ಬೆಂಗಳೂರು: ಬಿ.ಸಿ ಎಫ್ಸಿ ಮತ್ತು ಬೆಂಗಳೂರು ವಾಂಡರರ್ಸ್ ತಂಡಗಳು ಬಿಡಿಎಫ್ಎ 'ಸಿ' ಡಿವಿಷನ್ ಫುಟ್ಬಾಲ್ ಟೂರ್ನಿಯ ಸೆಮಿಫೈನಲ್ನಲ್ಲಿ ಸೆಣಸಲಿವೆ.
ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬಿ.ಸಿ ಎಫ್ಸಿ 1–0ಯಿಂದ ಟೋರ್ನಡೋಸ್ ಎಫ್ಸಿಯನ್ನು ಮಣಿಸಿತು. ಪಂದ್ಯದ ಏಕೈಕ ಗೋಲು ನೊನಾಥನ್ (30ನೇ ನಿಮಿಷ) ಗಳಿಸಿದರು.
ಶುಕ್ರವಾರ ನಡೆದಿದ್ದ ಪಂದ್ಯದಲ್ಲಿ ವಾಂಡರರ್ಸ್ ತಂಡ ಪೆನಾಲ್ಟಿ ಶೂಟೌಟ್ನಲ್ಲಿ ಜಾಲಿ ಬ್ರದರ್ಸ್ ಎಫ್ಸಿಯನ್ನು ಮಣಿಸಿತ್ತು. ನಿಗದಿತ ಅವಧಿಯಲ್ಲಿ ಪಂದ್ಯ 1-1ರಲ್ಲಿ ಸಮ ಆಗಿತ್ತು. ವಾಂಡರರ್ಸ್ಗಾಗಿ ಸುನಿಲ್ 43ನೇ ನಿಮಿಷದಲ್ಲಿ ಗೋಲು ಗಳಿಸಿದರು. ಎದುರಾಳಿ ತಂಡದ ಸಾಜಿದ್ 70+3ನೇ ನಿಮಿಷದಲ್ಲಿ ಚೆಂಡನ್ನು ಗುರಿಮುಟ್ಟಿಸಿ ಪಂದ್ಯವನ್ನು ರೋಚಕವಾಗಿಸಿದರು.
ಪೆನಾಲ್ಟಿ ಶೂಟೌಟ್ನಲ್ಲಿ ವಾಂಡರರ್ಸ್ ಪರ ಸುನಿಲ್, ಕುಮಾರ್ ಎಸ್, ದೀಪು, ರಂಜಿತ್ ಮತ್ತು ರಮೇಶ್ ಎಸ್ ಗುರಿ ಕಂಡರು. ಜಿದ್ದಾಜಿದ್ದಿಯಿಂದ ಕಾದಾಡಿದ ಜಾಲಿ ಬ್ರದರ್ಸ್ಗಾಗಿ ರುಸ್ಲಾನ್, ಬೆನ್ನಿ, ಸುಹಾಸ್ ಮತ್ತು ಸಯೀದ್ ಅವರಿಗಷ್ಟೇ ಗೋಲು ಗಳಿಸಲು ಸಾಧ್ಯವಾಯಿತು.
ಶುಕ್ರವಾರ ನಡೆದ ಎಂಟರ ಘಟ್ಟದ ಮತ್ತೊಂದು ರೋಚಕ ಹಣಾಹಣಿಯಲ್ಲಿ ಬೆಂಗಳೂರು ವಾರಿಯರ್ಸ್ ಏಕೈಕ ಗೋಲಿನಿಂದ ಇಸಿಡಿ ಎಫ್ಸಿಯನ್ನು ಮಣಿಸಿತ್ತು. ಭರತ್ ಎಂ ಗಳಿಸಿದ ಗೋಲು ವಾರಿಯರ್ಸ್ ತಂಡದ ಗೆಲುವಿಗೆ ಕಾರಣವಾಯಿತು.