ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಚ್ ಬದಲಾದರೂ ಬೆಂಗಳೂರು ಎಫ್‌ಸಿ ಗಳಿಕೆ ‘ಶೂನ್ಯ’

ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿ: ಎಸ್‌ಸಿ ಈಸ್ಟ್ ಬೆಂಗಾಲ್ ಪರ ಗೋಲು ಗಳಿಸಿದ ಮ್ಯಾಟಿ ಸ್ಟೀನ್‌ಮ್ಯಾನ್
Last Updated 9 ಜನವರಿ 2021, 16:24 IST
ಅಕ್ಷರ ಗಾತ್ರ

ಫತೋರ್ಡ: ಅವಕಾಶಗಳನ್ನು ಸೃಷ್ಟಿಸಿಕೊಂಡರೂ ಗುರಿ ಮುಟ್ಟುವಲ್ಲಿ ವಿಫಲವಾದ ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಮತ್ತೊಮ್ಮೆ ಸೋಲಿಗೆ ಶರಣಾಯಿತು. ಶನಿವಾರ ರಾತ್ರಿ ನಡೆದ ಪಂದ್ಯದಲ್ಲಿ ಎಸ್‌ಸಿ ಈಸ್ಟ್ ಬೆಂಗಾಲ್ ತಂಡ ಬಿಎಫ್‌ಸಿಯನ್ನು 1–0 ಗೋಲಿನಿಂದ ಮಣಿಸಿತು. ಸತತ ನಾಲ್ಕನೇ ಬಾರಿ ಶೂನ್ಯ ಸಂಪಾದನೆಯೊಂದಿಗೆ ಬಿಎಫ್‌ಸಿ ನಿರಾಸೆಗೆ ಒಳಗಾಯಿತು.

ಮೂರು ಸೋಲಿನಿಂದ ಕಂಗೆಟ್ಟಿದ್ದ ಕಾರಣ ಬಿಎಫ್‌ಸಿಯ ಕೋಚ್ ಕಾರ್ಲಸ್ ಕ್ವದ್ರತ್ ಮೂರು ದಿನಗಳ ಹಿಂದೆ ತಂಡವನ್ನು ತೊರೆದಿದ್ದರು. ಹೀಗಾಗಿ ನೌಶಾದ್ ಮೂಸಾ ಅವರನ್ನು ಹಂಗಾಮಿ ಕೋಚ್ ಆಗಿ ನೇಮಕ ಮಾಡಲಾಗಿತ್ತು. ಆದರೆ ಸುನಿಲ್ ಚೆಟ್ರಿ ಬಳಗದ ಸೋಲಿನ ಸರಪಳಿ ತುಂಡರಿಸಲು ಮೂಸಾ ಅವರಿಗೂ ಸಾಧ್ಯವಾಗಲಿಲ್ಲ. ಪಂದ್ಯದ ಆರಂಭದಲ್ಲೇ ಎಸ್‌ಸಿ ಈಸ್ಟ್ ಬೆಂಗಾಲ್ ಆಧಿಪತ್ಯ ಸ್ಥಾಪಿಸಿತು. ಚೆಂಡಿನ ಮೇಲೆ ಹೆಚ್ಚು ಹೊತ್ತು ನಿಯಂತ್ರಣ ಸಾಧಿಸುವಲ್ಲಿ ಯಶಸ್ವಿಯಾದ ತಂಡ ನಿಖರ ಪಾಸ್‌ಗಳ ಮೂಲಕ ಎದುರಾಳಿ ತಂಡವನ್ನು ಕಂಗೆಡಿಸಿತು. ಕ್ರಾಸ್‌ಗಳಲ್ಲಿ ಬಿಎಫ್‌ಸಿ ಮೇಲುಗೈ ಸಾಧಿಸಿತ್ತು.

ಥ್ರೋ–ಇನ್ ಪರಿಣಿತ ರಾಜು ಗಾಯಕವಾಡ್ಆರನೇ ನಿಮಿಷದಲ್ಲಿ ಈಸ್ಟ್ ಬೆಂಗಾಲ್ ಪಾಳಯದಲ್ಲಿ ಭರವಸೆ ಮೂಡಿಸಿದರು. ಡ್ಯಾನಿಯಲ್ ಫಾಕ್ಸ್‌ಗೆ ಚೆಂಡನ್ನು ನೀಡಿ ಗೋಲು ಗಳಿಸುವ ರಾಜು ಅವರ ತಂತ್ರವನ್ನು ಬಿಎಫ್‌ಸಿ ಆಟಗಾರರು ವಿಫಲಗೊಳಿಸಿದರು. ಎಂಟನೇ ನಿಮಿಷದಲ್ಲಿ ನಾರಾಯಣ ದಾಸ್ ಪ್ರಬಲ ಆಕ್ರಮಣ ನಡೆಸಿದರು. ಆದರೆ ಬಿಎಫ್‌ಸಿಯ ಗೋಲ್‌ಕೀಪರ್ ಗುರುಪ್ರೀತ್ ಸಿಂಗ್ ಸಂಧು ಮುನ್ನುಗ್ಗಿ ಬಂದು ಚೆಂಡನ್ನು ವಶಕ್ಕೆ ತೆಗೆದುಕೊಂಡು ತಂಡವನ್ನು ಅಪಾಯದಿಂದ ಪಾರು ಮಾಡಿದರು. 13ನೇ ನಿಮಿಷದಲ್ಲಿ ಪರಾಗ್ ಮತ್ತು ಫಾಕ್ಸ್‌ ಗೋಲು ಗಳಿಸುವ ತಂತ್ರ ಹೆಣೆದರು. ಆದರೆ ಜುವಾನನ್ ಅವರು ಬಿಎಫ್‌ಸಿಯ ರಕ್ಷಣೆಗೆ ನಿಂತರು.

ನಂತರ ಬಿಎಫ್‌ಸಿ ನಿಧಾನವಾಗಿ ಆಟಕ್ಕೆ ಕುದುರಿಕೊಂಡಿತು. 15ನೇ ನಿಮಿಷದಲ್ಲಿ ಜುವಾನನ್ ಮತ್ತು ಕ್ಲೀಟನ್ ಸಿಲ್ವಾ ಆಕ್ರಮಣಕ್ಕೆ ಮುಂದಾದರು. ಆದರೆ 20ನೇ ನಿಮಿಷದಲ್ಲಿ ಮ್ಯಾಟಿ ಸ್ಟೀನ್‌ಮ್ಯಾನ್ ಮತ್ತು ನಾರಾಯಣದಾಸ್ ಹೆಣೆದ ಬಲೆಯಲ್ಲಿ ಬಿಎಫ್‌ಸಿ ಸಿಲುಕಿಬಿತ್ತು. ಎಡಭಾಗದಿಂದ ಚೆಂಡಿನೊಂದಿಗೆ ನುಗ್ಗಿಬಂದ ಅಂಕಿತ್ ಮುಖರ್ಜಿ ಬಿಎಫ್‌ಸಿಯ ಗೋಲು ಆವರಣದ ಬಳಿ ಬರುತ್ತಿದ್ದಂತೆ ಚೆಂಡನ್ನು ನಾರಾಯಣದಾಸ್ ಅವರತ್ತ ತಳ್ಳಿದರು. ನಿಯಂತ್ರಣ ಸಾಧಿಸಿದ ದಾಸ್ ನಿಖರ ಕ್ರಾಸ್ ಮೂಲಕ ಚೆಂಡನ್ನು ಮ್ಯಾಟಿಯತ್ತ ಒದ್ದರು. ಅವರು ಸುಲಭವಾಗಿ ಗುರಿಮುಟ್ಟಿಸಿದರು. 26ನೇ ನಿಮಿಷದಲ್ಲಿ ಅಂಕಿತ್ ಮುಖರ್ಜಿ ಒದಗಿಸಿಕೊಟ್ಟ ಉತ್ತಮ ಅವಕಾಶವನ್ನು ನಾರಾಯಣದಾಸ್ ಕೈಚೆಲ್ಲಿದರು. ಮೊದಲಾರ್ಧದ ಕೊನೆಯ ನಿಮಿಷದಲ್ಲಿ ಬಿಎಫ್‌ಸಿಗೆ ಫ್ರೀ ಕಿಕ್ ಒದಗಿತ್ತು. ಆದರೆ ಫಲ ಸಿಗಲಿಲ್ಲ.

ಬೆಂಗಾಲ್ ರಕ್ಷಣೆಗೆ ಬಂದ ದೇವ–ಸಂಧು

ದ್ವಿತೀಯಾರ್ಧದಲ್ಲಿ ಬಿಎಫ್‌ಸಿ ಪ್ರಬಲ ಆಕ್ರಮಣಕ್ಕೆ ಮುಂದಾಯಿತು. ಕ್ಲೀಟನ್ ಸಿಲ್ವಾ, ರಾಹುಲ್ ಬೆಕೆ ಮತ್ತು ಸುನಿಲ್ ಚೆಟ್ರಿ ಆರಂಭದಲ್ಲಿ ಅವಕಾಶಗಳನ್ನು ಸೃಷ್ಟಿಸಿಕೊಂಡು ಚೆಂಡನ್ನು ಗುರಿಯತ್ತ ಅಟ್ಟುವ ಪ್ರಯತ್ನ ಮಾಡಿದರು. ಆದರೆ ಗೋಲ್‌ಕೀಪರ್ ದೇವಜೀತ್ ಮಜುಂದಾರ್ ಬೆಂಗಾಲ್ ತಂಡದ ರಕ್ಷಕರಾದರು. ಇತ್ತ, ಬಿಎಫ್‌ಸಿ ಗೋಲ್‌ಕೀಪರ್ ಗುರುಪ್ರೀತ್ ಸಿಂಗ್ ಸಂಧು ಈಸ್ಟ್ ಬೆಂಗಾಲ್ ದಾಳಿಯನ್ನು ಮೆಟ್ಟಿನಿಂತರು. 73ನೇ ನಿಮಿಷದಲ್ಲಿ ಜಾಕ್ಸ್ ಮಗೋಮಾ ಮತ್ತು 78ನೇ ನಿಮಿಷದಲ್ಲಿ ಬ್ರೈಟ್ ಎನೊಬಖಾರೆ ಅವರ ಮುನ್ನಡೆಯನ್ನು ತಡೆದು ಸಂಧು ಮೆಚ್ಚುಗೆ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT