ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರರಾಷ್ಟ್ರೀಯ ಗೋಲು ಗಳಿಕೆ: ಮೆಸ್ಸಿ ಹಿಂದಿಕ್ಕಿದ ಚೆಟ್ರಿ

Last Updated 8 ಜೂನ್ 2021, 14:15 IST
ಅಕ್ಷರ ಗಾತ್ರ

ದೋಹಾ: ಅಂತರರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ 74ನೇ ಗೋಲು ಗಳಿಸುವ ಮೂಲಕ ಭಾರತ ತಂಡದ ನಾಯಕ ಸುನಿಲ್ ಚೆಟ್ರಿ ಅರ್ಜೆಂಟೀನಾದ ತಾರೆ ಲಯೊನೆಲ್ ಮೆಸ್ಸಿ ಅವರನ್ನು ಹಿಂದಿಕ್ಕಿದ್ದಾರೆ. ಈಗ ಆಡುತ್ತಿರುವ ಆಟಗಾರರ ಪೈಕಿ ಹೆಚ್ಚು ಗೋಲು ಗಳಿಸಿರುವವರ ಪಟ್ಟಿಯಲ್ಲಿ ಚೆಟ್ರಿ ಎರಡನೇ ಸ್ಥಾನಕ್ಕೇರಿದ್ದಾರೆ.

ವಿಶ್ವಕಪ್‌ ಮತ್ತು ಏಷ್ಯಾಕಪ್ ಫುಟ್‌ಬಾಲ್ ಅರ್ಹತಾ ಟೂರ್ನಿಯಲ್ಲಿ ಸೋಮವಾರ ಬಾಂಗ್ಲಾದೇಶ ಎದುರು ಅಲ್ ಸದ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತದ ಚೆಟ್ರಿ ಈ ಸಾಧನೆ ಮಾಡಿದರು. ಅವರು ಗಳಿಸಿದ ಎರಡು ಗೋಲುಗಳ ಬಲದಿಂದ ಭಾರತ 2–0ಯಿಂದ ಬಾಂಗ್ಲಾವನ್ನು ಮಣಿಸಿತ್ತು.

ಸಕ್ರಿಯ ಆಟಗಾರರ ಪಟ್ಟಿಯಲ್ಲಿ ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ 103 ಗೋಲು ಗಳಿಸಿ ಮೊದಲ ಸ್ಥಾನದಲ್ಲಿದ್ದು, ಮೂರನೇ ಸ್ಥಾನದಲ್ಲಿರುವ ಯುನೈಟೆಡ್ ಅರಬ್ ಎಮಿರೇಟ್ಸ್‌ನ ಅಲಿ ಮಬ್‌ಖೌತ್‌ 73 ಗೋಲು ಗಳಿಸಿದ್ದಾರೆ.

ಈ ಪಟ್ಟಿಯಲ್ಲಿ ಮೆಸ್ಸಿ ನಾಲ್ಕನೇ ಸ್ಥಾನದಲ್ಲಿದ್ದು, ಅವರ ಬಳಿ 72 ಅಂತರರಾಷ್ಟ್ರೀಯ ಗೋಲುಗಳಿವೆ. ಹೋದ ಗುರುವಾರ ಚಿಲಿ ಎದುರು ನಡೆದ ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಮೆಸ್ಸಿ 72ನೇ ಗೋಲು ದಾಖಲಿಸಿದ್ದರು.

ಅಂತರರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ ಅತಿ ಹೆಚ್ಚು ಗೋಲು ದಾಖಲಿಸಿರುವ 10 ಆಟಗಾರರ ಪಟ್ಟಿಗೆ ಸೇರಲು ಚೆಟ್ರಿ ಅವರಿಗೆ ಕೇವಲ ಒಂದು ಗೋಲು ಬೇಕಾಗಿದೆ. ಸದ್ಯ ಅವರು ಹಂಗರಿಯ ಸ್ಯಾಂಡೊರ್ ಕೊಕ್ಸಿಸ್‌, ಜಪಾನ್‌ನ ಕುನಶಿಗೆ ಕಮಮೊಟೊ ಮತ್ತು ಕುವೈತ್‌ನ ಬಶರ್ ಅಬ್ದುಲ್ಲಾ (ಎಲ್ಲರೂ 75 ಗೋಲು) ಅವರಿಗಿಂತ ಹಿಂದಿದ್ದಾರೆ.

ಭಾರತ ತಂಡದ ಜಯ ಹಾಗೂ ಚೆಟ್ರಿ ಅವರ ಸಾಧನೆಗೆ ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ ಅಧ್ಯಕ್ಷ ಪ್ರಫುಲ್ ಪಟೇಲ್ ಅಭಿನಂದನೆ ಸಲ್ಲಿಸಿದ್ದಾರೆ.

ವಿಶ್ವಕಪ್‌ ಮತ್ತು ಏಷ್ಯಾಕಪ್ ಫುಟ್‌ಬಾಲ್ ಅರ್ಹತಾ ಟೂರ್ನಿಯಲ್ಲಿ ಇದೇ 15ರಂದು ಭಾರತ ತಂಡವು ಅಫ್ಗಾನಿಸ್ತಾನ ತಂಡವನ್ನು ಎದುರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT