ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಫ್‌ಸಿ ಕಾಲ್ಚಳಕಕ್ಕೆ ಕಂಠೀರವ ಕಾತರ

ಇಂಡಿಯನ್ ಸೂಪರ್ ಲೀಗ್‌ ಫುಟ್‌ಬಾಲ್: ಸೋಲಿನಿಂದ ಕಂಗೆಟ್ಟಿರುವ ಜೆಎಫ್‌ಸಿಗೆ ಗಾಯದ ಸಮಸ್ಯೆ
Last Updated 8 ಜನವರಿ 2020, 19:45 IST
ಅಕ್ಷರ ಗಾತ್ರ
ADVERTISEMENT
""
""

ಬೆಂಗಳೂರು: ಬಲಿಷ್ಠ ಎಫ್‌ಸಿ ಗೋವಾ ತಂಡವನ್ನು ಮಣಿಸಿ ಹೊಸವರ್ಷದಲ್ಲಿ ಹರ್ಷಗೊಂಡಿರುವ ಬೆಂಗಳೂರು ಫುಟ್‌ಬಾಲ್ ಕ್ಲಬ್‌ (ಬಿಎಫ್‌ಸಿ) ತವರಿನ ಪ್ರೇಕ್ಷಕರನ್ನು ರಂಜಿಸಲು ಮತ್ತೆ ಸಜ್ಜಾಗಿದೆ. ಕಂಠೀರವ ಕ್ರೀಡಾಂಗಣದಲ್ಲಿ ಗುರುವಾರ ನಡೆಯಲಿರುವ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯ 55ನೇ ಪಂದ್ಯದಲ್ಲಿ ಸುನಿಲ್ ಚೆಟ್ರಿ ಬಳಗ ಜೆಮ್‌ಶೆಡ್‌ಪುರ ಫುಟ್‌ಬಾಲ್ ಕ್ಲಬ್‌ (ಜೆಎಫ್‌ಸಿ) ವಿರುದ್ಧ ಸೆಣಸಲಿದೆ.

ಜನವರಿ ಮೂರರಂದು ಕಂಠೀರವದಲ್ಲಿ ಬಿಎಫ್‌ಸಿ 2–1 ಗೋಲುಗಳಿಂದ ಗೋವಾವನ್ನು ಸೋಲಿಸಿತ್ತು. ಸತತ ಸೋಲಿನಿಂದ ಕಂಗೆಟ್ಟಿರುವ ಜೆಎಫ್‌ಸಿಯನ್ನು ಮಣಿಸಲು ಈಗ ತುದಿಗಾಲಲ್ಲಿ ನಿಂತಿದೆ. ಜೆಎಫ್‌ಸಿ ಕಳೆದ ಐದು ಪಂದ್ಯಗಳಲ್ಲಿ ಗೆಲುವಿನ ದಡ ಸೇರಲು ವಿಫಲವಾಗಿದ್ದು ಹ್ಯಾಟ್ರಿಕ್ ಡ್ರಾಗಳ ನಂತರ ಕೊನೆಯ ಎರಡು ಪಂದ್ಯಗಳಲ್ಲಿ ಸೋಲಿಗೆ ಶರಣಾಗಿದೆ. ತಂಡದ ಪ್ರಮುಖ ಆಟಗಾರರು ಗಾಯದ ಸಮಸ್ಯೆಯಿಂದ ಬಳಲುತ್ತಿದ್ದುದು ಸತತ ವೈಫಲ್ಯಕ್ಕೆ ಕಾರಣ.

ಗಾಯಾಳುಗಳ ಪೈಕಿ ನೊಯ್‌ ಅಕೊಸ್ಟ ಗುಣಮುಖರಾಗಿದ್ದು ಪಿಟಿ ಮತ್ತು ಸರ್ಜಿಯೊ ಕಾಸೆಲ್ ಗುರುವಾರದ ಪಂದ್ಯಕ್ಕೂ ಲಭ್ಯ ಇರುವುದಿಲ್ಲ. ಹೊಸದಾಗಿ ತಂಡವನ್ನು ಸೇರಿಕೊಂಡಿರುವ ಸ್ಪೇನ್‌ನ ಡೇವಿಡ್ ಗ್ರಾಂಡೆ ಮತ್ತು ಭಾರತದ ಗೌರವ್ ಮುಖಿ, ತಂಡಕ್ಕೆ ಬಲ ತುಂಬುವ ನಿರೀಕ್ಷೆ ಇದೆ.

ಹ್ಯಾಟ್ರಿಕ್ ಡ್ರಾಗಳ ನಂತರ ಲಯ ಕಂಡುಕೊಂಡಿರುವ ಬಿಎಫ್‌ಸಿ ತಂಡ ಚೆನ್ನೈ, ಕೇರಳ, ಒಡಿಶಾ, ನಾರ್ತ್ ಈಸ್ಟ್ ಮತ್ತು ಗೋವಾ ವಿರುದ್ಧ ಮೇಲುಗೈ ಸಾಧಿಸಿದೆ. ಮ್ಯಾನ್ಯುಯೆಲ್ ಒನ್ವು, ಉದಾಂತ ಸಿಂಗ್, ರಾಫೆಲ್ ಆಗಸ್ಟೊ, ಆಶಿಕ್ ಕುರುಣಿಯನ್, ಎರಿಕ್ ಪಾರ್ಟಲು, ದಿಮಾಸ್ ಡೆಲ್ಗಾಡೊ ಮುಂತಾದವರು ಈ ವರೆಗೆ ನಿರೀಕ್ಷೆ ಹುಸಿಗೊಳಿಸಲಿಲ್ಲ. ಆದರೆ ಗೋಲು ಗಳಿಸಲು ಸುನಿಲ್ ಚೆಟ್ರಿ ಒಬ್ಬರನ್ನೇ ಅವಲಂಬಿಸುವ ‘ದೌರ್ಬಲ್ಯ’ದಿಂದ ಹೊರಬರಬೇಕಾಗಿದೆ.

ಗೋಲ್‌ಕೀಪರ್‌ಗಳ ಹಣಾಹಣಿ: ಕಂಠೀರವದಲ್ಲಿ ಗುರುವಾರ ಗೋಲ್‌ಕೀಪರ್‌ಗಳ ‘ಸೂಪರ್‌ ಶೋ’ ನಡೆಯುವ ಸಾಧ್ಯತೆ ಇದೆ. ಬಿಎಫ್‌ಸಿಯ ಗುರುಪ್ರೀತ್ ಸಿಂಗ್ ಸಂಧು ಮತ್ತು ಜೆಫ್‌ಸಿಯ ಸುಬ್ರತಾ ಪಾಲ್‌ ಐಎಸ್‌ಎಲ್‌ನ ಅತ್ಯುತ್ತಮ ವಿಕೆಟ್ ಕೀಪರ್‌ಗಳು ಎಂದೆನಿಸಿಕೊಂಡಿದ್ದಾರೆ. ನವೆಂಬರ್ ಮೂರರಂದು ಜೆಮ್‌ಶೆಡ್‌ಪುರದಲ್ಲಿ ನಡೆದಿದ್ದ ಪಂದ್ಯದಲ್ಲಿ ಇವರಿಬ್ಬರ ಗೋಡೆ ಕೆಡವಲು ಸಾಧ್ಯವಾಗದೆ ಉಭಯ ತಂಡಗಳು ಡ್ರಾಗೆ ಸಮಾಧಾನಪಟ್ಟುಕೊಂಡಿದ್ದವು.

ಗುರುಪ್ರೀತ್ ಸಿಂಗ್ ಸಂಧು ಈ ಬಾರಿ ಎಲ್ಲ 11 ಪಂದ್ಯಗಳಲ್ಲಿ ಆಡಿದ್ದು ಆರರಲ್ಲಿ ಒಂದು ಗೋಲು ಕೂಡ ಬಿಟ್ಟುಕೊಡದೆ ಗಮನ ಸೆಳೆದಿದ್ದಾರೆ. 26 ಸೇವ್‌ಗಳ ಮೂಲಕ ತಂಡಕ್ಕೆ ಆಸರೆಯಾಗಿದ್ದಾರೆ. ಸುಬ್ರತಾ ಪಾಲ್ 10 ಪಂದ್ಯಗಳ ಪೈಕಿ ಎರಡರಲ್ಲಿ ಒಂದು ಗೋಲು ಕೂಡ ಬಿಟ್ಟುಕೊಡಲಿಲ್ಲ. 29 ಸೇವ್‌ಗಳ ಮೂಲಕ ಮಿಂಚಿದ್ದಾರೆ.

ಇನ್ನೂ ಭಾರತಕ್ಕೆ ತಲುಪದ ಬ್ರೌನ್

ಜಮೈಕಾದ ಮಿಡ್‌ಫೀಲ್ಡರ್ ದೇಶಾನ್ ಬ್ರೌನ್ ಅವರೊಂದಿಗೆ ಬಿಎಫ್‌ಸಿ ಜನವರಿ ಒಂದರಂದು ಒಪ್ಪಂದ ಮಾಡಿಕೊಂಡಿದೆ. ಆದರೆ ಅವರು ಇನ್ನೂ ಭಾರತ ತಲುಪಲಿಲ್ಲ. ‘ಬ್ರೌನ್‌ಗೆ ವಿಸಾ ಸಿಕ್ಕಿರಲಿಲ್ಲ. ಈಗ ಸಮಸ್ಯೆ ಬಗೆಹರಿದಿದ್ದು ಸದ್ಯದಲ್ಲೇ ತಂಡವನ್ನು ಸೇರಿಕೊಳ್ಳಲಿದ್ದಾರೆ’ ಎಂದು ತಂಡದ ಮೂಲಗಳು ಬುಧವಾರ ತಿಳಿಸಿವೆ.

ಸಂದೀಪ್‌ಗೆ ಬಡ್ತಿ; ಗೌರವ್‌ ಜೊತೆ ಒಪ್ಪಂದ

ಜೆಎಫ್‌ಸಿ ತಂಡ ಗೌರವ್ ಮುಖಿ ಅವರ ಜೊತೆ ಮರು ಒಪ್ಪಂದ ಮಾಡಿಕೊಂಡಿದ್ದು ಯುವ ಆಟಗಾರ ಸಂದೀಪ್‌ ಮಂಡಿಗೆ ಸೀನಿಯರ್ ತಂಡಕ್ಕೆ ಬಡ್ತಿ ನೀಡಿದೆ. ಸಂದೀಪ್‌ ಗುರುವಾರ ಚೊಚ್ಚಲ ಪಂದ್ಯ ಆಡುವ ಸಾಧ್ಯತೆ ಇದೆ.

***

ಬೆಂಗಳೂರು ಪಂದ್ಯ ನಿಜಕ್ಕೂ ಸವಾಲಿನದ್ದು. ಆದರೆ ಬಲಿಷ್ಠ ತಂಡಗಳ ವಿರುದ್ಧ ಆಡಲು ನಮ್ಮ ತಂಡ ಇಚ್ಛಿಸುತ್ತದೆ. ಇಲ್ಲಿ ತೋರುವ ಸಾಮರ್ಥ್ಯ ಮುಂದಿನ ಹಾದಿಗೆ ನೆರವಾಗಲಿದೆ.
–ಆ್ಯಂಟೊನಿಯೊ ಇರಿಯೊಂಡೊ ಜೆಎಫ್‌ಸಿ ಕೋಚ್‌

ಗೋಲ್‌ಕೀಪರ್ ಗುರುಪ್ರೀತ್ ಸಿಂಗ್ ಸಂಧು ಮೇಲೆ ತಂಡಕ್ಕೆ ಪರಿಪೂರ್ಣ ವಿಶ್ವಾಸವಿದೆ. ಈ ವರೆಗಿನ ಆಟ ಅವರ ಪ್ರತಿಭೆಯನ್ನು ಸಾಬೀತು ಮಾಡಿದೆ. ಜೆಎಫ್‌ಸಿ ವಿರುದ್ಧವೂ ಅವರು ಮಿಂಚಲಿದ್ದಾರೆ.
–ಜೇವಿಯರ್ ಪಿನಿಲೊಸ್ ಬಿಎಫ್‌ಸಿ ಗೋಲ್‌ಕೀಪಿಂಗ್ ಕೋಚ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT