ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಕು, ಪಾರ್ಟಲು ಕಾಲ್ಚಳಕ

ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿ: ಎಟಿಕೆ ವಿರುದ್ಧ ಬಿಎಫ್‌ಸಿಗೆ ಗೆಲುವು
Last Updated 31 ಅಕ್ಟೋಬರ್ 2018, 20:15 IST
ಅಕ್ಷರ ಗಾತ್ರ

ಕೋಲ್ಕತ್ತ (ಪಿಟಿಐ): ಮೋಹಕ ಕಾಲ್ಚಳಕದ ಮೂಲಕ ಮೋಡಿ ಮಾಡಿದ ಮಿಕು ಮತ್ತು ಎರಿಕ್ ಪಾರ್ಟಲು, ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ತಂಡಕ್ಕೆ ಗೆಲುವು ತಂದುಕೊಟ್ಟರು. ವಿವೇಕಾನಂದ ಯುವ ಭಾರತಿ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ನಡೆದ ಇಂಡಿಯನ್ ಸೂಪರ್ ಲೀಗ್‌ (ಐಎಸ್‌ಎಲ್‌) ಪಂದ್ಯದಲ್ಲಿ ಸುನಿಲ್ ಚೆಟ್ರಿ ಬಳಗ ಎಟಿಕೆಯನ್ನು 2–1ರಿಂದ ಮಣಿಸಿತು.

ಎರಡು ಪಂದ್ಯಗಳಲ್ಲಿ ಗೆದ್ದು ಒಂದರಲ್ಲಿ ಡ್ರಾ ಸಾಧಿಸಿದ್ದ ಬೆಂಗಳೂರು ಎಫ್‌ಸಿ ತಂಡ ಇಲ್ಲಿ ಆರಂಭದಲ್ಲೇ ಆಕ್ರಮಣಕಾರಿ ಆಟ ಆಡಿತು. ಹೀಗಾಗಿ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಲು ತಂಡಕ್ಕೆ ಸಾಧ್ಯವಾಯಿತು. 10 ಮತ್ತು 11ನೇ ನಿಮಿಷಗಳಲ್ಲಿ ತಂಡಕ್ಕೆ ಎರಡು ಫ್ರೀ ಕಿಕ್ ಅವಕಾಶಗಳು ಲಭಿಸಿದವು. ಮೊದಲ ಫ್ರೀ ಕಿಕ್‌ನಲ್ಲಿ ಮಿಕು ಮತ್ತು ನಂತರ ಸುನಿಲ್ ಚೆಟ್ರಿ ಎಡವಿದರು. ಆದರೆ ಪಂದ್ಯದ ಮೊದಲ ಗೋಲು ಒಲಿದದ್ದು ಎಟಿಕೆಗೆ.

15ನೇ ನಿಮಿಷದಲ್ಲಿ ಸ್ಯಾಂಟೋಸ್ ಮತ್ತು ಕೋಮಲ್ ತಟಾಲ್ ಜೋಡಿ ತವರಿನ ಪ್ರೇಕ್ಷಕರನ್ನು ರೋಮಾಂಚನಗೊಳಿಸಿದರು. ದೂರದಿಂದ ಸ್ಯಾಂಟೋಸ್ ನೀಡಿದ ನಿಖರ ಪಾಸ್‌ನಲ್ಲಿ ಚೆಂಡನ್ನು ಡ್ರಿಬಲ್ ಮಾಡುತ್ತ ಮುಂದೆ ಸಾಗಿದ ಕೋಮಲ್‌ ಮ್ಯಾಜಿಕ್ ಮಾಡಿದರು. ಗೋಲ್‌ಕೀಪರ್ ಗೋಲುಪೆಟ್ಟಿಗೆಯಿಂದ ತುಸು ಹೊರಗೆ ಇದ್ದುದನ್ನು ಗಮನಿಸಿದ ಕೋಮಲ್, ಚೆಂಡನ್ನು ಎಡಭಾಗದ ಮೂಲೆಗೆ ಬಲವಾಗಿ ಒದ್ದರು. ಗುರುಪ್ರೀತ್‌ ಸಿಂಗ್‌ ಸಂಧು ಚೆಂಡನ್ನು ತಡೆಯಲು ನಡೆಸಿದ ಪ್ರಯತ್ನ ವಿಫಲವಾಯಿತು.

ನಂತರ ಕೆಲ ಕಾಲ ಬಿಎಫ್‌ಸಿ ಒತ್ತಡದಲ್ಲೇ ಆಡಿತು. ಆದರೆ 45+3 ಮತ್ತು 47ನೇ ನಿಮಿಷಗಳಲ್ಲಿ ಮಿಕು ಮತ್ತು ಎರಿಕ್ ಪಾರ್ಟಾಲು ತಂಡದಲ್ಲಿ ಸಂಭ್ರಮದ ಅಲೆ ಎಬ್ಬಿಸಿದರು. 45+3ನೇ ನಿಮಿಷದಲ್ಲಿ ಡಿಮಾಸ್ ನೀಡಿದ ಪಾಸ್‌ನಲ್ಲಿ ದೂರದಿಂದ ಚೆಂಡನ್ನು ಗೋಲುಪೆಟ್ಟಿಗೆಯೊಳಗೆ ತೂರಿದ ಮಿಕು ಬಿಎಫ್‌ಸಿಗೆ ಸಮಬಲ ಗಳಿಸಿಕೊಟ್ಟರು. 47ನೇ ನಿಮಿಷದಲ್ಲಿ ಲಭಿಸಿದ ಫ್ರೀ ಕಿಕ್‌ನಲ್ಲಿ ಪಾರ್ಟಲು ಗಳಿಸಿದ ಗೋಲಿನೊಂದಿಗೆ ತಂಡ ಮುನ್ನಡೆ ಗಳಿಸಿತು. ನಂತರ ಎದುರಾಳಿಗಳನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT