ಸತತ ಎರಡನೇ ಬಾರಿ ಫೈನಲ್‌ಗೆ ಬಿಎಫ್‌ಸಿ

ಶುಕ್ರವಾರ, ಮಾರ್ಚ್ 22, 2019
31 °C
ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್: ಮಿಂಚಿದ ಮಿಕು, ದಿಮಾಸ್, ಚೆಟ್ರಿ: ನಾರ್ತ್ ಈಸ್ಟ್‌ ತಂಡಕ್ಕೆ ಸೋಲು

ಸತತ ಎರಡನೇ ಬಾರಿ ಫೈನಲ್‌ಗೆ ಬಿಎಫ್‌ಸಿ

Published:
Updated:
Prajavani

ಬೆಂಗಳೂರು: ರೋಚಕ ಪಂದ್ಯದಲ್ಲಿ ಎದುರಾಳಿಗಳ ವಿರುದ್ಧ ಭರ್ಜರಿ ಜಯ ಸಾಧಿಸಿದ ಬೆಂಗಳೂರು ಫುಟ್‌ಬಾಲ್ ಕ್ಲಬ್‌ (ಬಿಎಫ್‌ಸಿ) ತಂಡ ಇಂಡಿಯನ್ ಸೂಪರ್ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಫೈನಲ್‌ ಪ್ರವೇಶಿಸಿತು.

 ನಗರದ ಕಂಠೀರವ ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ನಡೆದ ಮೊದಲ ಸೆಮಿಫೈನಲ್‌ ಎರಡನೇ ಲೆಗ್‌ನ ಪಂದ್ಯದಲ್ಲಿ ಆತಿಥೇಯ ತಂಡ ನಾರ್ತ್ ಈಸ್ಟ್ ಯುನೈಟೆಡ್‌ (ಎನ್‌ಇಯು) ವಿರುದ್ಧ 3–0 ಗೋಲುಗಳಿಂದ ಗೆದ್ದಿತು. 

ಗುವಾಹಟಿಯಲ್ಲಿ ಕಳೆದ ಗುರುವಾರ ನಡೆದಿದ್ದ ಮೊದಲ ಸೆಮಿಫೈನಲ್‌ನ ಮೊದಲ ಲೆಗ್‌ನ ಪಂದ್ಯದಲ್ಲಿ 1–2 ಗೋಲುಗಳಿಂದ ಸೋತಿದ್ದರೂ ಬಿಎಫ್‌ಸಿಯ ಫೈನಲ್‌ ಕನಸು ಕಮರಿರಲಿಲ್ಲ. ಪ್ರಶಸ್ತಿ ಸುತ್ತು ಪ್ರವೇಶಿಸಲು ತಂಡಕ್ಕೆ ತವರಿನ ಪಂದ್ಯದಲ್ಲಿ 1–0 ಅಂತರದ ಗೆಲುವು ಸಾಕಾಗಿತ್ತು. ಇದನ್ನು ತಪ್ಪಿಸುವ ಲೆಕ್ಕಾಚಾರದಲ್ಲಿ ಎನ್ಇಯು ನಾಲ್ವರು ಡಿಫೆಂಡರ್‌ಗಳನ್ನು ಕಣಕ್ಕೆ ಇಳಿಸಿತ್ತು. ಐವರು ಮಿಡ್‌ಫೀಲ್ಡರ್‌ಗಳು, ಮೂವರು ಡಿಫೆಂಡರ್‌ಗಳು ಮತ್ತು ಇಬ್ಬರು ಫಾರ್ವರ್ಡ ಆಟಗಾರರೊಂದಿಗೆ ಸವಾಲಿಗೆ ಸಜ್ಜಾದ ಬಿಎಫ್‌ಸಿ ಆರಂಭದಲ್ಲೇ ಪರಿಣಾಮಕಾರಿ ಆಟಕ್ಕೆ ಮುಂದಾಯಿತು. ಇದರ ಫಲವಾಗಿ ಎದುರಾಳಿಗಳ ಆವರಣದಲ್ಲಿ ಸತತವಾಗಿ ಆತಂಕ ಸೃಷ್ಟಿಸಲು ತಂಡಕ್ಕೆ ಸಾಧ್ಯವಾಯಿತು. ಪ್ರೇಕ್ಷಕರ ಮನಸ್ಸೂ ಮುದಗೊಂಡಿತು. 

ಆರಂಭದಲ್ಲಿ ಚುರುಕಿನ ಪಾಸ್‌ಗಳ ಮೂಲಕ ಫುಟ್‌ಬಾಲ್ ಪ್ರಿಯರನ್ನು ರಂಜಿಸಿದ ಬಿಎಫ್‌ಸಿ ಆಟಗಾರರು ಅವಕಾಶಗಳನ್ನು ಸೃಷ್ಟಿಸಿಕೊಳ್ಳಲು ಹೊಂಚು ಹಾಕಿದರು. ಆದರೆ ಅವಕಾಶಗಳನ್ನು ಕೈಚೆಲ್ಲಿದ ತಂಡ ಮೊದಲಾರ್ಧದಲ್ಲಿ ನಿರಾಸೆಗೆ ಒಳಗಾಯಿತು. 

ಮುನ್ನಡೆ ಗಳಿಸಿಕೊಟ್ಟ ಮಿಕು: ದ್ವಿತೀಯಾರ್ಧದಲ್ಲಿ ಪಂದ್ಯ ರೋಚಕ ಕ್ಷಣಗಳಿಗೆ ಸಾಕ್ಷಿಯಾಯಿತು. 48 ಮತ್ತು 49ನೇ ನಿಮಿಷಗಳಲ್ಲಿ ಬಿಎಫ್‌ಸಿಗೆ ಎರಡು ಕಾರ್ನರ್ ಕಿಕ್ ಅವಕಾಶಗಳು ಲಭಿಸಿದವು. ಆದರೆ ಚೆಂಡು ಗುರಿ ಸೇರಲಿಲ್ಲ. 72ನೇ ನಿಮಿಷದಲ್ಲಿ ತಂಡ ಫಲ ಕಂಡಿತು. ನಾಲ್ವರು ಆಟಗಾರರು ಹೆಣೆದ ತಂತ್ರ ಗೋಲಾಗಿ ಪರಿವರ್ತನೆಗೊಂಡಿತು. ಬಲಭಾಗದಿಂದ ಡಿಫೆಂಡರ್ ಹರ್ಮನ್‌ಜೋತ್ ಸಿಂಗ್‌ ಖಾಬ್ರಾ ನೀಡಿದ ಕ್ರಾಸ್‌, ಫ್ರಾನ್ಸಿಸ್ಕೊ ಹರ್ನಾಂಡಸ್‌ ಅವರ ಬಳಿಗೆ ಸಾಗಿತು. ಅವರು ಚೆಂಡನ್ನು ನಿಯಂತ್ರಿಸಿ ಉದಾಂತ ಸಿಂಗ್ ಬಳಿಗೆ ಕಳುಹಿಸಿದರು. ಚಾಣಾಕ್ಷತನ ಮೆರೆದ ಉದಾಂತ ಚೆಂಡನ್ನು ಮಿಕು ಬಳಿಗೆ ಅಟ್ಟಿದರು. ಪ್ರಥಮಾರ್ಧದಲ್ಲಿ ಅವಕಾಶಗಳನ್ನು ಕೈಚೆಲ್ಲಿ ತವರಿನ ಪ್ರೇಕ್ಷಕರ ಕೆಂಗಣ್ಣಿಗೆ ಗುರಿಯಾಗಿದ್ದ ಮಿಕು ಮೋಹಕ ಗೋಲಿನೊಂದಿಗೆ ತಂಡವನ್ನು ಸಂಭ್ರಮದ ಅಲೆಯಲ್ಲಿ ತೇಲಿಸಿದರು. ಗ್ಯಾಲರಿಗಳಲ್ಲಿ ಮೆಕ್ಸಿಕನ್ ಅಲೆ ಎದ್ದಿತು. 

ಉದಾಂತ, ಡೆಲ್ಗಾಡೊ ಮಿಂಚಿನ ಆಟ: 87ನೇ ನಿಮಿಷ, ಪಂದ್ಯದ ಅತ್ಯಂತ ರೋಮಾಂಚಕ ಕ್ಷಣಕ್ಕೆ ಸಾಕ್ಷಿಯಾಯಿತು. ತಮ್ಮ ಆವರಣದಿಂದ ಚೆಂಡಿನೊಂದಿಗೆ ಓಡುತ್ತ ಎದುರಾಳಿ ಆವರಣಕ್ಕೆ ನುಗ್ಗಿದ ಉದಾಂತ ಸಿಂಗ್ ಒದ್ದ ಚೆಂಡು ಗೋಲ್‌ಕೀಪರ್‌ನ ಕೈಯಿಂದ ವಾಪಸ್ ಬಂತು. ಅಷ್ಚರಲ್ಲಿ ಅಲ್ಲಿಗೆ ಧಾವಿಸಿದ ದಿಮಾಸ್ ಡೆಲ್ಗಾಡೊ ಗಾಳಿಯಲ್ಲಿ ತೇಲಿ ಚೆಂಡನ್ನು ಗುರಿ ಮುಟ್ಟಿಸಿದರು. 90ನೇ ನಿಮಿಷದಲ್ಲಿ ಸುಲಭ ಗೋಲು ಗಳಿಸಿದ ಸುನಿಲ್‌ ಚೆಟ್ರಿ ತಂಡದ ಮುನ್ನಡೆಯನ್ನು 3–0ಗೆ ಏರಿಸಿದರು. 

ಇಂದಿನ ಪಂದ್ಯ
ಎಫ್‌ಸಿ ಗೋವಾ – ಮುಂಬೈ ಸಿಟಿ ಎಫ್‌ಸಿ
ಸ್ಥಳ: ಜವಾಹರಲಾಲ್ ನೆಹರು ಕ್ರೀಡಾಂಗಣ, ಗೋವಾ
ಆರಂಭ: ರಾತ್ರಿ 7.30
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !