ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV WEB Exclusive: ಡ್ರಿಬಲ್ ಮಾಡುತ್ತ; ಚಿನ್ನದ ಬೂಟಿನತ್ತ...

Last Updated 4 ಜನವರಿ 2021, 2:24 IST
ಅಕ್ಷರ ಗಾತ್ರ

ಇಗರ್ ಆಂಗುಲೊ, ನೆರಿಜಸ್ ವಲ್ಕಿಸ್‌, ಆ್ಯಡಂ ಲೀ ಫಾಂಡ್ರೆ, ಅರಿದಾನೆ ಸಂತಾನ, ರಾಯ್ ಕೃಷ್ಣ…

ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಏಳನೇ ಆವೃತ್ತಿಯ ಆರಂಭದಿಂದಲೇ ಕೇಳಿಬರುತ್ತಿರುವ ಹೆಸರುಗಳು ಇವು. ಲೀಗ್‌ ಹಂತದ ಮೊದಲ ಘಟ್ಟದ ಪಂದ್ಯಗಳ ಮುಕ್ತಾಯಕ್ಕೆ ಒಂದು ವಾರ ಬಾಕಿ ಇರುವಾಗ ಹೆಚ್ಚು ಗೋಲು ಗಳಿಸಿದವರ ಪಟ್ಟಿಯ ಅಗ್ರ ಐದು ಸ್ಥಾನಗಳಲ್ಲಿರುವ ಇವರು ಈ ಬಾರಿ ಚಿನ್ನದ ಬೂಟು ಪ್ರಶಸ್ತಿ ಗಳಿಸಬಲ್ಲ ಆಟಗಾರರು ಎನಿಸಿಕೊಂಡಿದ್ದಾರೆ.

ಇಗರ್ ಆಂಗುಲೊ ಎಫ್‌ಸಿ ಗೋವಾ ತಂಡದ ಅಟಗಾರ. ಈಗಾಗಲೇ ಒಂಬತ್ತು ಪಂದ್ಯಗಳಲ್ಲಿ ಒಂಬತ್ತು ಗೋಲು ಗಳಿಸಿರುವ ಅವರಿಗೆ ಮುಂಬೈ ಸಿಟಿ ಎಫ್‌ಸಿ ತಂಡದ ಲೀ ಫಾಂಡ್ರೆ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ. ಅವರು ಎಂಟು ಪಂದ್ಯಗಳಲ್ಲಿ ಆರು ಗೋಲು ಗಳಿಸಿದ್ದಾರೆ.ಜೆಮ್ಶೆಡ್‌ಪುರ ಎಫ್‌ಸಿಯ ನೆರಿಜಸ್ ವಲ್ಕಿಸ್ ಒಂಬತ್ತು ಪಂದ್ಯಗಳಲ್ಲಿ ಆರು ಬಾರಿ ಗುರಿ ಕಂಡಿದ್ದಾರೆ. ಆರಿದಾನೆ ಸಂತಾನ ಮತ್ತು ರಾಯ್ ಕೃಷ್ಣ ತಲಾ ಐದು ಗೋಲು ಗಳಿಸಿ ಹೆಚ್ಚು ಗೋಲು ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದತ್ತ ದಾಪುಗಾಲು ಹಾಕಿದ್ದಾರೆ.

ಪಟ್ಟಿಯಲ್ಲಿ, ಬೆಂಗಳೂರು ಫುಟ್‌ಬಾಲ್ ಕ್ಲಬ್‌ (ಬಿಎಫ್‌ಸಿ) ತಂಡದ ಯಾರ ಹೆಸರೂ ಪ್ರಮುಖವಾಗಿ ಇಲ್ಲ. ಸುನಿಲ್ ಚೆಟ್ರಿ ಏಳನೇ ಸ್ಥಾನದಲ್ಲಿದ್ದಾರೆ. ಆದರೆ ಅವರ ಸಾಧನೆ ಎಂಟು ಪಂದ್ಯಗಳಲ್ಲಿ ಮೂರು ಗೋಲು ಮಾತ್ರ. ಕ್ಲೀಟನ್ ಸಿಲ್ವಾ ಕೂಡ ಜಂಟಿ ಏಳನೇ ಸ್ಥಾನದಲ್ಲಿದ್ದಾರೆ. ಎರಡು ಗೋಲು ಗಳಿಸಿರುವ ಜುವನನ್ ಅವರದು 17ನೇ ಸ್ಥಾನ!

ಜನವರಿ ಎರಡರ ಶನಿವಾರದ ವರೆಗೆ ಐಎಸ್‌ಎಲ್‌ನಲ್ಲಿ ಒಟ್ಟು 44 ಪಂದ್ಯಗಳು ನಡೆದಿದ್ದು 96 ಗೋಲುಗಳು ದಾಖಲಾಗಿವೆ. ಹೆಚ್ಚು ಗೋಲು ಗಳಿಸಿರುವ ತಂಡಗಳ ಪಟ್ಟಿಯಲ್ಲಿ ಮುಂಬೈ ಸಿಟಿ ಎಫ್‌ಸಿ ಮೊದಲ ಸ್ಥಾನದಲ್ಲಿದೆ. ಆ ತಂಡ ಎಂಟು ಪಂದ್ಯಗಳಲ್ಲಿ 13 ಗೋಲು ಗಳಿಸಿದೆ. ಎರಡನೇ ಸ್ಥಾನದಲ್ಲಿರುವ ಎಫ್‌ಸಿ ಗೋವಾ ಇಲ್ಲಿಯವರೆಗೆ ಒಂಬತ್ತು ಪಂದ್ಯಗಳಲ್ಲಿ 12 ಬಾರಿ ಚೆಂಡನ್ನು ಗುರಿ ಸೇರಿಸಿದೆ. ಇದರಲ್ಲಿ ದೊಡ್ಡ ಪಾಲು ಇಗರ್ ಆಂಗುಲೊ ಅವರದು ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲವಲ್ಲ…

ಸ್ಪೇನ್‌ನಿಂದ ಬಂದಿರುವ 36 ವರ್ಷದ ಆಂಗುಲೊ ಈ ವರೆಗೆ ಮೂರು ಪಂದ್ಯಗಳಲ್ಲಿ ತಲಾ ಎರಡು ಗೋಲು ಗಳಿಸಿದ್ದಾರೆ. ಈ ಆವೃತ್ತಿಯಲ್ಲಿ ಅವರನ್ನು ಬಿಟ್ಟರೆ ಬೇರೆ ಯಾರೂ ಮೂರು ಬಾರಿ ಎರಡು ಗೋಲು ಗಳಿಸಿಲ್ಲ. ಬಿಎಫ್‌ಸಿ ವಿರುದ್ಧದ ಅವರ ಎರಡು ಗೋಲುಗಳು ತಂಡವನ್ನು ಸೋಲಿನಿಂದ ಪಾರು ಮಾಡಿದ್ದವು. ಕೇರಳ ಬ್ಲಾಸ್ಟರ್ಸ್ ಮತ್ತು ಜೆಮ್ಶೆಡ್‌ಪುರ ಎಫ್‌ಸಿ ಎದುರಿನ ಪಂದ್ಯಗಳಲ್ಲಿ ಎರಡು ಬಾರಿ ಚೆಂಡನ್ನು ಗುರಿ ಸೇರಿಸಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು.

ಎರಡು ಬಾರಿ ಇಂಜುರಿ ಅವಧಿಯಲ್ಲಿ ಗೋಲು ಗಳಿಸಿ ಎಫ್‌ಸಿ ಗೋವಾಗೆ ಜಯದ ಕಾಣಿಕೆ ನೀಡುವಲ್ಲೂ ಅವರು ಯಶಸ್ವಿಯಾಗಿದ್ದಾರೆ. ಹೀಗಾಗಿ ಎಲ್ಲ ತಂಡಗಳ ವಿರುದ್ಧ, ಎಲ್ಲ ಅವಧಿಯಲ್ಲೂ ಗೋಲು ಗಳಿಸಬಲ್ಲ ಆಟಗಾರ ಎಂದೆನಿಸಿಕೊಂಡಿದ್ದಾರೆ.‌

ಲಿಥುವೇನಿಯಾ ಆಟಗಾರನ ಮೋಡಿ

ನೆರಿಜಸ್ ವಲ್ಕಿಸ್, ಲಿಥುವೇನಿಯಾದ ಆಟಗಾರ. ಕಳೆದ ಬಾರಿ ಚೆನ್ನೈಯಿನ್ ಎಫ್‌ಸಿಯಲ್ಲಿದ್ದ ಅವರು ಚಿನ್ನದ ಬೂಟು ಗೆದ್ದುಕೊಂಡಿದ್ದರು. ಈ ಬಾರಿ ಜೆಮ್ಶೆಡ್‌ಪುರ ತಂಡಕ್ಕೆ ಅಮೋಘ ಕಾಣಿಕೆ ನೀಡಿರುವ ಅವರು ಮೊದಲ ಆರು ಪಂದ್ಯಗಳಲ್ಲಿ ಆರು ಗೋಲು ಗಳಿಸಿ ಮಿಂಚಿದ್ದರು. ಆದರೆ ನಂತರದ ಮೂರು ಪಂದ್ಯಗಳಲ್ಲಿ ವಿಫಲರಾದರು. ಎರಡು ಪಂದ್ಯಗಳಲ್ಲಿ ತಲಾ ಎರಡು ಗೋಲು ಗಳಿಸಿದ್ದಾರೆ. ಒಡಿಶಾ ಎಫ್‌ಸಿ ವಿರುದ್ಧ 2–2ರ ಡ್ರಾ ಸಾಧಿಸಲು ವಲ್ಕಿಸ್‌ ನೆರವಾಗಿದ್ದರೆ ಎಟಿಕೆ ಮೋಹನ್ ಬಾಗನ್ ವಿರುದ್ಧ 2–1ರ ಗೆಲುವಿಗೂ ಕಾರಣರಾಗಿದ್ದರು.

ಅತ್ಯಮೋಘ ಕಾಲ್ಚಳಕದ ಆಟಗಾರ ರಾಯ್ ಕೃಷ್ಣ. ಕೋಲ್ಕತ್ತದಲ್ಲಿ ಪೂರ್ವಿಕರ ಬೇರುಗಳನ್ನು ಹೊಂದಿರುವ ಅವರು ಈಗ ಫಿಜಿ ಪ್ರಜೆ. ಎಟಿಕೆ ಮೋಹನ್ ಬಾಗನ್ ತಂಡದ ಗೆಲುವಿನ ಓಟದಲ್ಲಿ ಅವರ ಪಾತ್ರ ಮಹತ್ವದ್ದು. ಕೊನೆಯ ಕ್ಷಣಗಳಲ್ಲಿ ಎದುರಾಳಿ ತಂಡಕ್ಕೆ ಚಳ್ಳೆಹಣ್ಣು ತಿನ್ನಿಸಿ ಜಯ ತಂದುಕೊಡುವ ಅಥವಾ ಡ್ರಾ ಸಾಧಿಸಲು ನೆರವಾಗುವ ಅವರ ಕಲೆಗೆ ಐಎಸ್‌ಎಲ್‌ ಪ್ರೇಕ್ಷಕರು ಫಿದಾ ಆಗಿದ್ದಾರೆ. ಕಳೆದ ಬಾರಿ ಚಿನ್ನದ ಬೂಟು ಗಳಿಸುವ ಅವಕಾಶ ಅವರಿಗೆ ಸ್ವಲ್ಪದರಲ್ಲೇ ಕೈತಪ್ಪಿತ್ತು. ಈ ಬಾರಿ ಮೊದಲ ನಾಲ್ಕು ಪಂದ್ಯಗಳಲ್ಲೂ ಗೋಲು ಗಳಿಸಿದ್ದ ಅವರ ಸಾಧನೆಯು ಮೂರು ಪಂದ್ಯಗಳಲ್ಲಿ ಭರ್ಜರಿ ಗೆಲುವಿಗೆ ಕಾರಣವಾಗಿತ್ತು. ನಂತರದ ನಾಲ್ಕು ಪಂದ್ಯಗಳಲ್ಲಿ ಕೇವಲ ಒಂದು ಗೋಲು ಮಾತ್ರ ದಾಖಲಿಸಲು ಅವರಿಗೆ ಸಾಧ್ಯವಾಗಿತ್ತು.

ಮುಂಬೈ ಸಿಟಿ ಎಫ್‌ಸಿ ತಂಡದ ಪರ ಆಡುತ್ತಿರುವ ಆ್ಯಡಂ ಲೀ ಫಾಂಡ್ರೆ, ತಂಡದ ಮೊದಲ ಏಳು ಪಂದ್ಯಗಳ ಪೈಕಿ ಆರರಲ್ಲಿ ಆಡುವ 11ರಲ್ಲಿ ಅವಕಾಶ ಪಡೆದುಕೊಂಡಿದ್ದರು. ಅವರು ಎಸ್‌ಸಿ ಈಸ್ಟ್ ಬೆಂಗಾಲ್ ವಿರುದ್ಧ ಎರಡು ಬಾರಿ ಚೆಂಡನ್ನು ಗುರಿಮುಟ್ಟಿಸಿದ್ದಾರೆ. ಶನಿವಾರ ನಡೆದ ಕೇರಳ ಬ್ಲಾಸ್ಟರ್ಸ್ ಎದುರಿನ ಪಂದ್ಯದ ಮೂರನೇ ನಿಮಿಷದಲ್ಲೇ ಲಭಿಸಿದ ಪೆನಾಲ್ಟಿ ಅವಕಾಶವನ್ನು ಗೋಲಾಗಿ ಪರಿವರ್ತಿಸಿ ಮುನ್ನಡೆ ಗಳಿಸಿಕೊಟ್ಟಿದ್ದರು. ಪಂದ್ದದಲ್ಲಿ ಬೆಂಗಾಲ್‌ 2–0ಯಿಂದ ಜಯ ಗಳಿಸಿತ್ತು.

ಹೈದರಾಬಾದ್ ಎಫ್‌ಸಿ ತಂಡದ ಈ ವರೆಗಿನ ಯಶಸ್ಸಿನ ರೂವಾರಿ ಅರಿದಾನೆ ಸಂತಾನ. ಏಳು ಪಂದ್ಯಗಳಲ್ಲಿ ಆಡಿರುವ ಅವರು ಗಾಯದಿಂದಾಗಿ ಒಮ್ಮೆ ಕಣಕ್ಕೆ ಇಳಿದಿರಲಿಲ್ಲ. ಕಳೆದ ಬಾರಿ ಒಡಿಶಾ ಪರವಾಗಿ ಆಡಿದ್ದು 14 ಗೋಲು ಗಳಿಸಿದ್ದರು. ಈ ಬಾರಿ ಈಗಾಗಲೇ ಐದು ಗೋಲು ಗಳಿಸಿದ್ದು ಎಸ್‌ಸಿ ಈಸ್ಟ್ ಬೆಂಗಾಲ್ ಎದುರಿನ ಪಂದ್ಯದಲ್ಲಿ ಗೆಲುವಿಗೆ ಕಾರಣವಾದ ಎರಡು ಗೋಲುಗಳನ್ನು ಗಳಿಸಿದ್ದರು. ಎಫ್‌ಸಿ ಗೋವಾ ಎದುರಿನ ಹಿಂದಿನ ಪಂದ್ಯದಲ್ಲಿ ಹೆಡರ್ ಮೂಲಕ ಅಮೋಘ ಗೋಲು ಗಳಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟಿದ್ದರು. ಆದರೆ ಕೊನೆಯ ನಿಮಿಷಗಳಲ್ಲಿ ಎರಡು ಗೋಲುಗಳನ್ನು ಬಿಟ್ಟುಕೊಟ್ಟ ತಂಡ ಸೋಲೊಪ್ಪಿಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT