ಗೆದ್ದವರ ನಾಕೌಟ್‌ ಹಾದಿ ಸುಗಮ

7
ಇಂದು ಬ್ರೆಜಿಲ್‌–ಕೋಸ್ಟರಿಕಾ ಮುಖಾಮುಖಿ; ನೇಮರ್, ಕುಟಿನ್ಹೊ ಮೇಲೆ ಕಣ್ಣು

ಗೆದ್ದವರ ನಾಕೌಟ್‌ ಹಾದಿ ಸುಗಮ

Published:
Updated:

ಸೇಂಟ್‌ ಪೀಟರ್ಸ್‌ಬರ್ಗ್‌: ಈ ಬಾರಿ ‍ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ ಎನಿಸಿರುವ ಬ್ರೆಜಿಲ್‌ ಈಗ ಸಂಕಷ್ಟ ಎದುರಿಸುತ್ತಿದೆ. 21ನೇ ಫಿಫಾ ವಿಶ್ವಕಪ್‌ನ ತನ್ನ ಮೊದಲ ಪಂದ್ಯದಲ್ಲಿ ಸ್ವಿಟ್ಜರ್‌ಲೆಂಡ್‌ ಎದುರು ಡ್ರಾ ಮಾಡಿಕೊಂಡಿದ್ದ ಈ ತಂಡ ನಾಕೌಟ್‌ ಪ್ರವೇಶಿಸಬೇಕಾದರೆ ಶುಕ್ರವಾರ ನಡೆಯುವ ಕೋಸ್ಟರಿಕಾ ವಿರುದ್ಧದ ಪೈಪೋಟಿಯಲ್ಲಿ ಗೆಲ್ಲಲೇಬೇಕಿದೆ.

ಕೋಸ್ಟರಿಕಾ ತಂಡಕ್ಕೂ ಜಯ ಅನಿವಾರ್ಯವಾಗಿದೆ. ಒಂದೊಮ್ಮೆ ಬ್ರೆಜಿಲ್‌ ವಿರುದ್ಧ ಬ್ರಯಾನ್‌ ರುಯಿಜ್‌ ಪಡೆ ಸೋತರೆ ಟೂರ್ನಿಯಿಂದಲೇ ಹೊರಬೀಳಲಿದೆ. ಈ ತಂಡ ಮೊದಲ ಪಂದ್ಯದಲ್ಲಿ  0–1 ಗೋಲಿನಿಂದ ಸರ್ಬಿಯಾ ಎದುರು ಆಘಾತ ಕಂಡಿತ್ತು. ಹೀಗಾಗಿ ಸೇಂಟ್‌ ಪೀಟರ್ಸ್‌ಬರ್ಗ್‌ ಕ್ರೀಡಾಂಗಣದಲ್ಲಿ ಆಯೋಜನೆಯಾಗಿರುವ ‘ಇ’ ಗುಂಪಿನ ಈ ಹಣಾಹಣಿ ಸಾಕಷ್ಟು ಮಹತ್ವ ಪಡೆದುಕೊಂಡಿದೆ.

ಶುಕ್ರವಾರದ ಹೋರಾಟದಲ್ಲಿ ರಕ್ಷಣಾ ವಿಭಾಗದ ಆಟಗಾರ ಥಿಯಾಗೊ ಸಿಲ್ವ, ಬ್ರೆಜಿಲ್‌ ತಂಡವನ್ನು ಮುನ್ನಡೆಸಲಿದ್ದಾರೆ. ವಿಶ್ವಕಪ್‌ನಲ್ಲಿ ಐದು ಬಾರಿ ಟ್ರೋಫಿ ಗೆದ್ದಿರುವ ಸಾಂಬಾ ನಾಡಿನ ತಂಡದಲ್ಲಿ ಸಾಕಷ್ಟು ಮಂದಿ ಪ್ರತಿಭಾನ್ವಿತ ಆಟಗಾರರಿದ್ದಾರೆ. ಈ ತಂಡ ಹಿಂದಿನ 22 ಅಂತರರಾಷ್ಟ್ರೀಯ ಪಂದ್ಯಗಳ ಪೈಕಿ ಕೇವಲ ಒಂದರಲ್ಲಿ ಸೋತಿದೆ.

ಅಭಿಮಾನಿಗಳ ಆಕರ್ಷಣೆಯ ಕೇಂದ್ರಬಿಂದುವಾಗಿರುವ ನೇಮರ್‌, ಸ್ವಿಟ್ಜರ್‌ಲೆಂಡ್‌ ಎದುರಿನ ಹಣಾಹಣಿಯಲ್ಲಿ ಮೋಡಿ ಮಾಡಿರಲಿಲ್ಲ. ಇದು ತಂಡಕ್ಕೆ ಹಿನ್ನಡೆಯಾಗಿ ಪರಿಣಮಿಸಿತ್ತು. ಮುಖ್ಯ ಕೋಚ್‌ ಟಿಟೆ ಅವರ ಮಾರ್ಗದರ್ಶನದಲ್ಲಿ ಕಠಿಣ ಅಭ್ಯಾಸ ನಡೆಸಿರುವ ಅವರು ಕೋಸ್ಟರಿಕಾ ಎದುರು ಕಾಲ್ಚಳಕ ತೋರುವ ಕಾತರದಲ್ಲಿದ್ದಾರೆ.

ಮೊದಲ ಪಂದ್ಯದಲ್ಲಿ ಗೋಲು ದಾಖಲಿಸಿ ಗಮನ ಸೆಳೆದಿದ್ದ ಮಿಡ್‌ಫೀಲ್ಡರ್‌ ಫಿಲಿಪ್‌ ಕುಟಿನ್ಹೊ ಮೇಲೂ ಎಲ್ಲರ ಕಣ್ಣುಗಳು ನೆಟ್ಟಿವೆ. 

ನಾಯಕ ಸಿಲ್ವ, ಮಿರಾಂಡ, ಫಿಲಿಪ್‌ ಲೂಯಿಸ್‌, ಕ್ಯಾಸೆಮಿರೊ, ರೆನಾಟೊ ಅಗಸ್ಟೊ ಅವರೂ ಮಿಂಚುವ ಹುಮ್ಮಸ್ಸಿನಲ್ಲಿದ್ದಾರೆ.

ಪೌಲಿನ್ಹೊ, ಫರ್ನಾಂಡಿನ್ಹೊ, ವಿಲಿಯನ್‌, ಮಾರ್ಷೆಲೊ, ಗೇಬ್ರಿಯಲ್‌ ಜೀಸಸ್‌ ಮತ್ತು ರಾಬರ್ಟೊ ಫಿರ್ಮಿನೊ ಅವರೂ ತಂಡದ ಭರವಸೆಯಾಗಿದ್ದಾರೆ.

ಪುಟಿದೇಳುವ ವಿಶ್ವಾಸದಲ್ಲಿ ರುಯಿಜ್ ಪಡೆ: ಕೋಸ್ಟರಿಕಾ ತಂಡ ಆರಂಭಿಕ ನಿರಾಸೆಯಿಂದ ಮೈಕೊಡವಿ ನಿಲ್ಲುವ ವಿಶ್ವಾಸ ಹೊಂದಿದೆ.

ರುಯಿಜ್‌ ಪಡೆ 2014ರ ಟೂರ್ನಿಯಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿತ್ತು. ಈ ಹಾದಿಯಲ್ಲಿ ಇಂಗ್ಲೆಂಡ್‌, ಇಟಲಿ ಮತ್ತು ಉರುಗ್ವೆ ತಂಡಗಳಿಗೆ ಆಘಾತ ನೀಡಿ ಗಮನ ಸೆಳೆದಿತ್ತು.

ಕೋಸ್ಟರಿಕಾ ತಂಡದ ರಕ್ಷಣಾ ವಿಭಾಗ ಬಲಿಷ್ಠವಾಗಿದೆ. ಜಾನಿ ಅಕೋಷ್ಟಾ, ಜಿಯಾನ್‌ಕಾರ್ಲೊ ಗೊಂಜಾಲೆಜ್‌, ಇಯಾನ್ ಸ್ಮಿತ್‌ ಮತ್ತು ಕ್ರಿಸ್ಟಿಯನ್‌ ಗ್ಯಾಂಬಾವೊ ಅವರನ್ನು ವಂಚಿಸಿ ಚೆಂಡನ್ನು ಗುರಿ ಮುಟ್ಟಿಸಲು ಬ್ರೆಜಿಲ್‌ ಆಟಗಾರರು ಸಾಕಷ್ಟು ಪ್ರಯಾಸ ಪಡಬೇಕಾಗಬಹುದು.

ಮಿಡ್‌ಫೀಲ್ಡ್‌ ವಿಭಾಗದಲ್ಲಿ ಆಡುವ ಸೆಲ್ಸೊ ಬೊರ್ಗೆಸ್‌, ಡೇನಿಯಲ್‌ ಕಾಲಿಂಡ್ರೆಸ್‌, ನಾಯಕ ರುಯಿಜ್‌ ಮತ್ತು ರಾಡ್ನಿ ವಲ್ಲಾಸ್‌ ಅವರೂ ತಂಡದ ಭರವಸೆಯಾಗಿದ್ದಾರೆ.

ಹಿಂದಿನ ಮುಖಾಮುಖಿ ಫಲಿತಾಂಶವನ್ನು ಅವಲೋಕಿಸಿದರೆ ಈ ಪಂದ್ಯದಲ್ಲಿ ಬ್ರೆಜಿಲ್‌ಗೆ ಗೆಲ್ಲುವ ಅವಕಾಶ ಹೆಚ್ಚಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !