ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡಿಯನ್ ಸೂಪರ್ ಲೀಗ್: ಗೋವಾದಲ್ಲಿ ಗೋಲು ಗಳಿಸುವುದೇ ಬಿಎಫ್‌ಸಿ?

ಚೆಟ್ರಿ, ರಾಫೆಲ್‌, ಕೊರೊಮಿನಾಸ್ ಮೇಲೆ ಕಣ್ಣು
Last Updated 26 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ಗೋವಾ: ಮೊದಲ ಪಂದ್ಯದಲ್ಲಿ ಗೋಲು ಗಳಿಸಲು ತಿಣುಕಾಡಿದ ಹಾಲಿ ಚಾಂಪಿಯನ್‌ ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ಗೋವಾದಲ್ಲಿ ಯಶಸ್ಸು ಕಾಣುವುದೇ...? ಇಂಡಿಯನ್ ಸೂಪರ್ ಲೀಗ್‌ನಲ್ಲಿ (ಐಎಸ್‌ಎಲ್) ಎಫ್‌ಸಿ ಗೋವಾ ವಿರುದ್ಧ ಸೆಣಸಲು ಸಜ್ಜಾಗಿರುವ ಬಿಎಫ್‌ಸಿಯ ಅಭಿಮಾನಿಗಳನ್ನು ಕಾಡುತ್ತಿರುವ ಪ್ರಶ್ನೆ ಇದು. ಪಂದ್ಯ ಸೋಮವಾರ ನಡೆಯಲಿದೆ.

ತವರಿನ ಅಂಗಣದಲ್ಲಿ ಕಳೆದ ಸೋಮವಾರ ನಡೆದ ನಾರ್ತ್ ಈಸ್ಟ್ ಯುನೈಟೆಡ್ ಎದುರಿನ ಪಂದ್ಯ ಗೋಲು ರಹಿತ ಡ್ರಾದಲ್ಲಿ ಕೊನೆಗೊಂಡಿತ್ತು. ಬಲಿಷ್ಠ ಫಾರ್ವರ್ಡ್ ಆಟಗಾರರನ್ನು ಹೊಂದಿರುವ ಬಿಎಫ್‌ಸಿಗೆ ನಾರ್ತ್ ಈಸ್ಟ್‌ ಯುನೈಟೆಡ್‌ನ ರಕ್ಷಣಾ ಗೋಡೆಯನ್ನು ಭೇದಿಸಿ ಚೆಂಡನ್ನು ಗುರಿ ಸೇರಿಸಲು ಆಗಲಿಲ್ಲ. ನಾಯಕ ಮತ್ತು ಗೋಲು ಗಳಿಸುವ ಮಾಂತ್ರಿಕ ಸುನಿಲ್ ಚೆಟ್ರಿ ಮೊದಲ ಪಂದ್ಯದಲ್ಲಿ ಲಯ ಕಂಡುಕೊಳ್ಳಲು ವಿಫಲರಾಗಿದ್ದರು.

ಅತ್ತ ಗೋವಾ ತಂಡ ಮೊದಲ ಪಂದ್ಯದಲ್ಲಿ ಎರಡು ಬಾರಿಯ ಚಾಂಪಿಯನ್‌ ಚೆನ್ನೈಯಿನ್ ಎಫ್‌ಸಿಯನ್ನು ಏಕಪಕ್ಷೀಯವಾದ 3 ಗೋಲುಗಳಿಂದ ಮಣಿಸಿತ್ತು. ಸೆಮಿನ್‌ಲೆಲ್ ಡೊಂಗೆಲ್, ಫೆರಾನ್ ಕೊರೊಮಿನಾಸ್ ಮತ್ತು ಕಾರ್ಲೋಸ್ ಪೆನಾ ಗೋಲು ಗಳಿಸಿ ಮಿಂಚಿದ್ದರು. ತವರಿನಲ್ಲಿ ಮತ್ತೊಂದು ಪಂದ್ಯಕ್ಕೆ ಸಜ್ಜಾಗುತ್ತಿರುವ ಗೋವಾ ತಂಡ ಸೇಡು ತೀರಿಸುವ ದಾಹದೊಂದಿಗೆ ಕಣಕ್ಕೆ ಇಳಿಯಲಿದೆ. ಕಳೆದ ಬಾರಿ ಮುಂಬೈನಲ್ಲಿ ನಡೆದಿದ್ದ ಫೈನಲ್‌ನಲ್ಲಿ ಬಿಎಫ್‌ಸಿ 1–0 ಗೋಲಿನಿಂದ ಎಫ್‌ಸಿ ಗೋವಾ ತಂಡವನ್ನು ಮಣಿಸಿತ್ತು.

ಮಂದಾರ್ ರಾವ್ ದೇಸಾಯಿ ನಾಯಕತ್ವದ ತಂಡದ ಗೋಲ್ ಕೀಪರ್ ಮೊಹಮ್ಮದ್ ನವಾಜ್ ಮೊದಲ ಪಂದ್ಯದಲ್ಲಿ ಎದುರಾಳಿಗಳ ಆಕ್ರಮಣವನ್ನು ಸಮರ್ಥವಾಗಿ ಎದುರಿಸಿದ್ದರು. ಚೆನ್ನೈಯಿನ್ ತಂಡ ಮೂರು ಬಾರಿ ಗೋಲು ಗಳಿಸಲು ನಡೆಸಿದ ಪ್ರಯತ್ನವನ್ನು ನವಾಜ್ ವಿಫಲಗೊಳಿಸಿದ್ದರು. ರಕ್ಷಣಾ ವಿಭಾಗದ ಸೆರಿಟಾನ್ ಫೆರ್ನಾಂಡಸ್‌, ಸೆರೀನ್ ಪಾಲ್ ಮತ್ತು ಕಾರ್ಲೋಸ್ ಪೆನಾ ಕೂಡ ಎದುರಾಳಿಗಳನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದ್ದರು. ಚಿಂಗ್ಲೆನ್ಸಾನಾ ಸಿಂಗ್ ಮತ್ತು ಸೇವಿಯರ್ ಗಾಮಾ ಅವರ ಬಲವೂ ತಂಡಕ್ಕೆ ಇದೆ.

ಕಳೆದ ಬಾರಿ ಟೂರ್ನಿಯಲ್ಲಿ ಅತಿ ಹೆಚ್ಚು ಗೋಲು ಗಳಿಸಿದ್ದ ಫೆರಾನ್ ಕೊರೊಮಿನಾಸ್ ಈ ಬಾರಿಯೂ ಉತ್ತಮ ಲಯದಲ್ಲಿ ಆಡುತ್ತಿದ್ದಾರೆ. ಮೊದಲ ಪಂದ್ಯದಲ್ಲಿ ಒಟ್ಟು ನಾಲ್ಕು ಶಾಟ್‌ಗಳ ಪೈಕಿ ಎರಡರಲ್ಲಿ ವೈಫಲ್ಯ ಕಂಡಿದ್ದ ಅವರು ಒಂದನ್ನು ಗುರಿಯತ್ತ ಒದೆಯುವಲ್ಲಿ ಸಫಲರಾಗಿದ್ದರು. ಮತ್ತೊಂದರಲ್ಲಿ ಗೋಲು ಗಳಿಸಿದ್ದರು.

ಎಜು ಬೇಡಿಯಾ ಮತ್ತು ಮಂದಾರ್ ದೇಸಾಯಿ ಅವರನ್ನು ಒಳಗೊಂಡ ಮಿಡ್‌ಫೀಲ್ಡ್ ವಿಭಾಗವೂ ಬಲಿಷ್ಠವಾಗಿದೆ. ಆದರೆ ಬಿಎಫ್‌ಸಿಗೆ ಈ ಸವಾಲನ್ನು ಮೀರಿ ನಿಲ್ಲಲು ಕಷ್ಟವಾಗದು.

ಆಗಸ್ಟೊ, ಆಶಿಕ್‌, ಚೆಟ್ರಿ ಮೇಲೆ ಕಣ್ಣು:ಈ ಬಾರಿ ಬಿಎಫ್‌ಸಿ ಜೊತೆ ಒಪ್ಪಂದ ಮಾಡಿಕೊಂಡಿರುವ ರಾಫೆಲ್ ಆಗಸ್ಟೊ ಮತ್ತು ಆಶಿಕ್ ಕುರುಣಿಯನ್ ಮೊದಲ ಪಂದ್ಯದಲ್ಲಿ ನಿರೀಕ್ಷೆಗೆ ತಕ್ಕ ಆಟವಾಡಿದ್ದಾರೆ. ಗೋವಾ ವಿರುದ್ಧವೂ ಅವರು ಮಿಂಚುವ ನಿರೀಕ್ಷೆ ಇದೆ. ಸುನಿಲ್ ಚೆಟ್ರಿ ಮೇಲೆಯೂ ನಿರೀಕ್ಷೆಯ ಭಾರ ಇದೆ. ಮೊದಲ ಪಂದ್ಯದಲ್ಲಿ ಮನಮೋಹಕ ಡೈವ್‌ಗಳ ಮೂಲಕ ಎರಡು ಗೋಲುಗಳನ್ನು ತಡೆದ ಗೋಲ್ ಕೀಪರ್ ಗುರುಪ್ರೀತ್ ಸಿಂಗ್ ಸಂಧು ಬಿಎಫ್‌ಸಿಯ ಭರವಸೆ ಎನಿಸಿದ್ದಾರೆ. ರಾಫೆಲ್ ಆಗಸ್ಟೊ ಎರಡು ಪೆನಾಲ್ಟಿಗಳನ್ನು ತಡೆದು ತಂಡಕ್ಕೆ ನೆರವಾಗಿದ್ದರು. ನಿಶು ಕುಮಾರ್ ಕೂಡ ಚಾಕಚಕ್ಯ ಆಟದ ಮೂಲಕ ಗಮನ ಸೆಳೆದಿದ್ದರು.

ಇಂದಿನ ಪಂದ್ಯ
ಚೆನ್ನೈಯಿನ್ ಎಫ್‌ಸಿ–ಮುಂಬೈ ಸಿಟಿ ಎಫ್‌ಸಿ
ಸ್ಥಳ: ಜವಾಹರಲಾಲ್ ನೆಹರೂ ಕ್ರೀಡಾಂಗಣ, ಚೆನ್ನೈ
ಆರಂಭ: ಸಂಜೆ 7.30

ನಾಳಿನ ಪಂದ್ಯ
ಬಿಎಫ್‌ಸಿ– ಎಫ್‌ಸಿ ಗೋವಾ
ಸ್ಥಳ: ಜವಾಹರಲಾಲ್ ನೆಹರೂ ಕ್ರೀಡಾಂಗಣ, ಮಡಗಾಂವ್‌
ಆರಂಭ: ಸಂಜೆ 7.30

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌

ಮೊದಲ ಪ‍ಂದ್ಯದ ಬಲಾಬಲ

ಬಿಎಫ್‌ಸಿ;ನಾರ್ತ್ ಈಸ್ಟ್ ಯುನೈಟೆಡ್

55./.;ಚೆಂಡಿನ ಮೇಲೆ ಹಿಡಿತ;45./.

69./.;ಪಾಸಿಂಗ್‌ ಯಶಸ್ಸು;60

14;ಟ್ಯಾಕಲ್‌ಗಳು;11

10;ಕಾರ್ನರ್‌ಗಳು;1

2;ಗುರಿಯತ್ತ ಶಾಟ್ಸ್‌;2

6;ಗುರಿ ತಪ್ಪಿದ ಶಾಟ್ಸ್‌;5

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT