ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಫ್‌ಸಿಗೆ ಪ್ಲೇ ಆಫ್ ಸ್ಥಾನ ಭದ್ರಪಡಿಸುವ ಹಂಬಲ

ಇಂಡಿಯನ್ ಸೂಪರ್ ಲೀಗ್‌ ಫುಟ್‌ಬಾಲ್: ಬಿಎಫ್‌ಸಿ–ಎಚ್‌ಎಫ್‌ಸಿ ಹಣಾಹಣಿ; ಗೋಲು ಮಳೆಯ ನಿರೀಕ್ಷೆ
Last Updated 29 ಜನವರಿ 2020, 19:45 IST
ಅಕ್ಷರ ಗಾತ್ರ

ಬೆಂಗಳೂರು: ಇಂಡಿಯನ್ ಸೂಪರ್ ಲೀಗ್(ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಹೊಸ ತಂಡ ಒಡಿಶಾ ಎಫ್‌ಸಿ ವಿರುದ್ಧ ಅಮೋಘ ಜಯ ಸಾಧಿಸಿದ ಒಂದು ವಾರದ ಬಳಿಕ ಬೆಂಗಳೂರು ಫುಟ್‌ಬಾಲ್ ಕ್ಲಬ್‌ (ಬಿಎಫ್‌ಸಿ) ಮತ್ತೊಂದು ಹೊಸ ತಂಡವನ್ನು ಎದುರಿಸಲು ಸಜ್ಜಾಗಿದೆ.

ಕಂಠೀರವ ಕ್ರಿಡಾಂಗಣದಲ್ಲಿ ಗುರುವಾರ ನಡೆಯಲಿರುವ ಲೀಗ್‌ನ 70ನೇ ಪಂದ್ಯದಲ್ಲಿ ಸುನಿಲ್ ಚೆಟ್ರಿ ನೇತೃತ್ವದ ಬಿಎಫ್‌ಸಿ, ಕಮಲ್‌ಜೀತ್ ಸಿಂಗ್ ನಾಯಕತ್ವದ ಹೈದರಾಬಾದ್ ಎಫ್‌ಸಿಯನ್ನು ಎದುರಿಸಲಿದೆ. ಈ ಬಾರಿ ಪದಾರ್ಪಣೆ ಮಾಡಿರುವ ಎರಡು ತಂಡಗಳ ಪೈಕಿ ಒಡಿಶಾ ಎಫ್‌ಸಿಯನ್ನು ಎರಡೂ ಲೀಗ್‌ ಪಂದ್ಯಗಳಲ್ಲಿ ಬಿಎಫ್‌ಸಿ ಮಣಿಸಿದೆ.

ಆದರೆ ಹೈದರಾಬಾದ್‌ ಎಫ್‌ಸಿ ಎದುರಿನ ತವರಿನಾಚೆಯ ಪಂದ್ಯದಲ್ಲಿ ಡ್ರಾ ಸಾಧಿಸಲಷ್ಟೇ ಸಾಧ್ಯವಾಗಿತ್ತು. ಜನವರಿ 22ರಂದು ಕಂಠೀರವದಲ್ಲಿ ನಡೆದ ಪಂದ್ಯದಲ್ಲಿ ಒಡಿಶಾ ಎಫ್‌ಸಿಯನ್ನು ಏಕಪಕ್ಷೀಯ 3 ಗೋಲುಗಳಿಂದ ಚೆಟ್ರಿ ಬಳಗ ಮಣಿಸಿತ್ತು. ಹೀಗಾಗಿ ಹೈದರಾಬಾದ್ ವಿರುದ್ಧವೂ ತವರಿನಲ್ಲಿ ಉತ್ತಮ ಸಾಮರ್ಥ್ಯ ತೋರುವ ಭರವಸೆ ತಂಡದ್ದು.

ಈ ಬಾರಿಯ ಪ್ಲೇ ಆಫ್‌ (ಫೆಬ್ರುವರಿ 29ರಿಂದ) ವೇಳಾಪಟ್ಟಿ ಬಿಡುಗಡೆಯಾದ ನಂತರ ಬಿಎಫ್‌ಸಿ ಆಡುತ್ತಿರುವ ಮೊದಲ ಪಂದ್ಯ ಇದು. ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ತಂಡ ಪ್ಲೇ ಆಫ್‌ ಲೈನ್ ಅಪ್‌ನಲ್ಲಿ ಸ್ಥಾನ ಭದ್ರಪಡಿಸಿಕೊಳ್ಳಬೇಕಾದರೆ ಉಳಿದಿರುವ ನಾಲ್ಕು ಪಂದ್ಯಗಳಲ್ಲೂ ಸೋಲಿನಿಂದ ಪಾರಾಗಬೇಕು.

ಗುರುವಾರದ ಪಂದ್ಯ ಬಿಟ್ಟರೆ ತಂಡಕ್ಕೆ ತವರಿನಲ್ಲಿ ಉಳಿದಿರುವುದುಒಂದೇ ಪಂದ್ಯ (ಎಟಿಕೆ ವಿರುದ್ಧ, ಫೆಬ್ರುವರಿ 22). ಅದಕ್ಕೂ ಮೊದಲು ಚೆನ್ನೈಯಿನ್ ಎಫ್‌ಸಿ ಮತ್ತು ಕೇರಳ ಬ್ಲಾಸ್ಟರ್ಸ್ ತಂಡಗಳನ್ನು ತವರಿನಾಚೆ ಎದುರಿಸಬೇಕಾಗಿದೆ. ಆದ್ದರಿಂದ ಹೈದರಾಬಾದ್ ಎಫ್‌ಸಿ ವಿರುದ್ಧ ಗೆದ್ದು ಮುಂದಿನ ಹಾದಿಯನ್ನು ಸುಗಮಗೊಳಿಸುವ ಪಣದೊಂದಿಗೆ ಗುರುವಾರ ಕಣಕ್ಕೆ ಇಳಿಯಲಿದೆ.

ಒತ್ತಡದಲ್ಲಿ ಎಚ್‌ಎಫ್‌ಸಿ: ಒಂದೇ ಪಂದ್ಯ ಗೆದ್ದಿರುವ ಹೈದರಾಬಾದ್‌ ಒತ್ತಡದಲ್ಲಿದೆ. ಆಕ್ರಮಣ ವಿಭಾಗ ಬಲಿಷ್ಠವಾಗಿದ್ದರೂ ಅದರ ರಕ್ಷಣಾ ಗೋಡೆ ಬಿರುಕು ಬಿಟ್ಟಿದೆ. ಹೈದರಾಬಾದ್‌, ಇತರ ಎಲ್ಲ ತಂಡಗಳಿಗಿಂತ ಹೆಚ್ಚು 32 ಗೋಲುಗಳನ್ನು ಬಿಟ್ಟುಕೊಟ್ಟಿದೆ. ತವರಿನ ಹೊರಗೆ ಒಂದು ಪಂದ್ಯವನ್ನೂ ಗೆಲ್ಲಲು ತಂಡಕ್ಕೆ ಸಾಧ್ಯವಾಗಲಿಲ್ಲ. ಕಳೆದ ಪಂದ್ಯದಲ್ಲಿ ಬಲಿಷ್ಠ ಮುಂಬೈ ಸಿಟಿ ವಿರುದ್ಧ 1–1ರ ಡ್ರಾ ಸಾಧಿಸಿರುವುದು ತಂಡಕ್ಕೆ ಸಮಾಧಾನ ತಂದಿದೆ. ಬಿಎಫ್‌ಸಿ ವಿರುದ್ಧ ಗೆದ್ದರೆ ಹೊಸ ಕೋಚ್‌ ಜೇವಿಯರ್ ಲೊಪೆಜ್ ಮುಡಿಯಲ್ಲಿ ಗರಿ ಮೂಡಲಿದೆ. ಇದು ಸಾಧ್ಯವಾಗಬೇಕಾದರೆ ಬಿಎಫ್‌ಸಿಯ ಬಲಿಷ್ಠ ರಕ್ಷಣಾ ವಿಭಾಗಕ್ಕೆ ಚಳ್ಳೆಹಣ್ಣು ತಿನ್ನಿಸುವ ಸವಾಲನ್ನು ಮಾರ್ಸೆಲೊ ಪೆರೇರ ಮತ್ತು ಬೊಬೊ ಮೆಟ್ಟಿ ನಿಲ್ಲಬೇಕಿದೆ.

ಚೆಟ್ರಿ ಮೇಲೆ ಭಾರ: ಬಿಎಫ್‌ಸಿಯ ಫಾರ್ವರ್ಡ್ ಆಟಗಾರರು ಈ ಬಾರಿ ನಿರೀಕ್ಷೆಗೆ ತಕ್ಕಂತೆ ಬೆಳಗಲಿಲ್ಲ. ಗೋಲು ಗಳಿಸುವ ಭಾರ ಸುನಿಲ್ ಚೆಟ್ರಿ ಮೇಲೆಯೇ ಇದೆ. ಆದರೆ ಕಳೆದ ಪಂದ್ಯದಲ್ಲಿ ದೇಶಾನ್ ಬ್ರೌನ್ ಗೋಲು ಗಳಿಸಿರುವುದು ಕೋಚ್ ಕ್ವದ್ರತ್‌ಗೆ ಸಂಭ್ರಮ ತಂದಿದೆ. ಹೈದರಾಬಾದ್‌ನ ಡಿಫೆಂಡರ್‌ಗಳ ಕಣ್ತಪ್ಪಿಸಿ ಚೆಂಡನ್ನು ಗುರಿ ಮುಟ್ಟಿಸುವುದು ಬಿಎಫ್‌ಸಿಗೆ ಸವಾಲಾಗಲಾರದು. ಎದುರಾಳಿ ತಂಡದ ಮಿಡ್‌ಫೀಲ್ಡರ್‌ ಆದಿಲ್ ಖಾನ್ ಅವರನ್ನು ನಿಯಂತ್ರಿಸಿದರೆ ಉದ್ಯಾನ ನಗರಿಯಲ್ಲಿ ಗೋಲು ಮಳೆ ಸುರಿಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT