ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗ್ರಸ್ಥಾನಕ್ಕಾಗಿ ಬಲಿಷ್ಠರ ಹಣಾಹಣಿ

ಐಎಸ್‌ಎಲ್‌ ಫುಟ್‌ಬಾಲ್‌: ಇಂದು ಕಂಠೀರವ ಅಂಗಳದಲ್ಲಿ ಬಿಎಫ್‌ಸಿ– ಗೋವಾ ಮುಖಾಮುಖಿ
Last Updated 20 ಫೆಬ್ರುವರಿ 2019, 19:45 IST
ಅಕ್ಷರ ಗಾತ್ರ

ಬೆಂಗಳೂರು: ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯಲ್ಲಿ ಈಗಾಗಲೇ ‘ಪ್ಲೇ ಆಫ್‌’ ಪ್ರವೇಶಿಸಿರುವ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ಮತ್ತು ಎಫ್‌ಸಿ ಗೋವಾ ತಂಡಗಳು ಈಗ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವತ್ತ ಚಿತ್ತ ಹರಿಸಿವೆ.

ಕಂಠೀರವ ಕ್ರೀಡಾಂಗಣದಲ್ಲಿ ಗುರುವಾರ ನಡೆಯುವ ಪಂದ್ಯದಲ್ಲಿ ಉಭಯ ತಂಡಗಳು ಎದುರಾಗಲಿದ್ದು, ಜಿದ್ದಾಜಿದ್ದಿನ ಪೈಪೋಟಿ ಕಂಡುಬರುವ ನಿರೀಕ್ಷೆ ಇದೆ.

ಬಿಎಫ್‌ಸಿ ಮತ್ತು ಗೋವಾ ಈಗಾಗಲೇ 16 ‍ಪಂದ್ಯಗಳನ್ನು ಆಡಿದ್ದು ತಲಾ 31 ಪಾಯಿಂಟ್ಸ್‌ ಕಲೆಹಾಕಿವೆ. ಗೋಲು ಗಳಿಕೆಯ ಆಧಾರದಲ್ಲಿ ಗೋವಾ ತಂಡ ಅಗ್ರಸ್ಥಾನ ಹೊಂದಿದೆ. ಈ ತಂಡ 35 ಗೋಲುಗಳನ್ನು ದಾಖಲಿಸಿದೆ. ಬಿಎಫ್‌ಸಿ ಖಾತೆಯಲ್ಲಿ 25 ಗೋಲುಗಳಿವೆ. ಗುರುವಾರದ ಹೋರಾಟದಲ್ಲಿ ಬೆಂಗಳೂರಿನ ತಂಡ ಗೆದ್ದರೆ ಅಗ್ರಸ್ಥಾನಕ್ಕೇರಲಿದೆ. ಒಂದೊಮ್ಮೆ ಗೋವಾ, ಆತಿಥೇಯರನ್ನು ಮಣಿಸಿದರೆ ಆ ತಂಡದ ಅಗ್ರಪಟ್ಟ ಇನ್ನಷ್ಟು ಭದ್ರವಾಗಲಿದೆ.

ಮೊದಲ ಲೆಗ್‌ನಲ್ಲಿ ಅಮೋಘ ಸಾಮರ್ಥ್ಯ ತೋರಿದ್ದ ಬಿಎಫ್‌ಸಿ ಎರಡನೇ ಲೆಗ್‌ನಲ್ಲಿ ಪರಿಣಾಮಕಾರಿ ಆಟ ಆಡಲು ವಿಫಲವಾಗಿದೆ. ಹಿಂದಿನ ಐದು ಪಂದ್ಯಗಳ ಪೈಕಿ ಸುನಿಲ್‌ ಚೆಟ್ರಿ ಬಳಗ ಕೇವಲ ಒಂದರಲ್ಲಿ ಗೆದ್ದಿದೆ. ಬಿಎಫ್‌ಸಿ ಕೋಚ್‌ ಕಾರ್ಲಸ್‌ ಕುದ್ರತ್‌ ಅವರು ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿದ್ದು ಇದಕ್ಕೆ ಕಾರಣ.

ಹಿಂದಿನ ಪಂದ್ಯಗಳಲ್ಲಿ ಗೋಲು ಗಳಿಸಿದ್ದ ನಾಯಕ ಚೆಟ್ರಿ, ಈ ಪಂದ್ಯದಲ್ಲಿ ಅಭಿಮಾನಿಗಳ ಆಕಷರ್ಣೆಯಾಗಿದ್ದಾರೆ. ಈ ಬಾರಿಯ ಲೀಗ್‌ನಲ್ಲಿ ಅವರು ಎಂಟು ಗೋಲುಗಳನ್ನು ದಾಖಲಿಸಿದ್ದಾರೆ. ಉದಾಂತ್‌ ಸಿಂಗ್‌ ಕೂಡಾ ತಂಡದ ಆಧಾರಸ್ಥಂಭವಾಗಿದ್ದಾರೆ. ಅವರ ಖಾತೆಯಲ್ಲಿ ನಾಲ್ಕು ಗೋಲುಗಳಿವೆ.

ವೆನಿಜುವೆಲಾದ ಆಟಗಾರ ಮಿಕು ಲಯ ಕಂಡುಕೊಳ್ಳಲು ಪರದಾಡುತ್ತಿರುವುದು ಕೋಚ್‌ ಕುದ್ರತ್‌ ಚಿಂತೆಗೆ ಕಾರಣವಾಗಿದೆ. ಗಾಯದಿಂದ ಗುಣಮುಖವಾದ ನಂತರ ತಂಡಕ್ಕೆ ಮರಳಿರುವ ಮಿಕು, ಹಿಂದಿನ ಪಂದ್ಯಗಳಲ್ಲಿ ಕಾಲ್ಚಳಕ ತೋರಲು ವಿಫಲರಾಗಿದ್ದರು.

ಒರಟು ಆಟ ಆಡಿರುವ ಕಾರಣ ಡಿಫೆಂಡರ್‌ ಅಲ್ಬರ್ಟ್‌ ಸೆರಾನ್‌ ಮೇಲೆ ಒಂದು ಪಂದ್ಯ ನಿಷೇಧ ಹೇರಲಾಗಿದೆ. ಹೀಗಾಗಿ ಅವರು ಗೋವಾ ಎದುರಿನ ಹಣಾಹಣಿಯಲ್ಲಿ ಕಣಕ್ಕಿಳಿಯುತ್ತಿಲ್ಲ. ಇದು ಆತಿಥೇಯರಿಗೆ ಹಿನ್ನಡೆಯಾಗಿ ಪರಿಣಮಿಸುವ ಸಾಧ್ಯತೆ ಇದೆ.

ಸೆರಾನ್‌ ಅನುಪಸ್ಥಿತಿಯಲ್ಲಿ ಹರ್ಮನ್‌ಜ್ಯೋತ್‌ ಸಿಂಗ್‌ ಖಾಬ್ರಾ, ರಿನೊ ಆ್ಯಂಟೊ, ರಾಹುಲ್‌ ಭೆಕೆ ಮತ್ತು ನಿಶು ಕುಮಾರ್‌ ಮಿಂಚಬೇಕಿದೆ.

ದಿಮಾಸ್‌ ಡೆಲ್ಗಾಡೊ, ಬೊಯಿತಾಂಗ್‌ ಹಾವೊಕಿಪ್‌, ಎರಿಕ್‌ ಪಾರ್ಟಲು ಮತ್ತು ಲುಯಿಸ್ಮಾ ವಿಲ್ಲಾ ಅವರ ಮೇಲೂ ಹೆಚ್ಚಿನ ಜವಾಬ್ದಾರಿ ಇದೆ.

ಗೋವಾ ತಂಡ ರಕ್ಷಣಾ ವಿಭಾಗದಲ್ಲಿ ಬಲಿಷ್ಠವಾಗಿದೆ. ಈ ತಂಡ ಹಿಂದಿನ ಆರು ಪಂದ್ಯಗಳಲ್ಲೂ ಗೆದ್ದಿದೆ. ಇದು ಆಟಗಾರರು ಆತ್ಮವಿಶ್ವಾಸದಿಂದ ಬೀಗುವಂತೆ ಮಾಡಿದೆ. ಜೊತೆಗೆ ಹಿಂದಿನ ಐದು ಪಂದ್ಯಗಳಲ್ಲಿ ಎದುರಾಳಿಗಳಿಗೆ ಒಂದೂ ಗೋಲು ಬಿಟ್ಟುಕೊಟ್ಟಿಲ್ಲ.

ಕಾರ್ಲೊಸ್‌ ಪೆನಾ ಮತ್ತು ಮೌರ್ಟಾದ ಫಾಲ್‌ ಅವರು ರಕ್ಷಣಾ ವಿಭಾಗದಲ್ಲಿ ತಂಡದ ಶಕ್ತಿಯಾಗಿದ್ದಾರೆ.

ಫೆರಾನ್‌ ಕೊರೊಮಿನಸ್‌, ಎಡು ಬೇಡಿಯಾ, ಅಹ್ಮದ್‌ ಜಹೂ ಮತ್ತು ನವೀನ್‌ ಕುಮಾರ್‌ ಅವರು ಬಿಎಫ್‌ಸಿ ರಕ್ಷಣಾ ಕೋಟೆಗೆ ಸವಾಲಾಗುವ ಸಾಮರ್ಥ್ಯ ಹೊಂದಿದ್ದಾರೆ. ಮುಂಚೂಣಿ ವಿಭಾಗದಲ್ಲಿ ಆಡುವ ಫೆರಾನ್‌, ಈ ಬಾರಿಯ ಲೀಗ್‌ನಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ಹಿರಿಮೆ ಹೊಂದಿದ್ದಾರೆ. ಅವರ ಖಾತೆಯಲ್ಲಿ 14 ಗೋಲುಗಳಿವೆ. ಬೇಡಿಯಾ ಏಳು ಗೋಲು ಹೊಡೆದಿದ್ದಾರೆ.

ಮಿಗುಯೆಲ್‌ ಫರ್ನಾಂಡೀಸ್‌, ಹ್ಯೂಗೊ ಬೌಮಸ್‌ ಮತ್ತು ಜಾಕಿಚಂದ್‌ ಸಿಂಗ್‌ ಅವರ ಮೇಲೂ ಭರವಸೆ ಇಡಬಹುದಾಗಿದೆ.

ಆರಂಭ: ರಾತ್ರಿ 7.30
ನೇರ ಪ್ರಸಾರ: ಸ್ಟಾರ್‌ ನೆಟ್‌ವರ್ಕ್‌.

*
ಮಿಕು, ಪ್ರತಿಭಾನ್ವಿತ ಆಟಗಾರ. ಅವರು ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು ಮುಂದಿನ ಪಂದ್ಯಗಳಲ್ಲಿ ಖಂಡಿತವಾಗಿಯೂ ಮಿಂಚುತ್ತಾರೆ.
-ಕಾರ್ಲಸ್‌ ಕುದ್ರತ್‌, ಬಿಎಫ್‌ಸಿ ಕೋಚ್‌

ಕಂಠೀರವ ಕ್ರೀಡಾಂಗಣದಲ್ಲಿ ಬುಧವಾರ ಬಿಎಫ್‌ಸಿ ತಂಡದ ಕೋಚ್‌ ಕಾರ್ಲಸ್‌ ಕುದ್ರತ್‌ (ಬಲ) ಮತ್ತು ಎಫ್‌ಸಿ ಗೋವಾ ತಂಡದ ತರಬೇತುದಾರ ಸರ್ಜಿಯೊ ಲೊಬೆರಾ ಚರ್ಚೆಯಲ್ಲಿ ತೊಡಗಿದ್ದರು –ಪ್ರಜಾವಾಣಿ ಚಿತ್ರ
ಕಂಠೀರವ ಕ್ರೀಡಾಂಗಣದಲ್ಲಿ ಬುಧವಾರ ಬಿಎಫ್‌ಸಿ ತಂಡದ ಕೋಚ್‌ ಕಾರ್ಲಸ್‌ ಕುದ್ರತ್‌ (ಬಲ) ಮತ್ತು ಎಫ್‌ಸಿ ಗೋವಾ ತಂಡದ ತರಬೇತುದಾರ ಸರ್ಜಿಯೊ ಲೊಬೆರಾ ಚರ್ಚೆಯಲ್ಲಿ ತೊಡಗಿದ್ದರು –ಪ್ರಜಾವಾಣಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT