ಫುಟ್‌ಬಾಲ್‌: ಐದು ಗೋಲು ಗಳಿಸಿದ ವಿಜಯ್‌

7

ಫುಟ್‌ಬಾಲ್‌: ಐದು ಗೋಲು ಗಳಿಸಿದ ವಿಜಯ್‌

Published:
Updated:

ಬೆಂಗಳೂರು: ಬೆಂಗಳೂರು ಗನ್ನರ್ಸ್‌ ಎಫ್‌ಸಿ ತಂಡದ ವಿಜಯ್‌, ಸೋಮವಾರ ಅಶೋಕನಗರದಲ್ಲಿರುವ ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಗೋಲುಗಳ ಮಳೆ ಸುರಿಸಿದರು.

ವಿಜಯ್‌ ಗಳಿಸಿದ ‘ಹ್ಯಾಟ್ರಿಕ್‌’ ಸಹಿತ ಐದು ಗೋಲುಗಳ ನೆರವಿನಿಂದ ಗನ್ನರ್ಸ್‌ ತಂಡ ಬೆಂಗಳೂರು ಜಿಲ್ಲಾ ಫುಟ್‌ಬಾಲ್‌ ಸಂಸ್ಥೆ (ಬಿಡಿಎಫ್‌ಎ) ಆಶ್ರಯದ ‘ಬಿ’ ಡಿವಿಷನ್‌ ಲೀಗ್‌ ಪಂದ್ಯದಲ್ಲಿ ಜಯಭೇರಿ ಮೊಳಗಿಸಿತು.

‘ಬಿ’ ಗುಂಪಿನ ಹೋರಾಟದಲ್ಲಿ ಗನ್ನರ್ಸ್‌ 8–2 ಗೋಲುಗಳಿಂದ ಶ್ರೀ ಗಜಾನನ ಎಫ್‌ಸಿ ತಂಡವನ್ನು ಪರಾಭವಗೊಳಿಸಿತು.

ಗಜಾನನ ತಂಡ 12ನೇ ನಿಮಿಷದಲ್ಲಿ ಖಾತೆ ತೆರೆಯಿತು. ಮ್ಯಾಥ್ಯೂಸ್‌ ಚೆಂಡನ್ನು ಗುರಿ ಮುಟ್ಟಿಸಿದರು. 35+1ನೇ ನಿಮಿಷದಲ್ಲಿ ಅರಿವೋಲಿ ಗೋಲು ಬಾರಿಸಿದ್ದರಿಂದ ಗನ್ನರ್ಸ್‌ ತಂಡ 1–1 ಸಮಬಲ ಸಾಧಿಸಿತು. ನಂತರ ವಿಜಯ್‌, ಕಾಲ್ಚಳಕ ತೋರಿದರು. ಅವರು 41, 46 ಮತ್ತು 52ನೇ ನಿಮಿಷಗಳಲ್ಲಿ ಗೋಲು ಗಳಿಸಿ ‘ಹ್ಯಾಟ್ರಿಕ್‌’ ಸಾಧನೆ ಮಾಡಿದರು.

57ನೇ ನಿಮಿಷದಲ್ಲಿ ಫೆಲಿಕ್ಸ್‌ ಗೋಲು ಹೊಡೆದಿದ್ದರಿಂದ ಗನ್ನರ್ಸ್‌ ಮುನ್ನಡೆ 5–1ಕ್ಕೆ ಹೆಚ್ಚಿತು. ಇದರ ಬೆನ್ನಲ್ಲೇ ವಿಜಯ್‌ (61ನೇ ನಿ.) ಮತ್ತು ಫರ್ನಾಂಡೀಸ್‌ (65ನೇ ನಿ.) ಮೋಡಿ ಮಾಡಿ ಗನ್ನರ್ಸ್‌ ಗೆಲುವಿನ ಹಾದಿ ಸುಗಮ ಮಾಡಿದರು. 66ನೇ ನಿಮಿಷದಲ್ಲಿ ವೆಂಕಟೇಶ್‌ ಗೋಲು ಬಾರಿಸಿದ್ದರಿಂದ ಗಜಾನನ ತಂಡದ ಹಿನ್ನಡೆ 2–7ಕ್ಕೆ ತಗ್ಗಿತು. 70+1ನೇ ನಿಮಿಷದಲ್ಲಿ ವಿಜಯ್‌, ಮತ್ತೊಮ್ಮೆ ಪಾರಮ್ಯ ಮೆರೆದು ಅಭಿಮಾನಿಗಳನ್ನು ರಂಜಿಸಿದರು.

ಸಾಯ್‌ ಎಫ್‌ಸಿ ಮತ್ತು ಗೋವನ್ಸ್‌ ಎಫ್‌ಸಿ ನಡುವಣ ‘ಎ’ ಗುಂಪಿನ ಹೋರಾಟ 1–1 ಗೋಲುಗಳಿಂದ ಸಮಬಲವಾಯಿತು.

ಗೋವನ್ಸ್‌ ತಂಡದ ರಾಘವೇಂದ್ರ 25ನೇ ನಿಮಿಷದಲ್ಲಿ ಚೆಂಡನ್ನು ಗುರಿ ಮುಟ್ಟಿಸಿದರು. 48ನೇ ನಿಮಿಷದಲ್ಲಿ ಸಾಯ್‌ ತಂಡದ ಪ್ರಥಮೇಶ್‌ ಗೋಲು ಬಾರಿಸಿ 1–1 ಸಮಬಲಕ್ಕೆ ಕಾರಣರಾದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !