಿದ್ದುಪಡಿ ತರಲಾಗಿದೆ. ಆದರೂ ಅದು ಮೂಲಸತ್ವವನ್ನು ಕಳೆದುಕೊಳ್ಳಲಿಲ್ಲ. ಶಿಕ್ಷಣ ಮತ್ತು ಕ್ರೀಡೆಯಲ್ಲಿ ತಾರತಮ್ಯ ಸಲ್ಲದು ಎಂಬುದು ನೀತಿಯ ಪ್ರಮುಖ ಅಂಶ. ಶಾಲಾ ಹಂತದಲ್ಲಿ ಹೆಣ್ಣುಮಕ್ಕಳಿಗೆ ಕ್ರೀಡಾ ಅಭ್ಯಾಸದ ಅವಕಾಶವೇ ಇಲ್ಲದಿದ್ದ ಸಂದರ್ಭದಲ್ಲಿ ಈ ನೀತಿ ಜಾರಿಗೆ ಬಂದದ್ದು ಮಹತ್ವದ ತಿರುವು ಎಂದು ಅಲ್ಲಿನ ಕ್ರೀಡಾ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. 1972ರಲ್ಲಿ ಈ ನೀತಿ ಜಾರಿಗೆ ಬರುವ ವೇಳೆ ಇಡೀ ರಾಷ್ಟ್ರದಲ್ಲಿ ಫುಟ್ ಬಾಲ್ ಆಡುತ್ತಿದ್ದ ಮಹಿಳೆ ಯರ ಸಂಖ್ಯೆ ಕೇವಲ 700 ಆಗಿತ್ತು. 19 ವರ್ಷಗಳ ನಂತರ ಮಹಿಳೆಯರಿಗಾಗಿ ವಿಶ್ವಕಪ್ ಟೂರ್ನಿ ಆರಂಭವಾಗಿತ್ತು. ಈ ಸಂದರ್ಭದಲ್ಲಿ ಅಮೆರಿಕದಲ್ಲಿ ಫುಟ್ ಬಾಲ್ ಆಡುವ ಮಹಿಳೆಯರ ಸಂಖ್ಯೆ 1,21,722 ಆಗಿತ್ತು! 2018ರ ವೇಳೆ ಈ ಸಂಖ್ಯೆ ದ್ವಿಗುಣಗೊಂಡದ್ದು ಕೂಡ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಮೊದಲ ವಿಶ್ವಕಪ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ಮೇಲೆಯಂತೂ ಆಟದ ಮೇಲೆ ಮಹಿಳೆಯರ ಆಸಕ್ತಿ ಗಣನೀಯವಾಗಿ ಹೆಚ್ಚಿತು.

ಚಿನ್ನದ ಬೂಟು ಮತ್ತು ಚಿನ್ನದ ಚೆಂಡು ಪ್ರಶಸ್ತಿ ಗಳಿಸಿದ ಮೇಗನ್ ರಾಪಿನೊ –ರಾಯಿಟರ್ಸ್ ಚಿತ್ರ
ಚಿನ್ನದ ಬೂಟು ಮತ್ತು ಚಿನ್ನದ ಚೆಂಡು ಪ್ರಶಸ್ತಿ ಗಳಿಸಿದ ಮೇಗನ್ ರಾಪಿನೊ –ರಾಯಿಟರ್ಸ್ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT