ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಟಿಕೆಗೆ ಮಣಿದ ಬಿಎಫ್‌ಸಿ

ಐಎಸ್‌ಎಲ್‌ ಟೂರ್ನಿ: ಲೀಗ್‌ನಲ್ಲಿ ಅಗ್ರಸ್ಥಾನಕ್ಕೇರಿದ ಕೋಲ್ಕತ್ತದ ತಂಡ
Last Updated 25 ಡಿಸೆಂಬರ್ 2019, 20:50 IST
ಅಕ್ಷರ ಗಾತ್ರ

ಕೋಲ್ಕತ್ತಾ: ಉತ್ತರಾರ್ಧದ ಆರಂಭದಲ್ಲೇ ಡೇವಿಡ್‌ ಜೊ ವಿಲಿಯಮ್ಸ್ ಗಳಿಸಿದ ಗೋಲಿನಿಂದ ಆತಿಥೇಯ ಎಟಿಕೆ ತಂಡ, ಐಎಸ್‌ಎಲ್‌ ಫುಟ್‌ಬಾಲ್‌ ಟೂರ್ನಿಯ ಲೀಗ್‌ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ತಂಡವನ್ನು 1–0 ಗೋಲಿನಿಂದ ಸೋಲಿಸಿತು. ಐಎಸ್‌ಎಲ್‌ನ ಐದು ಮುಖಾಮುಖಿಯಲ್ಲಿ ಎಟಿಕೆ ಎದುರು ಇದೇ ಮೊದಲ ಬಾರಿ ಹಾಲಿ ಚಾಂಪಿಯನ್ನರು ಮುಖಭಂಗ ಅನುಭವಿಸಿದಂತಾಯಿತು.

ವಿವೇಕಾನಂದ ಯುವಭಾರತಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಈ ಪಂದ್ಯದಲ್ಲಿ 47ನೇ ನಿಮಿಷ ಗಳಿಸಿದ ಗೋಲು ನಿರ್ಣಾಯಕವಾಯಿತು.ಜಯೇಶ್‌ ರಾಣೆ ಅವರ ಬಲಗಡೆಯಿಂದ ಕಳುಹಿಸಿದ ಪಾಸ್‌ನಲ್ಲಿ ಡೇವಿಡ್‌ ವಿಲಿಯಮ್ಸ್‌ ಅವರು ಮಿಂಚಿನ ವೇಗದಲ್ಲಿ ಚೆಂಡನ್ನು ಗೋಲಿನೊಳಕ್ಕೆ ಒದ್ದರು. ಗೋಲ್‌ಕೀಪರ್‌ ಗುರುಪ್ರೀತ್‌ ಸಂಧು ಬಲಕ್ಕೆ ಜಿಗಿದು ತಡೆಯುವ ಯತ್ನ ನಡೆಸಿದರೂ ಯಶಸ್ವಿಯಾಗಲಿಲ್ಲ.

ಈ ಗೆಲುವಿನಿಂದ ಎಟಿಕೆ ತಂಡ ಲೀಗ್‌ನಲ್ಲಿ 18 ಪಾಯಿಂಟ್‌ಗಳೊಡನೆ ಅಗ್ರಸ್ಥಾನಕ್ಕೇರಿತು. ಗೋವಾ ಕೂಡ 18 ಪಾಯಿಂಟ್‌ ಗಳಿಸಿದ್ದರೂ ಗೋಲು ಸರಾಸರಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಅಗ್ರಸ್ಥಾನಕ್ಕೇರುವ ಅವಕಾಶ ಹೊಂದಿದ್ದ ಬೆಂಗಳೂರು ಎಫ್‌ಸಿ 16 ಪಾಯಿಂಟ್‌ಗಳೊಡನೆ ಮೂರನೇ ಸ್ಥಾನದಲ್ಲಿದೆ. ಬೆಂಗಳೂರು ತಂಡಕ್ಕೆ ಹಾಲಿ ಲೀಗ್‌ನಲ್ಲಿ ಇದು ಎರಡನೇ ಸೋಲು.

ಮೊದಲಾರ್ಧದಲ್ಲಿ ಎರಡೂ ತಂಡಗಳಿಗೆ ಕೆಲವು ಅವಕಾಶಗಳು ಒದಗಿದ್ದವು. ಬೆಂಗಳೂರು ತಂಡ ಚೆಂಡಿನ ಮೇಲೆ ಹೆಚ್ಚು ನಿಯಂತ್ರಣ ಹೊಂದಿತ್ತು.ಎಟಿಕೆ ಪರ ಲೀಗ್‌ನಲ್ಲಿ ಎಂಟು ಗೋಲುಗಳನ್ನು ಗಳಿಸಿರುವ ರಾಯ್‌ಕೃಷ್ಣ ಕೆಲವು ದಾಳಿಗಳನ್ನು ನಡೆಸಿ ಎದುರಾಳಿ ರಕ್ಷಣಾ ವಿಭಾಗಕ್ಕೆ ಆತಂಕ ಮೂಡಿಸಿದರು. ಕೆಲವು ಸಂದರ್ಭಗಳಲ್ಲಿ ಗುರುಪ್ರೀತ್‌ ಅಷ್ಟೊಂದು ವಿಶ್ವಾಸದಲ್ಲಿದ್ದಂತೆ ಕಾಣಲಿಲ್ಲ.

29ನೇ ನಿಮಿಷ ಬೆಂಗಳೂರು ತಂಡಕ್ಕೆ ಒಳ್ಳೆಯ ಅವಕಾಶ ಒದಗಿತ್ತು. ದಿಮಾಸ್‌ ಡೆಲ್ಗಾಡೊ, ರಕ್ಷಣೆ ಆಟಗಾರರ ಮೇಲಿಂದ ನಾಜೂಕಾಗಿ ತೇಲಿಸಿದ ಚೆಂಡನ್ನು ಉದಾಂತ ಸಿಂಗ್‌ ಸರಿಯಾಗಿ ನಿಯಂತ್ರಿಸಿದರೂ ಮುನ್ನುಗ್ಗುವಾಗ ಎಡವಿದರು. ಪರಿಣಾಮ ಎದುರಾಳಿ ಗೋಲ್‌ಕೀಪರ್‌ ಅರಿಂದಮ್‌ ಅವರಿಗೆ ಮುಂದೆ ಓಡಿ ಚೆಂಡನ್ನು ತಡೆಯಲು ಅವಕಾಶವಾಯಿತು.

ಪಂದ್ಯದ ಎರಡನೇ ನಿಮಿಷವೇ ರಾಯ್‌ಕೃಷ್ಣ ಆತಂಕ ಮೂಡಿಸಿದ್ದರು. ಡೇವಿಡ್‌ ವಿಲಿಯಮ್ಸ್‌ ಬಲಗಡೆಯಿಂದ ಒದಗಿಸಿದ ಪಾಸ್‌ನಲ್ಲಿ ಚೆಂಡನ್ನು ಪಡೆದಿದ್ದರು. ಬೆಂಗಳೂರು ರಕ್ಷಣೆ ಆಟಗಾರರನ್ನೂ ವಂಚಿಸಿದ್ದರು. ಅಸಿಸ್ಟೆಂಟ್‌ ರೆಫ್ರಿ ಕೂಡ ಆಫ್‌ಸೈಡ್‌ ಸೂಚನೆ ನೀಡಲಿಲ್ಲ. ಕೃಷ್ಣ, ಎದುರಾಳಿ ಗೋಲ್‌ಕೀಪರ್‌ ಅವರನ್ನು ಮಾತ್ರ ವಂಚಿಸಬೇಕಿತ್ತು. ಆದರೆ ಅವರ ಗೋಲು ಯತ್ನದಲ್ಲಿ ಚೆಂಡು ಗೋಲಿನ ಬದಿಗೆ ಹೊಡೆಯಿತು. ಮರುಪ್ರಸಾರದಲ್ಲಿ ಕೃಷ್ಣ ಆಫ್‌ಸೈಡ್‌ ಆಗಿದ್ದು ಸ್ಪಷ್ಟವಾಗಿ ಗೋಚರಿಸಿತು.

ಚೆನ್ನೈಗೆ ಗೋವಾ ಸವಾಲು:

ಕೋಚ್‌ ಬದಲಾದ ನಂತರ ಚೇತರಿಸಿಕೊಳ್ಳುತ್ತಿರುವ ಚೆನ್ನೈಯಿನ್‌ ಎಫ್‌ಸಿ ತಂಡ, ಗುರುವಾರ ಜವಾಹರಲಾಲ್‌ ನೆಹರೂ ಕ್ರೀಡಾಂಗಣದಲ್ಲಿ ನಡೆಯುವ ಐಎಸ್‌ಎಲ್‌ ಫುಟ್‌ಬಾಲ್‌ ಟೂರ್ನಿ ಪಂದ್ಯದಲ್ಲಿ ಗೋವಾ ಎಫ್‌ಸಿ ತಂಡವನ್ನು ಎದುರಿಸಲಿದೆ.

ಮೊದಲ ನಾಲ್ಕು ಪಂದ್ಯಗಳಿಂದ ಕೇವಲ ಒಂದು ಪಾಯಿಂಟ್‌ ಗಳಿಸಿ ಕಂಗಾಲಾಗಿದ್ದ ಚೆನ್ನೈಯಿನ್‌ ತಂಡ, ಒವೆನ್‌ ಕೊಯ್ಲ್‌ ತರಬೇತಿಗಿಳಿದ ನಂತರ ಚೇತರಿಸಿಕೊಂಡಿದೆ. ಆಡಿರುವ ಕೊನೆಯ ನಾಲ್ಕು ಪಂದ್ಯಗಳಲ್ಲಿ ಎರಡು ಡ್ರಾ ಮತ್ತು ಎರಡು ಗೆಲುವಿನೊಡನೆ ಪುಟಿದೆದ್ದಿದೆ.

ಪ್ರಸಕ್ತ ಎಂಟನೇ ಸ್ಥಾನದಲ್ಲಿರುವ ಚೆನ್ನೈಯಿನ್‌, ಗೋವಾ ವಿರುದ್ಧ ಗೆದ್ದಲ್ಲಿ ಆರನೇ ಸ್ಥಾನಕ್ಕೆ ಜಿಗಿಯಲಿದೆ. ಆದರೆ ಗೋವಾ ತಂಡವನ್ನು ಮಣಿಸುವುದು ಅಷ್ಟು ಸುಲಭವಲ್ಲ. ಉತ್ತಮ ಫಾರ್ಮ್‌ನಲ್ಲಿರುವ ಗೋವಾ ತಂಡ 9 ಪಂದ್ಯಗಳಿಂದ 18 ಪಾಯಿಂಟ್‌ ಗಳಿಸಿ ಸಾಮರ್ಥ್ಯಕ್ಕೆ ಕಡಿಮೆಯಿಲ್ಲದಂತೆ ಆಡಿದೆ.ಈ ಸಾಲಿನ ತವರಿನ ಮೊದಲ ಪಂದ್ಯದಲ್ಲಿ ಗೋವನ್ನರ ಕೈಲಿ ಅನುಭವಿಸಿದ್ದ 0–3 ಗೋಲುಗಳ ಸೋಲಿಗೆ ಮುಯ್ಯಿ ತೀರಿಸಲೂ ಹೈದರಾಬಾದ್‌ ಪ್ರಯತ್ನಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT