ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಟ್ರಿ ಬಳಗಕ್ಕೆ ಸಾಟಿಯಾಗುವುದೇ ಡೈನಾಮೋಸ್‌

ಇಂಡಿಯನ್ ಸೂಪರ್ ಲೀಗ್‌ ಫುಟ್‌ಬಾಲ್‌ ಟೂರ್ನಿ: ಬಿಎಫ್‌ಸಿ ನಾಯಕನಿಗೆ 150ನೇ ಪಂದ್ಯ
Last Updated 25 ನವೆಂಬರ್ 2018, 20:26 IST
ಅಕ್ಷರ ಗಾತ್ರ

ಬೆಂಗಳೂರು: ಅಜೇಯವಾಗಿ ಮುನ್ನುಗ್ಗುತ್ತಿರುವ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ಮತ್ತು ಇನ್ನೂ ಜಯ ಕಾಣದ ಡೆಲ್ಲಿ ಡೈನಾಮೋಸ್ ಎಫ್‌ಸಿ ತಂಡಗಳು ಇಂಡಿಯನ್ ಸೂಪರ್ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯಲ್ಲಿ ಸೋಮವಾರ ಮುಖಾಮುಖಿಯಾಗಲಿವೆ. ನಗರದ ಕಂಠೀರವ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ.

ಈ ವರ್ಷದ ಜನವರಿ 14ರಂದು ದೆಹಲಿಯಲ್ಲಿ ನಡೆದಿದ್ದ ನಾಲ್ಕನೇ ಆವೃತ್ತಿಯ ಪಂದ್ಯದಲ್ಲಿ ಡೈನಾಮೋಸ್‌ ವಿರುದ್ಧ ಸೋತ ನಂತರ ಬಿಎಫ್‌ಸಿ ತಂಡ ಐಎಸ್‌ಎಲ್‌ನಲ್ಲಿ ನಿರಾಸೆ ಕಂಡಿಲ್ಲ. ಕಳೆದ ಆವೃತ್ತಿಯಲ್ಲಿ ಪದಾರ್ಪಣೆ ಮಾಡಿದ ತಂಡ ಲೀಗ್ ಹಂತದಲ್ಲಿ ಈ ವರೆಗೆ ಒಟ್ಟು 14 ಪಂದ್ಯಗಳನ್ನು ಆಡಿದೆ. ಈ ಪೈಕಿ 12 ಪಂದ್ಯಗಳಲ್ಲಿ ಗೆದ್ದಿದ್ದು ಎರಡರಲ್ಲಿ ಡ್ರಾ ಮಾಡಿಕೊಂಡಿದೆ. ಐದನೇ ಆವೃತ್ತಿಯಲ್ಲಿ ಈ ವರೆಗೆ ಆರು ಪಂದ್ಯಗಳನ್ನು ಆಡಿದ್ದು ಐದರಲ್ಲಿ ಗೆದ್ದು ಒಂದರಲ್ಲಿ ಡ್ರಾ ಸಾಧಿಸಿದೆ.

ಡೈನಾಮೋಸ್ ಈ ಬಾರಿ ಎಂಟು ಪಂದ್ಯಗಳನ್ನು ಆಡಿದ್ದು ನಾಲ್ಕರಲ್ಲಿ ಸೋತು ನಾಲ್ಕು ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ. ನಾಲ್ಕು ಪಾಯಿಂಟ್ ಗಳಿಸಿರುವ ತಂಡ ಪಾಯಿಂಟ್ ಪಟ್ಟಿಯ ಕೊನೆಯ ಸ್ಥಾನದಲ್ಲಿದೆ. 16 ಪಾಯಿಂಟ್‌ ಗಳಿಸಿರುವ ಬಿಎಫ್‌ಸಿ ಎರಡನೇ ಸ್ಥಾನದಲ್ಲಿದೆ. ಐಎಸ್‌ಎಲ್‌ನಲ್ಲಿ ಈ ವರೆಗೆ ಆಡಿರುವ ಒಟ್ಟು 14 ಲೀಗ್ ಪಂದ್ಯಗಳ ಪೈಕಿ ಡೈನಾಮೋಸ್ ಗೆದ್ದಿರುವುದು ಮೂರು ಪಂದ್ಯಗಳನ್ನು ಮಾತ್ರ.

ಬಿಎಫ್‌ಸಿ ಬಲಿಷ್ಠವಾಗಿದೆ ಎಂಬುದನ್ನು ಈ ಅಂಕಿ ಅಂಶಗಳೇ ಸಾಬೀತು ಮಾಡುತ್ತವೆ. ತವರಿನಲ್ಲಿ ಎಂಥ ತಂಡವನ್ನೂ ಮಣಿಸುವ ಸಾಮರ್ಥ್ಯ ಹೊಂದಿರುವ ಸುನಿಲ್ ಚೆಟ್ರಿ ಬಗಳ ಸೋಮವಾರವೂ ಸುಲಭವಾಗಿ ಗೆಲ್ಲುವ ವಿಶ್ವಾಸದಲ್ಲಿದೆ.

ಚೆಟ್ರಿಗೆ 150ರ ಮೈಲುಗಲ್ಲು: ವಿವಿಧ ಟೂರ್ನಿಗಳಲ್ಲಿ ಕ್ಲಬ್ ಪರ ಆಡಿರುವ ನಾಯಕ ಸುನಿಲ್‌ ಚೆಟ್ರಿ ಮಹತ್ವದ ಮೈಲುಗಲ್ಲು ಸ್ಥಾಪಿಸಲು ಸಜ್ಜಾಗಿದ್ದಾರೆ. ಸೋಮವಾರ ಕಣಕ್ಕೆ ಇಳಿದರೆ ಅದು ಅವರ 150ನೇ ಪಂದ್ಯ ಆಗಲಿದೆ.

ನಾಲ್ಕು ದಿನಗಳ ಹಿಂದೆ ಗೋವಾದಲ್ಲಿ ನಡೆದಿದ್ದ ಎಫ್‌ಸಿ ಗೋವಾ ಎದುರಿನ ಪಂದ್ಯದಲ್ಲಿ ನಿರ್ಣಾಯಕ ಗೋಲು ಗಳಿಸಿ ತಂಡಕ್ಕೆ ಜಯ ದೊರಕಿಸಿಕೊಟ್ಟಿದ್ದ ಚೆಟ್ರಿ ತವರಿನ ಪ್ರೇಕ್ಷಕರಿಗೆ ಮತ್ತೊಂದು ಜಯದ ಉಡುಗೊರೆ ನೀಡಲು ಕಾತರರಾಗಿದ್ದಾರೆ.

ಗಾಯದ ಸಮಸ್ಯೆಯಿಂದಾಗಿ ಮಿಕು ಮತ್ತು ಎರಿಕ್ ಪಾರ್ಟಲು ಕಳೆದ ಪಂದ್ಯದಲ್ಲಿ ಆಡಿರಲಿಲ್ಲ. ಫಾರ್ವರ್ಡ್‌ ವಿಭಾಗದ ಬಲಿಷ್ಠ ಆಟಗಾರ ಮಿಕು ಮತ್ತು ಮಿಡ್‌ಫೀಲ್ಡ್ ವಿಭಾಗದ ಭರವಸೆಯಾಗಿರುವ ಪಾರ್ಟಲು ಸೋಮವಾರ ಕಣಕ್ಕೆ ಇಳಿಯುವ ಭರವಸೆ ಇದೆ. ಇವರಿಬ್ಬರು ಆಡಿದರೆ ಡೈನಾಮೋಸ್‌ ತಂಡದ ಸಂಕಷ್ಟ ಹೆಚ್ಚುವುದು ಖಚಿತ. ಡೆಲ್ಲಿ ತಂಡ ಆಕ್ರಮಣದಲ್ಲಿ ನಿರಂತರ ವೈಫಲ್ಯ ಕಾಣುತ್ತಿರುವುದರಿಂದ ಬಿಎಫ್‌ಸಿ ರಕ್ಷಣಾ ವಿಭಾಗದ ನಿಶುಕುಮಾರ್‌, ರಾಹುಲ್‌ ಭೆಕೆ ಮತ್ತು ಹರ್ಮನ್‌ಜ್ಯೋತ್ ಖಾಬ್ರ ನಿರಾಳವಾಗಿ ಆಡಬಹುದಾಗಿದೆ.

ರಕ್ಷಣಾ ವಿಭಾಗದಲ್ಲೂ ಡೈನಾಮೋಸ್ ನಿರೀಕ್ಷಿತ ಸಾಮರ್ಥ್ಯ ತೋರಲಿಲ್ಲ. ಎಂಟು ಪಂದ್ಯಗಳಲ್ಲಿ ತಂಡ 13 ಗೋಲುಗಳನ್ನು ಬಿಟ್ಟುಕೊಟ್ಟಿದೆ. ಹೀಗಾಗಿ ಪಂದ್ಯದಲ್ಲಿ ಬಿಎಫ್‌ಸಿ ಗೋಲು ಮಳೆ ಸುರಿಸುವ ಭರವಸೆಯಲ್ಲಿದ್ದಾರೆ ಅಭಿಮಾನಿಗಳು.

ಉಭಯ ತಂಡಗಳ ಮುಖಾಮುಖಿ
ಪಂದ್ಯಗಳು 2
ಬಿಎಫ್‌ಸಿ ಜಯ 1
ಡೈನಾಮೋಸ್ ಜಯ 1
ಗೋಲುಗಳು ಬಿಎಫ್‌ಸಿ 4
ಡೈನಾಮೋಸ್‌ 3
ಪಂದ್ಯ ಆರಂಭ: ಸಂಜೆ 7.30
ಸ್ಥಳ: ಕಂಠೀರವ ಕ್ರೀಡಾಂಗಣ, ಬೆಂಗಳೂರು
ನೇರ ಪ್ರಸಾರ: ಸ್ಟಾರ್ ನೆಟ್‌ವರ್ಕ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT