ಫುಟ್‌ಬಾಲ್‌: ಬಿಎಫ್‌ಸಿಗೆ ಸೋಲು

7

ಫುಟ್‌ಬಾಲ್‌: ಬಿಎಫ್‌ಸಿಗೆ ಸೋಲು

Published:
Updated:

ವಲೆನ್ಸಿಯಾ: ಸ್ಪೇನ್‌ ಪ್ರವಾಸ ಕೈಗೊಂಡಿರುವ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ತನ್ನ ಮೊದಲ ಅಭ್ಯಾಸ ಪಂದ್ಯದಲ್ಲಿ ಇಲ್ಲಿನ ಅಟ್ಲೆಟಿಕೊ ಸಗುಂಟಿನೊ ಎದುರು ಸೋತಿದೆ. 

ಶನಿವಾರ ನಡೆದ ಪಂದ್ಯದಲ್ಲಿ ಬಿಎಫ್‌ಸಿಯು 1–2ರಿಂದ ಅಟ್ಲೆಟಿಕೊ ಸಗುಂಟಿನೊ ವಿರುದ್ಧ ಪರಾಭವಗೊಂಡಿತು. 

ಪಂದ್ಯದ ಏಳನೇ ನಿಮಿಷದಲ್ಲಿ ಅಟ್ಲೆಟಿಕೊ ತಂಡವು ಖಾತೆ ತೆರೆಯಿತು. ತಂಡದ ಡೆವಿಡ್‌ ಫಾಸ್‌ ಅವರು ಗೋಲು ಗಳಿಸಿ ಮುನ್ನಡೆ ತಂದುಕೊಟ್ಟರು. ನಂತರ ಉಭಯ ತಂಡಗಳು ಜಿದ್ದಾಜಿದ್ದಿನ ‍ಪೈಪೋಟಿ ನಡೆಸಿದವು. ಇದೇ ಕಾರಣದಿಂದ ಮೊದಲ ಅವಧಿಯಲ್ಲಿ ಇನ್ನೊಂದು ಗೋಲು ದಾಖಲಾಗಲಿಲ್ಲ. ಮೊದಲ ಪಂದ್ಯ ಆಡಿದ ಬಿಎಫ್‌ಸಿಯ ಕ್ಸಿಸ್ಕೊ ಹರ್ನಾಂಡೆಜ್‌ ಅನೇಕ ಬಾರಿ ಗೋಲು ಗಳಿಸುವ ಪ್ರಯತ್ನಗಳಲ್ಲಿ ಎಡವಿದರು. ಮೊದಲಾರ್ಧದ ಅಂತ್ಯಕ್ಕೆ ಸ್ಪೇನ್‌ನ ತಂಡವು 1–0ಯಿಂದ ಮುನ್ನಡೆ ಹೊಂದಿತ್ತು. 

ದ್ವಿತೀಯಾರ್ಧದಲ್ಲಿ ಬಿರುಸಿನ ಆಟ ಆರಂಭಿಸಿದ ಬಿಎಫ್‌ಸಿ, ಎದುರಾಳಿ ತಂಡದ ರಕ್ಷಣಾ ಪಡೆಯ ಕೋಟೆಯನ್ನು ಬೇಧಿಸಲು ಯಶಸ್ವಿಯಾಯಿತು. 53ನೇ ನಿಮಿಷದಲ್ಲಿ ತಂಡದ ಉದಾಂತ್‌ ಸಿಂಗ್‌ ಅವರು ಡಿಮಾಸ್‌ ಡೆಲ್ಗಾಡೊ ಅವರಿಗೆ ಪಾಸ್‌ ನೀಡಿದರು. ಚುರುಕಾಗಿ ಚೆಂಡನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಡಿಮಾಸ್‌ ಅದನ್ನು ಗುರಿ ತಲುಪಿಸಿದರು. ಇದರೊಂದಿಗೆ 1–1ರ ಸಮಬಲಕ್ಕೆ ಕಾರಣರಾದರು. 

ನಂತರ, ಬಿಎಫ್‌ಸಿಯ ಆಟ ರಂಗೇರಿತು. ತಂಡವು ಅನೇಕ ಬಾರಿ ಗೋಲು ಗಳಿಸುವ ಯತ್ನಗಳಲ್ಲಿ ಎಡವಿತಾದರೂ, ಅದರ ತಂತ್ರಗಾರಿಕೆ ಮತ್ತು ಆಕ್ರಮಣಕಾರಿ ಆಟವು ಎದುರಾಳಿ ತಂಡದ ಮೇಲೆ ಒತ್ತಡ ಹೆಚ್ಚಿಸಿತು. 

ಆದರೆ, 84ನೇ ನಿಮಿಷದಲ್ಲಿ ಅಟ್ಲೆಟಿಕೊ ತಂಡವು ಎರಡನೇ ಗೋಲು ದಾಖಲಿಸಿತು. ಮುಂದಿನ ನಿಮಿಷಗಳಲ್ಲಿ ಎಚ್ಚರಿಕೆ ಆಟ ಆಡಿದ ಆ ತಂಡವು ಪಂದ್ಯ ತನ್ನದಾಗಿಸಿಕೊಂಡಿತು. 

‘‍ತಂಡ ತೋರಿದ ಸಾಮರ್ಥ್ಯ ಉತ್ತಮವಾಗಿತ್ತು. ಇದೇ ಮೊದಲ ಬಾರಿಗೆ ಸ್ಪೇನ್‌ನಲ್ಲಿ ಆಡುತ್ತಿದ್ದೇವೆ. ಹಾಗಾಗಿ, ಆಟಗಾರರಲ್ಲಿ ಆತ್ಮವಿಶ್ವಾಸ ಹೆಚ್ಚಲು ಇದು ನೆರವಾಗಲಿದೆ’ ಎಂದು ಬಿಎಫ್‌ಸಿಯ ಕೋಚ್‌ ಚಾರ್ಲ್ಸ್‌ ಕ್ವದ್ರತ್‌ ಹೇಳಿದ್ದಾರೆ. 

ಸೋಮವಾರ ನಡೆಯುವ ಎರಡನೇ ಅಭ್ಯಾಸ ಪಂದ್ಯದಲ್ಲಿ ಬಿಎಫ್‌ಸಿಯು ಶಾಬಾದ್‌ ಅಲ್‌ ಅಹ್ಲಿ ದುಬೈ ಫುಟ್‌ಬಾಲ್‌ ಕ್ಲಬ್‌ ತಂಡವನ್ನು ಎದುರಿಸಲಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !