ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಲ್ಜಿಯಂ ತಂಡಕ್ಕೆ ಜಯ ತಂದುಕೊಟ್ಟ ಚಾಡ್ಲಿ

ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ ಈಡನ್‌ ಹಜಾರ್ಡ್‌ ಬಳಗ: ಸೋತರೂ ಅಭಿಮಾನಿಗಳ ಮನ ಗೆದ್ದ ಜಪಾನ್‌
Last Updated 3 ಜುಲೈ 2018, 19:55 IST
ಅಕ್ಷರ ಗಾತ್ರ

ರೊಸ್ತೊವ್‌ ಆನ್‌ ಡಾನ್‌: ಬದಲಿ ಆಟಗಾರನಾಗಿ ಅಂಗಳಕ್ಕಿಳಿದಿದ್ದ ನೆಸೆರ್ ಚಾಡ್ಲಿ, ಸೋಮವಾರ ಬೆಲ್ಜಿಯಂ ತಂಡಕ್ಕೆ ಆಪತ್ಬಾಂಧವನಾದರು.

ಹೆಚ್ಚುವರಿ ಅವಧಿಯ ಆಟ ಮುಗಿಯಲು ಕೆಲವೇ ಸೆಕೆಂಡುಗಳು ಬಾಕಿ ಇದ್ದಾಗ ಚಾಡ್ಲಿ ಗಳಿಸಿದ ಗೋಲು, ಈಡನ್‌ ಹಜಾರ್ಡ್‌ ಬಳಗ ಸಂಭ್ರಮದ ಹೊಳೆಯಲ್ಲಿ ಮಿಂದೇಳುವಂತೆ ಮಾಡಿತು. ಜಪಾನ್ ತಂಡದ ಕನಸು ನುಚ್ಚುನೂರಾಯಿತು. ಗೆಲುವಿನಂಚಿನಲ್ಲಿ ಸೋತ ಜಪಾನಿಗರು ಕಣ್ಣೀರ ಕಡಲಲ್ಲಿ ಮುಳುಗಿದರು.

ರೊಸ್ತೊವ್‌ ಅರೆನಾದಲ್ಲಿ ಸೋಮವಾರ ರಾತ್ರಿ ನಡೆದ ಫಿಫಾ ವಿಶ್ವಕಪ್ ಟೂರ್ನಿಯ ಪ್ರೀ ಕ್ವಾರ್ಟರ್ ಫೈನಲ್‌ ಹಣಾಹಣಿಯಲ್ಲಿ ಬೆಲ್ಜಿಯಂ 3–2 ಗೋಲುಗಳಿಂದ ಜಪಾನ್‌ ತಂಡದ ಸವಾಲು ಮೀರಿತು.

ಈ ಮೂಲಕ ವಿಶ್ವಕಪ್‌ನ ನಾಕೌಟ್‌ ಹಂತದ ಪಂದ್ಯದಲ್ಲಿ 0–2ರಿಂದ ಹಿನ್ನಡೆ ಅನುಭವಿಸಿದ ನಂತರ ದಿಟ್ಟ ಆಟ ಆಡಿ ಗೆಲುವಿನ ತೋರಣ ಕಟ್ಟಿದ ತಂಡ ಎಂಬ ಹಿರಿಮೆಗೆ ಬೆಲ್ಜಿಯಂ ಪಾತ್ರವಾಯಿತು.

ಬೆಲ್ಜಿಯಂ ತಂಡ 3–4–2–1ರ ಯೋಜನೆಯೊಂದಿಗೆ ಕಣಕ್ಕಿಳಿದರೆ, ಜಪಾನ್‌ ಕೋಚ್‌ ಅಕಿರಾ ನಿಶಿನೊ 4–2–3–1ರ ರಣನೀತಿ ಹೆಣೆದು ತಂಡವನ್ನು ಅಂಗಳಕ್ಕಿಳಿಸಿದ್ದರು. ಎರಡೂ ತಂಡಗಳು ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದವು. ಹೀಗಾಗಿ ಮೊದಲಾರ್ಧದಲ್ಲಿ ಯಾರಿಗೂ ಖಾತೆ ತೆರೆಯಲು ಆಗಲಿಲ್ಲ.

ದ್ವಿತೀಯಾರ್ಧದಲ್ಲಿ ‘ಸಮುರಾಯ್‌’ ಪಡೆಯ ಆಟ ರಂಗೇರಿತು. 48ನೇ ನಿಮಿಷದಲ್ಲಿ ಗೆಂಕಿ ಹರಗುಚಿ, ಬೆಲ್ಜಿಯಂ ತಂಡದ ರಕ್ಷಣಾ ಕೋಟೆ ಭೇದಿಸಿ ಚೆಂಡನ್ನು ಗುರಿ ಮುಟ್ಟಿಸುವಲ್ಲಿ ಯಶಸ್ವಿಯಾದರು. ಸಹಆಟಗಾರ, ಅಂಗಳದ ಮಧ್ಯಭಾಗದಿಂದ ತಮ್ಮತ್ತ ತಳ್ಳಿದ ಚೆಂಡಿನ ಮೇಲೆ ಚುರುಕಾಗಿ ನಿಯಂತ್ರಣ ಸಾಧಿಸಿದ ಹರಗುಚಿ ಅದನ್ನು ಎದುರಾಳಿ ಆವರಣದ ಬಲತುದಿಯಿಂದ ಗುರಿ ಮುಟ್ಟಿಸಿದರು.

ಅವರು ಒದ್ದ ಚೆಂಡು ಬೆ‌ಲ್ಜಿಯಂ ಗೋಲುಪೆಟ್ಟಿಗೆಯ ಬಲೆಗೆ ಮುತ್ತಿಕ್ಕುತ್ತಿದ್ದಂತೆ ಜಪಾನ್‌ ಪಾಳಯದಲ್ಲಿ ಸಂಭ್ರಮ ಮೇಳೈಸಿತು. 52ನೇ ನಿಮಿಷದಲ್ಲಿ ತಕಾಶಿ ಇನುಯಿ ಕಾಲ್ಚಳಕ ತೋರಿದರು. ಹೀಗಾಗಿ ತಂಡದ ಮುನ್ನಡೆ 2–0ಗೆ ಹೆಚ್ಚಿತು. 68ನೇ ನಿಮಿಷದವರೆಗೂ ಜಪಾನ್‌, ಮುನ್ನಡೆ ಕಾಪಾಡಿಕೊಂಡಿದ್ದರಿಂದ ಈ ತಂಡ ಕ್ವಾರ್ಟರ್‌ ಫೈನಲ್‌ ಪ್ರವೇಶಿಸುವುದು ಖಚಿತ ಎಂದು ಅನೇಕರು ಭಾವಿಸಿದ್ದರು.

ನಂತರ ಮಿಂಚಿನ ಆಟ ಆಡಿದ ಬೆಲ್ಜಿಯಂ ಆಟಗಾರರು ಪಂದ್ಯದ ಚಿತ್ರಣವನ್ನೇ ಬದಲಿಸಿಬಿಟ್ಟರು. 69ನೇ ನಿಮಿಷದಲ್ಲಿ ಜಾನ್‌ ವರ್ಟೊಂಗೆನ್‌ ಗೋಲು ದಾಖಲಿಸಿ ಹಿನ್ನಡೆಯನ್ನು 1–2ಕ್ಕೆ ತಗ್ಗಿಸಿದರು. ಸಹಆಟಗಾರ ಮೇಲಕ್ಕೆ ಒದ್ದ ಚೆಂಡನ್ನು ಜಾನ್‌, ತಲೆತಾಗಿಸಿ (ಹೆಡರ್‌) ಗುರಿ ಮುಟ್ಟಿಸಿದ ರೀತಿ ಮನಸೆಳೆಯುವಂತಿತ್ತು.

74ನೇ ನಿಮಿಷದಲ್ಲಿ ಮರೌನ್‌ ಫೆಲಿನಿ ಗೋಲು ದಾಖಲಿಸಿ ಬೆಲ್ಜಿಯಂ ಸಂಭ್ರಮಕ್ಕೆ ಕಾರಣರಾದರು. ಹೀಗಾಗಿ ಆಟದ ರೋಚಕತೆ ಹೆಚ್ಚಿತು. ಹೆಚ್ಚುವರಿಯಾಗಿ ನೀಡಿದ್ದ ನಾಲ್ಕು ನಿಮಿಷಗಳ ಆಟದಲ್ಲೂ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿತು. 90+3ನೇ ನಿಮಿಷದವರೆಗೂ 2–2ರ ಸಮಬಲ ಕಂಡುಬಂದಿದ್ದರಿಂದ ಪಂದ್ಯ ಪೆನಾಲ್ಟಿ ಶೂಟೌಟ್‌ಗೆ ಸಾಗಬಹುದು ಎಂದು ಅಂದಾಜಿಸಲಾಗಿತ್ತು.

ಆದರೆ 90+4ನೇ ನಿಮಿಷದಲ್ಲಿ ಚಾಡ್ಲಿ ಚಮತ್ಕಾರ ಮಾಡಿದರು. ಅಂಗಳದ ಮಧ್ಯಭಾಗದಿಂದ ಚೆಂಡನ್ನು ಡ್ರಿಬಲ್‌ ಮಾಡುತ್ತಾ ಎದುರಾಳಿ ಆವರಣದತ್ತ ಸಾಗಿದ ಕೆವಿನ್‌ ಡಿ ಬ್ರೂನ್‌, ಅದನ್ನು ಮೆಯುನಿಯರ್‌ಗೆ ವರ್ಗಾಯಿಸಿದರು.

ಮೆಯುನಿಯರ್‌ ಅವರ ಲೋ ಕ್ರಾಸ್‌ ಪಾಸ್‌ನಲ್ಲಿ ಚಾಡ್ಲಿ ಚೆಂಡನ್ನು ಗುರಿ ಮುಟ್ಟಿಸುತ್ತಿದ್ದಂತೆ ಅಂಗಳದಲ್ಲಿ ಮೆಕ್ಸಿಕನ್‌ ಅಲೆ ಎದ್ದಿತು. ಬೆಲ್ಜಿಯಂ ಆಟಗಾರರು ಖುಷಿಯಿಂದ ಕುಣಿದಾಡಿದರು. ಗ್ಯಾಲರಿಯಲ್ಲಿ ಕುಳಿತಿದ್ದ ಜಪಾನ್‌ ಅಭಿಮಾನಿಗಳು ಬಿಕ್ಕಿ ಬಿಕ್ಕಿ ಅತ್ತರು.

**

ಜಪಾನ್‌ ತಂಡ ಎರಡು ಗೋಲುಗಳ ಮುನ್ನಡೆ ಗಳಿಸಿದ್ದರಿಂದ ನಾವು ಒತ್ತಡಕ್ಕೆ ಒಳಗಾಗಿದ್ದೆವು. ನಂತರ ಹಲವು ಬದಲಾವಣೆಗಳೊಂದಿಗೆ ಆಡಿ ಜಯದ ತೋರಣ ಕಟ್ಟಿದೆವು.
–ಈಡನ್‌ ಹಜಾರ್ಡ್‌,ಬೆಲ್ಜಿಯಂ ತಂಡದ ನಾಯಕ

**

ಬೆಲ್ಜಿಯಂ ಎದುರು ಅಂತಿಮ ಕ್ಷಣದವರೆಗೂ ಅಮೋಘ ಆಟ ಆಡಿದೆವು. 2–0ರಿಂದ ಮುನ್ನಡೆ ಹೊಂದಿದ್ದರಿಂದ ಗೆಲುವು ನಮ್ಮದೇ ಎಂಬ ಭಾವನೆ ಮೂಡಿತ್ತು. ಕೊನೆಯಲ್ಲಿ ಬೆಲ್ಜಿಯಂ ಆಟಗಾರರು ಪಂದ್ಯದ ಚಿತ್ರಣ ಬದಲಿಸಿಬಿಟ್ಟರು.

ಕೆಸುಕೆ ಹೊಂಡ ,ಜಪಾನ್‌ ತಂಡದ ಆಟಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT