ಸೋಮವಾರ, ಆಗಸ್ಟ್ 8, 2022
21 °C

ಗೋವಾ ಸವಾಲು ಮೀರಿದ ಎಟಿಕೆಎಂಬಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಫತೋರ್ಡ: ಬಲಿಷ್ಠ ತಂಡಗಳ ಸೆಣಸಾಟದ ಕೊನೆಯಲ್ಲಿ ಎಟಿಕೆ ಮೋಹನ್ ಬಾಗನ್ ತಂಡ ಗೆಲುವಿನ ನಗೆ ಬೀರಿತು. ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಬುಧವಾರ ನಡೆದ ಐಎಸ್‌ಎಲ್ ಪಂದ್ಯದಲ್ಲಿ ಆ ತಂಡ ಆತಿಥೇಯ ಎಫ್‌ಸಿ ಗೋವಾ ವಿರುದ್ಧ 1–0 ಅಂತರದಲ್ಲಿ ಜಯ ಸಾಧಿಸಿತು. ನಿಗದಿತ ಅವಧಿಯ ಮುಕ್ತಾಯಕ್ಕೆ ಐದು ನಿಮಿಷಗಳು ಇದ್ದಾಗ ಲಭಿಸಿದ ಪೆನಾಲ್ಟಿ ಅವಕಾಶದಲ್ಲಿ ರಾಯ್ ಕೃಷ್ಣ ತಂದುಕೊಟ್ಟ ಗೋಲು ತಂಡದ ಕೈ ಹಿಡಿಯಿತು.

ಆರನೇ ನಿಮಿಷದಲ್ಲೇ ಎಟಿಕೆ ಮೋಹನ್ ಬಾಗನ್ ತಂಡಕ್ಕೆ ಫ್ರೀ ಕಿಕ್ ಅವಕಾಶ ಲಭಿಸಿತ್ತು. ಆದರೆ ಪ್ರಣಯ್ ಹಲ್ದರ್ ಅವರ ಕಿಕ್‌ಗೆ ತಲೆ ಒಡ್ಡಿದ ಜೇಮ್ಸ್ ಡೊಣಾಚಿ ಚೆಂಡನ್ನು ಹೊರಗೆ ಅಟ್ಟಿದರು. ಒಂಬತ್ತನೇ ನಿಮಿಷದಲ್ಲಿ ಲಭಿಸಿದ ಮತ್ತೊಂದು ಉತ್ತಮ ಅವಕಾಶವನ್ನೂ ತಂಡ ಕೈಚೆಲ್ಲಿತು. 14ನೇ ನಿಮಿಷದಲ್ಲಿ ಲಭಿಸಿದ ಕಾರ್ನರ್ ಕಿಕ್ ಅವಕಾಶವನ್ನು ಗೋವಾ ಕೈಚೆಲ್ಲಿತು. 21ನೇ ನಿಮಿಷದಲ್ಲಿ ಲಭಿಸಿದ ಫ್ರೀ ಕಿಕ್‌ನಲ್ಲೂ ಗೋಲು ಗಳಿಸಲು ಆತಿಥೇಯರಿಗೆ ಸಾಧ್ಯವಾಗಲಿಲ್ಲ.

ಗೋಲು ಗಳಿಸದೇ ವಿರಾಮಕ್ಕೆ ತೆರಳಿದ ತಂಡಗಳು  ದ್ವಿತೀಯಾರ್ಧದಲ್ಲೂ ಪ್ರಬಲ ಪೈಪೋಟಿ ನಡೆಸಿದವು. 53ನೇ ನಿಮಿಷದಲ್ಲಿ ಎಟಿಕೆ ಎಂಬಿಗೆ ಫ್ರೀ ಕಿಕ್ ಅವಕಾಶ ಒದಗಿ ಬಂತು. ಆದರೆ ರಾಯ್ ಕೃಷ್ಣ ಅವರು ಒದ್ದ ಚೆಂಡು ಗೋಲುಪೆಟ್ಟಿಗೆಯಿಂದ ಆಚೆ ಸಾಗಿತು. ನಂತರ ಗೋವಾದ ಆಕ್ರಮಣ ಹೆಚ್ಚಾಯಿತು. ಆದರೆ ಗೋಲು ಗಳಿಸಲು ಆ ತಂಡಕ್ಕೆ ಎದುರಾಳಿಗಳು ಅವಕಾಶ ನೀಡಲಿಲ್ಲ. 85ನೇ ನಿಮಿಷದಲ್ಲಿ ಎದುರಾಳಿ ತಂಡಕ್ಕೆ ಗೋವಾ ಸುವರ್ಣಾವಕಾಶ ಒದಗಿಸಿತು. ರಾಯ್ ಕೃಷ್ಣ ಅವರ ಮುನ್ನಡೆ ತಡೆಯಲು ಯತ್ನಿಸಿದ ರಕ್ಷಣಾ ವಿಭಾಗದ ಐಬನ್ ಡೊಹ್ಲಿಂಗ್ ಪ್ರಮಾದ ಎಸಗಿ ಎಟಿಕೆಎಂಬಿಗೆ ಪೆನಾಲ್ಟಿ ಅವಕಾಶ ಒದಗಿಸಿದರು. ರಾಯ್ ಕೃಷ್ಣ ಮೋಹಕವಾಗಿ ಚೆಂಡನ್ನು ಗುರಿ ಮುಟ್ಟಿಸಿ ಮುನ್ನಡೆ ತಂದುಕೊಟ್ಟರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು