ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೈನಲ್‌ನತ್ತ ಎಟಿಕೆಎಂಬಿ ಚಿತ್ತ

ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿ ಸೆಮಿಫೈನಲ್‌: ನಾರ್ತ್‌ಈಸ್ಟ್ ಯುನೈಟೆಡ್ ಎದುರಾಳಿ
Last Updated 8 ಮಾರ್ಚ್ 2021, 14:05 IST
ಅಕ್ಷರ ಗಾತ್ರ

ಮಡಗಾಂವ್‌: ಫೈನಲ್‌ ಮೇಲೆ ಕಣ್ಣಿಟ್ಟಿರುವಎಟಿಕೆ ಮೋಹನ್ ಬಾಗನ್‌ (ಎಟಿಕೆಎಂಬಿ) ಹಾಗೂ ನಾರ್ತ್‌ಈಸ್ಟ್ ಯುನೈಟೆಡ್‌ ಎಫ್‌ಸಿ ತಂಡಗಳು ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಎರಡನೇ ಲೆಗ್ ಸೆಮಿಫೈನಲ್‌ಗೆ ಸಜ್ಜಾಗಿವೆ. ಉಭಯ ತಂಡಗಳ ನಡುವೆ ಮಂಗಳವಾರ ನಡೆಯುವ ಹಣಾಹಣಿಗೆ ಫಟೋರ್ಡ ಕ್ರೀಡಾಂಗಣ ಸಿದ್ಧಗೊಂಡಿದೆ.

ಮೊದಲ ಲೆಗ್ ಸೆಮಿಫೈನಲ್‌ ಪಂದ್ಯವನ್ನು ಉಭಯ ತಂಡಗಳು 1–1ರಿಂದ ಡ್ರಾ ಮಾಡಿಕೊಂಡಿದ್ದವು. ಶನಿವಾರ ನಡೆದ ಈ ಹಣಾಹಣಿಯಲ್ಲಿ ಇದ್ರಿಸ್ಸಾ ಸಿಲ್ಲಾ ಅವರು ಇಂಜುರಿ ಅವಧಿಯಲ್ಲಿ ಗಳಿಸಿದ ಗೋಲಿನೊಂದಿಗೆ ನಾರ್ತ್‌ಈಸ್ಟ್ ಯುನೈಟೆಡ್ ಸಮಬಲ ಸಾಧಿಸಿತ್ತು.

ಪ್ರಶಸ್ತಿ ಸುತ್ತಿಗೆ ತಲುಪಲು ಮಂಗಳವಾರ ನಡೆಯುವ ಪಂದ್ಯವು ಉಭಯ ತಂಡಗಳಿಗೆ ನಿರ್ಣಾಯಕವಾಗಿದೆ. ಇಲ್ಲಿ ಗೆದ್ದರೆ ನಾರ್ತ್‌ಈಸ್ಟ್ ತಂಡಕ್ಕೆ ಮೊದಲ ಬಾರಿ ಫೈನಲ್ ತಲುಪುವ ಅವಕಾಶ ಸಿಗಲಿದೆ; ಆ್ಯಂಟೊನಿಯೊ ಹಬಾಸ್ ತರಬೇತಿಯಲ್ಲಿ ಪಳಗಿರುವ ಎಟಿಕೆಎಂಬಿ ಮೂರನೇ ಬಾರಿ ಅಂತಿಮ ಪಂದ್ಯದಲ್ಲಿ ಆಡಲಿದೆ.

ಡಿಫೆನ್ಸ್ ವಿಭಾಗದಲ್ಲಿ ಬಲಿಷ್ಠವಾಗಿರುವ ಕೋಲ್ಕತ್ತ ಮೂಲದ ಎಟಿಕೆಎಂಬಿ, ಲೀಗ್ ಹಂತದಲ್ಲಿ ಕೇವಲ 15 ಗೋಲುಗಳನ್ನು ಬಿಟ್ಟುಕೊಟ್ಟಿದೆ. ಆದರೆ ಕಳೆದ ಮೂರು ಪಂದ್ಯಗಳಲ್ಲೇ ಎದುರಾಳಿಗೆ ಐದು ಗೋಲುಗಳನ್ನು ನೀಡಿದ್ದು, ಆ ತಂಡದ ಕಳವಳಕ್ಕೆ ಕಾರಣವಾಗಿತ್ತು; ಅಲ್ಲದೆ ಮೊದಲ ಲೆಗ್‌ನಲ್ಲೇ ಫೈನಲ್ ತಲುಪುವ ಅವಕಾಶವನ್ನೂ ಕೈ ಚೆಲ್ಲಿತ್ತು.

‘ಮೊದಲ ಲೆಗ್‌ನಲ್ಲಿ ನಮಗೆ ದೊಡ್ಡ ಅವಕಾಶವಿತ್ತು. ಆದರೆ ಅದು ಮರಳಿ ಬರಲಾರದು. ಈ ಪಂದ್ಯದಲ್ಲಿ ಸಾಧ್ಯವಾದಷ್ಟು ಅತ್ಯುತ್ತಮ ಸಾಮರ್ಥ್ಯವನ್ನು ನಮ್ಮ ಆಟಗಾರರು ತೋರಬೇಕಿದೆ‘ ಎಂದು ಹಬಾಸ್ ಹೇಳಿದ್ದಾರೆ.

ಖಾಲಿದ್ ಜಮೀಲ್ ಮಾರ್ಗದರ್ಶನದಲ್ಲಿರುವ ನಾರ್ತ್‌ಈಸ್ಟ್ ಯುನೈಟೆಡ್ ತಂಡವೂ ತೀವ್ರ ಪೈಪೋಟಿ ನೀಡುವ ನಿರೀಕ್ಷೆಯಿದೆ.

ಪಂದ್ಯ ಆರಂಭ: ಸಂಜೆ 7.30

ಸ್ಥಳ: ಫಟೋರ್ಡ ಕ್ರೀಡಾಂಗಣ, ಮಡಗಾಂವ್‌

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT