ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

FIFA World Cup | ಪೋಲೆಂಡ್‌ ವಿರುದ್ದ 2–0 ಗೆಲುವು; ನಾಕೌಟ್‌ಗೆ ಮೆಸ್ಸಿ ಬಳಗ

16ರ ಘಟ್ಟದಲ್ಲಿ ಆಸ್ಟ್ರೇಲಿಯಾ ಎದುರಾಳಿ
Last Updated 1 ಡಿಸೆಂಬರ್ 2022, 12:56 IST
ಅಕ್ಷರ ಗಾತ್ರ

ದೋಹಾ: ಸ್ಟಾರ್‌ ಆಟಗಾರ ಲಯೊನೆಲ್‌ ಮೆಸ್ಸಿ ಪೆನಾಲ್ಟಿ ಕಿಕ್‌ ಅವಕಾಶ ಹಾಳುಮಾಡಿಕೊಂಡರೂ, ಒತ್ತಡಕ್ಕೆ ಒಳಗಾಗದೆ ದಿಟ್ಟ ಆಟವಾಡಿದ ಅರ್ಜೆಂಟೀನಾ ತಂಡ ವಿಶ್ವಕಪ್‌ ಟೂರ್ನಿಯ ಪ್ರಿ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆಯಿಟ್ಟಿತು.

‘ಸ್ಟೇಡಿಯಂ 974’ ರಲ್ಲಿ ಬುಧವಾರ ರಾತ್ರಿ ನಡೆದ ‘ಸಿ’ ಗುಂಪಿನ ಪಂದ್ಯದಲ್ಲಿ ಅರ್ಜೆಂಟೀನಾ 2–0 ಗೋಲುಗಳಿಂದ ಪೋಲೆಂಡ್‌ ತಂಡವನ್ನು ಮಣಿಸಿತು. ಅಲೆಕ್ಸಿಸ್‌ ಮ್ಯಾಕ್‌ ಅಲಿಸ್ಟರ್‌ ಮತ್ತು ಜೂಲಿಯನ್‌ ಅಲ್ವಾರೆಜ್‌ ಗೋಲು ತಂದಿತ್ತರು.

ದಕ್ಷಿಣ ಅಮೆರಿಕದ ತಂಡ ಒಟ್ಟು ಆರು ಪಾಯಿಂಟ್ಸ್‌ಗಳೊಂದಿಗೆ ಗುಂಪಿನಲ್ಲಿ ಅಗ್ರಸ್ಥಾನ ಪಡೆದು ನಾಕೌಟ್‌ಗೆ ಪ್ರವೇಶಿಸಿತು. ಈ ಪಂದ್ಯದಲ್ಲಿ ಸೋತರೂ ಎರಡನೇ ಸ್ಥಾನ ಪಡೆಯುವ ಮೂಲಕ ಪೋಲೆಂಡ್‌ ಕೂಡಾ ಅರ್ಹತೆ ಗಳಿಸಿತು.

ಟೂರ್ನಿಯ ಮೊದಲ ಪಂದ್ಯದಲ್ಲಿ ಸೌದಿ ಅರೇಬಿಯಾ ಕೈಯಲ್ಲಿ ಆಘಾತ ಅನುಭವಿಸಿ ಟೀಕೆಗೆ ಗುರಿಯಾಗಿದ್ದು ಅರ್ಜೆಂಟೀನಾ, ಆ ಬಳಿಕದ ಎರಡೂ ಪಂದ್ಯಗಳಲ್ಲಿ ಚೇತೋಹಾರಿ ಪ್ರದರ್ಶನ ನೀಡಿತು. ಮೆಸ್ಸಿ ಅವರು ವಿಶ್ವಕಪ್‌ನಲ್ಲಿ ಇನ್ನೊಂದು ಪಂದ್ಯ ಆಡಲಿರುವುದು ವಿಶ್ವದ ವಿವಿಧೆಡೆಯಿರುವ ಅವರ ಅಭಿಮಾನಿಗಳಲ್ಲಿ ಪುಳಕ ಉಂಟುಮಾಡಿದೆ.

16ರ ಘಟ್ಟ ಪ್ರವೇಶಿಸಲು ಗೆಲುವು ಅನಿವಾರ್ಯವಾಗಿದ್ದ ಪಂದ್ಯದಲ್ಲಿ ಅರ್ಜೆಂಟೀನಾ ಶಿಸ್ತಿನ ಆಟವಾಡಿತು. ಆದರೂ ಮೊದಲ ಅವಧಿ ಗೋಲುರಹಿತವಾಗಿತ್ತು.

ಪ್ರಥಮಾರ್ಧದಲ್ಲಿ ಲಭಿಸಿದ ಪೆನಾಲ್ಟಿ ಕಿಕ್‌ ಅವಕಾಶವನ್ನು ಗೋಲಾಗಿ ಪರಿವರ್ತಿಸಲು ಅರ್ಜೆಂಟೀನಾ ವಿಫಲವಾಯಿತು. ಮೆಸ್ಸಿ ಅವರು ಚೆಂಡನ್ನು ಹೆಡ್‌ ಮಾಡುವುದನ್ನು ತಡೆಯಲು ಪೋಲೆಂಡ್‌ನ ಗೋಲ್‌ಕೀಪರ್‌ ವೊಯಿಚಿಕ್‌ ಸ್ಟೆನ್ಸೆ ಮುಂದಾದಾಗ ಅವರ ಗ್ಲೋವ್‌, ಮೆಸ್ಸಿ ಮುಖಕ್ಕೆ ಬಡಿಯಿತು. ಇದಕ್ಕೆ ರೆಫರಿ ಪೆನಾಲ್ಟಿ ನೀಡಿದರು. ಪೆನಾಲ್ಟಿ ಕಿಕ್‌ನಲ್ಲಿ ಮೆಸ್ಸಿ ಒದ್ದ ಚೆಂಡನ್ನು ಸ್ಟೆನ್ಸೆ ತಮ್ಮ ಎಡಭಾಗಕ್ಕೆ ಜಿಗಿದು ಒಂದು ಕೈಯಿಂದ ಅಮೋಘವಾಗಿ ತಡೆದರು.

ಎರಡನೇ ಅವಧಿಯ ಆರಂಭದಲ್ಲೇ ಅರ್ಜೆಂಟೀನಾ ಮುನ್ನಡೆ ಗಳಿಸಿತು. ಮೊಲಿನಾ ಅವರು ನೀಡಿದ ಪಾಸ್‌ನಲ್ಲಿ ಅಲೆಕ್ಸಿಸ್‌ ಚೆಂಡನ್ನು ಗುರಿ ಸೇರಿಸಿದರು.

ಆಟಗಾರರ ನಡುವಿನ ಉತ್ತಮ ಹೊಂದಾಣಿಕೆಯಿಂದ ಎರಡನೇ ಗೋಲು ಬಂತು. ಥ್ರೋಇನ್‌ನಲ್ಲಿ ದೊರೆತ ಚೆಂಡನ್ನು ನಿಯಂತ್ರಣಕ್ಕೆ ಪಡೆದುಕೊಂಡ ಎಂಜೊ ಫೆರ್ನಾಂಡಿಸ್‌ ಅವರು ಎದುರಾಳಿ ಡಿಫೆಂಡರ್‌ಗಳನ್ನು ತಪ್ಪಿಸಿ, ಅಲ್ವಾರೆಜ್‌ಗೆ ನೀಡಿದರು. ಅವರು ಸೊಗಸಾದ ರೀತಿಯಲ್ಲಿ ಗುರಿ ಸೇರಿಸಿದರು.

ಮೆಸ್ಸಿ ಗೋಲು ಗಳಿಸಲು ವಿಫಲರಾದರೂ, ಪೋಲೆಂಡ್‌ನ ರಕ್ಷಣಾ ವಿಭಾಗದ ಮೇಲೆ ನಿರಂತರ ಒತ್ತಡ ಹೇರುವಲ್ಲಿ ಯಶಸ್ವಿಯಾದರು.

ಎದುರಾಳಿ ಗೋಲ್‌ಪೋಸ್ಟ್‌ ಗುರಿಯಾಗಿಸಿ ದಾಳಿ ನಡೆಸುವುದರಲ್ಲಿ ಪೋಲೆಂಡ್‌ ಆಟಗಾರರು ಪೂರ್ಣ ವೈಫಲ್ಯ ಅನುಭವಿಸಿದರು. ಇದರಿಂದ ಅರ್ಜೆಂಟೀನಾ ಗೋಲ್‌ಕೀಪರ್‌ ಎಮಿಲಿಯಾನೊ ಮಾರ್ಟಿನೆಜ್‌ಗೆ ಹೆಚ್ಚಿನ ಕೆಲಸವಿರಲಿಲ್ಲ. ಪಂದ್ಯದ ಬಹುತೇಕ ಅವಧಿಯಲ್ಲಿ ಅವರು ಪ್ರೇಕ್ಷಕರಾಗಿ ನಿಂತುಬಿಟ್ಟರು.

‘ಪಂದ್ಯದಲ್ಲಿ ಆಡಿದ ರೀತಿ ನನಗೆ ತೃಪ್ತಿ ಉಂಟುಮಾಡಿದೆ. ಗೆಲುವು ಅನಿವಾರ್ಯವಾಗಿದ್ದರಿಂದ ಪಂದ್ಯ ಅಷ್ಟೊಂದು ಸುಲಭದ್ದಾಗಿರಲಿಲ್ಲ’ ಎಂದು ಅರ್ಜೆಂಟೀನಾ ಕೋಚ್‌ ಲಯೊನೆಲ್‌ ಸ್ಕಾಲೊನಿ ಪ್ರತಿಕ್ರಿಯಿಸಿದ್ದಾರೆ.

ಆಸ್ಟ್ರೇಲಿಯಾ ಎದುರಾಳಿ
ಅರ್ಜೆಂಟೀನಾ ತಂಡ ಕ್ವಾರ್ಟರ್‌ ಫೈನಲ್‌ನಲ್ಲಿ ‘ಡಿ’ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದಿರುವ ಆಸ್ಟ್ರೇಲಿಯಾ ತಂಡದ ಸವಾಲು ಎದುರಿಸಲಿದೆ. ಪೋಲೆಂಡ್‌ ತಂಡ ‘ಡಿ’ ಗುಂಪಿನ ಅಗ್ರಸ್ಥಾನಿ, ಹಾಲಿ ಚಾಂಪಿಯನ್‌ ಫ್ರಾನ್ಸ್‌ ವಿರುದ್ಧ ಪೈಪೋಟಿ ನಡೆಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT