ಸೋಮವಾರ, ಡಿಸೆಂಬರ್ 9, 2019
24 °C
ನಾಕ್‌ ಔಟ್‌ ಹಂತದಲ್ಲಿ ಸ್ಥಾನ ಗಳಿಸಲು ಎಟಿಕೆ ಪ್ರಯತ್ನ

ಇಂಡಿಯನ್ ಸೂಪರ್ ಲೀಗ್‌: ನೀಗೀತೇ ಬಿಎಫ್‌ಸಿಯ ಗೋಲು ಬರ?

Published:
Updated:
Deccan Herald

 ಬೆಂಗಳೂರು: ಸೋಲರಿಯದೇ ಮುನ್ನುಗ್ಗುತ್ತಿರುವ ಬೆಂಗಳೂರು ಫುಟ್‌ಬಾಲ್ ಕ್ಲಬ್‌ (ಬಿಎಫ್‌ಸಿ) ಮತ್ತು ನಾಕೌಟ್ ಹಂತದ ಮೇಲೆ ಕಣ್ಣಿಟ್ಟಿರುವ ಎಟಿಕೆ ತಂಡಗಳ ಹಣಾಹಣಿಗೆ ಉದ್ಯಾನ ನಗರಿ ಸಜ್ಜಾಗಿದೆ.

ಕಂಠೀರವ ಕ್ರೀಡಾಂಗಣದಲ್ಲಿ ಗುರುವಾರ ನಡೆಯಲಿರುವ ಇಂಡಿಯನ್ ಸೂಪರ್ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ ಅಜೇಯ ಓಟವನ್ನು ಮುಂದುವರಿಸುವ ಗುರಿಯೊಂದಿಗೆ ಬಿಎಫ್‌ಸಿ ಕಣಕ್ಕೆ ಇಳಿಯಲಿದೆ. ಕಳೆದ ಪಂದ್ಯದಲ್ಲಿ ರೋಚಕ ಡ್ರಾ ಸಾಧಿಸಿದ ಎಟಿಕೆ ಜಯದ ಲಯಕ್ಕೆ ಮರಳಲು ಪ್ರಯತ್ನಿಸಲಿದೆ.

ಇದೇ 16ರಂದು ನಡೆಯಲಿರುವ ಮುಂಬೈ ಸಿಟಿ ಎಫ್‌ಸಿ ಮತ್ತು ಕೇರಳ ಬ್ಲಾಸ್ಟರ್ಸ್ ನಡುವಿನ ಪಂದ್ಯದೊಂದಿಗೆ ಐಎಸ್‌ಎಲ್‌ನ ಈ ವರ್ಷದ ಪಂದ್ಯಗಳು ಮುಕ್ತಾಯಗೊಳ್ಳಲಿವೆ. ಏಷ್ಯಾ ಕಪ್‌ ಟೂರ್ನಿಗಾಗಿ ಕೆಲವು ದಿನಗಳಿಗೆ ಲೀಗ್‌ ಸ್ಥಗಿತಗೊಳ್ಳಲಿದೆ. ಸೋಲಿಗೆ ಶರಣಾಗದೆ ವಿರಾಮಕ್ಕೆ ತೆರಳಲು ಬಿಎಫ್‌ಸಿ ಪ್ರಯತ್ನಿಸಲಿದೆ.

ಹಾಲಿ ಚಾಂಪಿಯನ್‌ ಚೆನ್ನೈಯಿನ್ ಎಫ್‌ಸಿಯನ್ನು 1–0ಯಿಂದ ಮಣಿಸಿ ಐದನೇ ಆವೃತ್ತಿಯಲ್ಲಿ ಗೆಲುವಿನ ಅಭಿಯಾನ ಆರಂಭಿಸಿದ್ದ ಬಿಎಫ್‌ಸಿ ಎರಡನೇ ಪಂದ್ಯವನ್ನು 2–2ರಿಂದ ಡ್ರಾ ಮಾಡಿಕೊಂಡಿತ್ತು. ನಂತರ ಸತತ ಆರು ಪಂದ್ಯಗಳನ್ನು ಗೆದ್ದಿತ್ತು. ಕಳೆದ ಎರಡು ಪಂದ್ಯಗಳಲ್ಲಿ ಡ್ರಾಗೆ ತೃಪ್ತಿಪಟ್ಟುಕೊಂಡಿರುವ ತಂಡ ಈಗ ಜಯ ಗಳಿಸುವ ತವಕದಲ್ಲಿದೆ. ಡ್ರಾ ಸಾಧಿಸಿರುವ ಎರಡೂ ಪಂದ್ಯಗಳಲ್ಲಿ ಬಿಎಫ್‌ಸಿ ಒಂದೊಂದು ಬಾರಿ ಮಾತ್ರ ಚೆಂಡನ್ನು ಎದುರಾಳಿಗಳ ಗೋಲುಪೆಟ್ಟಿಗೆಗೆ ಸೇರಿಸಿತ್ತು. ತಂಡದ ಪ್ರಮುಖ ಸ್ಟ್ರೈಕರ್ ಮತ್ತು ನಾಯಕ ಸುನಿಲ್ ಚೆಟ್ರಿ ಅವರಿಗೆ ಕಳೆದ ನಾಲ್ಕು ಪಂದ್ಯಗಳಲ್ಲಿ ಕಾಲ್ಚಳಕ ತೋರಿಸಲು ಆಗಲಿಲ್ಲ. ಗಾಯಗೊಂಡು ಚಿಕಿತ್ಸೆಗಾಗಿ ತವರಿಗೆ ತೆರಳಿರುವ ವೆನೆಜುವೆಲಾದ ಆಟಗಾರ ಮಿಕು ಅವರ ಅನುಪಸ್ಥಿತಿ ತಂಡದ ಮೇಲೆ ಮತ್ತು ಚೆಟ್ರಿ ಮೇಲೆ ಪರಿಣಾಮ ಬೀರಿದೆ. ಮಿಕು ಅವರ ಬೆಂಬಲದೊಂದಿಗೆ ಮೊದಲ ಐದು ಪಂದ್ಯಗಳಲ್ಲಿ ನಾಲ್ಕು ಗೋಲು ಗಳಿಸಿದ್ದ ಚೆಟ್ರಿ ಮಿಕು ಇಲ್ಲದ ಐದು ಪಂದ್ಯಗಳಲ್ಲಿ ಒಂದೇ ಗೋಲು ಗಳಿಸಿದ್ದಾರೆ.

ಉದಾಂತ, ಭೆಕೆ ಮೇಲೆ ಭರವಸೆ: ಚೆಟ್ರಿ ವೈಫಲ್ಯ ಕಂಡಿರುವ ಪಂದ್ಯಗಳಲ್ಲಿ ಮಿಡ್‌ಫೀಲ್ಡರ್‌ ಕುಮಾಮ್ ಉದಾಂತ ಸಿಂಗ್ ಮತ್ತು ಡಿಫೆಂಡರ್‌ ರಾಹುಲ್ ಭೆಕೆ ಗೋಲು ಗಳಿಸಿ ಬಿಎಫ್‌ಸಿಯ ಕೈ ಹಿಡಿದಿದ್ದಾರೆ. ಆಲ್ಬರ್ಟ್ ಸೆರಾನ್ ಮತ್ತು ಜುವಾನನ್‌ ಅವರು ರಕ್ಷಣಾ ವಿಭಾಗದಲ್ಲಿ ಉತ್ತಮ ಸಾಮರ್ಥ್ಯ ತೋರುತ್ತಿರುವುದು ಚೆಟ್ರಿ ಪಾಳಯದಲ್ಲಿ ಭರವಸೆ ಮೂಡಿಸಿದೆ.‌‌

ಹರ್ಮನ್‌ಜೋತ್ ಖಾಬ್ರಾ ಅಮಾನತಿಗೆ ಗುರಿಯಾಗಿರುವುದರಿಂದ ಗುರುವಾರ ಮಿಡ್‌ಫೀಲ್ಡ್ ವಿಭಾಗದಲ್ಲಿ ವಿದೇಶಿ ಆಟಗಾರರಾದ ಎರಿಕ್ ಪಾರ್ಟಲು, ಫ್ರಾನ್ಸಿಸ್ಕೊ ಹೆರ್ನಾಂಡಸ್‌ ಮತ್ತು ದಿಮಾಸ್ ಡೆಲ್ಗಾಡೊ ಕಣಕ್ಕಿಳಿಯುವ ಸಾಧ್ಯತೆ ಇದೆ. ಬೊಯ್‌ತೆಂಗ್ ಹಾಕಿಪ್ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಕಡಿಮೆ.

ಕಳೆದ ನಾಲ್ಕು ಪಂದ್ಯಗಳ ಪೈಕಿ ಮೂರರಲ್ಲಿ ಗೋಲುರಹಿತ ‌ಡ್ರಾ ಸಾಧಿಸಿರುವ ಎಟಿಕೆ ಗುರುವಾರ ಬಿಎಫ್‌ಸಿಯ ಬಲಿಷ್ಠ ರಕ್ಷಣಾ ಗೋಡೆಯನ್ನು ಕೆಡವಿ ಗುರಿ ಮುಟ್ಟುವುದೇ ಎಂಬುದು ಕುತೂಹಲದ ಪ್ರಶ್ನೆ. ಸ್ಟೀವ್ ಕೊಪೆಲ್‌ ಗರಡಿಯಲ್ಲಿ ಪಳಗಿರುವ ತಂಡದಲ್ಲಿ ಉತ್ತಮ ಡಿಫೆಂಡರ್‌ಗಳು ಇದ್ದರೂ ಆಕ್ರಮಣ ವಿಭಾಗದವರು ನಿರೀಕ್ಷೆಗೆ ತಕ್ಕ ಆಟ ಆಡುತ್ತಿಲ್ಲ.

ಪ್ರತಿಕ್ರಿಯಿಸಿ (+)