ಕಿಣಿ.. ಕಿಣಿ.. ಫುಟ್‌ಬಾಲ್‌ನ ಕಣ್ಮಣಿಗಳು

7

ಕಿಣಿ.. ಕಿಣಿ.. ಫುಟ್‌ಬಾಲ್‌ನ ಕಣ್ಮಣಿಗಳು

Published:
Updated:
Deccan Herald

ಮೇಘಾಲಯದ ಶಿಲ್ಲಾಂಗ್‌ನ ಬಡ ಕುಟುಂಬದಲ್ಲಿ ಐದನೇ ಮಗನಾಗಿ ಜನಿಸಿದ್ದು ಗೇಬ್ರಿಯಲ್ ನೋಂಗ್ರುಮ್. ಮೂರು ವರ್ಷ ತುಂಬುವಾಗಲೇ ಕಣ್ಣಿನ ಬೆಳಕು ನಂದಿಹೋಗಿತ್ತು. ಆದರೆ ರಕ್ತದಲ್ಲಿಯೇ ಬಂದಿದ್ದ ಫುಟ್‌ಬಾಲ್ ಪ್ರೀತಿ ಕುಂದಲಿಲ್ಲ. ಅಪ್ಪ, ಅಣ್ಣಂದಿರು ತಮ್ಮ ಫುಟ್‌ಬಾಲ್ ಆಟ ಸಾಧನೆಗಳನ್ನು ಮಾತನಾಡಿಕೊಳ್ಳುವುದನ್ನು ಕೇಳಿ ಪುಳಕಗೊಳ್ಳುತ್ತಿದ್ದ ಗೇಬ್ರಿಯಲ್ ತನಗೆ ಆಡಲು ಸಾಧ್ಯವಿಲ್ಲವಲ್ಲ ಎಂದು ಪರಿತಪಿಸುತ್ತಿದ್ದ.

ತಾನು ಓದುತ್ತಿದ್ದ ವಿಶೇಷ ಮಕ್ಕಳ ಶಾಲೆಯಲ್ಲಿ ಸಹಪಾಠಿಗಳೊಂದಿಗೆ ಫುಟ್‌ಬಾಲ್ ಆಡುವ ಪ್ರಯತ್ನದಲ್ಲಿ ಗಾಯಗೊಂಡಿದ್ದೂ ಆಯಿತು. ಚೆಂಡನ್ನು ಗೋಡೆಗೆ ಒದೆಯುವ ಅಭ್ಯಾಸ ತೃಪ್ತಿ ನೀಡಲಿಲ್ಲ. ಇತ್ತ ಓದಿನಲ್ಲಿಯೂ ಏಕಾಗ್ರತೆ ಉಳಿಯಲಿಲ್ಲ. ಶಿಕ್ಷಕರಿಂದಲೂ ಬೈಗುಳಗಳ ಕೇಳಿಸಿಕೊಳ್ಳಬೇಕಾಯಿತು. ಆದರೆ ಇದೆಲ್ಲವಕ್ಕೂ ಒಂದು ಪರಿಹಾರ ಸಿಕ್ಕಿತ್ತು. ಅದು ‘ಖಾಲಿ ಬಾಟಲಿ’!

ಅದೊಂದು ದಿನ ಅದೆಲ್ಲಿಂದಲೋ ಸಿಕ್ಕ ತಂಪು ಪಾನೀಯದ ಖಾಲಿ ಬಾಟಲಿಯಲ್ಲಿ ಕಲ್ಲುಗಳನ್ನು ಹಾಕಿ ಬಿರಡೆ ಮುಚ್ಚಿ, ನೆಲದ ಮೇಲೆ ಎಸೆದಾಗ ಬಂದ ಸದ್ದಿನ ಜಾಡು ಗೆಬ್ರಿಯಲ್ ಬದುಕಿಗೆ ಹೊಸ ದಾರಿ ತೋರಿಸಿತ್ತು. ಕಿಕ್, ಡ್ರಿಬ್ಲಿಂಗ್‌ಗಳ ಕಾಲ್ಚಳಕ ಶುರುವಾಯಿತು. ಅಂಧ ಹುಡುಗನ ಜೀವನಕ್ಕೆ ಹೊಸ ತಿರುವು ಲಭಿಸಿತ್ತು. 

‘2016ರ ಸೆಪ್ಟೆಂಬರ್‌ನಲ್ಲಿ ಐಬಿಎಫ್‌ಎ ತಂಡ ಇವರ ಶಾಲೆಗೆ ಭೇಟಿ ನೀಡಿತ್ತು. ಗೇಬ್ರಿಯಲ್‌ನ  ‘ಬಾಟಲ್‌ ಫುಟ್‌ಬಾಲ್‌’ ನೋಡಿ ವಿಶೇಷ ಚೆಂಡನ್ನು ನೀಡಿದರು. ಚೆಂಡು ಅದು ಗೋಳಾಕಾರವಾಗಿರುವುದು ಆಗಲೇ ಗೊತ್ತಾಗಿದ್ದು. ಆಮೇಲೆ ಆದರಿಂದ ಶಬ್ದವೂ ಕೇಳತೊಡಗಿತು.   ಅಂಧರಾದ ನಾವೂ ಫುಟ್‌ಬಾಲ್‌ ಆಡಬಹುದೆಂದು ಖುಷಿಪಟ್ಟೆ’ಎಂದು ತಮ್ಮ ಫುಟ್‌ಬಾಲ್‌ ಪಯಣದ ಆರಂಭವನ್ನು ಗೇಬ್ರಿಯಲ್ ಬಿಚ್ಚಿಟ್ಟಿಡುತ್ತಾರೆ.

ಅಂದು ಆರಂಭವಾದ ಫುಟ್‌ಬಾಲ್‌ ಪ್ರಯಾಣ ಇಂದು ಭಾರತದ ಅಂಧರ ಫುಟ್‌ಬಾಲ್‌ನಲ್ಲಿ ಭಾರತದ ‘ಮೆಸ್ಸಿ’ ಎಂದು ಗೇಬ್ರಿಯಲ್ ಅವರು ಹೆಸರು ಪಡೆಯುವಷ್ಟರ ಮಟ್ಟಿಗೆ ತಂದು ನಿಲ್ಲಿಸಿದೆ. ಚುರುಕಾದ ಪಾಸ್‌ಗಳಿಂದ ಅವರನ್ನು ತಂಡದ ಇತರರು ಮೆಸ್ಸಿ ಎಂದು ಕರೆದರು. ಇಂದು ಭಾರತ ಅಂಧರ ಫುಟ್‌ಬಾಲ್‌ ತಂಡದ ಪ್ರಮುಖ ಸ್ಟ್ರೈಕರಾಗಿ ಹೊರಹೊಮ್ಮಿದ್ದಾರೆ ಈ ‘ಮೆಸ್ಸಿ’.

***

ಕೇರಳದ ಫಲ್ಹಾನ್  ಒಂದೂವರೆ ವರ್ಷದವರಾಗಿದ್ದಾಗ ಔಷಧಿಯೊಂದರ ಅಡ್ಡಪರಿಣಾಮದಿಂದಾಗಿ ಕಣ್ಣುಗಳ ದೃಷ್ಟಿ ಕಳೆದುಕೊಂಡ. ನಂತರ ವಿಶೇಷ ಶಾಲೆಯಲ್ಲಿ ವಿದ್ಯಾಭ್ಯಾಸ ನಡೆಯಿತು. ಅಲ್ಲಿ ಫುಟ್‌ಬಾಲ್ ಆಡುವ ಸಾಹಸಕ್ಕೆ ಕಾಲಿಟ್ಟರು.

‘ಮೊದ ಮೊದಲು ಫುಟ್‌ಬಾಲ್‌ ಆಡಲು ಹೋಗಿ ತುಟಿ ಹಣೆ ತುಂಬಾ ಗಾಯಗಳಾಗುತ್ತಿದ್ದವು ಅದರಿಂದಾಗಿ ನನ್ನನ್ನು ಆಟವಾಡಲು ಕಳುಹಿಸುವುದಕ್ಕೆ ಅಮ್ಮ ನಿರಾಕರಿಸಿದರು. ಹಾಗೂ ಹೀಗೂ ಮನೆಯವರನ್ನ ಒಪ್ಪಿಸಿ ಅಭ್ಯಾಸ ಮುಂದುವರಿಸಿದೆ. ಈ ಆಟದಲ್ಲಿ ಗಾಯವಾಗುವ ಸಾಧ್ಯತೆಗಳು ಹೆಚ್ಚು. ಆದರೂ ಛಲ ಬಿಡದೆ ಇದರಲ್ಲಿ ಕಠಿಣ ಅಭ್ಯಾಸ ನಡೆಸಿ ತಂಡಕ್ಕೆ ಆಯ್ಕೆಯಾದೆ’ ಎಂದು ಫಲ್ಹಾನ್ ಹೇಳುತ್ತಾರೆ.

***

ಭಾರತದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ  ಅಂಧರ ಫುಟ್‌ಬಾಲ್ ಕ್ರೀಡೆಯಲ್ಲಿ ಮಿಂಚುತ್ತಿರುವ ಈ ಇಬ್ಬರು ಆಟಗಾರರಂತೆಯ ಹಲವರ ಕಥೆಗಳು ಇವೆ. ಈಚೆಗೆ ಬೆಂಗಳೂರಿನಲ್ಲಿ ನಡೆದಿದ್ದ ಅಂಧರ ಫುಟ್‌ಬಾಲ್ ಟೂರ್ನಿಯು ಅಂಧ ಕ್ರೀಡಾಪ್ರತಿಭೆಗಳಿಗೆ ವೇದಿಕೆಯಾಗಿತ್ತು ಭಾರತದಲ್ಲಿ ಅಂಧರ ಕ್ರಿಕೆಟ್‌ ಈಗಾಗಲೇ ಜನಪ್ರಿಯತೆ ಪಡೆದಿದೆ.  ಅಂಧರ ಫುಟ್‌ಬಾಲ್‌ ನಿಧಾನವಾಗಿ ಬೆಳೆಯುತ್ತಿದೆ. ಈ ಸಾಹಸಗಾಥೆಯ ಹಿಂದಿನ ಸೂತ್ರಧಾರ ಸುನೀಲ್‌ ಜೆ. ಮ್ಯಾಥ್ಯೂ.  ಐಟಿ ಕಂಪೆನಿ ನಿರ್ವಹಿಸುವ ಅವರು ಅಂಧರ ಶ್ರೇಯೋಭಿವೃದ್ಧಿಗಾಗಿ ಸ್ವಯಂ ಸೇವಾ ಸಂಸ್ಥೆಯೊಂದನ್ನು ನಡೆಸುತ್ತಿದ್ದಾರೆ. ಅದರಲ್ಲಿ ಅವರು ಅಂಧರಿಗೆ ವೃತ್ತಿಪರ ಕೋರ್ಸ್‌ಗಳ ತರಬೇತಿ ನೀಡುತ್ತಿದ್ದಾರೆ. ಆ ಮೂಲಕ ಅಂಧರು ಸ್ವಾವಲಂಬಿಗಳಾಗುವಂತೆ ಮಾಡುತ್ತಿದ್ದಾರೆ.

‘2013ರಲ್ಲಿ ಒಂದು ದಿನ ನಾನು ಫುಟ್‌ಬಾಲ್‌ ಹಿಡಿದು ಕೂತಿದ್ದೆ. ನಮ್ಮೊಂದಿಗಿದ್ದ ಅಂಧ ಯುವಕ ಕೈಯಲ್ಲೇನಿದೆ ಎಂದು ಕೇಳಿದ.  ಅದಕ್ಕೆ ನಾನು ಇದು ಫುಟ್‌ಬಾಲ್‌ ಅಂದೆ. ತಕ್ಷಣ ನನ್ನ ಕೈಯಿಂದ ಚೆಂಡು ಪಡೆದು ಗೋಡೆ ಯಾವ ಕಡೆಗಿದೆ ಎಂದು ಕೇಳಿ ಒಂದು ಕಿಕ್‌ ಮಾಡಿದ. ಇದನ್ನು ನೋಡಿ ನಿನಗೆ ಇದು ಹೇಗೆ ಸಾಧ್ಯ ಎಂದು ಕೇಳಿದೆ. ತಾನು ದೃಷ್ಟಿ ಕಳೆದುಕೊಳ್ಳುವುದಕ್ಕೂ ಮುನ್ನ ಫುಟ್‌ಬಾಲ್‌ ಆಡುತ್ತಿದ್ದೆ ಎಂದ. ಈ ಮಾತು ಕೇಳಿದ ಮೇಲೆ ಅವನಂತಹ ಎಷ್ಟೋ ಜನರಿಗೆ ಇರುವ ಆಟವಾಡುವ ಆಸೆಯ ಬಗ್ಗೆ ಯೋಚಿಸಿದೆ. ನಂತರ ಸಂಸ್ಥೆ ಆರಂಭಿಸಿದೆ’ ಎಂದು ಸುನೀಲ್ ನೆನಪಿಸಿಕೊಳ್ಳುತ್ತಾರೆ.

‘ಅಂಧರ ಫುಟ್‌ಬಾಲ್‌ ಬಗ್ಗೆ ಅಂತರ್ಜಾಲದಲ್ಲಿ ಜಾಲಾಡಿದಾಗ ಬ್ರೆಜಿಲ್‌ನಲ್ಲಿ ಅಂಧರ 660 ತಂಡಗಳು ಇರುವುದು ತಿಳಿಯಿತು. ಅದೇ ರೀತಿ ಅರ್ಜೆಂಟೀನಾದಲ್ಲಿ 150, ಇಂಗ್ಲೆಂಡ್‌ನಲ್ಲಿ 100, ಜಪಾನಿನಲ್ಲಿ 25 ಹಾಗೂ ಚೀನಾದಲ್ಲಿ 20. ಭಾರತದಲ್ಲಿ ಹುಡುಕಾಡಿದಾಗ ಇದರ ಬಗ್ಗೆ ಒಂದು ಮಾಹಿತಿಯೂ ಸಿಗಲಿಲ್ಲ’ ಎಂದು ಸುನೀಲ್ ಹೇಳುತ್ತಾರೆ.

2013ರಲ್ಲಿ ಮೊದಲ ಬಾರಿಗೆ ಎಸ್‌ಆರ್‌ವಿಸಿ(ಸೊಸೈಟಿ ಫಾರ್‌ ರಿಹೆಬಿಲಿಟೆಷನ್‌ ಆಫ್‌ ದಿ ವಿಷುವಲಿ ಚಾಲೆಂಜಡ್‌) ಜೊತೆ ಸೇರಿ ಇಂಡಿಯನ್‌ ಬ್ಲೈಂಡ್‌ ಫುಟ್‌ಬಾಲ್‌ ಫೆಡರೇಷನ್‌ ಹುಟ್ಟು ಹಾಕಿದರು. ಅದೇ ವರ್ಷ ಆಗಸ್ಟ್ ತಿಂಗಳಲ್ಲಿ ಮೊದಲ ಬಾರಿ ಬ್ಯಾಂಕಾಂಕ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಟೂರ್ನಿಯಲ್ಲಿ ಭಾರತ ತಂಡ  ಆಡಿತು. ಈ ಟೂರ್ನಿಯಲ್ಲಿ ಸೆಮಿಫೈನಲ್‌ ಹಂತ ತಲುಪಿದರು. 2016ರಲ್ಲಿ ಇಂಡಿಯನ್‌ ಬ್ಲೈಂಡ್‌ ಫುಟ್‌ಬಾಲ್‌ ಫೆಡರೇಷನ್‌ ಅಧಿಕೃತವಾಗಿ ಇಂಡಿಯನ್‌ ಪ್ಯಾರಾಲಿಂಪಿಕ್ ಸಂಸ್ಥೆಯಿಂದ ಮಾನ್ಯತೆ ಪಡೆಯಿತು.

‘ಸರಕಾರದಿಂದ ಯಾವುದೇ ಸಹಾಯ ಈ ಫೆಡರೇಷನ್‌ಗೆ ಸಿಗುತ್ತಾ ಇಲ್ಲ. ಟಾಟಾ ಟ್ರಸ್ಟ್ ಹಾಗೂ ಇತರೆ ಕೆಲವು ದಾನಿಗಳಿಂದ ಟ್ರೈನಿಂಗ್‌ ಹಾಗೂ ಮೂಲಸೌಕರ್ಯಗಳನ್ನು ಪಡೆಯುತ್ತಿದ್ದೇವೆ. ಸದ್ಯ 60 ದೇಶಗಳು ಆಡುತ್ತಿರುವ ಈ ಅಂಧರ ಪುಟ್‌ಬಾಲ್‌ನಲ್ಲಿ ಭಾರತದ ನಮ್ಮ ತಂಡ 29ನೇ ಸ್ಥಾನದಲ್ಲಿದೆ. 2024ರ ವಿಶ್ವ ಕಪ್‌ ಗೆಲ್ಲುವ ಗುರಿ ಇಟ್ಟುಕೊಂಡು ಮುಂದೆ ಸಾಗುತ್ತಿದ್ದೇವೆ’ ಎಂದು ಶುನೀಲ್ ಹೇಳುತ್ತಾರೆ.‌

ಕ್ರೀಡೆ ಬೆಳೆದ ಬಗೆ

ಮೊದಲು ಈ ಕ್ರೀಡೆಯನ್ನು ಅಂಧರ ವಸತಿಶಾಲೆಗಳಲ್ಲಿ ದೈಹಿಕ ಕಸರತ್ತಿಗೆ ಆಡಲು ಆರಂಭಿಸಿದರು.

ಸ್ಪೇನ್‌-ಬ್ರೆಜಿಲ್‌ನಂತಹ ದೇಶಗಳು ಆರಂಭದಲ್ಲಿ ದೇಶಿಯ ಟೂರ್ನಿಗಳನ್ನು ಆರಂಭಿಸಿದವು. 1996ರಲ್ಲಿ ಅಂಧರ ಫುಟ್‌ಬಾಲ್‌ ಇಂಟರ್‌ನ್ಯಾಷನಲ್ ಬ್ಲೈಂಡ್ ಸ್ಪೋರ್ಟ್ಸ್ ಫೆಡರೇಶನ್ (ಅಂತ ರಾಷ್ಟ್ರೀಯ ಅಂಧರ ಕ್ರೀಡಾ ಸಂಸ್ಥೆ) ಜೊತೆಯಲ್ಲಿ ಸೇರಿಕೊಂಡಿತು.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !