ಮಂಗಳವಾರ, ನವೆಂಬರ್ 19, 2019
22 °C
ಕಂಠೀರವದಲ್ಲಿ ಅವಕಾಶ ಸಿಗದಿದ್ದರೆ ಪುಣೆಗೆ ಸ್ಥಳಾಂತರಗೊಳ್ಳಲು ಬಿಎಫ್‌ಸಿ ನಿರ್ಧಾರ

ಫುಟ್‌ಬಾಲ್ ಪ್ರಿಯರ ಅಸಮಾಧಾನ

Published:
Updated:
Prajavani

ಬೆಂಗಳೂರು: ಕಂಠೀರವ ಕ್ರೀಡಾಂಗಣ ಅಥ್ಲೆಟಿಕ್ಸ್‌ ಮತ್ತು ಫುಟ್‌ಬಾಲ್‌ಗೆ ಸಂಬಂಧಿಸಿ ಕೆಲವು ತಿಂಗಳಿಂದ ನಡೆಯುತ್ತಿರುವ ಹಗ್ಗ ಜಗ್ಗಾಟ ಈಗ ನಿರ್ಣಾಯಕ ಹಂತ ತಲುಪಿದೆ. ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್‌ಬಾಲ್ ಟೂರ್ನಿಯಲ್ಲಿ ಆಡುವ ಬೆಂಗಳೂರು ಫುಟ್‌ಬಾಲ್ ಕ್ಲಬ್‌ (ಬಿಎಫ್‌ಸಿ) ಬುಧವಾರ ಮಾಡಿರುವ ಟ್ವೀಟ್ ಸಂಚಲನ ಸೃಷ್ಟಿಸಿದೆ.

‘ಎಎಫ್‌ಸಿ ಟೂರ್ನಿಯ ಪಂದ್ಯಗಳಿಗೆ ತವರಿನ ಅಂಗಣ ಯಾವುದು ಎಂಬುದನ್ನು ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್‌ಗೆ ಜರೂರಾರಿ ತಿಳಿಸಬೇಕಾಗಿರುವ ಕಾರಣ ಪುಣೆಯ ಬಾಲೇವಾಡಿ ಕ್ರೀಡಾಂಗಣದ ಹೆಸರನ್ನು ಸೂಚಿಸಲು ನಿರ್ಧರಿಸಲಾಗಿದೆ’ ಎಂದು ಬಿಎಫ್‌ಸಿ ಟ್ವೀಟ್ ಮಾಡಿತ್ತು.

ಬಿಎಫ್‌ಸಿಯ ಪಂದ್ಯಗಳನ್ನು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲೇ ವೀಕ್ಷಿಸಲು ಬಯಸುವ ಸ್ಥಳೀಯ ಫುಟ್‌ಬಾಲ್ ಪ್ರಿಯರು ಇದರಿಂದ ಬೇಸರಗೊಂಡು ಸಾಮಾಜಿಕ ತಾಣಗಳಲ್ಲಿ ಅಸಮಾಧಾನ ಹೊರ ಹಾಕಿದ್ದಾರೆ. ವಿವಾದ ಬಗೆಹರಿದು ಬೆಂಗಳೂರು ತಂಡದ ಪಂದ್ಯಗಳು ಬೆಂಗಳೂರಿನಲ್ಲೇ ನಡೆಯುವಂತಾಗಲಿ ಎಂದು ಆಶಿಸಿದ್ದಾರೆ.

ಬಿಎಫ್‌ಸಿ ಮತ್ತೊಂದು ಟ್ವೀಟ್‌ನಲ್ಲಿ, ‘ಕಂಠೀರವ ಕ್ರೀಡಾಂಗಣದಲ್ಲೇ ಪಂದ್ಯಗಳನ್ನು ಆಡಲು ಬಯಸುತ್ತೇವೆ. ಆದ್ದರಿಂದ ವಿವಾದ ಬಗೆ ಹರಿಸಲು ಪ್ರಯತ್ನ ಮಾಡುತ್ತಿದ್ದೇವೆ’ ಎಂದು ತಿಳಿಸಿದೆ.

‘ಕ್ರೀಡಾಂಗಣವನ್ನು ಮಾತ್ರ ಬದಲಿಸುತ್ತೀರೋ ಕ್ಲಬ್ ಹೆಸರನ್ನು ಕೂಡ ಬದಲಿಸುತ್ತೀರೋ’ ಎಂದು ನಿಶಾದ್ ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ. ‘ಪುಣೆಗೇ ಯಾಕೆ ಹೋಗಬೇಕು, ದಕ್ಷಿಣದ ಯಾವ ನಗರಗಳಲ್ಲೂ ಫುಟ್‌ಬಾಲ್ ಅಂಗಣಗಳು ಸಿಗಲಿಲ್ಲವೇ’ ಎಂಬುದು ವರುಣ್ ನಾಯರ್ ಅವರ ಪ್ರಶ್ನೆ.

‘ನಾನು ಕೇರಳ ಬ್ಲಾಸ್ಟರ್ಸ್ ತಂಡದ ಅಭಿಮಾನಿ. ಆದರೆ ಬೆಂಗಳೂರಿನಲ್ಲಿದ್ದಾಗ ಬಿಎಫ್‌ಸಿಯ ಪಂದ್ಯಗಳನ್ನು ಕಂಠೀರವ ಕ್ರೀಡಾಂಗಣದಲ್ಲೇ ವೀಕ್ಷಿಸಲು ಬಯಸುತ್ತೇನೆ. ಅಲ್ಲಿ ಬಿಎಫ್‌ಸಿ ಆಡುವಾಗ ನಿರ್ಮಾಣವಾಗುವ ವಾತಾವರಣ ಅವರ್ಣನೀಯ’ ಎಂದು ಹರೀಶ್ ಪದ್ಮಲೋಚನನ್ ಅಭಿಪ್ರಾಯಪಟ್ಟಿದ್ದಾರೆ.

*
ಕಂಠೀರವ ಕ್ರೀಡಾಂಗಣದಲ್ಲಿ ಫುಟ್‌ಬಾಲ್ ಪಂದ್ಯಗಳು ನಡೆಯದಿದ್ದರೆ ಭಾರತದ ಫುಟ್‌ಬಾಲ್‌ಗೆ ದೊಡ್ಡ ನಷ್ಟ. ಕಂಠೀರವದಲ್ಲಿ ಆಡುವುದೆಂದರೆ ನನಗೆ ತುಂಬ ಇಷ್ಟ. ಅಲ್ಲಿನ ವಾತಾವರಣ ಮತ್ತು ಕ್ರೀಡಾ ಪ್ರಿಯರ ಹುಮ್ಮಸ್ಸು ಖುಷಿ ನೀಡುವಂಥಾದ್ದು.
-ಸಂದೇಶ್ ಜಿಂಗಾನ, ಭಾರತ ಫುಟ್‌ಬಾಲ್ ತಂಡದ ಆಟಗಾರ

*
ಕಂಠೀರವದಲ್ಲಿ ಒಳ್ಳೆಯ ಕಾರ್ಯಕ್ರಮಗಳು ನಡೆಯಲೇಬಾರದು ಎಂಬುದು ಅಥ್ಲೀಟ್‌ಗಳ ಬಯಕೆಯಲ್ಲ. ಈ ಕ್ರೀಡಾಂಗಣದಲ್ಲಿ ನಾನು ಅಭ್ಯಾಸ ಮಾಡುತ್ತಿದ್ದ 70ರ ದಶಕದಲ್ಲಿ ಅನೇಕ ಉತ್ತಮ ಕಾರ್ಯಕ್ರಮಗಳು ನಡೆಯುತ್ತಿದ್ದವು. ಆದರೆ ಅದು ಅಥ್ಲೆಟಿಕ್ಸ್‌ಗೆ ಯಾವುದೇ ರೀತಿಯಲ್ಲಿ ಅಡ್ಡಿಯಾಗುತ್ತಿರಲಿಲ್ಲ ಎಂಬುದು ಗಮನಾರ್ಹ.
-ಅಶ್ವಿನಿ ನಾಚಪ್ಪ, ಅಂತರರಾಷ್ಟ್ರೀಯ ಅಥ್ಲೀಟ್‌

ಪ್ರತಿಕ್ರಿಯಿಸಿ (+)